ನವದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಗುರುಗ್ರಾಮದ ನಿವಾಸದಿಂದ ಮುಂಜಾಗ್ರತಾ ವಶಕ್ಕೆ ಪಡೆಯಲಾಗಿದ್ದ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ತಡರಾತ್ರಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಶನಿವಾರ ಮುಂಜಾನೆ ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ಅವರ ಮನೆಯಿಂದ ವಶಕ್ಕೆ ಪಡೆದು ದೆಹಲಿ ಹಾಗೂ ಗುರುಗ್ರಾಮದ ಅಪರಾಧ ವಿಭಾಗದ (ಕ್ರೈಮ್ ಬ್ರಾಂಚ್) ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮತ್ತು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ವಿರೋಧಿಸಿ CJP ಕರೆ ನೀಡಿದ್ದ ಪ್ರತಿಭಟನೆಯನ್ನು ತಡೆಯಲು ರಾಜಧಾನಿಯಲ್ಲಿ ತೀವ್ರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ದೆಹಲಿ ಪೊಲೀಸರು ಈ ಪ್ರತಿಭಟನೆಗೆ ಸಂಪೂರ್ಣ ಅನುಮತಿ ನಿರಾಕರಿಸಿದ್ದು, ಮುಂಜಾಗ್ರತಾ ಕ್ರಮವಾಗಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಪ್ರತಿಭಟನಾಕಾರರು ಮತ್ತು ಪ್ರಮುಖರನ್ನು ವಶಕ್ಕೆ ಪಡೆದಿದ್ದರು. ವಾರಾಂತ್ಯದಲ್ಲಿ ರಾಜಧಾನಿಯಾದ್ಯಂತ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ಸಂಚಾರ ಹಾಗೂ ಮೆಟ್ರೋ ಸಂಚಾರದ ಮೇಲೂ ನಿರ್ಬಂಧ ಹೇರಲಾಗಿತ್ತು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಬಳಿಕ, ಶನಿವಾರ ತಡರಾತ್ರಿ ಅಂದರೆ ಭಾನುವಾರ ಮುಂಜಾನೆ 2ರಿಂದ 3ರ ಸುಮಾರಿಗೆ ಪೊಲೀಸರು ಧ್ರುವ್ ರಾಠಿ ಅವರನ್ನು ಬಿಡುಗಡೆಗೊಳಿಸಿ ಕುಟುಂಬದವರ ವಶಕ್ಕೆ ಒಪ್ಪಿಸಿದ್ದಾರೆ. ಆದರೆ ಇದೇ ವೇಳೆ, ನಿಷೇಧಾಜ್ಞೆ ಉಲ್ಲಂಘಿಸಿ ಜಂತರ್ ಮಂತರ್ ಕಡೆಗೆ ತೆರಳಲು ಯತ್ನಿಸಿದರೆ ಮುಂದಿನ ದಿನಗಳಲ್ಲಿ ಮತ್ತೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ರಾಜಧಾನಿಯಲ್ಲಿ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮಗಳು ಮುಂದುವರಿದಿದ್ದು, ಈ ಬೃಹತ್ ಮಟ್ಟದ ಬಂಧನ ಹಾಗೂ ನಿರ್ಬಂಧಗಳ ವಿರುದ್ಧ ವಿರೋಧ ಪಕ್ಷಗಳು ಮತ್ತು ಕಾರ್ಯಕರ್ತರಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ. ಧ್ರುವ್ ರಾಠಿ ಅವರ ಬಿಡುಗಡೆಯಾಗಿರುವ ಕುರಿತು ವರದಿಯಾಗಿದ್ದರೂ, ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ದೆಹಲಿ ಗಡಿಗಳು ಹಾಗೂ ಪ್ರಮುಖ ಪ್ರದೇಶಗಳಲ್ಲಿ ಕಟ್ಟೆಚ್ಚರ ಮುಂದುವರಿದಿದೆ.
