ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಡೆರಾ ಸಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಬೆಂಬಲಿಸಿ ತನ್ನ ದೆಹಲಿ, ಮೊಹಾಲಿ ಹಾಗೂ ಉತ್ತರ ಭಾರತದ ಆವೃತ್ತಿಗಳ ಮುಖಪುಟದಲ್ಲೇ ಪೂರ್ಣ ಪ್ರಮಾಣದ ಜಾಹೀರಾತು ಪ್ರಕಟಿಸಿದ್ದ ದೇಶದ ಪ್ರಮುಖ ಆಂಗ್ಲ ದಿನಪತ್ರಿಕೆ ‘ದಿ ಹಿಂದೂ’ ಸಾರ್ವಜನಿಕ ಆಕ್ರೋಶಕ್ಕೆ ಮಣಿದು ಬೇಷರತ್ ಕ್ಷಮಾಪಣೆ ಯಾಚಿಸಿದೆ. ‘ವಾಟ್ ಈಸ್ ಡೆರಾ ಸಚಾ ಸೌದಾ? (ಫ್ಯಾಕ್ಟ್ಸ್ ವರ್ಸಸ್ ಫಿಕ್ಷನ್)’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ಈ ಜಾಹೀರಾತಿನಲ್ಲಿ, ರಾಮ್ ರಹೀಮ್ ವಿರುದ್ಧದ ಅತ್ಯಾಚಾರ ಪ್ರಕರಣಗಳು “ಸಂಚಿನ ಭಾಗ” ಹಾಗೂ ಸಾಕ್ಷಿಗಳಿಗೆ “ಹಣದ ಆಮಿಷ ಒಡ್ಡಿ ಸುಳ್ಳು ಸಾಕ್ಷಿ ಹೇಳಿಸಲಾಗಿದೆ” ಎಂದು ಪ್ರತಿಪಾದಿಸಲಾಗಿತ್ತು. ಜಾಹೀರಾತು ಪ್ರಕಟವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮ ವಲಯದಲ್ಲಿ ಪತ್ರಿಕೆಯ ವೃತ್ತಿಪರತೆ ಮತ್ತು ನೈತಿಕತೆಯ ಬಗ್ಗೆ ತೀವ್ರ ಪ್ರಶ್ನೆಗಳು ಉದ್ಭವಿಸಿದ ಹಿನ್ನೆಲೆಯಲ್ಲಿ, “ತೀವ್ರ ಆಕ್ಷೇಪಾರ್ಹ ಜಾಹೀರಾತು ಪ್ರಕಟಿಸಿದ್ದಕ್ಕಾಗಿ ಓದುಗರಲ್ಲಿ ಬೇಷರತ್ ಕ್ಷಮಾಪಣೆ ಕೋರುತ್ತೇವೆ” ಎಂದು ಪತ್ರಿಕೆಯು ಬಹಿರಂಗ ಹೇಳಿಕೆ ಬಿಡುಗಡೆ ಮಾಡಿದೆ.
2017ರಲ್ಲಿ ಇಬ್ಬರು ಸಾಧ್ವಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್‌ಗೆ ಜೈಲು ಶಿಕ್ಷೆಯಾಗಿದ್ದು, ಪ್ರಸ್ತುತ ಆತನಿಗೆ ಮತ್ತೆ 21 ದಿನಗಳ ಫರ್ಲೋ (ರಜೆ) ನೀಡಲಾಗಿದೆ. ಶಿಕ್ಷೆ ಅವಧಿ ಪ್ರಾರಂಭವಾದಂದಿನಿಂದ ಇದುವರೆಗೆ ರಾಮ್ ರಹೀಮ್ ಒಟ್ಟಾರೆಯಾಗಿ 435 ದಿನಗಳಿಗೂ ಹೆಚ್ಚು ಕಾಲ ಅಂದರೆ ತನಗೆ ವಿಧಿಸಲಾದ ಒಟ್ಟು ಶಿಕ್ಷೆಯ ಅವಧಿಯ ಶೇಕಡಾ 13.5ಕ್ಕಿಂತಲೂ ಹೆಚ್ಚು ಸಮಯವನ್ನು ಜೈಲಿನಿಂದ ಹೊರಗೆ ಕಳೆದಿದ್ದಾನೆ ಎಂದು ಸ್ವತಃ ‘ದಿ ಹಿಂದೂ’ ಪತ್ರಿಕೆಯೇ ಕೆಲ ತಿಂಗಳ ಹಿಂದಿನ ತನ್ನ ವರದಿಯೊಂದರಲ್ಲಿ ಉಲ್ಲೇಖಿಸಿತ್ತು. ಹೀಗಿದ್ದರೂ, ಅದೇ ಪತ್ರಿಕೆಯ ಮುಖಪುಟದಲ್ಲೇ ರಾಮ್ ರಹೀಮ್ ಪರವಾಗಿ ಪ್ರಕಟವಾದ ಜಾಹೀರಾತಿನಲ್ಲಿ, “ರಾಮ್ ರಹೀಮ್ ಅವರಿಗೆ ಜೈಲಿನಿಂದ ಸಿಗುತ್ತಿರುವ ಪರೋಲ್ ಹಾಗೂ ಫರ್ಲೋಗಳು ಯಾವುದೇ ವಿಐಪಿ ಸೌಲಭ್ಯವಲ್ಲ, ಬದಲಿಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳ ಕಾನೂನುಬದ್ಧ ಅನುಮತಿಯಂತೆ ಸಿಕ್ಕಿರುವ ಹಕ್ಕು” ಎಂದು ಸಮರ್ಥಿಸಿಕೊಳ್ಳಲಾಗಿತ್ತು.

ಈ ಜಾಹೀರಾತಿನಲ್ಲಿ ಡೆರಾ ಸಂಸ್ಥೆಯು ತನ್ನ ನಾಯಕನನ್ನು ಓರ್ವ ಸಮಾಜ ಸುಧಾರಕನಂತೆ ಬಿಂಬಿಸಿದ್ದು, 7.5 ಕೋಟಿ ಜನರನ್ನು ವ್ಯಸನಮುಕ್ತಗೊಳಿಸಲಾಗಿದೆ, 35 ಕೋಟಿಗೂ ಹೆಚ್ಚು ಗಿಡಗಳನ್ನು ನೆಡಲಾಗಿದೆ ಹಾಗೂ 33 ಲಕ್ಷ ಯೂನಿಟ್‌ಗಿಂತಲೂ ಹೆಚ್ಚು ರಕ್ತದಾನ ಮಾಡಲಾಗಿದೆ ಎಂಬ ಅಂಕಿಅಂಶಗಳನ್ನು ಯಾವುದೇ ಅಧಿಕೃತ ಪರಿಶೀಲನೆ ಇಲ್ಲದೆ ಪ್ರಕಟಿಸಲಾಗಿತ್ತು. ಜೊತೆಗೆ ಹಿರಿಯ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣ ಹಾಗೂ ಅನುಯಾಯಿಗಳ ಬಲವಂತದ ನಪುಂಸಕೀಕರಣ ಪ್ರಕರಣ ಸೇರಿದಂತೆ ಹಲವು ಗಂಭೀರ ಕ್ರಿಮಿನಲ್ ಪ್ರಕರಣಗಳ ಇತಿಹಾಸವಿದ್ದರೂ, ಈ ವಿಚಾರಗಳನ್ನು ಮರೆಮಾಚಿ ಅಪರಾಧಿಯ ಪರ ಪ್ರಚಾರಕ್ಕೆ ಜಾಗ ನೀಡಿದ್ದು ಮಾಧ್ಯಮ ನೈತಿಕತೆ, ಪತ್ರಿಕೋದ್ಯಮ ಸಂಸ್ಥೆಗಳ ಬದ್ಧತೆ ಹಾಗೂ ಆದಾಯ ಗಳಿಕೆಯ ಉದ್ದೇಶದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪ್ರಮುಖ ಪತ್ರಕರ್ತರಿಂದ ವ್ಯಾಪಕ ಆಕ್ಷೇಪಕ್ಕೆ ಕಾರಣವಾಗಿತ್ತು.
‘ಮಸೀದಿ ಎದುರು ಡ್ಯಾನ್ಸ್ ಮಾಡಿದ್ರೆ ಏನಾಗುತ್ತೆ?’: ಇನ್ಸ್ಪೆಕ್ಟರ್ ಮುಂಜಾಗ್ರತಾ ಸೂಚನೆಗೆ ಪ್ರತಾಪ್ ಸಿಂಹ ಆಕ್ಷೇಪ, ಠಾಣೆಗೆ ನುಗ್ಗುವ ಎಚ್ಚರಿಕೆ
ಇಸ್ರೇಲ್ ಪ್ರಧಾನಿ ನೆತನ್ಯಾಹು ಮೇಕಪ್‌ಗೆ ₹4.45 ಕೋಟಿ ವೆಚ್ಚ: ಯುದ್ಧದ ನಡುವೆಯೂ ಮುಂದುವರಿದ ಮೇಕಪ್ – ಸ್ಟೈಲಿಂಗ್ ಬಜೆಟ್
ನ್ಯಾಯಾಲಯದಿಂದ ಶಿಕ್ಷೆಯಾದ ಅತ್ಯಾಚಾರಿಗೆ ಮುಖ ಪುಟದ ಜಾಹೀರಾತು: ತೀವ್ರ ಆಕ್ರೋಶದ ಬಳಿಕ ಬೇಷರತ್ ಕ್ಷಮೆ ಯಾಚಿಸಿದ ‘ದಿ ಹಿಂದೂ’ ಪತ್ರಿಕೆ
“ಪೊಲೀಸ್ ಠಾಣೆಗೆ ನುಗ್ಗಿದರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳುಹಿಸುತ್ತೇವೆ”: ಮೈಸೂರಿನ “ಪೇಟೆ ರೌಡಿ”ಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಈ ಆಕ್ರೋಶದ ಬೆನ್ನಲ್ಲೇ ‘ದಿ ಹಿಂದೂ’ ಪ್ರಕಟಿಸಿರುವ ಸ್ಪಷ್ಟನೆ-ಕ್ಷಮಾಪಣೆಯಲ್ಲಿ, “ದೆಹಲಿ, ಮೊಹಾಲಿ ಮತ್ತು ಉತ್ತರ ಭಾರತದ ಆವೃತ್ತಿಗಳಲ್ಲಿ ಪ್ರಕಟವಾದ ಈ ಆಕ್ಷೇಪಾರ್ಹ ಜಾಹೀರಾತಿನಲ್ಲಿ, ಅತ್ಯಾಚಾರ ಶಿಕ್ಷೆಗೆ ಗುರಿಯಾದ ರಾಮ್ ರಹೀಮ್ ವಿರುದ್ಧ ಡ್ರಗ್ ಮಾಫಿಯಾ ಮತ್ತು ಡೆರಾ ವಿರೋಧಿ ಶಕ್ತಿಗಳಿಂದ ಸಂಚು ನಡೆದಿದೆ ಎಂಬ ಪ್ರತಿಪಾದನೆ ಸೇರಿದಂತೆ ಹಲವು ವಿವಾದಾತ್ಮಕ ಅಂಶಗಳಿದ್ದವು. ಇಂತಹ ಆಕ್ಷೇಪಾರ್ಹ ಜಾಹೀರಾತು ಪ್ರಕಟಿಸಿದ್ದಕ್ಕಾಗಿ ‘ದಿ ಹಿಂದೂ’ ತನ್ನ ಓದುಗರಲ್ಲಿ ಬೇಷರತ್ ಕ್ಷಮಾಪಣೆ ಯಾಚಿಸುತ್ತದೆ ಮತ್ತು ಈ ಲೋಪಕ್ಕಾಗಿ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ” ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದೆ.
