ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ದಶಕಗಳ ಬೇಡಿಕೆಗೆ ಆಡಳಿತಾತ್ಮಕವಾಗಿ ಹೊಸ ವೇಗ ದೊರೆತಿದ್ದು, ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಗಂಭೀರವಾಗಿ ಶ್ರಮಿಸುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಆಂಧ್ರಪ್ರದೇಶ ಸೇರಿದಂತೆ ನೆರೆರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ನೀಡಿರುವ ಅಧಿಕೃತ ಭಾಷಾ ಮಾದರಿಯನ್ನು ಪರಿಶೀಲಿಸಲು ರಚಿಸಲಾಗಿದ್ದ ತಜ್ಞರ ಅಧ್ಯಯನ ತಂಡವು ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಮಾರ್ಚ್ 2026ರಲ್ಲಿ ಯಶಸ್ವಿಯಾಗಿ ಸಲ್ಲಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಭಾಷೆಯ ಇತಿಹಾಸ, ಸಮೃದ್ಧ ಸಾಹಿತ್ಯ, ಶಾಸನಗಳು ಹಾಗೂ ಲಿಪಿಯ ಪ್ರಾಚೀನತೆಯನ್ನು ಸಮಗ್ರವಾಗಿ ವಿಶ್ಲೇಷಿಸಿ ಡಾ. ಎಂ. ಮೋಹನ್ ಆಳ್ವ ಅವರ ಅಧ್ಯಕ್ಷತೆಯ ತಜ್ಞರ ಸಮಿತಿಯು 2023ರ ಫೆಬ್ರವರಿ 14ರಂದು ಸಲ್ಲಿಸಿದ್ದ ವರದಿಯನ್ನು ಸರ್ಕಾರ ಈ ಪ್ರಕ್ರಿಯೆಗೆ ಮೂಲ ಆಧಾರವಾಗಿಸಿಕೊಂಡಿದೆ. ಇದರ ಮುಂದುವರಿದ ಭಾಗವಾಗಿ 2025ರ ಜುಲೈ 30ರಂದು ರಚನೆಯಾಗಿದ್ದ ವಿಶೇಷ ಅಧ್ಯಯನ ತಂಡವು 2026ರ ಜನವರಿ 19 ಮತ್ತು 20ರಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಕಾನೂನು ಹಾಗೂ ಆಡಳಿತಾತ್ಮಕ ಅನುಷ್ಠಾನದ ಮಾದರಿಗಳನ್ನು ಪ್ರತ್ಯಕ್ಷವಾಗಿ ಅಧ್ಯಯನ ನಡೆಸಿತ್ತು. ಈ ವರದಿಗಳ ಆಧಾರದ ಮೇಲೆ ತುಳು ಭಾಷೆಗೆ ಸೂಕ್ತ ಶಾಸನಾತ್ಮಕ ಗೌರವ ಕಲ್ಪಿಸಲು ಸರಕಾರವು ಸ್ಪಷ್ಟ ಹಾದಿ ಕಂಡುಕೊಂಡಿದೆ.
ಭಾರತೀಯ ಸಂವಿಧಾನದ 345ನೇ ವಿಚ್ಛೇದನದಡಿ ರಾಜ್ಯಗಳಿಗೆ ಪ್ರಾದೇಶಿಕ ಭಾಷೆಯೊಂದನ್ನು ಅಧಿಕೃತ ಭಾಷೆಯನ್ನಾಗಿ ಗುರುತಿಸಲು ಅವಕಾಶವಿದ್ದು, ‘ಕರ್ನಾಟಕ ಅಧಿಕೃತ ಭಾಷೆಗಳ ಕಾಯ್ದೆ-1963’ಕ್ಕೆ ಅಗತ್ಯ ತಿದ್ದುಪಡಿ ತರುವ ಮೂಲಕ ತುಳುವಿಗೆ ಈ ಸ್ಥಾನಮಾನ ಒದಗಿಸಲು ಕಾನೂನಾತ್ಮಕ ಹಾದಿ ಸುಗಮವಾಗಿದೆ. ಕರಾವಳಿಯ ಶ್ರೀಮಂತ ಸಾಂಸ್ಕೃತಿಕ ಹಾಗೂ ಭಾಷಿಕ ಪರಂಪರೆಯ ರಕ್ಷಣೆಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪುನರುಚ್ಚರಿಸಿರುವ ಸಚಿವರು, ಕರಾವಳಿ ಭಾಗದ ಜನಪ್ರತಿನಿಧಿಗಳು ಹಾಗೂ ತಜ್ಞರೊಂದಿಗೆ ಮುಂದಿನ ಹಂತದ ನಿರ್ಧಾರಗಳನ್ನು ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ದೇಶ ನಿಮಗೇನು ಮಾಡಿದೆ ಎಂದು ಕೇಳುವ ಬದಲು, ದೇಶಕ್ಕೆ ನಿಮ್ಮ ಕೊಡುಗೆ ಏನು ಎಂಬುದರತ್ತ ಗಮನಹರಿಸಿ’ : ಯುವಜನತೆಗೆ ನಿರ್ಮಲಾ ಸೀತಾರಾಮನ್ ಸಲಹೆ
ರಾಜಸ್ಥಾನ ಸ್ಥಳೀಯ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಒಂದೇ ಮತ; ವಾರ್ಡ್ನಲ್ಲಿ ಸ್ವಪಕ್ಷದ ಕಾರ್ಯಕರ್ತರೂ ಕೈಬಿಟ್ಟರಾ?
‘ಅಸ್ಸಲಾಮು ಅಲೈಕುಮ್’, ‘ಇನ್ಶಾ ಅಲ್ಲಾಹ್’ ಎಂದಿದ್ದಕ್ಕೆ ಕ್ರಮ?: ಹಿಂದೂ ಸಂಘಟನೆಯ ದೂರಿನ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ವರ್ಗಾವಣೆ
ತಮ್ಮ ಪೋಸ್ಟ್‌ನ ಕೊನೆಯಲ್ಲಿ “ಯಾನ್ ಏಪಲಾ ಜನಕ್ಲೆನ ಭಾವನೆಲೆನ ಒಟ್ಟುಗು ಇಪ್ಪು” (ನಾನು ಯಾವಾಗಲೂ ಜನರ ಭಾವನೆಗಳೊಂದಿಗೆ ಇರುತ್ತೇನೆ) ಎಂದು ತುಳು ಭಾಷೆಯಲ್ಲೇ ಬರೆಯುವ ಮೂಲಕ ಸಚಿವರು ಕರಾವಳಿ ಜನರ ಭಾವನೆಗಳಿಗೆ ಸ್ಪಂದಿಸಿದ್ದು, ಇದು ತುಳು ಅಭಿಮಾನಿಗಳಲ್ಲಿ ಹೊಸ ಆಶಾವಾದ ಮೂಡಿಸಿದೆ.
