ಚಂಡೀಗಢ: ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿದ್ದ ರಾಜ್ಯದ 102 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಆಪ್) ಭರ್ಜರಿ ಜಯ ದಾಖಲಿಸಿದೆ. ಒಟ್ಟು 1,977 ವಾರ್ಡ್‌ಗಳ ಪೈಕಿ ಶೇಕಡಾ 48 ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಸರ್ಕಾರ ತನ್ನ ಜನಪ್ರಿಯತೆಯನ್ನು ಸಾಬೀತುಪಡಿಸಿದೆ. ಆದರೆ, ಲೋಕಸಭಾ ಚುನಾವಣೆಯ ಯಶಸ್ಸನ್ನು ತಳಮಟ್ಟದಲ್ಲಿ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ.
ಪಂಜಾಬ್ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಅಂಕಿ-ಅಂಶಗಳ ಪ್ರಕಾರ, ಆಮ್ ಆದ್ಮಿ ಪಾರ್ಟಿ ಒಟ್ಟು 958 ವಾರ್ಡ್‌ಗಳಲ್ಲಿ ಜಯಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಕಾಂಗ್ರೆಸ್ 397 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರೆ, ಪಕ್ಷೇತರ ಅಭ್ಯರ್ಥಿಗಳು 251 ವಾರ್ಡ್‌ಗಳಲ್ಲಿ ಗೆದ್ದು ಮೂರನೇ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಶಿರೋಮಣಿ ಅಕಾಲಿದಳ (ಎಸ್‌ಎಡಿ) 192 ಸ್ಥಾನಗಳನ್ನು ಪಡೆದರೆ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) 172 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದೆ.
ಚುನಾವಣೆ ನಡೆದ ರಾಜ್ಯದ ಎಂಟು ಪ್ರಮುಖ ಮಹಾನಗರ ಪಾಲಿಕೆಗಳ ಪೈಕಿ ಐದರಲ್ಲಿ (ಬರ್ನಾಲಾ, ಬಟಾಲಾ, ಮೋಘಾ, ಮೊಹಾಲಿ ಮತ್ತು ಬಟಿಂಡಾ) ಆಪ್ ಸ್ಪಷ್ಟ ಬಹುಮತ ಪಡೆದಿದೆ. ಕಪುರ್ಥಲಾದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೆ, ಅಬೋಹರ್‌ನಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಪಠಾಣ್‌ಕೋಟ್‌ನಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದರೂ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸ್ವಕ್ಷೇತ್ರವಾದ ಧುರಿಯಲ್ಲಿ ಆಪ್ 21 ವಾರ್ಡ್‌ಗಳ ಪೈಕಿ 20 ರಲ್ಲಿ ಗೆದ್ದು ವಿರೋಧ ಪಕ್ಷಗಳನ್ನು ಧೂಳೀಪಟ ಮಾಡಿದೆ.
ಧಾರ್ಮಿಕ ಕಾರಣಗಳಿಂದ ‘ವಂದೇ ಮಾತರಂ’ ಹಾಡದಿದ್ದರೆ ದಂಡನಾತ್ಮಕ ಕ್ರಮ ಕೈಗೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್
ಅನುದಾನ ತಂದ ಮಾಜಿ ಶಾಸಕನಿಗೇ ಉದ್ಘಾಟನೆಯ ಅವಕಾಶ ನೀಡಿದ ಹಾಲಿ ಶಾಸಕ : ರಾಜಕೀಯದಲ್ಲೊಂದು “ಕೇರಳ ಸ್ಟೋರಿ”!
ವಿಚಾರಣೆಯೇ ಆರಂಭವಾಗದೆ 6 ವರ್ಷಗಳ ಬಂಧನ, ಸಿಕ್ಕಿದ್ದು 7 ದಿನಗಳ ರಿಲೀಫ್: ಶರ್ಜೀಲ್ ಇಮಾಮ್ಗೆ ಮಧ್ಯಂತರ ಜಾಮೀನು
‘ಮುಸ್ಲಿಮರು ಗರ್ಬಾಗೆ ಬರುವುದಿದ್ದರೆ ಸಹೋದರಿಯರನ್ನೂ, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧರಿದ್ದಾರೆ’: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ
ಗೆಲುವಿನ ಅಬ್ಬರದ ನಡುವೆ ವಿವಾದದ ನೆರಳು
ಆಡಳಿತ ಪಕ್ಷದ ಈ ಬೃಹತ್ ಗೆಲುವಿನ ನಡುವೆಯೂ ಚುನಾವಣಾ ಪ್ರಕ್ರಿಯೆಯ ಸುತ್ತ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಿರುವುದು ಮತ್ತು ನಾಮಪತ್ರ ಸಲ್ಲಿಕೆ ವೇಳೆ ವಿರೋಧ ಪಕ್ಷದ ಅಭ್ಯರ್ಥಿಗಳಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಮೇ 26 ರಂದು ನಡೆದ ಮತದಾನದ ದಿನದಂದು ರಾಜ್ಯದ ಹಲವೆಡೆ ಸಣ್ಣಪುಟ್ಟ ಹಿಂಸಾಚಾರ ಮತ್ತು ಘರ್ಷಣೆಗಳು ವರದಿಯಾಗಿದ್ದವು.
ಮುಖ್ಯವಾಗಿ ಬಿಜೆಪಿ ನಾಯಕರು ಆಡಳಿತಾರೂಢ ಆಪ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದು, ಇದು ಸಾರ್ವಜನಿಕರ ನೈಜ ತೀರ್ಪಲ್ಲ, ಬದಲಿಗೆ ಆಡಳಿತ ಯಂತ್ರದ ದುರುಪಯೋಗ ಮತ್ತು ಬ್ಯಾಲೆಟ್ ಪೇಪರ್ ಮೂಲಕ ನಡೆದ ‘ವೋಟ್ ಚೋರಿ’ ಎಂದು ಕಟುವಾಗಿ ಟೀಕಿಸಿದ್ದಾರೆ. ಕಳೆದ ಬಾರಿ ಕೇವಲ 49 ವಾರ್ಡ್ ಗೆದ್ದಿದ್ದ ಬಿಜೆಪಿ ಈ ಬಾರಿ ತನ್ನ ಸ್ಥಾನವನ್ನು 172 ಕ್ಕೆ ಏರಿಸಿಕೊಂಡಿದ್ದರೂ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆದಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು ಎಂಬುದು ಬಿಜೆಪಿಯ ವಾದವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದಿದ್ದರೂ ಸ್ಥಳೀಯ ಸಂಸ್ಥೆಗಳಲ್ಲಿ ಮುಖಭಂಗ ಅನುಭವಿಸಿರುವ ಕಾಂಗ್ರೆಸ್ ಕೂಡ ಇದೇ ರೀತಿಯ ಅಕ್ರಮದ ಆರೋಪಗಳನ್ನು ಮಾಡಿದೆ.
ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಭಗವಂತ್ ಮಾನ್, “ಪಂಜಾಬ್ ಜನತೆ ವಿರೋಧ ಪಕ್ಷಗಳ ದ್ವೇಷದ ರಾಜಕಾರಣವನ್ನು ತಿರಸ್ಕರಿಸಿ, ನಮ್ಮ ಅಭಿವೃದ್ಧಿ ಮತ್ತು ಆಡಳಿತದ ರಾಜಕಾರಣವನ್ನು ಬೆಂಬಲಿಸಿದ್ದಾರೆ. ಇತ್ತೀಚೆಗೆ ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿ ನಮ್ಮ ಸಚಿವರ ಮೇಲೆ ನಡೆಸಿದ ದಾಳಿಗಳಿಗೆ ಜನರೇ ಬ್ಯಾಲೆಟ್ ಮೂಲಕ ತಕ್ಕ ಉತ್ತರ ನೀಡಿದ್ದಾರೆ” ಎಂದು ಬಿಜೆಪಿಯನ್ನು ಕುಟುಕಿದ್ದಾರೆ.
ಮತ್ತೊಂದೆಡೆ, ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ನ 13 ಸ್ಥಾನಗಳ ಪೈಕಿ 7 ರಲ್ಲಿ ಗೆದ್ದಿದ್ದ ಕಾಂಗ್ರೆಸ್‌ಗೆ ಈ ಸ್ಥಳೀಯ ಸಂಸ್ಥೆ ಚುನಾವಣೆ ದೊಡ್ಡ ಆಘಾತ ನೀಡಿದೆ. ಪಕ್ಷದ ಆಂತರಿಕ ಭಿನ್ನಮತ ಮತ್ತು ತಳಮಟ್ಟದ ಸಂಘಟನೆಯ ಕೊರತೆಯೇ ಈ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಆದಾಗ್ಯೂ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಮಾತನಾಡಿ, “ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಾಮಾನ್ಯವಾಗಿ ಆಡಳಿತಾರೂಢ ಪಕ್ಷಕ್ಕೇ ಅನುಕೂಲವಿರುತ್ತದೆ. ಇದನ್ನೇ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎನ್ನಲಾಗದು. ನಿಜವಾದ ಹೋರಾಟ ಆಪ್ ಮತ್ತು ಕಾಂಗ್ರೆಸ್ ನಡುವೆಯೇ ಇರಲಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಚುನಾವಣೆಯಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಬಿಜೆಪಿಯ ಬೆಳವಣಿಗೆ. ಕಳೆದ ಬಾರಿ ಕೇವಲ 49 ವಾರ್ಡ್‌ಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ತನ್ನ ಸ್ಥಾನವನ್ನು 172 ಕ್ಕೆ ಏರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶಿರೋಮಣಿ ಅಕಾಲಿದಳದಿಂದ ಬೇರ್ಪಟ್ಟ ನಂತರ ಪಂಜಾಬ್‌ನ ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಸ್ವತಂತ್ರವಾಗಿ ನೆಲೆ ಕಂಡುಕೊಳ್ಳಲು ಹವಣಿಸುತ್ತಿರುವ ಬಿಜೆಪಿಗೆ ಈ ಫಲಿತಾಂಶ ಹೊಸ ಆಶಾಕಿರಣ ಮೂಡಿಸಿದೆ. ಸದ್ಯಕ್ಕೆ ಪಂಜಾಬ್ ಸ್ಥಳೀಯ ಸಂಸ್ಥೆಗಳ ಅಧಿಕಾರದ ಚುಕ್ಕಾಣಿ ಆಪ್ ಪಾಲಾಗಿದ್ದು, ಮುಂಬರುವ 2027 ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ರಾಜಕೀಯ ಕಣ ರಂಗೇರತೊಡಗಿದೆ.

