ಖರಗ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ (ಎಎಸ್‌ಪಿ) 2021ರ ಬ್ಯಾಚಿನ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ಅವರನ್ನು ಪಶ್ಚಿಮ ಬಂಗಾಳ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸಶಸ್ತ್ರ ಪಡೆಯ (ಎಸ್ಎಪಿ) 4ನೇ ಬೆಟಾಲಿಯನ್‌ನ ಡೆಪ್ಯೂಟಿ ಕಮಾಂಡೆಂಟ್ ಆಗಿ ವರ್ಗಾಯಿಸಿ ಆದೇಶಿಸಿದೆ. ಸೆಪ್ಟೆಂಬರ್ 14ರಂದು ಗೃಹ ಇಲಾಖೆ ಹೊರಡಿಸಿದ ಈ ಆದೇಶದಲ್ಲಿ, ಇದೊಂದು ಸಾಮಾನ್ಯ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಆಡಳಿತಾತ್ಮಕ ವರ್ಗಾವಣೆ ಎಂದು ಉಲ್ಲೇಖಿಸಲಾಗಿದೆ. ಬುಷ್ರಾ ಬಾನೋ ಅವರ ಜೊತೆಗೆ ಪಾರ್ಥ ಘೋಷ್ ಮತ್ತು ಸುಭೇಂದು ಮಂಡಲ್ ಎಂಬ ಇನ್ನಿಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನೂ ವರ್ಗಾಯಿಸಲಾಗಿದೆ. ಆದರೆ, ಈ ಶಿಸ್ತುಕ್ರಮ ಮಾದರಿಯ ವರ್ಗಾವಣೆಯು ಸಾಮಾಜಿಕ ಜಾಲತಾಣಗಳಲ್ಲಿ ನಡೆದ ತೀವ್ರ ಟೀಕೆ ಮತ್ತು ಬಲಪಂಥೀಯ ಸಂಘಟನೆಯೊಂದರ ದೂರಿನ ಬೆನ್ನಲ್ಲೇ ಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿವಾದದ ಮೂಲ ಸೆಪ್ಟೆಂಬರ್ 13ರಂದು ಅವರು ಹಂಚಿಕೊಂಡಿದ್ದ ವಿಡಿಯೋ ಸಂದೇಶ. ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಮಾಡಲಾಗಿದ್ದ ಈ ವಿಡಿಯೋದಲ್ಲಿ ಬುಷ್ರಾ ಬಾನೋ, ತಮಗೆ ಉಚಿತ ತರಬೇತಿ ಹಾಗೂ ಗ್ರಂಥಾಲಯ ಸೌಲಭ್ಯ ನೀಡಿದ್ದ ಅಲೀಗಢ ಮುಸ್ಲಿಂ ಯೂನಿವರ್ಸಿಟಿಯ (ಎಎಂಯು) ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯ ಪಾತ್ರವನ್ನು ಸ್ಮರಿಸಿದ್ದರು. ವಿಡಿಯೋದ ಆರಂಭದಲ್ಲಿ “ಅಸ್ಸಲಾಮು ಅಲೈಕುಮ್” ಎಂದು ಶುಭಕೋರಿದ್ದ ಅವರು, ಮಾತುಕತೆಯ ಮಧ್ಯೆ “ಇನ್ಶಾ ಅಲ್ಲಾಹ್” ಹಾಗೂ ಕೊನೆಯಲ್ಲಿ “ಜಝಾಕ್ ಅಲ್ಲಾಹ್” ಎಂಬ ಸಾಂಪ್ರದಾಯಿಕ ಉರ್ದು-ಅರೇಬಿಕ್ ಪದಗಳನ್ನು ಬಳಸಿದ್ದರು. ಈ ಪದಬಳಕೆ ಹಾಗೂ ವಿಡಿಯೋದಲ್ಲಿ “ಜೈ ಹಿಂದ್” ಅಥವಾ “ವಂದೇ ಮಾತರಂ” ಹೇಳದಿರುವುದನ್ನು ಪ್ರಸ್ತಾಪಿಸಿ ‘ಹಿಂದೂ ಲೀಗಲ್ ಫಂಡ್’ ಎಂಬ ಸಂಘಟನೆಯು ರಾಜ್ಯ ಗೃಹ ಕಾರ್ಯದರ್ಶಿಗೆ ದೂರು ನೀಡಿತ್ತು. ಸಾರ್ವಜನಿಕ ಸೇವೆ ಮತ್ತು ಅಧಿಕೃತ ಹುದ್ದೆಯಲ್ಲಿದ್ದಾಗ ಅಧಿಕಾರಿಗಳು ತಟಸ್ಥತೆ ಕಾಯ್ದುಕೊಳ್ಳಬೇಕು ಮತ್ತು ರಾಷ್ಟ್ರೀಯ ಅಭಿವ್ಯಕ್ತಿಗಳನ್ನಷ್ಟೇ ಬಳಸಬೇಕು ಎಂಬುದು ದೂರುದಾರರ ಪ್ರತಿಪಾದನೆಯಾಗಿತ್ತು.
ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಬುಷ್ರಾ ಬಾನೋ, ಎಎಂಯುನಿಂದ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಪಿಎಚ್‌ಡಿ ಮುಗಿಸಿ, ಯುಜಿಸಿ ನೆಟ್-ಜೆಆರ್‌ಎಫ್ ಅರ್ಹತೆ ಪಡೆದಿದ್ದವರು. ಸೌದಿ ಅರೇಬಿಯಾದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಅದನ್ನು ತೊರೆದು ಭಾರತಕ್ಕೆ ಮರಳಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧರಾಗಿದ್ದರು. ಇಬ್ಬರು ಮಕ್ಕಳ ತಾಯಿಯಾಗಿ ಕುಟುಂಬದ ಜವಾಬ್ದಾರಿಯ ನಡುವೆಯೇ 2018ರಲ್ಲಿ 277ನೇ ರ‍್ಯಾಂಕ್ ಗಳಿಸಿ ಐಆರ್‌ಟಿಎಸ್‌ಗೆ ಆಯ್ಕೆಯಾಗಿದ್ದರೂ, ಎರಡನೇ ಮಗುವಿನ ಗರ್ಭಧಾರಣೆಯ ಕಾರಣಕ್ಕೆ ಸೇರಲಾಗಲಿಲ್ಲ. ನಂತರ 2019ರ ಪರೀಕ್ಷೆಯಲ್ಲಿ 234ನೇ ರ‍್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗಿ ಬಂಗಾಳ ಕೇಡರ್‌ಗೆ ಸೇರ್ಪಡೆಗೊಂಡಿದ್ದರು.
‘ಅಸ್ಸಲಾಮು ಅಲೈಕುಮ್’, ‘ಇನ್ಶಾ ಅಲ್ಲಾಹ್’ ಎಂದಿದ್ದಕ್ಕೆ ಕ್ರಮ?: ಹಿಂದೂ ಸಂಘಟನೆಯ ದೂರಿನ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ವರ್ಗಾವಣೆ
ರಾಜಸ್ಥಾನ ಸ್ಥಳೀಯ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಒಂದೇ ಮತ; ವಾರ್ಡ್‌ನಲ್ಲಿ ಸ್ವಪಕ್ಷದ ಕಾರ್ಯಕರ್ತರೂ ಕೈಬಿಟ್ಟರಾ?
‘ದೇಶ ನಿಮಗೇನು ಮಾಡಿದೆ ಎಂದು ಕೇಳುವ ಬದಲು, ದೇಶಕ್ಕೆ ನಿಮ್ಮ ಕೊಡುಗೆ ಏನು ಎಂಬುದರತ್ತ ಗಮನಹರಿಸಿ’ : ಯುವಜನತೆಗೆ ನಿರ್ಮಲಾ ಸೀತಾರಾಮನ್ ಸಲಹೆ
ಆಡಳಿತಾತ್ಮಕವಾಗಿ ಇದು ಸಾಮಾನ್ಯ ವರ್ಗಾವಣೆ ಎಂದು ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದ್ದರೂ, ಸಾಮಾಜಿಕ ಜಾಲತಾಣಗಳ ದೂರು ಸಲ್ಲಿಕೆಯಾದ 24 ಗಂಟೆಗಳ ಒಳಗಾಗಿ ಎಎಸ್‌ಪಿ ಹುದ್ದೆಯಿಂದ ಸಶಸ್ತ್ರ ಪಡೆಗೆ ಸ್ಥಳಾಂತರಿಸಿರುವುದು ನಿರ್ಧಾರದ ತುರ್ತನ್ನು ತೋರಿಸುತ್ತದೆ. ನಾಗರಿಕ ಸೇವೆಯಲ್ಲಿರುವ ಅಧಿಕಾರಿಯೊಬ್ಬರು ವಿದ್ಯಾರ್ಥಿ ಮಾರ್ಗದರ್ಶನ ನೀಡುವಾಗ ಬಳಸಿದ ವೈಯಕ್ತಿಕ ಸಂಸ್ಕೃತಿಯ ಮಾತುಕತೆ ಮತ್ತು ಸಾಂಪ್ರದಾಯಿಕ ಶುಭಾಶಯಗಳು ಅವರ ವೃತ್ತಿಪರ ತಟಸ್ಥತೆಗೆ ಧಕ್ಕೆ ತರುತ್ತವೆಯೇ ಎಂಬ ಚರ್ಚೆಯ ನಡುವೆಯೇ, ಸರ್ಕಾರ ಬಲಪಂಥೀಯ ದೂರಿಗೆ ತಕ್ಷಣವೇ ಪ್ರತಿಕ್ರಿಯಿಸಿ ಶಿಸ್ತುಕ್ರಮದ ರೀತಿಯಲ್ಲಿ ಸ್ಥಳಾಂತರಿಸಿದೆಯೇ ಎಂಬ ಸಾರ್ವಜನಿಕ ಪ್ರಶ್ನೆಗೆ ಸರ್ಕಾರದ ಅಧಿಕೃತ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ.
