ಹಾಸನ ತಾಲೂಕಿನ ಶಾಂತಿಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ 6 ರಿಂದ 10 ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ 172 ವಿದ್ಯಾರ್ಥಿಗಳು (92 ಬಾಲಕರು ಹಾಗೂ 80 ಬಾಲಕಿಯರು) ಕಳೆದ 5 ವರ್ಷಗಳಿಂದ ಸೂಕ್ತ ಮೂಲಸೌಕರ್ಯಗಳಿಲ್ಲದೆ ತಾತ್ಕಾಲಿಕ ಶೆಡ್‌ನಲ್ಲಿ ನೆಲೆಸಿದ್ದಾರೆ. ಸಿಮೆಂಟ್ ಮತ್ತು ಶೀಟ್‌ಗಳಿಂದ ನಿರ್ಮಿಸಲಾದ ಈ ಆವರಣದಲ್ಲಿ ವಿದ್ಯಾರ್ಥಿಗಳ ವಸತಿ, ತರಗತಿ ಹಾಗೂ ಅಡುಗೆ ಮನೆ ಒಂದೇ ಆವರಣದಲ್ಲಿದ್ದು, ನೈರ್ಮಲ್ಯ ಮತ್ತು ಸುರಕ್ಷತೆಯ ನಿಯಮಗಳು ಉಲ್ಲಂಘನೆಯಾಗಿವೆ.
ಶಿಕ್ಷಣ ಹಕ್ಕು ಕಾಯ್ದೆ (RTE) ಹಾಗೂ ಸರ್ಕಾರಿ ವಸತಿ ಶಾಲೆಗಳ ನಿಯಮಾವಳಿಗಳ ಪ್ರಕಾರ ಪ್ರತಿಯೊಬ್ಬ ವಿದ್ಯಾರ್ಥಿಗೆ ನಿಗದಿತ ಗಾಳಿ, ಬೆಳಕು, ವಸತಿ ಸ್ಥಳ ಹಾಗೂ ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯ. ಆದರೆ ಪ್ರಸ್ತುತ ವಸತಿ ನಿಲಯದ 92 ಬಾಲಕರಿಗೆ ಕೇವಲ 5 ಶೌಚಾಲಯಗಳು ಲಭ್ಯವಿವೆ. ಅಡುಗೆ ಕೋಣೆ, ಶೌಚಾಲಯ ಹಾಗೂ ವಿದ್ಯಾರ್ಥಿಗಳು ಮಲಗುವ ಕೊಠಡಿಗಳ ನಡುವೆ ಸೂಕ್ತ ಅಂತರವಿಲ್ಲದೆ ಒಂದೇ ಕಟ್ಟಡದ ಭಾಗವಾಗಿ ಕಾರ್ಯಾಚರಿಸುತ್ತಿವೆ. ಕಿರಿದಾದ ಜಾಗದಲ್ಲೇ 6 ನೇ ತರಗತಿಯ ವಿದ್ಯಾರ್ಥಿಗಳು ನೆಲದ ಮೇಲೆಯೇ ಕುಳಿತು ಪಾಠ ಕೇಳುವ ಸ್ಥಿತಿ ಇದೆ.
ದಾಖಲೆಗಳ ಪ್ರಕಾರ, 2017 ರಲ್ಲಿ ಈ ವಸತಿ ಶಾಲೆಯು ಬಾಡಿಗೆ ಕಟ್ಟಡದಲ್ಲಿ ಆರಂಭವಾಗಿತ್ತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಕಾರಣ ನೀಡಿ 2021 ರಲ್ಲಿ ಪ್ರಸ್ತುತ ಶೆಡ್‌ಗೆ ಸ್ಥಳಾಂತರಿಸಲಾಯಿತು. ಅಂದಿನಿಂದ ಸ್ವಂತ ಕಟ್ಟಡದ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದ ಕಾರಣ, ವಿದ್ಯಾರ್ಥಿಗಳು ಇದೇ ಶೆಡ್‌ನಲ್ಲಿ ಮುಂದುವರಿಯುತ್ತಿದ್ದಾರೆ. ಸರ್ಕಾರಿ ವಸತಿ ಶಾಲೆ ನಡೆಸಲು ಈ ಪಾಳುಬಿದ್ದ ಶೆಡ್‌ಗೆ ಸಮಾಜ ಕಲ್ಯಾಣ ಇಲಾಖೆಯು ಪ್ರತಿ ತಿಂಗಳು 1 ಲಕ್ಷದ 8 ಸಾವಿರ ರೂ. ಬಾಡಿಗೆ ಹಣವನ್ನು ಸಾರ್ವಜನಿಕ ಖಜಾನೆಯಿಂದ ಪಾವತಿಸುತ್ತಿದೆ. ಐದು ವರ್ಷಗಳಿಂದ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಪಾವತಿಯಾಗುತ್ತಿದ್ದರೂ, ಮಕ್ಕಳಿಗೆ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ.
ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾದ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, “ಶೆಡ್‌ಗಳಲ್ಲಿ ತರಗತಿಗಳನ್ನು ನಡೆಸುವುದು ನಿಯಮಬಾಹಿರ, ಈ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ. ಹೊಸ ಕಟ್ಟಡದ ನಿರ್ಮಾಣ ಕಾಮಗಾರಿ ವಿಳಂಬವಾಗಿರುವುದು ಹಾಗೂ ಪರ್ಯಾಯ ಬಾಡಿಗೆ ಕಟ್ಟಡ ಸಿಗದ ಕಾರಣ ಈ ವ್ಯವಸ್ಥೆ ಮಾಡಲಾಗಿತ್ತು ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಸುರಕ್ಷಿತ ವಸತಿ ನೀಡದ ಆಡಳಿತ ಶೈಲಿಯನ್ನು ಪೋಷಕರು ಮತ್ತು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
