ನಿಮ್ಮ ಬರಹ

ಮನೋವಿಕಾರಿ ಅಜಿತನ ಉದ್ದೇಶವೇನು?

ವರದಿಗಾರ (ಜ.02): ಸುವರ್ಣ ಚಾನೆಲ್ ಒಂದಲ್ಲ ಕನ್ನಡದ ಅನೇಕ ಚಾನೆಲ್ ಗಳು ಆರೆಸ್ಸೆಸ್ ಮತ್ತು ಬಿಜೆಪಿಗೆ ಬಿಕರಿಯಾಗಿ ಹತ್ತಿರ ಹತ್ತಿರ ಒಂದು ದಶಕವೇ ಸಂದಿದೆ. ಕೆಲವು ಚಾನೆಲ್ ಗಳಿಗೆ ಕರ್ನಾಟಕದಲ್ಲಿ ಒಂದು ಮುಖವಾದರೆ ಬೇರೆ ರಾಜ್ಯಗಳಲ್ಲಿ ಇಲ್ಲಿಗಿಂತ ಸಂಪೂರ್ಣ ವ್ಯತಿರಿಕ್ತ ಮುಖ. ಅದಕ್ಕೆ ಸದ್ಯ ವಿವಾದದಲ್ಲಿರುವ ಸುವರ್ಣ ಚಾನೆಲ್‌ ಅತೀ ದೊಡ್ಡ ನಿದರ್ಶನ. ಇದೇ ಸಮೂಹದ ಏಶ್ಯಾನೆಟ್ ಎಂಬ ಮಲಯಾಳಂ ಚಾನೆಲ್ ಕೇರಳದಲ್ಲಿ ಜಾತ್ಯಾತೀತ ನಿಲುವನ್ನೇ ಹೊಂದಿದೆ ಎಂದರೆ ತಪ್ಪಾಗದು. ಯಾಕೆಂದರೆ ಕೇರಳದಲ್ಲಿ ಕೇಸರಿ ಅಜೆಂಡಾಗೆ ಇನ್ನೂ ಮಾರ್ಕೆಟ್ ಇಲ್ಲ. ಅಲ್ಲೇನಾದರೂ ಕೋಮುವಾದಿ ಬುದ್ಧಿ ತೋರಿಸಿದರೆ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂಬ ಪರಿಜ್ಞಾನ ಆ ಚಾನೆಲ್ ಗಿದೆ. ಹಾಗೆ ನೋಡಹೋದರೆ ಆ ಚಾನೆಲ್ ನ ಮಾಲೀಕ ರಾಜೀವ್ ಚಂದ್ರಶೇಖರ್ ಬಿಜೆಪಿಯ ಪೇಮೆಂಟ್ ಕೋಟಾದ ರಾಜ್ಯಸಭಾ ಸದಸ್ಯ. ಅಂದ ಮಾತ್ರಕ್ಕೆ ನಾನು ಅವರನ್ನು ಕೋಮುವ್ಯಾಧಿ ಗ್ರಸ್ಥ ಎನ್ನಲಾರೆ. ಅವರು ರಾಜ್ಯಸಭಾ ಸದಸ್ಯತ್ವಕ್ಕಾಗಿ ಬಿಜೆಪಿಯಾದವರೇ ಹೊರತು ಸೈದ್ಧಾಂತಿಕವಾಗಿ ಆ ಮನೋಸ್ಥಿತಿಯವರಲ್ಲ. ಆದರೆ ಕರ್ನಾಟಕದಲ್ಲಿ ಅವರ ಚಾನೆಲ್ ನಲ್ಲಿರುವ ಕೋಮುವ್ಯಾಧಿ ತಗಲಿಸಿಕೊಂಡ ಅಜಿತ್ ಇರಲಿ_ ಮತ್ತಿತರರಿರಲಿ ಹಬ್ಬಿಸುತ್ತಿರುವ ಕೋಮು ವಿಷದ ವಾಸನೆ ಆಘ್ರಾಣಿಸಲಾರದಷ್ಟು ಮುಗ್ಧರೇನಲ್ಲ ಈ ರಾಜೀವ್ ಚಂದ್ರಶೇಖರ್. ಅದಾಗ್ಯೂ ಅವರು ಯಾಕೆ ಸುಮ್ಮನಿದ್ದಾರೆಂದರೆ ಕರ್ನಾಟಕದಲ್ಲಿ ಕೋಮುವ್ಯಾಧಿಗೆ ಮಾರ್ಕೆಟ್ ಇದೆ. ಈ ಬಂಡವಾಳಶಾಹಿಗಳೇ ಹಾಗೆ.‌ ಅವರಿಗೆ ನಿರ್ದಿಷ್ಟವಾಗಿ ಒಂದು ಸಿದ್ಧಾಂತವೇನೂ ಇರುವುದಿಲ್ಲ.‌ ಹಾಗೇನಾದರೂ ಅವರಿಗೆ ಒಂದು ಸಿದ್ಧಾಂತವಿದೆ ಎನ್ನಬಹುದಾದರೆ ಅದು “ದುಡ್ಡು” ಮಾತ್ರ.  ಅಂಬಾನಿ, ಅದಾನಿ ಮುಂತಾದ ಮೋದಿಯ ಅಚ್ಚುಮೆಚ್ಚಿನವರೂ ಅಷ್ಟೇ. ಪ್ರಧಾನಿ ಮೋದಿಯಿಂದ ಅವರಿಗೆ ಅಪಾರ ಲಾಭವಿದೆ. ಅದಕ್ಕಾಗಿ ಅವರು ಮೋದಿಯನ್ನು ಹಿಡಿದು ನೇತಾಡುತ್ತಿದ್ದಾರೆ. ನಾಳೆ ಮೋದಿಗಿಂತ ಹೆಚ್ಚು ಲಾಭ ಮಾಡಿಕೊಡುವವನೊಬ್ಬ ಕಾಂಗ್ರೆಸ್ಸಿನಲ್ಲಿ ಮುನ್ನೆಲೆಗೆ ಬಂದರೆ ಅವರು ಅವನನ್ನು ಹಿಡಿದು ನೇತಾಡುತ್ತಾರೆ. ಸುಮ್ಮನೆ ಒಂದು ಉದಾಹರಣೆ ನೋಡಿ. ಮೊನ್ನೆ ಮುಖೇಶ್ ಅಂಬಾನಿಯ ಮಗನ ಮದುವೆಯಾಯಿತು.‌ಅದರಲ್ಲಿ ಕಾಂಗ್ರೆಸಿನ ಡಿ.ಕೆ.ಶಿವಕುಮಾರ್ ಕೂಡಾ ಭಾಗವಹಿಸಿದ್ದರು. ಒಬ್ಬ ವಿರೋಧ ಪಕ್ಷದ ನಾಯಕನ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಇದಕ್ಕೂ ವ್ಯತ್ಯಾಸವೆದೆ. ವಿರೋಧ ಪಕ್ಷದವರ ಜೊತೆ ರಾಜಕೀಯೇತರವಾದ ಸಂಬಂಧವಿರುವುದೇನೂ ತಪ್ಪಲ್ಲ.

ಸುವರ್ಣ ಚಾನೆಲ್ ನ ಅಜಿತನನ್ನು  ಮತ್ತು ಆ ಚಾನೆಲ್ ನ ಇನ್ನಿತರ ಕೆಲವರನ್ನು ನೀವು ಗಮನಿಸಿರಬಹುದು.‌ಅವರು ರಾಜಕೀಯವಾಗಿ ಪಕ್ಕಾ ಬಿಜೆಪಿ ಪರವಾಗಿಯೇ ಬ್ಯಾಟ್ ಬೀಸುತ್ತಿರುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಮಾತನಾಡುವುದು ಅವರಿಗೊಂದು ಚಟ. ಸ್ವತಂತ್ರ ಮಾಧ್ಯಮವೊಂದು ಸದಾ ವಿರೋಧ ಪಕ್ಷದ ಕೆಲಸ ಮಾಡಿದರೆ ಅದನ್ನು ಒಪ್ಪಬಹುದಿತ್ತು. ಕರ್ನಾಟಕದಲ್ಲಿ ಕಳೆದ ಐದೂವರೆ ವರ್ಷ ಗಳಿಂದೀಚೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರದಲ್ಲಿರುವುದರಿಂದ ಆ ಚಾನೆಲ್ ಅದರ ತಪ್ಪುಗಳ ವಿರುದ್ಧ ಒಂದು ಜವಾಬ್ದಾರಿಯುತ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ಯಾಕೆಂದರೆ ಅಧಿಕಾರದಲ್ಲಿರುವ ಮೋದಿ ಸರಕಾರದ ಮೇರೆ ಮೀರಿದ ಭ್ರಷ್ಟಾಚಾರವನ್ನಾಗಲೀ, ಜನವಿರೋಧಿ ನೀತಿಯನ್ನಾಗಲೀ, ಈ ವರೆಗೆ ವಿರೋಧಿಸಿದ್ದಿಲ್ಲ. ಒಂದು ವೇಳೆ ವಿರೋಧ ಪಕ್ಷದ ಕೆಲಸವನ್ನು ಸುವರ್ಣ ಮಾಡುತ್ತಿರುವುದಾದರೆ ಮೋದಿ ಸರಕಾರದ ಪರ ಯಾಕೆ ವಹಿಸಬೇಕು?

ಇದರ ಹಿಂದೆ ಇರುವುದು ಕೇಸರಿ ಅಜೆಂಡಾವೊಂದೇ ಅಲ್ಲ.. ಅದರೊಂದಿಗೆ ಅಂತರ್ಗತವಾಗಿರುವ ಅದರ ಕಾರ್ಯಕ್ರಮ ನಿರ್ವಾಹಕನ ರಾಜಕೀಯ ಉದ್ದೇಶವೂ ಅಡಗಿದೆ. ಹೇಗಿದ್ದರೂ ಚುನಾವಣೆ ಸನಿಹದಲ್ಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಪರ ಬರೆಯುವುದೇ ಪತ್ರಿಕೋದ್ಯಮವೆಂದುಕೊಂಡಂತೆ ಬರೆಯುತ್ತಿದ್ದ ಪ್ರತಾಪ ಸಿಂಹಗೆ ಟಿಕೆಟ್ ಕೊಟ್ಟು ಆತನನ್ನು ಎಂಪಿ ಮಾಡಿರುವಾಗ ತನಗೇಕೆ ಬಿಜೆಪಿ ಟಿಕೆಟ್ ಸಿಗಬಾರದು ಎಂಬ ಹಪಾಹಪಿಯಿಂದಲೇ ಅಜಿತನೂ ಬಿಜೆಪಿಯನ್ನು ಸಮರ್ಥಿಸುತ್ತಾ ಇತರ ಪಕ್ಷಗಳ ವಿರುದ್ಧ ನಾಲಿಗೆ ತಿರುಗಿಸುತ್ತಿದ್ದಾನೆ. ಹೇಗಿದ್ದರೂ ಎಳವೆಯಿಂದಲೇ ಆರೆಸ್ಸೆಸ್ಸಲ್ಲಿ ಬೆಳೆದವನು. ಆದುದರಿಂದ ಕೇಸರೀ ಪಕ್ಷದ ಪರ ಕೆಲಸ ಮಾಡುವುದು ಆತನ ಮನಸ್ಸಿಗೂ ಹಿತವಾಗಿರುವ ಕೆಲಸ. ಅದನ್ನೆಲ್ಲಾ ಜನ ಸಾಮಾನ್ಯರು ಸಹಿಸಿ ಆತನನ್ನು ನಿರ್ಲಕ್ಷಿಸುತ್ತಾ  ಬಂದಿದ್ದರು.

ಯಾವಾಗ ಇದು ಅತಿಯಾಯಿತೋ ಆಗ ಇತರ ಪಕ್ಷಗಳವರ ಸಿಟ್ಟು ನೆತ್ತಿಗೇರತೊಡಗಿತು. ಅದಾಗ್ಯೂ ರಾಜ್ಯ ಕಂಡ ಜನಪರ ಮುಖ್ಯಮಂತ್ರಿಗಳಲ್ಲೊಬ್ಬರಾಗಿರುವ ಸಿದ್ಧರಾಮಯ್ಯರ ವಿರುದ್ಧ ಈತ ನಿರಂತರ ನಾಲಿಗೆ ಹರಿಸಿದ.‌ಅವರ ಸರಕಾರದ ವಿರುದ್ಧ ದಿನಬೆಳಗಾದರೆ ಅಪಪ್ರಚಾರ ಮಾಡುವುದು, ಇಲ್ಲ ಸಲ್ಲದ ಆರೋಪ ಹೊರಿಸುವುದು ತನ್ನ ಪರಮ ಕರ್ತವ್ಯ ಎಂಬಂತೆ ಕೆಲಸ ಮಾಡಿದ. ಎಷ್ಟೇ ಎಗರಾಡಿದರೂ‌ ಸಿದ್ಧರಾಮಯ್ಯ ಮಾಧ್ಯಮವನ್ನು ಎದುರು ಹಾಕಿಕೊಳ್ಳುವುದು ಬೇಡವೆಂದು ಸುಮ್ಮನಾದರು. ಅದೇ ಸಿದ್ದರಾಮಯ್ಯ ಮಾಡಿದ ತಪ್ಪು. ಆದರೆ ಪ್ರಸ್ತುತ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾತ್ರ ಅದನ್ನು ಸಹಿಸಲಿಲ್ಲ. ಸುವರ್ಣದ ವರದಿಗಾರನ ಮೈಕ್ ಎತ್ತಿ ಈ ಚಾನೆಲ್ ನವರಿಗೆ “ನನ್ನ ಪತ್ರಿಕಾಗೋಷ್ಠಿಗೆ ಪ್ರವೇಶವಿಲ್ಲ” ಎಂಬರ್ಥದಲ್ಲಿ ನೇರವಾಗಿ ಉಗಿದೇ ಬಿಟ್ಟಿದ್ದರು.

ಈ ನಾಲಾಯಕ್ ಗಳ ಪ್ರಕಾರ ಮುಸ್ಲಿಮರಾಗಿ ಹುಟ್ಟಿದವರೆಲ್ಲರೂ ದೇಶದ್ರೋಹಿಗಳು. ದೇಶದ್ರೋಹಕ್ಕೆ ಪರ್ಯಾಯ ಪದವೇ ಮುಸ್ಲಿಂ.  ಹಾಗೆಂದು ಅವರು ಜನಸಾಮಾನ್ಯರ ಮನಸ್ಸಲ್ಲಿ‌ ಕೂರಿಸಿಬಿಟ್ಟಿದ್ದಾರೆ. ಅದನ್ನು ನಾವು ಪ್ರಸ್ತುತ ಪ್ರವಾದಿ (ಸ) ರ ನಿಂದೆಯ ಪ್ರಕರಣದಲ್ಲೂ ಕಾಣಬಹುದು. ಈ ಅಜಿತನ ಪರ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರೆಲ್ಲರೂ ಆತನನ್ನು “ದೇಶದ್ರೋಹಿಗಳಿಗೆ ಸಿಂಹಸ್ವಪ್ನ” ಎಂಬರ್ಥದಲ್ಲೇ ಬರೆಯುತ್ತಿದ್ದಾರೆ. ಅದನ್ನು ಕೇಸರೀ ಅಜೆಂಡಾ ಅವರ ಮನಸ್ಸಲ್ಲಿ ಬೇರೂರಿಸಿದೆ. ಮೊನ್ನೆ ನಡೆದದ್ದೇನೂ ದೇಶಪ್ರೇಮ ಮತ್ತು ದೇಶಪ್ರೇಮದ ಚರ್ಚೆ ಖಂಡಿತಾ ಅಲ್ಲ. ವಾಸ್ತವದಲ್ಲಿ‌ ಅಲ್ಲಿ ಮುಸ್ಲಿಮರನ್ನು ಎಳೆದು ತರುವ ಅವಕಾಶವೂ ಇರಲಿಲ್ಲ. ಅದಾಗ್ಯೂ ಅಜಿತ್ ಅಸಂಬದ್ಧವಾಗಿ ಮಾತನಾಡಿ ಮುಸ್ಲಿಮರನ್ನು ಎಳೆದು ತಂದು ಕೆಣಕಿದ್ದಾನೆ. ಭಗಾವಾನ್‌ ಅವರು ರಾಮ‌ನನ್ನು ಹೀಯಾಳಿಸಿದರೆ ಭಗವಾನ್ ರನ್ನು ತರಾಟೆಗೆತ್ತಿಕೊಳ್ಳಬೇಕೇ ಹೊರತು ಅಲ್ಲಿ ಮುಸ್ಲಿಮರ ಸಾರ್ವಕಾಲಿಕ ಸರ್ವೋಚ್ಚ ನಾಯಕ ಪ್ರವಾದಿ ಮುಹಮ್ಮದ್ (ಸ)ರನ್ನು ಎಳೆದು ತರುವ ಅಗತ್ಯ ಇರಲೇ ಇಲ್ಲ. ಆತ ಭಗವಾನ್ ಬರಹದ ಚರ್ಚೆಯನ್ನು ವಿವಾದ ಹುಟ್ಟು ಹಾಕುವ ಯೋಜನೆ ಮೊದಲೇ ಹಾಕಿಕೊಂಡಿದ್ದ.‌ ಆತನಿಗೆ ನಿಜಕ್ಕೂ ರಾಮನ ಮೇಲೆ ಪ್ರೀತಿ ಇದ್ದಿದ್ದರೆ ಆತ ರಾಮನ ವಿರುದ್ಧ ಡಿಬೇಟ್ ನಲ್ಲಿ ಮಾತನಾಡಲು ಬೇಕಾದ ವ್ಯಕ್ತಿಗಳಿಗೆ ದುಂಬಾಲು ಬೀಳುತ್ತಿರಲಿಲ್ಲ. ಆತ ಇದನ್ನೊಂದು ದೊಡ್ಡ ಮಟ್ಟದ ವಿವಾದವಾಗಿಸುವ ಉದ್ದೇಶದಿಂದ ಲೇಖಕ ಯೋಗೇಶ್ ಮಾಸ್ಟರ್ ಅವರಿಗೆ ಕರೆ ಮಾಡಿ ದುಂಬಾಲು ಬಿದ್ದು ಭಗವಾನ್ ರನ್ನು ಸಮರ್ಥಿಸಿ ಮಾತನಾಡಿ ಎಂದಿದ್ದ.‌ ಆದರೆ ಯೋಗೇಶ್ ಮಾಸ್ಟರ್ ಸ್ಪಷ್ಟವಾಗಿ ನಿರಾಕರಿಸಿದ್ದರು.‌ ಸ್ವತಃ ಅಜಿತನೇ ರಾಮನನ್ನು  ತೆಗಳಿ, ಹೀಯಾಳಿಸಿ ಎಂಬರ್ಥದಲ್ಲಿ ಯೋಗೇಶ್ ಮಾಸ್ಟರರನ್ನು ಕರೆದಿದ್ದ ಎಂದು ಮಾಸ್ಟರ್ ತನ್ನ ಫೇಸ್ ಬುಕ್ ನಲ್ಲಿ ಬರೆದಿದ್ದರು. ಇದೆಂತಹ ಹಿಂದೂ ಧರ್ಮ ಪ್ರೇಮ? ಇದೆಂತಹ ರಾಮಪ್ರೇಮ? ಈ ಪ್ರಶ್ನೆಯನ್ನು ನಿಜವಾದ ಹಿಂದೂಗಳು ಅಜಿತನಿಗೆ ಹಾಕಬೇಕು. ಇಲ್ಲಿ ಮುಸ್ಲಿಮರು ರಾಮನನ್ನು ಅವಮಾನಿಸಿಲ್ಲ.

ಅಗತ್ಯವಿಲ್ಲದೇ ಪ್ರವಾದಿವರ್ಯರನ್ನು ಎಳೆದು ತಂದ ಮಾತ್ರವಲ್ಲದೇ ಪರೋಕ್ಷವಾಗಿ ಮುಸ್ಲಿಂ ಸಮುದಾಯವನ್ನು ಬಾಂಬ್ ಹಾಕುವ ಸಮುದಾಯ ಎಂದು ಹೇಳಿದ. ಹಿಂದೂತ್ವದ ಅಮಲೇರಿಸಿದವರಿಗೆ ಇದರಿಂದ ಅತೀವ ಖುಷಿಯೂ ಆಗಿದೆ. ಈ ವಿವಾದವೊಂದರಿಂದಾಗಿಯೇ ನಾಳೆ ಬಿಜೆಪಿ ಅಜಿತನಿಗೆ ಲೋಕಸಭಾ ಟಿಕೆಟ್ ಘೋಷಿಸಿದರೂ ಆಶ್ಚರ್ಯವಿಲ್ಲ. ಹೇಳಿಕೊಳ್ಳಲು ನಯಾಪೈಸೆಯ ಸಾಧನೆಯಂತೂ ಬಿಜೆಪಿಯ ಖಾತೆಯಲ್ಲಿಲ್ಲ. ಇಂತಹದ್ದೇ ಬಿಜೆಪಿಯ ಬಂಡವಾಳ ಎನ್ನುವ ಸತ್ಯವೂ ಅಜಿತನಿಗೆ ಗೊತ್ತಿದೆ. ಆದುದರಿಂದಲೇ ಗುರಿ ನೋಡಿಯೇ ಅಜಿತ್ ಕಲ್ಲೆಸೆದಿದ್ದಾನೆ. ಹೇಗಿದ್ದರೂ ದೇಶಪ್ರೇಮದ  ನಾಲ್ಕನೇ ದರ್ಜೆಯ  ಇಂತಹ ಮಾಲು ಈತನ ಕೈಯಲ್ಲಿದೆ. ಇಂತಹ ಕೀಳು ಮಟ್ಟದ  ರಾಜಕೀಯಕ್ಕೆ ಸರಿಯಾದ  ತಿರುಗೇಟು ಕೊಡುವ ಚಾತಿ ಜಾತ್ಯಾತೀತರೆಂಬವರಿಗಿಲ್ಲ. ಇದು ಅಜಿತನಂತಹ ಮನೋವಿಕಾರಿಗಳಿಗೆ ವರದಾನವಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group