ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಿಶು ಆಝಾದ್ ರ ತಂದೆಯ ತಲೆ ಒಡೆದು ಗಂಭೀರವಾಗಿ ಗಾಯಗೊಳಿಸಿದ್ದರೂ, ತಮ್ಮ ವಿರುದ್ಧ ಯಾವುದೇ ಕ್ರಮವಾಗದೆ ರಾಜಕೀಯ ಪ್ರಭಾವದಿಂದ ಪಾರಾಗಿದ್ದೇನೆ ಎಂದು ಸ್ವತಂತ್ರ ಭರದ್ವಾಜ್ (Swatantra Bhardwaj) ಎಂಬ ಇನ್ಫ್ಲುಯೆನ್ಸರ್ ಪೊಡ್‌ಕಾಸ್ಟ್ ಒಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜೂನ್ 23 ರಂದು ಸಿಜೆಪಿ (CJP) ಸಂಘಟನೆ ಆಯೋಜಿಸಿದ್ದ ಪ್ರತಿಭಟನೆಯ ವೇಳೆ ಸಂಜಯ್ ಕುಮಾರ್ ಎಂಬುವವರ ಮೇಲೆ ದಾಳಿ ನಡೆಸಿದ್ದಾಗಿ ಭರದ್ವಾಜ್ ವೀಡಿಯೊದಲ್ಲಿ ಒಪ್ಪಿಕೊಂಡಿದ್ದಾರೆ. “ನಾನು ಅವರ ತಲೆ ಒಡೆದೆ. ಅದಕ್ಕೆ ಕೊಲೆ ಯತ್ನ (ಸೆಕ್ಷನ್ 307) ಪ್ರಕರಣ ದಾಖಲಾಗಬೇಕಿತ್ತು, ಅವರಿಗೆ 7 ಹೊಲಿಗೆ ಬಿದ್ದಿತ್ತು. ಆದರೆ ನಾನು ಜೈಲಿಗೇ ಹೋಗಲಿಲ್ಲ. ದೆಹಲಿ ಸಚಿವ ಕಪಿಲ್ ಮಿಶ್ರಾ ನನ್ನ ಅಣ್ಣನಿದ್ದಂತೆ, ಅವರ ಒಂದು ಕರೆಗೆ ನನ್ನನ್ನು ಬಿಟ್ಟುಕಳುಹಿಸಲಾಯಿತು” ಎಂದು ಭರದ್ವಾಜ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ವಿಡಿಯೋದಲ್ಲಿದೆ.
ಈ ವಿಡಿಯೋ ತುಣುಕುಗಳು ವೈರಲ್ ಆಗುತ್ತಿದ್ದಂತೆ ರಾಜಕೀಯ ರಂಗದಲ್ಲೂ ತೀವ್ರ ಸಂಚಲನ ಉಂಟಾಗಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ವಿಪಕ್ಷ ನಾಯಕರು ದೆಹಲಿ ಪೋಲಿಸರ ನಡೆ ಹಾಗೂ ಆಡಳಿತಾರೂಢ ಬಿಜೆಪಿಯ ಪ್ರಭಾವದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಸಾರ್ವಜನಿಕವಾಗಿ ಅಪರಾಧವನ್ನು ಒಪ್ಪಿಕೊಂಡರೂ ಆರೋಪಿಯ ವಿರುದ್ಧ ಕಠಿಣ ಕ್ರಮ ಜರುಗಿಸದಿರುವುದು ಕಾನೂನು ಸುವ್ಯವಸ್ಥೆಯ ವೈಫಲ್ಯ ಹಾಗೂ ರಾಜಕೀಯ ರಕ್ಷಣೆ ನೀಡುತ್ತಿರುವುದಕ್ಕೆ ಸಾಕ್ಷಿ ಎಂದು ಸಿಜೆಪಿ ಮುಖಂಡರು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಭರದ್ವಾಜ್ ಬಂಧನಕ್ಕೆ ಆಗ್ರಹಿಸಿದ್ದಾರೆ.
ಆದರೆ ಈ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು, ಗಾಯಗೊಂಡ ವ್ಯಕ್ತಿಯ ತಲೆ ಬುರಡೆ ಒಡೆದಿದೆ ಎಂಬುದು ಸುಳ್ಳು ಮಾಹಿತಿಯಾಗಿದ್ದು, ಗಲಾಟೆಯ ಸಂದರ್ಭದಲ್ಲಿ ಕಡಾ (ಬಳೆ) ತಾಗಿ ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆಸ್ಪತ್ರೆಯ ವೈದ್ಯಕೀಯ ವರದಿಯ ಪ್ರಕಾರ ಗಾಯಗಳು ಸಾಮಾನ್ಯ ಸ್ವರೂಪದ್ದಾಗಿದ್ದು, ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ ಹಾಗೂ ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಯಾರದ್ದೇ ಪ್ರಭಾವ ಇಲ್ಲ ಎಂದು ಪೊಲೀಸ್ ಇಲಾಖೆ ಹೇಳಿದೆ.
ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೋಮುದ್ವೇಷದ ಫೇಸ್ಬುಕ್ ಪೋಸ್ಟ್: ಕೇರಳ ಪೊಲೀಸ್ ಸಬ್ಇನ್ಸ್ಪೆಕ್ಟರ್ ಸೇವೆಯಿಂದ ಅಮಾನತು
“ತಲೆ ಒಡೆದೆ, ಆದರೂ ಜೈಲಿಗೆ ಹೋಗಲಿಲ್ಲ”: ಪ್ರಭಾವಿ ನಾಯಕರ ಬೆಂಬಲದ ಬಡಾಯಿ ಕೊಚ್ಚಿಕೊಂಡ ಹಿಂದೂತ್ವ ಇನ್ಫ್ಲುಯೆನ್ಸರ್; ವಿಪಕ್ಷಗಳ ಆಕ್ರೋಶ
ಗಂಗಾಜಲ ಹಿಡಿದು ‘ಲಂಚ ಹಂಚಿಕೆ’ ಪ್ರಮಾಣ ವಚನ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿಡಿಯೋ ವೈರಲ್, ತನಿಖೆಗೆ ಆದೇಶ
ಮತ್ತೊಂದೆಡೆ, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸ್ವತಂತ್ರ ಭರದ್ವಾಜ್ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದು, ವೈರಲ್ ವಿಡಿಯೋ ಹಳೆಯದ್ದು ಮತ್ತು ತಮಾಷೆಯಾಗಿ ಹೇಳಿದ್ದಾಗಿದ್ದು, ವಿಡಿಯೋವನ್ನು ದುರುದ್ದೇಶಪೂರ್ವಕವಾಗಿ ಎಡಿಟ್ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ತಾನು ಗುಂಪಿನ ದಾಳಿಯಿಂದ ಆತ್ಮರಕ್ಷಣೆಗಾಗಿ ಹೋರಾಡಿದ್ದಾಗಿ ಪ್ರತಿಪಾದಿಸಿರುವ ಅವರು, ಕಾನೂನು ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಕಪಿಲ್ ಮಿಶ್ರಾ ಹಾಗೂ ಇತರ ಬಿಜೆಪಿ ನಾಯಕರ ಹೆಸರು ಪ್ರಸ್ತಾಪಿಸಿರುವುದು ಪ್ರಕರಣಕ್ಕೆ ಹೊಸ ರಾಜಕೀಯ ಆಯಾಮ ತಂದಿಟ್ಟಿದೆ.
