ಅನಿವಾಸಿ ಕನ್ನಡಿಗರ ವಿಶೇಷ

ಗಲ್ಫ್ ಕನ್ನಡಿಗರ ದುಸ್ಥಿತಿಯ ಬಗ್ಗೆ ರಾಜ್ಯ ಸರಕಾರಕ್ಕೆ ಅಧ್ಯಯನ ವರದಿ ಸಲ್ಲಿಸಲಿರುವ ಇಂಡಿಯನ್ ಸೋಶಿಯಲ್ ಫೋರಂ

ವರದಿಗಾರ  (ಜ 18) : ಸೌದಿ ಅರೇಬಿಯಾದಲ್ಲಿ ತಲೆದೋರಿರುವ ಆರ್ಥಿಕ ಸ್ಥಿತ್ಯಂತರ ಹಾಗೂ ಅಲ್ಲಿನ ಅನಿವಾಸಿ ಭಾರತೀಯ  ಕನ್ನಡಿಗರ ಮೇಲೆ ಅದು ಬೀರುತ್ತಿರುವ ಪರಿಣಾಮದ ಬಗ್ಗೆ ಅಧಿಕೃತ ಅಂಕಿ ಅಂಶಗಳನ್ನೊಳಗೊಂಡ ಅಧ್ಯಯನ ವರದಿಯನ್ನು ಇಂಡಿಯನ್ ಸೋಶಿಯಲ್ ಫೋರಂ(ISF) ಸೌದಿ ಅರೇಬಿಯಾ ಪೂರ್ವ ಪ್ರಾಂತ್ಯ ಘಟಕವು ಸಿದ್ಧಪಡಿಸಿದೆ.  ವರದಿಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ತಳಮಟ್ಟದಿಂದಲೇ ಮಾಹಿತಿ ಸಂಗ್ರಹ ಪ್ರಕ್ರಿಯೆಯನ್ನು ಚಾಲ್ತಿಯಲ್ಲಿರಿಸಿ  ಅಧ್ಯಯನದ ಮಧ್ಯಂತರ ವರದಿಯನ್ನು ಸೌದಿ ಅರೇಬಿಯಕ್ಕೆ ಭೇಟಿ ನೀಡುತ್ತಿದ್ದ ಸರಕಾರದ ಅಧಿಕೃತ ಪ್ರತಿನಿಧಿಗಳಿಗೆ ನೀಡಿದ್ದೇವೆ. ಇದೀಗ ವಿಸ್ತೃತ ವರದಿಯು ಸಂಪೂರ್ಣಗೊಂಡಿದ್ದು ಅಧಿಕೃತವಾಗಿ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಇಂಡಿಯನ್ ಸೋಶಿಯಲ್ ಫೋರಮ್ ತೀರ್ಮಾನಿಸಿದೆ. ಪ್ರಸಕ್ತ ವರದಿಯಲ್ಲಿ ಸೌದಿ ಅರೇಬಿಯಾದಲ್ಲಿನ ಆರ್ಥಿಕ ಬಿಕ್ಕಟ್ಟು ಹಾಗೂ ಇದರಿಂದಾಗಿ ಪ್ರಸಕ್ತ ಸುಮಾರು 2.5 ಲಕ್ಷದಷ್ಟಿರುವ  ಅನಿವಾಸಿ ಭಾರತೀಯ  ಕನ್ನಡಿಗರ ಮೇಲೆ ‌ಬೀರಿರುವ ಪರಿಣಾಮದ ಬಗ್ಗೆ ಕರ್ನಾಟಕ ಸರಕಾರದ ಗಮನ ಸೆಳೆಯಲು ಮತ್ತು‌ ಸರಕಾರವು ಈ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಕಾರ್ಯತಂತ್ರ ರೂಪಿಸಲು ಅನುಕೂಲವಾಗುವ ರೀತಿಯಲ್ಲಿ ಅನಿವಾಸಿ ಕನ್ನಡಿಗರ ಪರವಾಗಿ ಕೆಲವೊಂದು ಶಿಫಾರಸ್ಸುಗಳನ್ನೂ ಉಲ್ಲೇಖಿಸಲಾಗಿದೆ.

‘ಅನಿವಾಸಿ ಭಾರತೀಯ ಕನ್ನಡಿಗರ ಉದ್ಯೋಗ ಬಿಕ್ಕಟ್ಟು ಮತ್ತು ಅದರ ಪರಿಣಾಮ’ ಎನ್ನುವ ವಿಚಾರಗಳ ಕುರಿತಂತೆ ತಮ್ಮ ಅನಿಸಿಕೆ ಹಾಗೂ ಅಧ್ಯಯನ ವರದಿಯ ಕುರಿತು ಇಂದು ಮಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಟಿಯನ್ನು ಇಂಡೀಯನ್ ಸೋಶಿಯಲ್ ಫೋರಂನ ನಾಯಕರು ಕರೆದಿದ್ದರು. ತಾವು ನಡೆಸಿರುವ ಅಧ್ಯಯನ ವರದಿಯ ಕುರಿತಂತೆ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಅನಿವಾಸಿ ಭಾರತೀಯ ಸಂಘಟನೆ ಇಂಡಿಯನ್ ಸೋಶಿಯಲ್ ಫೋರಂ (ISF) ಕರ್ನಾಟಕ ಎಂಬುದು ಭಾರತೀಯ ವಲಸಿಗರ ಕಲ್ಯಾಣ ಚಟುವಟಿಕೆಗಳ ವೇದಿಕೆಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿನ ಭಾರತೀಯ ಸಮುದಾಯದ ಸಾಮಾಜಿಕ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈ ವೇದಿಕೆಯು ಸೌದಿ ಅರೇಬಿಯದಲ್ಲಿರುವ ಅನಿವಾಸಿ ಕನ್ನಡಿಗರು ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಗುರುತಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸೋಶಿಯಲ್ ಫೋರಮ್ ನಿರಂತರವಾಗಿ ಅನಿವಾಸಿ ಭಾರತೀಯರನ್ನು ಸಂಘಟಿಸಿ ಸೌದಿ ಅರೇಬಿಯದಲ್ಲಿ ಭಾರತೀಯ ಸ್ವಾತಂತ್ರ್ಯ ದಿನಾಚರಣೆ,  ಗಣರಾಜ್ಯೋತ್ಸವ,  ಮಕ್ಕಳ ದಿನಾಚರಣೆ,  ಕನ್ನಡ ರಾಜ್ಯೋತ್ಸವವನ್ನು ಆಯೋಜಿಸುತ್ತಿದೆ. ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯರ ನೆರವಿಗಾಗಿ ಭಾರತೀಯ ರಾಯಭಾರ ಕಚೇರಿಯೊಂದಿಗೆ ಕೈಜೋಡಿಸಿ ಸಾಮಾಜಿಕ ಸೇವೆಯನ್ನು ನಡೆಸುತ್ತಿದೆ.

ಗಲ್ಫ್ ರಾಷ್ಟ್ರಗಳಲ್ಲಿರುವ ವಲಸಿಗರು ಸಾಮಾನ್ಯವಾಗಿ ಬಡ ಮತ್ತು ಮಧ್ಯಮ ವರ್ಗದಿಂದ ಬಂದವರಾಗಿದ್ದು, ಅವರ ಬದುಕು ಸಂಕಷ್ಟದಲ್ಲಿದೆ. ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆಯಿಂದಾಗಿ ಉಂಟಾದ ಆರ್ಥಿಕ ಕುಸಿತ, ಕೊಲ್ಲಿ ಪ್ರದೇಶದಲ್ಲಿನ ಭೌಗೋಳಿಕ-ರಾಜಕೀಯ ಬಿಕ್ಕಟ್ಟು ಹಾಗೂ ಉದ್ಯೋಗ ಮಾರುಕಟ್ಟೆಯಲ್ಲಿನ ಸೌದೀಕರಣ ಪ್ರಕ್ರಿಯೆಯು ಭಾರೀ ಸಂಖ್ಯೆಯಲ್ಲಿ ಅನಿವಾಸಿ ಕನ್ನಡಿಗರು ಉದ್ಯೋಗ ಕಳೆದುಕೊಂಡು ತಮ್ಮ ತಾಯ್ನೆಲಕ್ಕೆ ಹಿಂದಿರುಗುವಂತೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಿಂದ ಹಿಂದಿರುಗಿದ ವಲಸಿಗರು ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಕಲ್ಯಾಣಕ್ಕಾಗಿ ಕರ್ನಾಟಕ ಸರಕಾರಕ್ಕೆ ಕೆಲವೊಂದು ಶಿಫಾರಸುಗಳನ್ನು ಸಲ್ಲಿಸಲಿದೆ.

ಈ ಅಧ್ಯಯನ ವರದಿಯ ಮುಂದುವರಿದ ಭಾಗವಾಗಿ ಜನರಲ್ಲಿ ಜಾಗೃತಿ‌ ಮೂಡಿಸುವುದು, ರಾಜ್ಯದ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವಾಲಯದೊಂದಿಗೆ ಚರ್ಚಿಸುವುದು, ಅಧಿಕಾರಿಗಳನ್ನು ಭೇಟಿಯಾಗಿ ಸಲಹೆಗಳನ್ನು ‌ಪಡೆಯಲಾಗುವುದು.     ಇಂಡಿಯನ್ ಸೋಶಿಯಲ್ ಫೋರಂ (ISF) ಪೂರ್ವ ಪ್ರಾಂತ್ಯ ಕರ್ನಾಟಕ ಕೈಗೆತ್ತಿಕೊಂಡಿರುವ ಮಹತ್ತರವಾದ ಈ ಕಾರ್ಯದಲ್ಲಿ ಮಾಧ್ಯಮ ರಂಗದ ಸಹಕಾರವೂ ಅತ್ಯಗತ್ಯವಾಗಿದ್ದು,  ಮಾಧ್ಯಮ ಪ್ರತಿನಿಧಿಗಳ ನೆರವನ್ನೂ ಅಪೇಕ್ಷಿಸುತ್ತಿದ್ದೇವೆ ಎಂದು ಪತ್ರಿಕಾಗೋಷ್ಟಿಯಲಿ ಹಾಜರಿದ್ದ ಇಂಡಿಯನ್ ಸೋಶಿಯಲ್ ಫೋರಂನ ನಾಯಕರು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕಾರಿ ಸಮಿತಿಯ ಮುಹಮ್ಮದ್ ಶರೀಫ್,ಮುಹಮ್ಮದ್ ಬಶೀರ್, ಮುಹಮದ್ ಅಶ್ಫಾಕ್ ಹಾಗೂ  ಕುವೈತ್ ಸೊಶಿಯಲ್  ಫೋರಂನ ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group