ವರದಿಗಾರ
ತೆರೆಮರೆಯ ಸತ್ಯ
‘ತೆರೆಮರೆಯ ಸತ್ಯ’ವನ್ನು ನಿಮ್ಮ ಮುಂದಿಡುವ ಭರವಸೆಯೊಂದಿಗೆ ಪ್ರಾರಂಭವಾದ ‘ವರದಿಗಾರ’ ಅಂತರ್ಜಾಲ ಮಾಧ್ಯಮ ವೃತ್ತಿಪರ ಪತ್ರಕರ್ತರ ಪೈಪೋಟಿಯ ನಡುವೆ ಸತ್ಯವನ್ನು ಕನ್ನಡಿಗರ ಮುಂದಿಡುವ ಪಣ ತೊಟ್ಟ ಮೂವರು ಹವ್ಯಾಸಿಗಳಿಗೆ ಇದೊಂದು ಸಾಹಸವೇ ಆಗಿತ್ತು. ಈ ಹಾದಿ ಅದಷ್ಟು ಸುಲಭವಾಗಿರಲಿಲ್ಲ!
Chapter I — Today’s Media Landscape
ಇದೀಗ ಸುದ್ದಿ ಮಾಧ್ಯಮವೆಂದರೆ ಎಲ್ಲರಿಗೂ “ನಮ್ಮಲ್ಲೇ ಮೊದಲು” ಅಥವಾ “ಎಕ್ಸ್’ಕ್ಲೂಸಿವ್ ಸ್ಟೋರಿ” ಎಂಬ ತಲೆ ಬರಹದೊಂದಿಗೆ ಪ್ರಕಟಿಸುವ ಪೈಪೋಟಿ! ತಲೆ ಬರಹಗಳು ಆಕರ್ಷಕವಾಗಿರಬೇಕು, ಅದು ರಾಜಕೀಯ ಕುದುರೆ ವ್ಯಾಪಾರವೋ, ಬಾಲಿವುಡ್ ತಾರೆಯ ವಿವಾಹ ಅಥವಾ ಇನ್ಯಾರದ್ದೋ ಸಾವು..ಅದೇನಾಗಿದ್ದರೂ ಪರವಾಗಿಲ್ಲ! ಒಂಥರಾ, ತಲೆಗೆಟ್ಟ ಬರಹಗಳು!
‘ನಾ-ಮುಂದು, ತಾ-ಮುಂದು’ ಎಂಬ ಪೈಪೋಟಿಯಲ್ಲಿ ಅರ್ಧ ಸತ್ಯವನ್ನು ಅಥವಾ ಸಂಪೂರ್ಣ ಸುಳ್ಳನ್ನು ಪ್ರಸರಿಸುತ್ತಿರುವ ಮಾಧ್ಯಮಗಳು, ಸರಕಾರದಿಂದ ದೊರಕುವ ಜಾಹೀರಾತಿನ ಮೊತ್ತಕ್ಕಾಗಿ ತಮ್ಮ ಬೆನ್ನೆಲುಬನ್ನು ಅಡವಿಟ್ಟ/ಮಾರಿಕೊಂಡ ಮಾಧ್ಯಮಗಳು, ಸುಳ್ಳು ಸುದ್ದಿಗಳನ್ನೇ ಪ್ರಸರಿಸಲು ಹಾಗೂ ಸರಕಾರದ ಕೊರತೆಗಳಿಂದ ಜನರ ಗಮನ ತಪ್ಪಿಸಲು ‘ಸೆನ್ಸೇಶನಲ್ ನ್ಯೂಸ್’ ಮೂಲಕ ವಿವಾದಗಳನ್ನು ಸೃಷ್ಟಿಸಿಲಿಕ್ಕಾಗಿಯೇ ಹುಟ್ಟಿಕೊಂಡ ಟಿವಿ ಚಾನೆಲ್’ಗಳು, ಪತ್ರಕರ್ತರ ಹಾಗೂ ರಾಜಕಾರಣಿಗಳ ಅನೈತಿಕ ಸಂಬಂಧದಿಂದ ಹುಟ್ಟಿಕೊಂಡ ಮಾಧ್ಯಮ ಸಂಸ್ಥೆಗಳು… ಈ ಎಲ್ಲಾ ಸಮಸ್ಯೆಗಳ ನಡುವೆ ಕನ್ನಡಿಗರಿಗೆ ಸತ್ಯ ಸುದ್ದಿಯನ್ನು ತಲುಪಿಸಬೇಕೆಂಬ ಏಕೈಕ ಉದ್ದೇಶದಿಂದ ‘ವರದಿಗಾರ’ ನಿಮ್ಮ ಮುಂದೆ ಪ್ರತ್ಯಕ್ಷವಾಗಿತ್ತು.
Chapter II — How Varadigara Began
ಮೂವರು ಸಮಾನ ಮನಸ್ಕ ಸ್ನೇಹಿತರ ‘ಸಮಾಜಕ್ಕಾಗಿ ಏನಾದರೂ ಮಾಡಬೇಕು’ ಎಂಬ ತುಡಿತವೇ ‘ವರದಿಗಾರ’ನ ಹುಟ್ಟಿಗೆ ಕಾರಣವಾಯಿತು. ಈ ಹಿಂದೆ ಒಮ್ಮೆಯೂ ಭೇಟಿಯಾಗದೆ, ತಮ್ಮ – ತಮ್ಮ ಹೊಟ್ಟೆಪಾಡಿಗಾಗಿ ಮೂರು ಬೇರೆ-ಬೇರೆ ನಗರಗಳಲ್ಲಿ ಉದ್ಯೋಗದಲ್ಲಿರುವ ಈ ಮೂವರು, ಕೇವಲ ಸಾಮಾಜಿಕ ಜಾಲತಾಣದಲ್ಲಿರುವ ಪರಿಚಯವನ್ನೇ ಮೂಲವಾಗಿರಿಸಿ ಹೊಸದೊಂದು ಸಾಹಸಕ್ಕೆ ಕೈ ಹಾಕಲು ತೀರ್ಮಾನಿಸಿದರು.
2017ರ ಜುಲೈ ತಿಂಗಳ ಕೊನೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ, ನಾವು ಸಾಮಾಜಿಕ-ರಾಜಕೀಯ ಸುದ್ದಿಗಳನ್ನು ಕನ್ನಡಿಗರ ಮುಂದಿಡಲು ಹಾಗೂ ಸುದ್ದಿಯ ವಿಶ್ಲೇಷಣೆಯನ್ನು ಅಂತರ್ಜಾಲ ಸುದ್ದಿ ಮಾಧ್ಯಮ ಮೂಲಕ ಜನರ ಮುಂದಿಡುವ ಸಾಹಸಕ್ಕೆ ಕೈ ಹಾಕಲು ತೀರ್ಮಾನಿಸಿದೆವು.
Chapter III — August 15, 2017 — The Launch
ಸ್ವಾತಂತ್ರ್ಯೋತ್ಸವದಂದೇ ಪ್ರಾರಂಭಿಸಬೇಕೆಂದು ಯೋಚಿಸಿದ್ದ ಕಾರಣ, ಇನ್ನುಳಿದಿದ್ದ 10-15 ದಿನಗಳಲ್ಲೇ ನಮ್ಮ ಪ್ರಯತ್ನದ ನಾಮಕರಣ, ಲೋಗೋ ಡಿಸೈನ್, ಪ್ರಚಾರ ಹೀಗೆ ಹತ್ತು ಹಲವು ಕಾರ್ಯಗಳನ್ನು ಮುಗಿಸಬೇಕಾಗಿತ್ತು. ಕೊನೆಗೂ 2017ರ ಆಗಸ್ಟ್ 15ರಂದು ‘ವರದಿಗಾರ’ನನ್ನು ಪ್ರಾರಂಭಿಸಿದೆವು.
ಆರಂಭದಲ್ಲೇ ದೊರಕಿದ ಅದ್ಭುತ ಬೆಂಬಲ ನಮ್ಮ ಉತ್ಸಾಹ ಮುಗಿಲೇರಲು ಕಾರಣವಾಯಿತು. ಅಲ್ಲಿಂದ ಮುನ್ನುಗ್ಗಿದ ನಾವು ಹೆಜ್ಜೆ ಹಿಂದಿಡುವ ಬಗ್ಗೆ ಯಾವತ್ತೂ ಯೋಚಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಓದುಗರ ‘ಲೈಕ್, ಕಮೆಂಟ್ ಹಾಗೂ ರಿವ್ಯೂ ನಮ್ಮ ಬೆನ್ನು ತಟ್ಟಿದ ಅನುಭವ ನೀಡಿದವು. ನಮ್ಮ ವಿರುದ್ಧ ನೀಡಿದ ಪೊಲೀಸ್ ದೂರು, ಸಾಮಾಜಿಕ ಜಾಲತಾಣಗಳ ಬೆದರಿಕೆ, ಅಸಭ್ಯ ಕಮೆಂಟ್ಸ್ ಹೀಗೆ ವಿರೋಧಿಗಳೂ ತಮ್ಮ ತಮ್ಮ ಮಟ್ಟಿಗೆ ತಕ್ಕಂತೆ ನಮಗೆ ಸಹಾಯ ಮಾಡಿದರು. ನಾವ್ಯಾರೂ ವೃತ್ತಿಪರ ಪತ್ರಕರ್ತರಲ್ಲ. ‘ವರದಿಗಾರ’ ನಮ್ಮ ಬಿಡುವಿನ ವೇಳೆಯ ಸಮಾಜ ಸೇವೆ! ಇಲ್ಲಿ ನಮಗೆ ಆದಾಯವಿಲ್ಲ, ಅದೇನಿದ್ದರೂ ಖರ್ಚು ಮಾತ್ರ!
Chapter IV — The Pause
ಆದರೆ, 2020ರ ಹೊತ್ತಿಗೆ ಪರಿಸ್ಥಿತಿ ಬದಲಾಯಿತು. ನಿರಂತರವಾಗಿ ಬದಲಾಗುತ್ತಿದ್ದ ಸಾಮಾಜಿಕ ಜಾಲತಾಣಗಳ ಆಲ್ಗೋರಿಥಂ ತಂತ್ರಗಳು ಮತ್ತು ನಿರಂತರವಾದ ವೀಕ್ಷಣೆ-ಲೈಕ್‌ಗಳ ತೀವ್ರ ಒತ್ತಡ ಹವ್ಯಾಸಿಗಳಾದ ನಮಗೆ ದಣಿವು ತಂದಿದ್ದವು. ಇದರ ಜೊತೆಗೆ ವೈಯಕ್ತಿಕ ಬದುಕಿನ ಜವಾಬ್ದಾರಿಗಳು ಹಾಗೂ ವೃತ್ತಿಪರ ಬದ್ಧತೆಗಳು ಹೆಚ್ಚಾದಾಗ ಅನಿವಾರ್ಯವಾಗಿ ‘ವರದಿಗಾರ’ನಿಗೆ ತಾತ್ಕಾಲಿಕ ವಿರಾಮ ನೀಡಬೇಕಾಗಿ ಬಂತು. ಆದರೆ, ಈ ವಿರಾಮದ ನಡುವೆ ನಾವು ಕಟ್ಟಿಬೆಳೆಸಿದ ಡೊಮೇನ್ ಅನ್ನು ಕಳೆದುಕೊಳ್ಳಬೇಕಾಯಿತು. ಆ ಡೊಮೇನ್ ಅನ್ನು ವಿದೇಶಿ ಜೂಜಿನ ಸಂಸ್ಥೆಗಳು ದುರುಪಯೋಗಪಡಿಸಿಕೊಂಡಾಗ ನಮಗಾದ ಆಘಾತ ಸಣ್ಣದಲ್ಲ.
ಈ ಸುದೀರ್ಘ ಮೌನ ಮತ್ತು ‘ವರದಿಗಾರ’ನ ಅನುಪಸ್ಥಿತಿ ನಮ್ಮ ವೈಯಕ್ತಿಕ ಜೀವನದಲ್ಲಿ ಒಂದು ದೊಡ್ಡ ಶೂನ್ಯವನ್ನು ಸೃಷ್ಟಿಸಿತ್ತು. ಒಳಗೊಳಗೇ ಏನೋ ಒಂದು ಮುಖ್ಯವಾದದ್ದನ್ನು ಕಳೆದುಕೊಂಡ ತಳಮಳ ನಮ್ಮನ್ನು ಕಾಡುತ್ತಲೇ ಇತ್ತು. ಮುಖ್ಯವಾಹಿನಿ ಮಾಧ್ಯಮಗಳು ದಿನದಿಂದ ದಿನಕ್ಕೆ ಮತ್ತಷ್ಟು ನಗೆಪಾಟಲಿಗೀಡಾಗುತ್ತಾ, ಕೇವಲ ಮೂಕಪ್ರೇಕ್ಷಕರಾಗಿ ಸತ್ಯ ಹೂತುಹೋಗುತ್ತಿರುವುದನ್ನು ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುವುದು ನಮಗೆ ಅಸಾಧ್ಯವಾದ ಅಸಹನೀಯ ಮುಜುಗರವನ್ನು ಉಂಟುಮಾಡಿತು.
ಮಾಧ್ಯಮಗಳು ಸತ್ಯಾಸತ್ಯತೆ ಗಮನಿಸದೇ, ಅದ್ಯಾರದ್ದೋ ಭಯದಿಂದ ಸುದ್ದಿ ಪ್ರಕಟಿಸುತ್ತಿವೆ. ಕೆಲವರಿಗೆ ಫೇಸ್ಬುಕ್, ಇನ್ಸ್ಟಾಗ್ರಾಂ ಜ್ಞಾನ ಭಂಡಾರವಾದರೆ, ಇನ್ನು ಕೆಲವರಿಗೆ ವಾಟ್ಸ್ಯಾಪ್ ಗ್ರೂಪ್’ಗಳೇ ವಿಶ್ವವಿದ್ಯಾಲಯ! ಜಾತಿ-ಮತಗಳ ಆಧಾರದಲ್ಲಿ ಧ್ರುವೀಕರಣಗೊಂಡಿರುವ ಭಾರತದಲ್ಲಿ ಗುಂಪು ಹತ್ಯೆ ಹಾಗೂ ಗಲಭೆಗಳಿಗೆ ಸಾಮಾಜಿಕ ಜಾಲತಾಣಗಳು ಹಾಗೂ ಸ್ವಯಂಘೋಷಿತ ಮಾಧ್ಯಮಗಳ ಕೊಡುಗೆ ಅಪಾರ.
ಇವತ್ತಂತೂ ಇಡೀ ಮಾಧ್ಯಮ ರಂಗ ಕೇವಲ ಒಂದು ರಾಜಕೀಯ ಸಿದ್ಧಾಂತದ ಭಜನೆ ಮಾಡುವ ‘ಗೋದಿ ಮೀಡಿಯಾ’ ಸಂಸ್ಕೃತಿಗೆ ಸಂಪೂರ್ಣ ಶರಣಾಗಿದೆ. ಮಾಧ್ಯಮಗಳು ಸಾರ್ವಜನಿಕ ಹಿತಾಸಕ್ತಿಯನ್ನು ಮರೆತು ಕೇವಲ ಪ್ರಚಾರದ ಸಾಧನಗಳಾಗಿ ಮಾರ್ಪಟ್ಟಿವೆ. ಇದರಿಂದಾಗಿ ಜನಸಾಮಾನ್ಯರಲ್ಲಿ ಮಾಧ್ಯಮಗಳ ಮೇಲಿದ್ದ ನಂಬಿಕೆ ಸಂಪೂರ್ಣ ನೆಲಕಚ್ಚಿದೆ. ಇಂತಹ ಕಲುಷಿತ ವಾತಾವರಣದಲ್ಲಿ ಮತ್ತೆ ಅಖಾಡಕ್ಕೆ ಇಳಿಯುವುದು ನಮಗೆ ಕೇವಲ ಹಳೇ ನೆನಪುಗಳ ಆಸೆಗಾಗಿ ಅಲ್ಲ, ಬದಲಾಗಿ ಇಂದಿನ ಮಾಧ್ಯಮಗಳ ಸಂಪೂರ್ಣ ವೈಫಲ್ಯಕ್ಕೆ ಎದುರಾಗಿ ನಿಲ್ಲಬೇಕಾದ ಅನಿವಾರ್ಯತೆ.
Chapter V — We Are Back
ಇಂತಹಾ ಪರಿಸ್ಥಿತಿಯಲ್ಲಿ ನಮ್ಮ ಜವಾಬ್ದಾರಿ ನಮಗೆ ಚೆನ್ನಾಗಿ ತಿಳಿದಿದೆ. ಕೆಲವೊಮ್ಮೆ ಓದುಗರ ನಿರೀಕ್ಷೆಯಂತೆ ಸುದ್ದಿ ನೀಡಲಾಗದಿದ್ದಕ್ಕೆ ವಿಷಾದಿಸುತ್ತೇವೆ. ನಾವು ದಿನದ 24 ಗಂಟೆಯೂ ಸುದ್ದಿ ಬಿತ್ತರಿಸುವ ಸಕ್ರಿಯ ಸುದ್ದಿ ಮಾಧ್ಯಮವಲ್ಲ. ಮುಖ್ಯವಾಹಿನಿಯಲ್ಲಿ ಚರ್ಚೆಯಾಗದ ಅಥವಾ ತಿರುಚಲ್ಪಟ್ಟ ಸುದ್ದಿಗಳನ್ನು ಜನರ ಮುಂದಿಟ್ಟು, ಸಮಾಜವನ್ನು ಜಾಗೃತಗೊಳಿಸುವುದು ಮಾತ್ರ ನಮ್ಮ ಉದ್ದೇಶ. ನಾವೇನೂ ವೃತ್ತಿಪರ ಪತ್ರಕರ್ತರಲ್ಲ, ನಮಗೆ ಬಿಡುವಿದ್ದಾಗ ಮಾತ್ರ ಈ ಕೆಲಸ ಮಾಡುತ್ತೇವೆ. ಇದು ನಮಗೆ ಪತ್ರಿಕೋದ್ಯಮವಲ್ಲ, ಬದಲಾಗಿ ಒಂದು ಉತ್ತಮ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ನಾವು ಭಾಗಿಯಾಗುವ ನಮ್ಮದೇ ಆದ ಒಂದು ಸಣ್ಣ ಮಾರ್ಗ ಅಷ್ಟೇ.
ಪ್ರಸ್ತುತ ಬಹುತೇಕ ಸುದ್ದಿ ವೆಬ್‌ಸೈಟ್‌ಗಳು ಜಾಹೀರಾತುಗಳಿಂದಲೇ ತುಂಬಿಹೋಗಿದ್ದು, ಸುದ್ದಿಯೊಂದನ್ನು ಓದಲು ನಾಲ್ಕಾರು ಜಾಹೀರಾತುಗಳನ್ನು ಕಡ್ಡಾಯವಾಗಿ ನೋಡಲೇಬೇಕು ಎನ್ನುವಂತಿದೆ. ಆದರೆ ನಮಗೆ ಓದುಗರ ಅನುಭವವೇ ಅತ್ಯಂತ ಪ್ರಮುಖ ಆದ್ಯತೆ. ಓದುಗರಿಗೆ ಬೇಕಾದ, ಅವರ ಬದುಕಿಗೆ ಮುಖ್ಯವಾದ ಕಂಟೆಂಟ್ ನೀಡುವುದು ಮಾತ್ರ ನಮ್ಮ ಗುರಿ. ನಮಗೆ ಇದರಿಂದ ದೊಡ್ಡ ಆದಾಯ ಬರದಿದ್ದರೂ ಪರವಾಗಿಲ್ಲ, ಜನರಿಗೆ ನಿಜಕ್ಕೂ ತಲುಪಬೇಕಾದ ಸುದ್ದಿಯನ್ನು ಅತ್ಯುತ್ತಮ ಓದುವ ಅನುಭವದೊಂದಿಗೆ ನೀಡುವುದೇ ನಮ್ಮ ಆದ್ಯತೆ.
ಈಗ ಮರಳಿ ಬರುವಾಗ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ನಮ್ಮ ದಾರಿ ಮತ್ತು ಗುರಿ ಅತ್ಯಂತ ಸ್ಪಷ್ಟವಾಗಿದೆ. ನಮಗೆ ಅತ್ಯಂತ ಪ್ರಿಯವಾದ, ಅರ್ಥಪೂರ್ಣವಾದ ಕೆಲಸಕ್ಕೆ ಮತ್ತೆ ಮರಳಿ ಬಂದಿರುವ ತೃಪ್ತಿ ನಮಗಿದೆ.
Chapter VI — About Our Identity
ಇದುವರೆಗೂ ನಾವು ನಮ್ಮ ಪರಿಚಯವನ್ನು ಬಹಿರಂಗಗೊಳಿಸಿಲ್ಲ. ನಮ್ಮ ಆತ್ಮೀಯ ಸ್ನೇಹಿತರು ಅಥವಾ ಸಂಬಂಧಿಕರಿಗೆ ನಮ್ಮ ಈ ಸಾಹಸದ ಮಾಹಿತಿಯಿದೆಯೇ ಹೊರತು ಇನ್ನೆಲ್ಲೂ ನಮ್ಮ ಪರಿಚಯವನ್ನು ನಾವು ಬಹಿರಂಗಗೊಳಿಸಿಲ್ಲ. ಮುಂದೊಂದು ದಿನ ನಿಮ್ಮ ಮುಂದೆ ನಮ್ಮ ಪರಿಚಯದೊಂದಿಗೆ ಹೆಮ್ಮೆಯಿಂದ ಪ್ರತ್ಯಕ್ಷವಾಗುವ ಬಯಕೆಯೂ ಇಲ್ಲದಿಲ್ಲ. ಅಲ್ಲಿಯವರೆಗೂ ‘ಹೆಸರು ಬೇಡ, ಊರು ಬೇಡ’.
Our Pledge
ನಾವು ಯಾವತ್ತೂ,
- ಅಧಿಕಾರದಲ್ಲಿರುವವರ ಪ್ರಚಾರಕರಾಗುವುದಿಲ್ಲ,
- ಜಾಹೀರಾತುಗಳಿಗಾಗಿ ಅಥವಾ ಬೆದರಿಕೆಯಿಂದ ಸುದ್ದಿಯನ್ನು ತಿರುಚುವುದಿಲ್ಲ,
- ನಮ್ಮ ವೈಯಕ್ತಿಕ ಅಭಿಪ್ರಾಯ, ರಾಜಕೀಯ ಸಿದ್ಧಾಂತಗಳು ನಮ್ಮ ವರದಿಗಾರಿಕೆಯಲ್ಲಿ ತುರುಕುವುದಿಲ್ಲ.
ಎಂಬ ಭರವಸೆಯೊಂದಿಗೆ,
ನಿಮ್ಮದೇ,
