ವರದಿಗಾರ-ಮೇ.05: ವಿಶ್ವದ ನಂಬರ್ ಒನ್ ಬೌಲರ್ ಎನಿಸಿಕೊಂಡಿರುವ ಜಸ್ಪ್ರಿತ್ ಬೂಮ್ರಾ ಅವರು 2026ರ ಐಪಿಎಲ್‌ನಲ್ಲಿ ಸತತವಾಗಿ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಅದರಲ್ಲೂ ಸೋಮವಾರ (ಮೇ 4) ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೂರು ನೋಬಾಲ್ ಎಸೆದಿದ್ದು, ಈ ಬಗ್ಗೆ ಭಾರತೀಯ ಕ್ರಿಕೆಟ್‌ನ ದಂತಕಥೆ ಸುನಿಲ್ ಗವಾಸ್ಕರ್ ತೀವ್ರ ಅಸಮಾಧನ ವ್ಯಕ್ತಪಡಿಸಿದ್ದು ತರಾಟೆಗೆತ್ತಿಕೊಂಡಿದ್ದಾರೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಮೇ 4ರ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಎಲ್‌ಎಸ್‌ಜಿ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆದರೆ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಬೌಲಿಂಗ್ ಮಾಡಿದ ವಿಶ್ವದ ನಂಬರ್ 1 ಬೌಲರ್ ಜಸ್ಪ್ರಿತ್ ಬುಮ್ರಾ ಅವರು ಒಂದು ವಿಕೆಟ್ ಪಡೆಯದೇ ಮೂರು ನೋ ಬಾಲ್ ಎಸೆಯುವುದರ ಜೊತೆಗೆ ಹೆಚ್ಚು ರನ್ ನೀಡಿ ಮತ್ತೆ ದುಬಾರಿಯಾದರು. ಇದರ ಬೆನ್ನಲ್ಲೇ ಬುಮ್ರಾ ನೋ-ಬಾಲ್ ತಪ್ಪುಗಳ ಬಗ್ಗೆ ಸುನಿಲ್ ಗವಾಸ್ಕರ್ ಮಾತನಾಡಿದ್ದಾರೆ. ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್, “ಇದು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ನೀವು ಒಬ್ಬ ವೃತ್ತಿಪರ ಕ್ರಿಕೆಟಿಗ. ವೈಡ್ ಎಸೆದರೆ ತಪ್ಪೇನಿಲ್ಲ. ಆದರೆ ಪದೇ ಪದೇ ನೋ-ಬಾಲ್ ಹಾಕುವುದು ಸರಿಯಲ್ಲ,” ಎಂದು ನೇರವಾಗಿಯೇ ಬುಮ್ರಾ ಬುದ್ದಿಮಾತು ಹೇಳಿದ್ದಾರೆ. ಒಂದೇ ಪಂದ್ಯದಲ್ಲಿ ಮೂರು ನೋಬಾಲ್ ಎಸೆದ ಬುಮ್ರಾ ಬುಮ್ರಾ ಎಸೆತದ 14ನೇ ಓವರ್‌ನಲ್ಲಿ ಎಲ್‌ಎಸ್‌ಜಿ ತಂಡದ ಹಿಮ್ಮತ್ ಸಿಂಗ್ ಔಟಾಗಿದ್ದರು. ಆದರೆ ಅದು ನೋ-ಬಾಲ್ ಆಗಿದ್ದರಿಂದ ಹಿಮ್ಮತ್ ಸಿಂಗ್‌ಗೆ ದೊಡ್ಡ ಜೀವದಾನ ಸಿಕ್ಕಂತಾಯಿತು. ಬಳಿಕ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೊತ್ತವನ್ನು 228ಕ್ಕೆ ಏರಿಸಲು ಪ್ರಮುಖ ಪಾತ್ರವಹಿಸಿದರು. ಬುಮ್ರಾ ಆ ಒಂದೇ ಓವರ್‌ನಲ್ಲಿ ಎರಡು ನೋ-ಬಾಲ್ ಮತ್ತು ಒಂದು ವೈಡ್ ಎಸೆದಿದ್ದರು.
ಈ ಪಂದ್ಯದಲ್ಲಿ ಬುಮ್ರಾ 4 ಓವರ್‌ಗಳಲ್ಲಿ 45 ರನ್ ನೀಡಿ ಯಾವುದೇ ವಿಕೆಟ್ ಪಡೆಯದೆ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. 2026ರ ಐಪಿಎಲ್ ಬುಮ್ರಾ ಪಾಲಿಗೆ ಅತ್ಯಂತ ಕಳಪೆ ಸೀಸನ್ ಆಗಿ ಪರಿಣಮಿಸಿದ್ದು, ಅವರು ಈವರೆಗೆ 10 ಪಂದ್ಯಗಳಲ್ಲಿ ಕೇವಲ 3 ವಿಕೆಟ್ ಪಡೆದಿದ್ದು, ಒಟ್ಟು 8 ನೋ ಬಾಲ್‌ಗಳನ್ನು ಎಸೆದು ಗಮನ ಸೆಳೆದಿದ್ದಾರೆ.
