ನಿಮ್ಮ ಬರಹ

‘ಮುಸ್ಲಿಮ್ ಜಮಾಅತ್’ ಪರಿಕಲ್ಪನೆ ಸ್ತುತ್ಯರ್ಹ : ನಿಲುವಿನ ಸ್ಪಷ್ಟತೆ ಅನಿವಾರ್ಯ

ನಿಮ್ಮ ಬರಹದಲ್ಲಿ ಅಬೂ ಸೋಹಾ

“ಜಾಫರ್ ಶರೀಫರಂತಹ ಉನ್ನತ ರಾಜಕೀಯ ನಾಯಕ ಮುಖ್ಯಮಂತ್ರಿ ಆಗುತ್ತಾರೆಂದು ಖಾತರಿಯಾದಾಗ CM ಇಬ್ರಾಹಿಂ ರವರನ್ನು ಮುಂದೆ ತಂದು ಶರೀಫರನ್ನು ಮೂಲೆಗುಂಪು ಮಾಡಲಾಯಿತು.ಇಬ್ರಾಹಿಂ ರವರು ಮಿಂಚುತ್ತಾರೆಂದು ಕಂಡಾಗ,ರಹ್ಮಾನ್ ಖಾನ್ ರವರನ್ನು ಎತ್ತಿತಂದು CM ಇಬ್ರಾಹೀಮರಿಗೆ ಬೆಣ್ಣೆ ಸವರಿ ಬದಿಗೆ ನಿಲ್ಲಿಸಿದರು. ಖಾನ್ ರವರು ಮುಂದಕ್ಕೆ ಬರುತ್ತಾರೆಂದು ಖಚಿತವಾದಾಗ ಅವರನ್ನು ಕೆಡವಲು ರೋಷನ್ ಬೇಗ್ ರವರನ್ನು ನಾಯಕನಾಗಿ ಬಿಂಬಿಸಲಾಯಿತು.ಇದೀಗ ಬೇಗ್ ರವರನ್ನು ಮೂಲೆಗೆ ಎಸೆಯಲು ಜಮೀರ್ ಅಹ್ಮದ್ ರವರನ್ನು ಮುಂದೆ ನಿಲ್ಲಿಸಿದ್ದಾರೆ.ಜೊತೆಗೆ UT ಖಾದರ್ ರವರನ್ನೂ…..!”

ಇದು ಜನವರಿ 27ರಂದು ಬೆಂಗಳೂರಿನಲ್ಲಿ ಘೋಷಣೆಯಾಗಲಿರುವ ‘ಕರ್ನಾಟಕ ಮುಸ್ಲಿಮ್ ಜಮಾಅತ್’ನ ಗುರಿಯ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸುವಾಗ ಮಾನ್ಯ ಶಾಫಿ ಸಅದಿಯವರು ತಮ್ಮ ವೀಡಿಯೋದಲ್ಲಿ ವ್ಯಕ್ತಪಡಿಸಿರುವ ಮಾರ್ಮಿಕವಾದಂತಹಾ ಮಾತುಗಳು. ಇದರ ಸತ್ಯಾಸತ್ಯತೆಗಳು ಏನೇ ಇದ್ದರೂ ಶಾಫಿ ಸಅದಿಯವರ ಮಾತುಗಳಲ್ಲಿ, ಮುಸ್ಲಿಮ್ ಸಮುದಾಯದ ಹೆಸರಿನಲ್ಲಿ ಟಿಕೆಟ್ ಪಡೆದು, ಪರಿಸ್ಥಿತಿಗೆ ಅನುಗುಣವಾಗಿ ಗೆದ್ದು ಬಂದು ಮತ್ತೊಮ್ಮೆ ಅದೇ ಸಮುದಾಯದ ಲೇಬಲಿನಡಿಯಲ್ಲಿ ಅದೃಷ್ಟವಿದ್ದವರು ಮಂತ್ರಿಗಿರಿಯನ್ನೂ ಪಡೆದು, ಕೊನೆಯಲ್ಲಿ ಅದೇ ಸಮುದಾಯದ ಸಂಕಷ್ಟಗಳ ಕುರಿತಾಗಿ, ಸಮುದಾಯ ಸಮಾಜದ ಮುನ್ನಲೆಗೆ ಮತ್ತು ಅಭಿವೃದ್ಧಿಯ ಮುಂಚೂಣಿಗೆ ಬರದೇ ಇರುವ ಕುರಿತಾಗಿ ಕುರುಡು-ಕಿವುಡಾಗುವ ಮುಸ್ಲಿಮ್ ರಾಜಕೀಯ ನಾಯಕರ ಕುರಿತಾಗಿನ ನೋವು, ಹತಾಶೆ ಮತ್ತು ಆಕ್ರೋಶ ಎದ್ದು ಕಾಣುತ್ತಿತ್ತು. ಇಂತಹಾ ಅವಧಿಯಲ್ಲೇ ‘ಕರ್ನಾಟಕ ಮುಸ್ಲಿಮ್ ಜಮಾಅತ್’ ನ ಘೋಷಣೆ ಸ್ವಾಗತಾರ್ಹ ಮತ್ತು ಸ್ತುತ್ಯರ್ಹ ಕೂಡಾ ಹೌದು.

ಕರ್ನಾಟಕದಲ್ಲಿ ಇದರ ಅಗತ್ಯತೆಯನ್ನು ಚರ್ಚಿಸುವುದಕ್ಕಿಂತಲೂ ಅದರ ರಾಜಕೀಯ ನಿಲುವಿನ ಕುರಿತೇ ಜನರು ಮಾತನಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ರಾಜ್ಯದಲ್ಲಿ 90 ಲಕ್ಷ ಇರುವ ಮುಸ್ಲಿಮ್ ಸಮುದಾಯಕ್ಕೆ ಒಂದು ಸ್ಪಷ್ಟ ರಾಜಕೀಯ ನಿಲುವು ತೆಗೆದುಕೊಳ್ಳಲು ಬೇಕಾದ ಗಟ್ಟಿತನದ ಗಳಿಸುವಿಕೆ ಈ ಮುಸ್ಲಿಮ್ ಜಮಾಅತ್ ನ ಹಲವು ಗುರಿಗಳಲ್ಲೊಂದು. ಮುಸ್ಲಿಮರ ಶೈಕ್ಷಣಿಕ ಮಟ್ಟದ ಇಳಿಕೆಯಿಂದಾಗಿ ಸರಕಾರಿ ನೌಕರಿಗಳಲ್ಲಿ, ಸಾರ್ವಜನಿಕ ಸೇವೆ, ಹಾಗೂ ನ್ಯಾಯಾಂಗ ವಿಭಾಗಗಳಲ್ಲಿ ಮುಸ್ಲಿಮರ ಜನಸಂಖ್ಯೆಯ ಅನುಪಾತಕ್ಕನುಗುಣವಾಗಿ ಪ್ರಾತಿನಿಧ್ಯತೆಯ ಕೊರತೆಯ ಕುರಿತು ಶಾಫಿ ಸಅದಿಯವರು ಬೆಟ್ಟು ಮಾಡಿದ್ದಾರೆ. ಅದೇ ರೀತಿ ರಾಜಕೀಯದಲ್ಲೂ ಸಮುದಾಯದ ಸದ್ರಿ ಪ್ರಾತಿನಿಧ್ಯತೆ ಹಾಗೂ ಜನಸಂಖ್ಯೆಯ ಅನುಪಾತಕ್ಕಿರುವ ಅಜಗಜಾಂತರ ವ್ಯತ್ಯಾಸಗಳನ್ನು ಇತರೆ ಅನ್ಯ ಧರ್ಮೀಯ ಸಮುದಾಯಗಳೊಂದಿಗೆ ತುಲನಾತ್ಮಕವಾಗಿ ಹೋಲಿಕೆ ಮಾಡುತ್ತಾ ವಾಸ್ತವಗಳನ್ನು ತಿಳಿಸಿಕೊಡುವ ಪ್ರಯತ್ನಗಳನ್ನು ಮಾಡಲಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.

ಹೌದು, ಇದೇ ನಿರಾಕರಿಸಲಾಗದ ವಾಸ್ತವಗಳಿಂದ ಕೂಡಿರುವ ಸತ್ಯಗಳನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಕಳೆದ 15 ವರ್ಷಗಳ ಹಿಂದಿನಿಂದಲೇ ರಾಜ್ಯದ ಜನತೆಗೆ ತಿಳಿಸಿಕೊಡುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದೆ. ಆದರೆ ಪರಸ್ಪರ ಸಹಕಾರವಿಲ್ಲದ ನಿಲುವುಗಳು ಕಾರಣವೋ ಅಥವಾ ಇಂತಹಾ ಸೂಕ್ಷ್ಮ ವಿಷಯಗಳಲ್ಲಿ ಅನಗತ್ಯವಾಗಿದ್ದ ಸೈದ್ಧಾಂತಿಕ ಭಿನ್ನತೆಯ ಕಾರಣವೋ ಜನರ ಮುಂದಿಟ್ಟ ಎಲ್ಲಾ ಅಂಕಿ ಅಂಶಗಳು ಪರಿಹಾರ ಕಾಣಬೇಕಾದ ದಡ ಸೇರದೆ ವಿಲವಿಲ ಒದ್ದಾಡುತ್ತಾ ಸಮುದಾಯದೆಡೆಯಲ್ಲೇ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿತ್ತು.
ರಾಜ್ಯದ ಜನತೆಗೆ ಮುಸ್ಲಿಮರ ಹಿನ್ನಡೆಯ ಕುರಿತಾಗಿರುವ ಅಂಕಿ ಅಂಶಗಳು ಹೊಸತಲ್ಲದಿದ್ದರೂ, ಈ ಬಾರಿ ಅದನ್ನು ಜನತೆಯ ಮುಂದಿಟ್ಟಿರುವವರು ಮಾತ್ರ ಹೊಸಬರಾಗಿದ್ದಾರೆ. ಹೀಗಿರುವಾಗ ಜನರಲ್ಲಿ ಸಹಜ ಕುತೂಹಲ ಮನೆ ಮಾಡಿದೆ, ಸಮಸ್ಯೆಗಳ ಪರಿಹಾರದ ಸಾಕಾರಕ್ಕೆ ಇಡುವ ಹೆಜ್ಜೆಯ ಕುರಿತಾಗಿ ಸೂಕ್ಷ್ಮವಾಗಿ ಗಮನವಿಡುತ್ತಿದ್ದಾರೆ.

‘ಮುಸ್ಲಿಮ್ ಜಮಾಅತ್’ ಕರ್ನಾಟಕದ 90 ಲಕ್ಷ ಮುಸ್ಲಿಮ್ ಸಮುದಾಯದ ಜನರನ್ನು ಪ್ರತಿನಿಧಿಸಿ, ಸಮುದಾಯವನ್ನೊಂದು ಪ್ರಬಲ ರಾಜಕೀಯ ನಿರ್ಣಾಯಕ ಶಕ್ತಿಯನ್ನಾಗಿಸಬೇಕಾದರೆ ಕೆಲವೊಂದು ಎಚ್ಚರಿಕೆಯ ನಡೆಗಳನ್ನು ಇಡಬೇಕಾಗಿದೆ. ನಮ್ಮ ನಡುವೆಯೇ ಇರುವ ಹಲವಾರು ಸಂಘಟನಾತ್ಮಕ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಾರ್ಯಾಚರಿಸಬೇಕಾಗಿದೆ. ಇದಕ್ಕೆ ಕೇರಳದಲ್ಲಿ ಅಧಿಕಾರದಲ್ಲಿರುವ ಮತ್ತು ಕೆಲವೊಂದು ಕಡೆ ಮುಸ್ಲಿಮರ ನಿರ್ಣಾಯಕ ಶಕ್ತಿಯಾಗಿರುವ ಮುಸ್ಲಿಮ್ ಲೀಗನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದಾಗಿದೆ. ಪಕ್ಷದಲ್ಲಿ ಹಲವಾರು ಸಿದ್ಧಾಂತಗಳ, ಸಂಘಟನೆಗಳ ಜನರಿದ್ದರೂ ಪಕ್ಷದ ಸಿದ್ಧಾಂತ ಬರುವಾಗ ಮಾತ್ರ ಎಲ್ಲರೂ ಪಕ್ಷದ ಕಟ್ಟಾಳುಗಳಾಗಿ ಗುರುತಿಸಲು ಇಷ್ಟಪಡುತ್ತಾರೆಯೇ ವಿನಃ ತಾವು ಪ್ರತಿನಿಧಿಸುವ ಸಂಘಟನೆಯೋ ಅಥವಾ ಧಾರ್ಮಿಕ ಸಿದ್ಧಾಂತವೋ ಗಣನೆಗೆ ಬರುವುದಿಲ್ಲ.

ಅದೇ ರೀತಿ ಮುಸ್ಲಿಮ್ ಸಮುದಾಯವನ್ನು ಕೇವಲ ಮತ ಬ್ಯಾಂಕನ್ನಾಗಿಸಿ ಸ್ವಾತಂತ್ರ್ಯಾ ಪೂರ್ವದಿಂದಲೂ ಅಧಿಕಾರದ ಮುಖ್ಯವಾಹಿನಿಗಳಿಂದ ಬಹುಪಾಲು ಸಮಯ ಅಸ್ಪೃಶ್ಯರನ್ನಾಗಿಸಿದ ‘ಪ್ರಬಲ ಜಾತ್ಯಾತೀತ ಪಕ್ಷ’ ಗಳ ಕುರಿತು ದೃಢ ನಿಲುವು ತಾಳುವುದು ಮುಸ್ಲಿಮ್ ಜಮಾಅತ್ ಗೆ ಅನಿವಾರ್ಯ ಕೂಡಾ. ಅಥವಾ ಆ ಕುರಿತು ತೆಗೆದುಕೊಳ್ಳುವ ನಿರ್ಧಾರಗಳು ಜನರಿಗೆ ಒಪ್ಪಿಗೆಯಾಗುವಂತಿರಬೇಕು. ಇಲ್ಲದಿದ್ದರೆ ಮುಸ್ಲಿಮ್ ಜಮಾಅತ್ ಕೂಡಾ ಜನರ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಆದರೆ ‘ಮುಸ್ಲಿಮ್ ಜಮಾಅತ್’ ಇಂದು ಪ್ರತಿಪಾದಿಸುತ್ತಿರುವ ಮುಸ್ಲಿಮ್ ಸಮುದಾಯದ ರಾಜಕೀಯದ ಪ್ರಾತಿನಿಧ್ಯತೆಯ ಕುರಿತಾಗಿನ ಗಟ್ಟಿ ಧ್ವನಿಯನ್ನು ತನ್ನ ಹುಟ್ಟಿನಿಂದಲೇ ಮೊಳಗಿಸುತ್ತಿರುವ ಎಸ್ಡಿಪಿಐ ಯನ್ನು ತನ್ನ ಘೋಷಣಾ ಕಾರ್ಯಕ್ರಮದ ಯಾವುದೇ ವೇದಿಕೆಗಳಲ್ಲೂ ಆಹ್ವಾನಿಸದೇ ಇರುವ ಮುಸ್ಲಿಮ್ ಜಮಾಅತ್’ಗೆ ಇದನ್ನು ಸಾಕಾರಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುವುದು ಸಹಜ. ಯಾಕೆಂದರೆ ಯಾವ ಸಮುದಾಯ ನಾಯಕರು ನಮ್ಮ ಸಮಸ್ಯೆಗಳಿಗೆ ಧ್ವನಿಯಾಗಲಿಲ್ಲ, ನಾವೊಂದು ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯಬೇಕೆಂದುಕೊಂಡು ಹೊಸ ಇತಿಹಾಸಕ್ಕೆ ನಾಂದಿ ಹಾಡಬೇಕೆಂದುಕೊಂಡ ವೇದಿಕೆಯಲ್ಲೂ ನೋಡುತ್ತಿರುವುದು ಅದೇ ಗುಲಾಂ ನಬಿ ಆಝಾದ್, ಯು ಟಿ ಖಾದರ್, ಝಮೀರ್ ಅಹ್ಮದ್ ಅಥವಾ ಬಿ ಎಂ ಫಾರೂಕರನ್ನಾಗಿದೆ !!

ಅಬೂ ಸೋಹಾ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group