ರಾಜ್ಯ ಸುದ್ದಿ

‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯೇ ನನ್ನನ್ನು ರಾಜಕೀಯಕ್ಕೆ ಬರುವಂತೆ ಮಾಡಿದೆ’: ಪ್ರಕಾಶ್ ರೈ

‘ಮತೀಯವಾದದ ಹೆಸರಿನಲ್ಲಿ ರಾಜಕಾರಣ ಮಾಡುವವರ ವಿರೋಧಿ ನಾನು’

ವರದಿಗಾರ (ಜ.18): ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ರವರ ಹತ್ಯೆಯೇ ನನ್ನನ್ನು ರಾಜಕಾರಣಕ್ಕೆ ಪ್ರವೇಶಿಸುವಂತೆ ಮಾಡಿದೆ ಎಂದು ಬಹುಭಾಷಾ ನಟ, ಚಿಂತಕ, ಪ್ರಶ್ನಿಸುವುದಕ್ಕಾಗಿ ರಾಜಕಾರಣಿಯಾದ ಪ್ರಕಾಶ್ ರೈ ಹೇಳಿದ್ದಾರೆ.

ಅವರು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ತನ್ನ ರಾಜಕೀಯ ಪ್ರವೇಶ, ಮತ್ತು ಮುಂದಿನ ದಿನಗಳ ಕಾರ್ಯ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದರು.

‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನನ್ನನ್ನು ರಾಜಕಾರಣಕ್ಕೆ ಪ್ರವೇಶಿಸುವಂತೆ ಮಾಡಿದೆ. ದೇಶದಲ್ಲಿ ಈಗ ಮತೀಯ ರಾಜಕಾರಣದ ಆತಂಕ ಕಾಣಿಸಿದೆ. ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಏನಾಗುತ್ತಿದೆ ಎಂಬುದೇ ಗೊತ್ತಿಲ್ಲ’ ಎಂದು ಪ್ರಕಾಶ್ ರೈ ಆತಂಕ ವ್ಯಕ್ತಪಡಿಸಿದ್ದಾರೆ.

‘ನನ್ನ ಹುಟ್ಟು, ಬಾಲ್ಯ, ವಿದ್ಯಾಭ್ಯಾಸ ಸೇರಿದಂತೆ ನನ್ನ ಬದುಕಿನ ಬೇರುಗಳೆಲ್ಲಾ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಇವೆ. ಹೀಗಾಗಿ ಇಲ್ಲಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ’ ಎಂಬುವುದಾಗಿ ಪ್ರಕಾಶ್ ರೈ ಘೋಷಿಸಿದ್ದಾರೆ.

‘ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ವಾಸ್ತವ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿದೇ ಹೆಜ್ಜೆಯನ್ನಿಟ್ಟಿದ್ದೇನೆ. ಮುಂದಿನ ಹದಿನೈದು ದಿನಗಳಲ್ಲಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದೇನೆ. 20ರಿಂದ ಕ್ಷೇತ್ರದಲ್ಲಿ ಅಭಿಯಾನವನ್ನು ಪ್ರಾರಂಭಿಸಲಿದ್ದೇನೆ’ ಎಂದು ಅವರು ಹೇಳಿದ್ದಾರೆ. ‘ಬೆಂಗಳೂರು ಕೇಂದ್ರ ಕ್ಷೇತ್ರ ಅಲ್ಪಸಂಖ್ಯಾತರ ಮತಗಳು ಹೆಚ್ಚಿರುವ ಕ್ಷೇತ್ರ. ಇಲ್ಲಿ ನಿಮ್ಮ ಸ್ಪರ್ಧೆಯಿಂದ ಅಲ್ಪಸಂಖ್ಯಾತ ಮತಗಳು ವಿಭಜನೆಯಾಗಿ ಬಿಜೆಪಿ ಅಭ್ಯರ್ಥಿಗೆ ಲಾಭ ಮಾಡಿಕೊಡುತ್ತದೆಯಲ್ಲವೇ’ ಎಂಬ ಪ್ರಶ್ನೆಗೆ, ‘ಹಾಗೇನೂ ಇಲ್ಲ. ಬೇಕಿದ್ದರೆ ಕಾಂಗ್ರೆಸ್‌ನವರು ಬಂದು ಬೆಂಬಲಿಸಲಿ’ ಎಂದು ಹೇಳಿದ್ದಾರೆ..

‘ಚುನಾವಣೆಯಲ್ಲಿ ಗೆದ್ದರೆ ಬಿಜೆಪಿ ವಿರೋಧದ ಮಹಾಘಟಬಂಧನ್ ಭಾಗವಾಗುತ್ತೀರ’ ಎಂಬ ಪ್ರಶ್ನೆಗೆ, ‘ನಾನ್ಯಾಕೆ ಪಕ್ಷ ಸೇರಬೇಕು, ಸ್ವತಂತ್ರವಾಗಿಯೇ ಇರುತ್ತೇನೆ.  ನನ್ನ ಸ್ವಂತಿಕೆ ಬಿಟ್ಟು ಕೊಡುವುದಿಲ್ಲ. ಪ್ರಯಾಣ ಶುರು ಮಾಡಿದ್ದೇನೆ. ಎಲ್ಲಿಗೆ ಹೋಗುತ್ತೊ ಗೊತ್ತಿಲ್ಲ’ ಎಂದರು.

‘ದುಡ್ಡು, ಜಾತಿ ಲೆಕ್ಕಾಚಾರದ ಮೇಲೆ ಎಷ್ಟು ದಿವಸ ರಾಜಕಾರಣ‌ ಮಾಡುತ್ತೀರ’ ಎಂದು ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಒಬ್ಬ ಸಂಸದ 50-60 ಕೋಟಿ ಖರ್ಚು ಮಾಡಿ ಚುನಾವಣೆ ಗೆಲ್ಲುತ್ತಾನೆ ಎಂದರೆ ಏನರ್ಥ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳು ಹೇಗಿವೆ, ಕೊಳಚೆ ಪ್ರದೇಶದ ನಿವಾಸಿಗಳು ಹೇಗೆ ಬದುಕುತ್ತಿದ್ದಾರೆ ಎಂದು ಇಲ್ಲಿನ ಸಂಸದ ಎಂದಾದರೂ ಗಮನಿಸಿದ್ದಾರೆಯೇ’ ಎಂದು ಇದೇ ಸಂದರ್ಭ ಹಾಲಿ ಸಂಸದರನ್ನು ಪ್ರಶ್ನಿಸಿದ್ದಾರೆ.

‘ನಾನು ಹಿಂದೂ ವಿರೋಧಿ ಅಲ್ಲ, ಮುಸ್ಲಿಂ ವಿರೋಧಿ ಅಲ್ಲ, ಕ್ರಿಶ್ಚಿಯನ್ ವಿರೋಧಿ ಅಲ್ಲ. ಯಾವ ಪಕ್ಷವೇ ಅಗಲಿ ಮತೀಯ ಹೆಸರಿನಲ್ಲಿ ರಾಜಕಾರಣ ಮಾಡುವುದು ತಪ್ಪು. ಈ ರೀತಿ ಮತೀಯವಾದದ ಹೆಸರಿನಲ್ಲಿ ರಾಜಕಾರಣ ಮಾಡುವವರ ಮತ್ತು ಕೋಮುವಾದದ ವಿರೋಧಿ ನಾನು’ ಎಂದು ಅವರು ಸ್ಪಷ್ಟಪಡಿಸಿದರು.

‘ಇದು ಮತ್ತೊಬ್ಬರನ್ನು ಬೈದು ರಾಜಕಾರಣ ಮಾಡುವ ಸಮಯವಲ್ಲ. ಈ ದೇಶದಲ್ಲಿ ಎಲ್ಲರೂ ಕಳ್ಳರು ಸುಳ್ಳರಾಗಿದ್ದಾರೆ. ನನಗೆ ಪಕ್ಷದ ದೃಷ್ಟಿಯಿಲ್ಲ. ಪ್ರಜೆಗಳ ದೃಷ್ಟಿಯಿಂದ ರಾಜಕಾರಣ ಮಾಡಲು ಇಚ್ಛಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group