ವರದಿಗಾರ (ಜ.15): ಕರ್ನಾಟಕ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಎನ್.ಮಹೀಶ್ ರವರ ರಾಜೀನಾಮೆ ಬಳಿಕ ತೆರವುಗೊಂಡಿದ್ದ ಶಿಕ್ಷಣ ಇಲಾಖೆಗೆ ಸಚಿವರನ್ನು ಇನ್ನೂ ನೇಮಿಸದ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಉಚಿತ ಬೈಸಿಕಲ್ ವಿತರಣೆಯಲ್ಲಿ ವಿಳಂಬವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು (ಸಿಎಫ್ ಐ) ಕರ್ನಾಟಕ ರಾಜ್ಯವ್ಯಾಪ್ತಿಯಾಗಿ ಕರೆ ನೀಡಿದ್ದ ಪ್ರತಿಭಟನೆಯ ಅಂಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ವತಿಯಿಂದ ಇತ್ತೀಚೆಗೆ ಬೆಳ್ತಂಗಡಿ ಬಸ್ಸು ನಿಲ್ದಾಣದ ಬಳಿ ಪ್ರತಿಭಟಿಸಿ ಸರಕಾರವು ತಕ್ಷಣ ಶಿಕ್ಷಣ ಸಚಿವರನ್ನು ನೇಮಕ ಮಾಡುವಂತೆ ಆಗ್ರಹಿಸಿದೆ.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಪುಂಜಾಲಕಟ್ಟೆ, “ಶಿಕ್ಷಣ ಸಚಿವರ ನೇಮಕಗೊಳಿಸುವಲ್ಲಿ ವಿಳಂಬವಾಗುತ್ತಿರುವುದು ರಾಜ್ಯ ಸರಕಾರವು ಶಿಕ್ಷಣಕ್ಕೆ ಎಷ್ಷು ಮಹತ್ವ ನೀಡುತ್ತದೆ ಎಂಬುವುದನ್ನು ಸೂಚಿಸುತ್ತದೆ. ಇದು ಶಿಕ್ಷಣದ ಮೇಲೆ ಗಂಭೀರವಾದ ಪರಿಣಾಮ ಬೀಳಲಿದೆ. ಯಾವುದೇ ಸರಕಾರ ಜನಪರವಾದಂತಹ ಆಡಳಿತವನ್ನು ನೀಡುವ ಇಚ್ಛೆ ವ್ಯಕ್ತಪಡಿಸುವುದಾದರೆ ಅದರಲ್ಲಿ ಮೊದಲನೆಯ ಅಂಶ ಶಿಕ್ಷಣಕ್ಕಾಗಿದೆ. ಶಿಕ್ಷಣವಿಲ್ಲದೆ ಈ ಸಮಾಜ ಸುಭದ್ರಗೊಳ್ಳಲು ಸಾಧ್ಯವಿಲ್ಲ. ಸರಕಾರ ತಕ್ಷಣವಾಗಿ ಎಚ್ಚೆತ್ತು ವಿದ್ಯಾರ್ಥಿಗಳ ಅಹವಾಲನ್ನು ಕೇಳಬೇಕು. ಶೈಕ್ಷಣಿಕ ವರ್ಷದಲ್ಲಿ ತಲೆ ದೋರಿರುವ ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸದಿದ್ದರೆ ಕ್ಯಾಂಪಸ್ ಫ್ರಂಟ್ ತನ್ನ ಹೋರಾಟವನ್ನು ತೀವ್ರಗೊಳಿಸಲಿದೆ ಮತ್ತು ವಿದ್ಯಾರ್ಥಿಗಳು ಬೀದಿಗಿಳಿದು ಸರಕಾರದ ವಿರುದ್ಧ ತೀವ್ರವಾದ ಹೋರಾಟವನ್ನು ನಡೆಸಲಿದೆ. ” ಎಂದು ಎಚ್ಚರಿಕೆ ನೀಡಿದ್ದಾರೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ತಾಲೂಕು ಅಧ್ಯಕ್ಷರು ಶಾಹಿದ್ ಅಲಿ ಗೇರುಕಟ್ಟೆ , ಸರ್ವ ಕಾಲೇಜು ವಿಧ್ಯಾರ್ಥಿ ಸಂಘದ ತಾಲೂಕು ಅಧ್ಯಕ್ಷ ಫಾಝಿಲ್ ಕಕ್ಕಿಂಜೆ, ಸರ್ವ ಕಾಲೇಜು ವಿದ್ಯಾರ್ಥಿ ಸಂಘ ದ.ಕ ಜಿಲ್ಲೆ ಉಪಾಧ್ಯಕ್ಷ ಸಿಯಾಬುದ್ದೀನ್ ,ಸಿ ಎಫ್ ಐ ಬೆಳ್ತಂಗಡಿ ತಾಲ್ಲೂಕು ಉಪಾಧ್ಯಕ್ಷೆ ಫಾತಿಮಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕ್ಯಾಂಪಸ್ ಫ್ರಂಟ್ ತಾಲೂಕು ಕಾರ್ಯದರ್ಶಿ ಇಮ್ರಾನ್ ಪಾಂಡವರಕಲ್ಲು ಸ್ವಾಗತಿಸಿ, ನಿರೂಪಿಸಿದರು.
