ಸಚಿವ ಸಂಪುಟದಲ್ಲಿ 29 ವರ್ಷದ ಯುವ ನಟಿ ಕೀರ್ತನಾ ಅತಿ ಕಿರಿಯ ಸಚಿವೆ; ಆಡಳಿತ ಮತ್ತು ಅನುಭವಕ್ಕೆ ಸಮಾನ ಆದ್ಯತೆ ನೀಡಿದ ಸಿಎಂ
ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಟ ವಿಜಯ್, ತಮ್ಮ ಮೊದಲ ಸಚಿವ ಸಂಪುಟದಲ್ಲಿ ಅಚ್ಚರಿಯ ಮುಖಗಳಿಗೆ ಮಣೆ ಹಾಕಿದ್ದಾರೆ. ಭಾನುವಾರ ಬೆಳಿಗ್ಗೆ ನಡೆದ ಐತಿಹಾಸಿಕ ಸಮಾರಂಭದಲ್ಲಿ ವಿಜಯ್ ಅವರೊಂದಿಗೆ ಒಟ್ಟು 9 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂಪುಟವು ಯುವಶಕ್ತಿ, ವೃತ್ತಿಪರತೆ ಮತ್ತು ಅನುಭವದ ಸಮ್ಮಿಶ್ರಣದಂತೆ ಕಾಣುತ್ತಿರುವುದು ವಿಶೇಷ.
ಸಂಪುಟದ ಪ್ರಮುಖ ಆಕರ್ಷಣೆಗಳು: ನೂತನ ಸಂಪುಟದಲ್ಲಿ ಶಿವಕಾಶಿ ಕ್ಷೇತ್ರದ ಶಾಸಕಿ, 29 ವರ್ಷದ ನಟಿ ಎಸ್. ಕೀರ್ತನಾ ಅವರು ಅತಿ ಕಿರಿಯ ಸಚಿವೆಯಾಗಿ ಗಮನ ಸೆಳೆದಿದ್ದಾರೆ. ಸುಮಾರು ಏಳು ದಶಕಗಳ ಕಾಲ ಪುರುಷರ ಪ್ರಾಬಲ್ಯವಿದ್ದ ಶಿವಕಾಶಿ ಕ್ಷೇತ್ರದಲ್ಲಿ ಗೆದ್ದು ಇತಿಹಾಸ ಬರೆದಿದ್ದ ಕೀರ್ತನಾ, ಈಗ ವಿಜಯ್ ಸಂಪುಟದ ಏಕೈಕ ಮಹಿಳಾ ಪ್ರತಿನಿಧಿಯಾಗಿದ್ದಾರೆ. ಬಹುಭಾಷಾ ಪ್ರವೀಣೆಯಾಗಿರುವ ಅವರು ಆಡಳಿತದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಮತ್ತೊಂದು ಗಮನಾರ್ಹ ನೇಮಕಾತಿ ಎಂದರೆ ಮಾಜಿ ಐಆರ್‌ಎಸ್ (IRS) ಅಧಿಕಾರಿ ಡಾ. ಕೆ.ಜಿ. ಅರುಣ್‌ರಾಜ್. ತಿರುಚೆಂಗೋಡು ಕ್ಷೇತ್ರದಿಂದ ಗೆದ್ದಿರುವ ಇವರು ಇತ್ತೀಚೆಗಷ್ಟೇ ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕೆ ಪ್ರವೇಶಿಸಿದ್ದರು. ಆಡಳಿತಾತ್ಮಕ ಅನುಭವ ಹೊಂದಿರುವ ಇವರಿಗೆ ಪ್ರಮುಖ ಖಾತೆ ನೀಡುವ ಸಾಧ್ಯತೆಯಿದೆ.
ವಿಜಯ್ ಆಪ್ತರಿಗೆ ಒಲಿದ ಅದೃಷ್ಟ: ವಿಜಯ್ ಅವರ ಸುದೀರ್ಘ ಕಾಲದ ಆಪ್ತರು ಮತ್ತು ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಿಗೂ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.
- ‘ಬ್ಯುಸಿ’ ಎನ್. ಆನಂದ್: ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ವಿಜಯ್ ಅವರ ಕಟ್ಟಾ ಅಭಿಮಾನಿ ಬಳಗದ ನಾಯಕರಾಗಿದ್ದ ಇವರು ಟಿ.ನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
- ಆಧವ್ ಅರ್ಜುನ: ರಾಷ್ಟ್ರಮಟ್ಟದ ಮಾಜಿ ಬಾಸ್ಕೆಟ್‌ಬಾಲ್ ಆಟಗಾರ ಮತ್ತು ಚುನಾವಣಾ ತಂತ್ರಜ್ಞ ಆಧವ್ ಅರ್ಜುನ ವಿಲ್ಲಿವಾಕ್ಕಂನಿಂದ ಗೆದ್ದು ಸಚಿವರಾಗಿದ್ದಾರೆ.
- ಕೆ.ಎ. ಸೆಂಗೋಟ್ಟೈಯನ್: ಎಐಎಡಿಎಂಕೆಯಿಂದ ಉಚ್ಚಾಟನೆಗೊಂಡ ಬಳಿಕ ವಿಜಯ್ ಕೈಹಿಡಿದಿದ್ದ ಹಿರಿಯ ರಾಜಕಾರಣಿ ಸೆಂಗೋಟ್ಟೈಯನ್ ಅವರಿಗೆ ಅನುಭವದ ಆಧಾರದ ಮೇಲೆ ಸ್ಥಾನ ನೀಡಲಾಗಿದೆ.
ಇವರಲ್ಲದೆ, ಹಿರಿಯ ವಕೀಲ ಪಿ. ವೆಂಕಟರಮಣನ್, ಡಾ. ಟಿ.ಕೆ. ಪ್ರಭು, ಸಿ.ಟಿ.ಆರ್. ನಿರ್ಮಲ್ ಕುಮಾರ್ ಮತ್ತು ಎಂ. ರಾಜಮೋಹನ್ ಅವರು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಮ್ಮಿಶ್ರ ಸರ್ಕಾರದ ಸವಾಲು: ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷವು 108 ಸ್ಥಾನಗಳನ್ನು ಗೆದ್ದಿದ್ದರೂ, ಬಹುಮತಕ್ಕೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಬೆಂಬಲ ಪಡೆದಿದೆ. ಹೀಗಾಗಿ ಇದು ತಮಿಳುನಾಡಿನ ಮೊದಲ ಪೂರ್ಣ ಪ್ರಮಾಣದ ಸಮ್ಮಿಶ್ರ ಸರ್ಕಾರವಾಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ಎರಡು ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
