ನಿಮ್ಮ ಬರಹ

ಮುಸ್ಲಿಂ ಅಭ್ಯರ್ಥಿ ಮತ್ತು ಮುಸ್ಲಿಮರು… ಒಂದು ಒಳನೋಟ

ವರದಿಗಾರ  (ಜ 15) : ಮಂಗಳೂರು ಲೋಕಭಾ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಮುಸ್ಲಿಂ ಅಭ್ಯರ್ಥಿಯನ್ನು ಚುನಾವಣೆಗೆ  ನಿಲ್ಲಿಸುವ ಮಾತುಗಳು ಕೇಳಿಬರುತ್ತಿದೆ.  ಕಳೆದ ವರ್ಷವೂ  ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹುದ್ದೆಗೆ ಮುಸ್ಲಿಂ ವ್ಯಕ್ತಿಯನ್ನು ಆರಿಸಬೇಕೆಂಬುವುದು ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರ ವಾದವಾಗಿತ್ತು. ಅದು ಸಿಗದಿದ್ದರೆ ಪಕ್ಷ ತ್ಯಜಿಸುವ ಬೆದರಿಕೆಯನ್ನೂ ಹಾಕಿದ್ದರು. ಆದರೆ ಕಾಂಗ್ರೆಸ್ ಅವರ ಬೆದರಿಕೆಗೆ ಸೊಪ್ಪು ಹಾಕದಾಗ ಬಾಲ ಮಡಚಿ ಸುಮ್ಮನಾದರು. ಉಪ ಮೇಯರ್ ಹುದ್ದೆಗೆ ತೃಪ್ತಿ ಪಟ್ಟುಕೊಂಡರು.

ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕೈತಪ್ಪಿರುವ ಮಂಗಳೂರು ಕ್ಷೇತ್ರವನ್ನು ಪುನಃ ವಶಪಡಿಸಿಕೊಳ್ಳಬೇಕಾದುದು ಕಾಂಗ್ರೆಸ್ಗೆ ಅನಿವಾರ್ಯ. ಈ ಕ್ಷೇತ್ರದಲ್ಲಿ ಜಯಿಸಬೇಕಾದರೆ ಮುಸ್ಲಿಮರ ಮತ ಅತ್ಯಗತ್ಯ.  ಮುಸ್ಲಿಂ ಅಭ್ಯರ್ಥಿಯ ಆಯ್ಕೆಯ ವದಂತಿಯ ಹಿಂದೆ ಮುಸ್ಲಿಂ ಸಮುದಾಯದ ಮತ ಪಡೆದು ಜಯ ಸಾಧಿಸುವ ಉದ್ಧೇಶವೇ ಹೊರತು ಮುಸ್ಲಿಮರ ಏಳಿಗೆಯ ಕಾಳಜಿಯಿಂದಲ್ಲ. ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಅದೇ ಸಮುದಾಯದ  ಅಭ್ಯರ್ಥಿಗಳು ಸ್ಪರ್ಧಿಸಿದರೆ ಮುಸ್ಲಿಂ ಸಮುದಾಯದ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದು. ಈ ಮೂಲಕ ಸಂಸತ್ತಿನಲ್ಲಿ ಅಥವಾ ವಿಧಾನಸೌಧದಲ್ಲಿ ಒಂದು ಸ್ಥಾನವನ್ನು ಹೆಚ್ಚಿಸಿ ಕೊಳ್ಳಬಹುದು ಎಂಬುವುದು ರಾಜಕೀಯ ಪಕ್ಷಗಳ ಲೆಕ್ಕಾಚಾರ. ಪಕ್ಷದಲ್ಲಿರುವ ಮುಸ್ಲಿಂ ಮುಖಂಡರು ಅವರ ಸಂಸದ ಅಥವಾ ಶಾಸಕನಾಗುವ ಕನಸು ನನಸಾಗಲು ಮುಸ್ಲಿಮರನ್ನು ಓಟು ಬ್ಯಾಂಕ್ ಆಗಿ ಉಪಯೋಗಿಸುತ್ತಾರೆ ಹೊರತು ಮುಸ್ಲಿಮರ ಅಭಿವೃದ್ಧಿಯ ಕಾಳಜಿಯಿಂದಲ್ಲ. ರಾಜಕೀಯ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುವುದು ಮುಸ್ಲಿಮರ ಮತವನ್ನು ಕಸಿದುಕೊಳ್ಳುವ ತಂತ್ರವೇ ಹೊರತು ಮುಸ್ಲಿಮರ ಏಳಿಗೆಯ ಮಂತ್ರವಲ್ಲ.

ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಕೇವಲ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಅವರಿಗೆ ಮುಸ್ಲಿಮರು  ಮತವನ್ನು  ಕೊಡಬೇಕೇ? ಅವರಿಗೆ ಓಟು ಕೊಡುವುದರಿಂದ ಸಮುದಾಯಕ್ಕೆ ಆಗುವ ಲಾಭವಾದರೂ ಏನು ಎಂದು ಮುಸ್ಲಿಮರು ಚಿಂತಿಸಬೇಕಾದ ಕಾಲ ಸನ್ನಿಹಿತವಾಗಿದೆ. ಮುಸ್ಲಿಂ ಸಮಾಜದ ಬಗ್ಗೆ ಕಾಳಜಿಯಿಲ್ಲದ ಒಬ್ಬ ಮುಸ್ಲಿಂ ಅಭ್ಯರ್ಥಿ ಜಯಿಸುವುದರಿಂದ ಸಮುದಾಯಕ್ಕೆ ಏನೂ ಪ್ರಯೋಜನವಿಲ್ಲ.  ಅವರಿಂದ ಮುಸ್ಲಿಮರ ಏಳಿಗೆಯ ಕನಸು ನನಸಾಗುವುದಿಲ್ಲ.  ಅವರು ಅವರಿಗೂ ಕುಟುಂಬಕ್ಕೂ ಚೇಲಾಗಳಿಗೂ ಸಿಗುವ ಸಕಲ ಸವಲತ್ತುಗಳನ್ನು ಸಂಪೂರ್ಣವಾಗಿ ಉಪಯೋಗಿಸಿ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಾರೆ. ತಾನು ಮುಸ್ಲಿಮರ ಹೆಸರು ಹೇಳಿ ಗೆದ್ದಿದ್ದೇನೆ. ಅವರ ಅಭಿವೃದ್ಧಿಗಾಗಿ ದುಡಿಯಬೇಕು ಎಂಬುದನ್ನು ಗೆದ್ದಷ್ಟೇ ಸುಲಭವಾಗಿ ಮರೆಯುತ್ತಾರೆ. ಇಂತವರಿಂದ ಸಮುದಾಯಕ್ಕೆ ಆಗುವ ಪ್ರಯೋಜನವಾಗದು.

ಪೀಡಿತ ಮುಸ್ಲಿಂ ಸಮುದಾಯದ ಪರವಾಗಿ, ಅವರ ಅಭಿವೃದ್ಧಿಗಾಗಿ ಸಂಸತ್ತಿನ್ನಲ್ಲಿ ಅಥವಾ ವಿಧಾನಸೌಧದಲ್ಲಿ ಇವರು ದ್ವನಿ ಎತ್ತುವುದಿಲ್ಲ. ಹೆಚ್ಚೇಕೆ ಮುಸ್ಲಿಮರು ತನ್ನ ಪ್ರಾಣಕ್ಕಿಂತಲೂ, ಅವರಿಗೆ ಪ್ರಿಯವಾದ ಇತರ ಸರ್ವರಿಗಿಂತಲೂ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾದ ಪ್ರವಾದಿ ಮುಹಮ್ಮದ್(ಸ.ಅ.) ರವರನ್ನು ಅವಹೇಳನ ಮಾಡಿದ ಅಜಿತ್ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲು ಇವರಿಂದ ಸಾಧ್ಯವಾಗಿಲ್ಲ. ರಾಜ್ಯದ ವಿವಿಧೆಡೆಗಳಲ್ಲಿ ಸುಮಾರು 800 ರಷ್ಟು ದೂರು ದಾಖಲಾಗಿದ್ದರೂ ಅವನಿಗೆ ಕೋರ್ಟುನಿಂದ ಇಷ್ಟೊಂದು ಸುಲಭವಾಗಿ ಕೇಸುಗಳಿಗೆ ತಡೆ ತರಲು ಸಾಧ್ಯವಾಗುವುದಾದರೆ ಅದಕ್ಕೆ ಸರ್ಕಾರದ ಮತ್ತು ಮುಸ್ಲಿಂ ಶಾಸಕರ ವೈಫಲ್ಯವೇ ಕಾರಣ. ಮುಸ್ಲಿಂ ಶಾಸಕರಾಗಿ ಸಮುದಾಯದ ಧಾರ್ಮಿಕ ನಂಬಿಕೆ ಮತ್ತು ಭಾವನೆಗಳಿಗೆ ಘಾಸಿಯಾದಾಗ ದ್ವನಿ ಎತ್ತಿದರೆ ಎಲ್ಲಿ ಹೈಕಮಾಂಡ್ನ ಕೆಂಗಣ್ಣಿಗೆ ಗುರಿಯಗುತ್ತೇನೋ ಎಂಬ ಹೆದರಿಕೆ. ಇವರಿಗೆ ಸಮುದಯಕ್ಕಿಂತಲೂ ಸ್ಥಾನಮಾನವೇ ಹೆಚ್ಚು. ಸಮುದಾಯ ಎಷ್ಟೇ ಪೀಡಿಸಲ್ಪಟ್ಟರೂ ನಂಬಿಕೆ ಮತ್ತು ಭಾವನೆಗಳು ಘಾಸಿಗೊಂಡರೂ ಇವರಿಗೆ ಅದೊಂದು ವಿಷಯವೇ ಅಲ್ಲ. ಇಂತವರನ್ನು ನಾವು ಯಾಕೆ ಆಯ್ಕೆ ಮಾಡಬೇಕು?.

ಹಿಂದೆ ಸಂಸತಿನಲ್ಲಿ ಮುಸ್ಲಿಮರ ಪರವಾಗಿ ಗರ್ಜಿಸುವ ಸಿಂಹಗಳು ಇದ್ದವು. ಕೇರಳದ ಮುಸ್ಲಿಂ ಲೀಗ್ ಶಾಸಕರಾಗಿದ್ದ ದಿ!ಇಬ್ರಾಹಿಂ ಸುಲೈಮಾನ್ ಸೇಟ್, ದಿ! ಬನಾತ್ವಾಲ ಮೊದಲಾದವರು ಮುಸ್ಲಿಮರ ಕಷ್ಟ ನಷ್ಟಗಳೊಂದಿಗೆ ಸ್ಪಂದಿಸಿ ಅವರಿಗಾಗಿ ಸಂಸತಿನಲ್ಲಿ ಧ್ವನಿ ಎತ್ತಿದ್ದಾರೆ. ಅದರೆ ಈಗಿನ ಲೀಗ್ ಸಂಸದ ಕುಂಜ್ಞಾಲಿ ಕುಟ್ಟಿ ತ್ರಿವಳಿ ತಲಾಕ್ ಬಗ್ಗೆ ಸಂಸತ್ತಿನ ಚರ್ಚೆಯಾಗುತ್ತಿರುವಾಗ ಸ್ನೇಹಿತನ ಮಗಳ ಮದುವೆಗೆ ಹೋಗಿ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ. ಅದರೆ ಸಂಸದ  ಉವೈಸಿಯವರು ಮುಸ್ಲಿಮರ ಪರವಾಗಿ ಧ್ವನಿಯೆತ್ತುತ್ತಿರುವುದು ಶ್ಲಾಘನೀಯ. ಆದರೆ ಇತರ ಮುಸ್ಲಿಂ ಶಾಸಕರು, ಸಂಸದರು ಮುಸ್ಲಿಮರ ಪರ ವಕಾಲತ್ತು ವಹಿಸಿದರೆ ಎಲ್ಲಿ ತಮ್ಮ ಸ್ಥಾನ ಹಾಗೂ ಸವಲತ್ತುಗಳು ಕೈತಪ್ಪುವುದೋ ಎಂಬ ಭಯ.  ಇವರಿಗಿಂತಲೂ ಮುಸ್ಲಿಮೇತರ ಶಾಸಕರು ಸಂಸದರು ಮುಸ್ಲಿಮರ ಪರವಾಗಿ ಧ್ವನಿಯೆತ್ತುತ್ತಾರೆ. ಅದ್ದರಿಂದ ಸಮುದಾಯ ಬಗ್ಗೆ ಕಾಳಜಿಯಿಲ್ಲದ ಮುಸ್ಲಿಮರ ಆಗುಹೋಗುಗಳೊಂದಿಗೆ ಸ್ಪಂದಿಸದ, ಕೇವಲ ಮಾತಿನ ಮಲ್ಲರಾದ ನಿಷ್ಪ್ರಯೋಜಕ ಶಾಸಕ, ಸಂಸದರನ್ನು ಆರಿಸುವುದಕ್ಕಿಂತ ಇತರೇ ಉತ್ತಮವಲ್ಲವೇ? ಮುಸ್ಲಿಮರ ಪರವಾಗಿ ಪ್ರಾಮಾಣಿಕ ಕಾಳಜಿಯಿರುವ, ಸಮುದಾಯದ ಕಷ್ಟ ಸುಖಗಳೊಂದಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಅಭ್ಯರ್ಥಿ ಸ್ಪರ್ಧಿಸಿದರೆ ಪಕ್ಷ ಭೇದವಿಲ್ಲದೆ ಅವರನ್ನು ಆಯ್ಕೆ ಮಾಡೋಣ.

ಇಬ್ನ್ ಝೈತೂನ್

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group