ಸಾಮಾಜಿಕ ತಾಣ

ಭಾರತ ರತ್ನ: ಲತಾ ಮಂಗೇಶ್ಕರ್ ಗೆ ಸಾಧ್ಯವಾಗಿದ್ದು ಸಿದ್ಧಗಂಗಾ ಶ್ರೀಗಳಿಗೆ ಯಾಕೆ ಸಾಧ್ಯವಿಲ್ಲ? ಬಿಜೆಪಿಗರ ಸಮರ್ಥನೆಗಳಿಗೆ ನೆಟ್ಟಿಗರ ಸವಾಲ್!

ವರದಿಗಾರ (ಜ.26):  “ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಏಕೆ ಸಿಗಲಿಲ್ಲ ಎನ್ನುವ ಕಾರಣ ತಿಳಿಯಿರಿ!” ಎಂಬ ತಲೆಬರಹದಲ್ಲಿ ಒಂದು ಬರಹವನ್ನು ಹರಿಯಬಿಟ್ಟಿದ್ದಾರೆ. ಅದನ್ನು ಫೇಸ್ಬುಕ್ ಹಾಗೂ ವಾಟ್ಸಪ್ ಗಳಲ್ಲಿ ಹಂಚುತ್ತಿರುವವರು ಕೂಡಾ ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆನ್ನುವುದು ಇಲ್ಲಿ ಗಮನಾರ್ಹ. ಅದರಲ್ಲೂ “ಟೀಮ್ ಮೋದಿ” ಎನ್ನುವ ಫೇಸ್ಬುಕ್ ಖಾತೆ ಈ ಬರಹವನ್ನು ಮೊದಲ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು ಎಂದು ಭಾವಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಗಳಿಗೆ ಈ ಬಾರಿಯ ‘ಭಾರತ ರತ್ನ’ ವನ್ನು ಕೊಡ ಮಾಡದಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಎಲ್ಲೆಡೆಯಿಂದ ಶ್ರೀಗಳ ಭಕ್ತರು ಹಾಗೂ ಅಭಿಮಾನಿಗಳಿಂದ ತೀವ್ರ ರೀತಿಯ ಟೀಕೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸರಕಾರದ ಕ್ರಮವನ್ನು ಸಮರ್ಥಿಸುವುದೇ ಈ ಬರಹದ ಉದ್ದೇಶ ಎಂಬುವುದನ್ನು ಬೇರೆ ಹೇಳಬೇಕಾಗಿಲ್ಲ. ಬರಹದ ಜೊತೆಗೆ ಕೇಂದ್ರ ಗೃಹ ಇಲಾಖೆಯ ವೆಬ್ ತಾಣದಿಂದ ತೆಗೆಯಲಾಗಿರುವ ‘ಪದ್ಮ ಪ್ರಶಸ್ತಿ’ಗಳನ್ನು ಕೊಡುವ ಮಾನದಂಡದ ಕುರಿತಾಗಿ ವಿವರಗಳುಳ್ಳ ಸ್ಕ್ರೀನ್ ಶಾಟ್ ಕೂಡಾ ಹಂಚುತ್ತಿದ್ದಾರೆ.

ಸ್ಕ್ರೀನ್ ಶಾಟ್ ನಲ್ಲಿ ತಿಳಿಸಿರುವಂತೆ ಪ್ರಥಮ ಹಂತದ ಪದ್ಮಪ್ರಶಸ್ತಿ ಓರ್ವ ವ್ಯಕ್ತಿಗೆ ಇತರೆ ಪದ್ಮ ಪ್ರಶಸ್ತಿಗಳನ್ನು ನೀಡಿ ಐದು ವರ್ಷಗಳ ನಂತರವೇ ಕೊಡಲಾಗುತ್ತದೆ ಎನ್ನಲಾಗಿದೆ. ಆದರೆ ವಿಶೇಷ ಅರ್ಹತೆಯುಳ್ಳವರಿಗೆ ಆಯ್ಕೆ ಸಮಿತಿಯು ರಿಯಾಯಿತಿಯನ್ನೂ ನೀಡಬಹುದಾಗಿದೆ ಎಂದೂ ಅದರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸಾಮಾಜಿಕ ತಾಣಗಳಲ್ಲಿ ನೆಟ್ಟಿಗರು ಬಿಜೆಪಿ ಕಾರ್ಯಕರ್ತರ ‘ಅನಗತ್ಯ’ ಸಮರ್ಥನೆಗಳಿಗೆ ಸರಿಯಾಗಿಯೇ ಸವಾಲ್ ಹಾಕಿದ್ದಾರೆ. 1999ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದ ಲತಾ ಮಂಗೇಶ್ಕರ್ 2001 ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆಯಲು ಸಾಧ್ಯವೆಂದಾದರೆ ಸಿದ್ಧಗಂಗಾ ಶ್ರೀಗಳು 2015 ರಲ್ಲಿ ಪದ್ಮಭೂಷಣ ಪಡೆದಿದ್ದರೂ ಈ ವರ್ಷದ ಭಾರತ ರತ್ನ ಪ್ರಶಸ್ತಿಗೆ ಅರ್ಹತೆ ಪಡೆಯಲು ಯಾಕೆ ಸಾಧ್ಯವಿಲ್ಲ ಎಂದು ಮರು ಪ್ರಶ್ನೆ ಹಾಕಿದ್ದಾರೆ.

ವಾಸ್ತವದಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ರವರು 1969 ರಲ್ಲಿ ಪದ್ಮಭೂಷಣ, 1999ರಲ್ಲಿ ಪದ್ಮವಿಭೂಷಣ್ ಹಾಗೂ 2001 ರಲ್ಲಿ ಭಾರತ ರತ್ನ ಪ್ರಶಸ್ತಿಗೆ ಪಾತ್ರರಾಗಿದ್ದರು. ಲತಾ ಮಂಗೇಶ್ಕರ್ ರವರ ಅರ್ಹತೆಯ ಬಗ್ಗೆ ಇಲ್ಲಿ ಪ್ರಶ್ನೆಯಿಲ್ಲವಾದರೂ 1999ರಲ್ಲಿ ಲತಾ ಮಂಗೇಶ್ಕರ್ ರವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿದ್ದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿ ಎ ಸರಕಾರ 2001ರಲ್ಲಿ, ಅಂದರೆ ಸರಿಯಾಗಿ ಎರಡು ವರ್ಷಗಳ ನಂತರ ಅದೇ ಲತಾ ಮಂಗೇಶ್ಕರ್ ಅವರಿಗೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರ ಭಾರತ ರತ್ನ ಪ್ರಶಸ್ತಿಯನ್ನೂ ನೀಡಿ ಗೌರವಿಸಿತು.

ಇಲ್ಲಿ ಮೂಡುವ ಪ್ರಶ್ನೆಯೆಂದರೆ ಇಂದು ಪರಮಪೂಜ್ಯ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡದೇ ಇರುವುದಕ್ಕೆ ಐದು ವರ್ಷಗಳ ಅಂತರದ ಕಾನೂನು ರೀತ್ಯಾ ಕಾರಣಗಳನ್ನು ನೀಡಿ ಸಮರ್ಥಿಸುವ ಬಿಜೆಪಿ ಅಭಿಮಾನಿಗಳು ಲತಾ ಮಂಗೇಶ್ಕರ್ ಅವರಿಗೆ ಅವರದ್ದೇ ಬಿಜೆಪಿ ಪಕ್ಷದ ಅಟಲ್ ಸರಕಾರ ನೀಡಿರುವ ಪ್ರಶಸ್ತಿಯನ್ನು ಮರೆತಿರುವುದು ಮಾತ್ರ ಸೋಜಿಗವೆನಿಸಿದೆ. ಹೀಗಿರುವಾಗ ಲತಾ ಮಂಗೇಶ್ಕರ್ ಅವರಿಗೆ ಸಾಧ್ಯವಾಗಿರುವ “ವಿಶಿಷ್ಟ ಅರ್ಹತೆಯ” ಮಾನದಂಡ ಪೂಜ್ಯ ಸಿದ್ಧಗಂಗಾ ಶ್ರೀಗಳ ವಿಚಾರದಲ್ಲಿ ನಡೆಯದೇ ಇರುವುದು ಅಚ್ಚರಿ ತಂದಿದೆ. ಮಾತ್ರವಲ್ಲ ಶ್ರೀಗಳ ಭಕ್ತರ ಹಾಗೂ ಅಭಿಮಾನಿಗಳ ಟೀಕೆಗಳ ಸುರಿಮಳೆಗಳಿಗೆ ಉತ್ತರಿಸಲಾಗದೆ ಕಂಗಾಲಾಗಿರುವ ಬಿಜೆಪಿ ಕಾರ್ಯಕರ್ತರು ಸಮರ್ಥನೆಗಾಗಿ ಹರಿಯಬಿಟ್ಟಿರುವ ಬರಹವು ಘಟನೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. ಒಟ್ಟಿನಲ್ಲಿ ಸಿದ್ಧಗಂಗಾ ಶ್ರೀಗಳ ಕುರಿತಾಗಿನ ಅವಗಣನೆಯನ್ನು ಸಮರ್ಥಿಸಲು ಹೋಗಿ ಬಿಜೆಪಿಗರು ಮತ್ತಷ್ಟು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿರುವುದು ಮಾತ್ರ ಸ್ಪಷ್ಟವಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group