ರಾಷ್ಟ್ರೀಯ ಸುದ್ದಿ

ಬಿಜೆಪಿಯಿಂದ ‘ಕೇರಳ ಬಂದ್’ : ಪ್ರತಿಭಟನಕಾರರಿಂದ ಕೇರಳದಾದ್ಯಂತ ವ್ಯಾಪಕ ಹಿಂಸಾಚಾರ

ವರದಿಗಾರ  (ಜ 3) : ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತಾಗಿ ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ನಿನ್ನೆ ಐತಿಹಾಸಿಕವೆಂಬಂತೆ ಇಬ್ಬರು ಮಹಿಳೆಯರು ದೇವಸ್ಥಾನದ ಒಳ ಪ್ರವೇಶಿಸಿದ್ದು, ಇದನ್ನು ವಿರೋಧಿಸಿ ಬಿಜೆಪಿ ಮತ್ತು ಸಂಘಪರಿವಾರ ಜನವರಿ ಮೂರು ಮತ್ತು ನಾಲ್ಕರಂದು ಎರಡು ದಿನಗಳ ‘ಕೇರಳ ಬಂದ್’ಗೆ ಕರೆ ನೀಡಿತ್ತು. ಇಂದು ಬಲವಂತದ ಬಂದ್ ಗೆ ಬೀದಿಗೆ  ಇಳಿದ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಇಡೀ ಕೇರಳವನ್ನು ಅಕ್ಷರಶಃ ಯುದ್ಧಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ರಾಜ್ಯದಾದ್ಯಂತ ಹಿಂಸೆ, ಲೂಟಿ, ಮಾಧ್ಯಮ, ಪೊಲೀಸರ ಹಾಗೂ ಸಾರ್ವಜನಿಕರ ಮೇಲೆ ಹಲ್ಲೆ ಮತ್ತು ಅಂಗಡಿ ಮುಂಗಟ್ಟುಗಳ ಮೇಲೆ ದಾಳಿಗಳನ್ನು ನಡೆಸಿ ಅಪಾರ ಹಾನಿಯನ್ನುಂಟು ಮಾಡಿದ್ದಾರೆ.

ಬಿಜೆಪಿಯ ಬಂದ್ ಕರೆಯ ವಿರುದ್ಧ ಇಡೀ ಕೇರಳ ರಾಜ್ಯದ ಜನತೆ ಒಂದಾಗಿ ಬಂದ್ ಗೆ ನಮ್ಮ ಬೆಂಬಲವಿಲ್ಲ ಎಂದು ಕರೆ ನೀಡಿದ್ದವು. ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷರೂ ಕೂಡಾ, ವರ್ತಕರು ಎಲ್ಲರೂ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದು ಬಂದನ್ನು ವಿರೋಧಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆದರೆ ಇಂದು ಬಿಜೆಪಿ ಮತ್ತು ಸಂಘಪರಿವಾರಗಳ ಕಾರ್ಯಕರ್ತರು ಬೀದಿಗಿಳಿದು ಬಲವಂತದ ಬಂದ್ ನಡೆಸಿರುವುದು ಕಂಡು ಬಂದಿದೆ.

ಕಾಸರಗೋಡಿನಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಶಾಂತಿಯುತ ಪ್ರತಿಭಟನೆ ನಡೆಸದ ಬಿಜೆಪಿ ಕಾಯಕರ್ತರು ರಸ್ತೆ ಬದಿಗಳಲ್ಲಿದ್ದ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿ, ದಾಂಧಲೆ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಎಡಪ್ಪಾಳ್ ಎನ್ನುವ ಸ್ಥಳದಲ್ಲಿ ಬಲವಂತದ ಬಂದ್ ನಡೆಸಲು ಪ್ರಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಸಿಪಿಎಂ ಕಾರ್ಯಕರ್ತರು ನೇರವಾಗಿ ತಡೆದ ಘಟನೆ ನಡೆದಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿಜೆಪಿ ಕಾರ್ಯಕತರು ಹಾಗೂ ಸಿಪಿಎಂ ಕಾರ್ಯಕರ್ತರ ಮಧ್ಯೆ ನೇರಾನೇರ ಹೊಡೆದಾಟ ನಡೆದ ವೀಡಿಯೋಗಳು ಸಾಮಾಜಿಕ ತಾಣಗಲಲ್ಲಿ ಹರಿದಾಡುತ್ತಿದೆ. ಮಂಜೇಶ್ವರದ ಮಸೀದಿಯೊಂದರ ಅಂಗಳದಲ್ಲಿ ಟೈರ್ ಹೊತ್ತಿಸಲು ನೋಡಿದ ಬಿಜೆಪಿಯ ಕಿಡಿಗೇಡಿಗಳನ್ನು ಪ್ರತಿಭಟಿಸಿದ ಎಸ್ಡಿಪಿಐ ಕಾರ್ಯಕರ್ತನ ಮೇಲೆ ಚಾಕುವಿನಿಂದ ಇರಿದ ಘಟನೆ ವರದಿಯಾಗಿದೆ. ತ್ರಿಶೂರಿನ ವಾಡಾನಪಳ್ಳಿ ಎಂಬಲ್ಲಿ ಎಸ್ಡಿಪಿಐ ಕಾರ್ಯಕರ್ತರ ಹೋಟೆಲ್ ಒಂದನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಎಸ್ಡಿಪಿಐ ಕಾರ್ಯಕರ್ತರ ಮಧ್ಯೆ ಘರ್ಷಣೇಯೇರ್ಪಟ್ಟು ಮೂರು ಮಂದಿ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಾಧ್ಯಮಗಳು ಹಾಗೂ ಪೊಲೀಸರ ಮೇಲೆ ದಾಳಿ :

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಹಲವು ಕಡೆಗಳಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಕೇವಲ ವಯನಾಡ್ ಪ್ರದೇಶವೊಂದರಲ್ಲಿಯೇ 31ಕ್ಕೂ ಅಧಿಕ ಪೊಲೀಸರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಕುರಿತು ವರದಿಯಾಗಿದೆ. ಇತರೆಡೆಗಳಲ್ಲೂ ಪೊಲೀಸರ ಮೇಲೆ ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು ಒಟ್ಟಾರೆಯಾಗಿ ಪರಿಸ್ಥಿತಿಯನ್ನು ಗಂಭೀರಗೊಳಿಸಿದೆ ಎನ್ನಲಾಗಿದೆ. ಇದೇ ವೇಳೆ ಮಹಿಳಾ ಪತ್ರಕರ್ತರನ್ನೂ ಸೇರಿಸಿ ಹಲವು ಮಾಧ್ಯಮ ವರದಿಗಾರರ ಮೇಲೆ ಪ್ರತಿಭಟನಕಾರರು ದಾಳಿ ನಡೆಸಿದ್ದು, ಏಶಿಯಾನೆಟ್ ಹಾಗೂ ಮನೋರಮಾ ನ್ಯೂಸ್ ನ ಕ್ಯಾಮರಾ ಸಿಬ್ಬಂದಿಗಳ ಮೇಲೆ ತೀವ್ರ ಸ್ವರೂಪದ ಹಲ್ಲೆ ನಡೆಸಲಾಗಿದೆ. ಇದನ್ನು ಪ್ರತಿಭಟಿಸಿ ಸುದ್ದಿ ಮಾಧ್ಯಮಗಳು ಬಿಜೆಪಿಯ ಪ್ರತಿಭಟನೆಯ ವರದಿಗಳನ್ನು ವರದಿ ಮಾಡುವುದಿಲ್ಲವೆಂದು ಹೇಳಿ ಪ್ರತಿಭಟಿಸಿದ ಘಟನೆ ತಿರುವನಂತಪುರದಲ್ಲಿ ನಡೆದಿದೆ.

ಒಟ್ಟಿನಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಬಂದ್ ನಡೆಸುವ ನೆಪದಲ್ಲಿ ಅಮಾಯಕ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ನಷ್ಟಪಡಿಸಿದ್ದು ಮಾತ್ರವಲ್ಲ, ಪೊಲೀಸರ ಮೇಲೆ, ಪತ್ರಕರ್ತರ ಮೇಲೆ ಹಲ್ಲೆ ನಡೆಸುತ್ತಾ ಕೇರಳದಲ್ಲಿ ಒಂದು ರೀತಿಯ ಉದ್ವಿಗ್ನ ಪರಿಸ್ಥಿತಿಯನ್ನು ನಿರ್ಮಿಸಿದ್ದಾರೆ. ಜನರ ಧಾರ್ಮಿಕ ಭಾವನೆಗಳನ್ನು ಉಪಯೋಗಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿಜೆಪಿಯ ಗುರಿ ಇಂದಿನ ಪ್ರತಿಭಟನೆಯ ಮೂಲಕ ಯಶಸ್ವಿಯಾಗಿದೆ ಎನ್ನಬಹುದೇನೋ?

ಪ್ರತಿಭಟನೆಯ ವೇಳೆ ಅಂಗಡಿ ಮುಂಗಟ್ಟುಗಳ ಮೇಲೆ ಹಾಗೂ ಪೊಲೀಸರ ಮೇಲೆ ದಾಳಿ ಮಾಡಿದ ಬಿಜೆಪಿ ಕಾರ್ಯಕರ್ತರಿಗೆ ಲಾಠಿಯ ರುಚಿ ತೋರಿಸಿದ ಪೊಲೀಸರು

ಕಾಸರಗೋಡು ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಪುಂಡಾಟದ ದೃಶ್ಯಗಳು

ಇದೇ ವೇಳೆ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆಯ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಹಾಗೂ ಪೋಲೀಸರ ವಿರುದ್ಧ ಅತಿ ಕೆಟ್ಟ ಶಬ್ದಗಳನ್ನು ಬಳಸುತ್ತಿರುವ ವೀಡಿಯೋಗಳು ಕೂಡಾ ವೈರಲ್ ಆಗಿವೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group