ನಿಮ್ಮ ಬರಹ

ಪಾಕಿಸ್ತಾನಕ್ಕೆ ಹೋಗ್ತಾರಾ ಸೋನು ನಿಗಂ?

ಲೇಖನ: -ರುದ್ರು ಪುನೀತ್ ಆರ್.ಸಿ.

ವರದಿಗಾರ (ಡಿ.30): “ಜನನಿ ಜನ್ಮ ಭೂಮಿಶ್ಚ ಸ್ವರ್ಗದಾಪಿ ಗರಿಯಸಿ” ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಶ್ರೇಷ್ಠ ಎನ್ನುವುದು ಸಂಸ್ಕೃತ ಶ್ಲೋಕ ಹೇಳುತ್ತದೆ.

ಮೊನ್ನೆಯಷ್ಟೇ ಸೋನು ನಿಗಂ ಅವರ ಒಂದು ಹೇಳಿಕೆ “ನಾನು ಪಾಕಿಸ್ತಾನದವನಾಗಿದ್ದಿದ್ದರೆ ಚೆನ್ನಾಗಿರುತ್ತಿತ್ತು” ಎನ್ನುವ ಹೇಳಿಕೆಗೆ ಟೀಕೆಗಳ ಸುರಿಮಳೆಯೇ ಸುರಿಯುತ್ತಿದೆ. ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ‘ಆತ ಪಾಕಿಸ್ತಾನಕ್ಕೆ ಹೋಗಲಿ ಎಂದು ಕೆಲವರು ಪೋಸ್ಟ್ ಹಾಕಿದರೆ’ ಇಂಥವರನ್ನ ಭಾರತದಿಂದ ಗಡಿಪಾರ್ ಮಾಡಿ ಎಲ್ಲಾದರೂ ಹೋಗಿ ಸಾಯಲಿ ಎನ್ನುವುದು ಇನ್ನೂ ಕೆಲವರ ಪೋಸ್ಟ್ಗಳು. ಸೋನು ನಿಗಂ ಹಾಗೆಂದ ಮಾತ್ರಕ್ಕೆ ಆತನಿಗೆ ದೇಶದ ಮೇಲೆ ಅಥವಾ ಈ ಮಣ್ಣಿನ ಮೇಲೆ ಪ್ರೀತಿ ಇಲ್ಲವೆಂದಲ್ಲ. ಹಾಗಾದರೆ ಸೋನು ನಿಗಂ ಹಾಗೆ ಹೇಳೋದಿಕ್ಕೆ ಕಾರಣ ಏನು?, ಹೀಗೆ ಹೇಳುವುದರ ಹಿಂದಿನ ನೋವೇನು, ಎಂದು ಯಾರು ಸಹ ತಿಳಿದುಕೊಳ್ಳುವ ಆಸಕ್ತಿ ತೋರಿಸಲಿಲ್ಲ. ಅವರ ಮಾತಿನ ಒಳನೋವು ಏನಾಗಿತ್ತೆಂದರೆ. ನಮ್ಮಲ್ಲಿರುವ ಒಳ್ಳೊಳ್ಳೆ ಗಾಯಕರನ್ನ ಬಿಟ್ಟು ಬೇರೆ ದೇಶಗಳಿಂದ ಗಾಯಕರನ್ನ ಕರೆಸಿ ಹಾಡು ಹಾಡಿಸುತ್ತಿದ್ದಾರೆ ಹಾಗಾಗಿ ನಾನು ಸಹ ಪಾಕಿಸ್ತಾನಿ ಆಗಿದ್ದಿದ್ದರೆ ನನಗೂ ಈಗ ಒಳ್ಳೆಯ ಬೇಡಿಕೆ ಇರುತ್ತಿತ್ತೇನೋ ಎನ್ನುವುದು ಅವರ ಮಾತಿನ ಅರ್ಥವಾಗಿತ್ತು.

ಕಳೆದೊಂದು ಸಾರಿ ಸೋನು ನಿಗಂ ಅವರು ಮಸೀದಿಗಳಲ್ಲಿ ಬೆಳಿಗ್ಗೆ ಕೂಗುವ ಅಜಾನ್ ನಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ಹೇಳಿಕೆ ಕೊಟ್ಟ ತಕ್ಷಣ ಅನೇಕ ಟೀಕೆಗಳು ಮತ್ತು ಪರ ವಿರೋಧಗಳು ಹರಿದುಬಂದವು. ಆಗ ನನ್ನ ಮನಸ್ಸಿಗೂ ಸೋನು ನಿಗಂ ಹೇಳಿಕೆ ಕೊಟ್ಟಿದ್ದರಲ್ಲಿ ತಪ್ಪೇನಿಲ್ಲ ಎಂದು ಅನಿಸಿದ್ದು ನಿಜ. ಕಾರಣ ಬೆಳಿಗ್ಗೆ ಐದು ಗಂಟೆಗೆ ಅಲ್ಲಾಹುವಿನ ಹೆಸರಿನಲ್ಲಿ ಅಜಾನ್ ಹಾಕಿ ಜೋರಾಗಿ ಸೌಂಡ್ ಕೊಡೋದ್ರಿಂದ ಅಕ್ಕಪಕ್ಕದ ಮನೆಗಳಲ್ಲಿ ಮಲಗಿರುವ ವಯಸ್ಸಾದವರಿಗೋ ಅಥವಾ ಸಣ್ಣ ಸಣ್ಣ ಮಕ್ಕಳಿಗೋ ಅದರಿಂದ ತೊಂದರೆ ಉಂಟಾಗಬಹುದು.  ಒಂದು ಸಣ್ಣ ಮಗುವನ್ನ ಮಲಗಿಸುವುದಕ್ಕೆ ತಾಯಿ ಇಡೀ ರಾತ್ರಿ ಕಷ್ಟಪಡುತ್ತಾಳೆ ಕೆಲವೊಮ್ಮೆ ತುಂಬಾ ಲೇಟಾಗಿ ಮಕ್ಕಳು ಮಲಗುತ್ತಾರೆ, ಅವರನ್ನು ಮಲಗಿಸಿ ಇನ್ನೇನು ತಾಯಿಗೂ ನಿದ್ರೆ ಹತ್ತುವ ವೇಳೆ ಅಜಾನ್ ಕೂಗಿದಾಗ ಖಂಡಿತ ಅದರಿಂದ ಆ ತಾಯಿಗೆ ಕಿರಿಕಿರಿ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಅಂತೆಯೇ ಎಷ್ಟೋ ಜನ ವಯಸ್ಸಾದವರಿಗೆ ರಾತ್ರಿ ಇಡೀ ನಿದ್ರೆ ಬರದೆ ಮುಸುಕು ಮುಂಜಾವಿನಲ್ಲಿ ನಿದ್ರೆ ಬರುತ್ತದೆ, ಅಂಥವರಿಗೂ ಅದರಿಂದ ತೊಂದರೆ ಉಂಟಾಗುತ್ತದೆ. ಆ ದೃಷ್ಟಿಕೋನವನ್ನಿಟ್ಟುಕೊಂಡು ಹೇಳಿದ ಸೋನು ನಿಗಂ ಮೇಲೆ ಅಂದು ಅನೇಕ ಮುಸಲ್ಮಾನರು ಟೀಕೆಗಳನ್ನು ಮಾಡಿದರು. ಅಂದು ಮುಸಲ್ಮಾನರ ದೃಷ್ಟಿಯಲ್ಲಿ ಸೋನು ನಿಗಂ ಹೇಳಿದ್ದು ತಪ್ಪಾಗಿ ಕಂಡಿರಬಹುದು. ದೇವಸ್ಥಾನಗಳಲ್ಲಿ ದೇವರ ಗೀತೆಗಳನ್ನ ಹಾಕುವಾಗ ಜೋರಾಗಿ ಸೌಂಡ್ ಕೊಡಬೇಡಿ ಅಂತ ಅವರು, ಅಜಾನ್ ಹಾಕಬೇಡಿ ಅಂತ ನಾವು, ಈ ರೀತಿಯ ಚರ್ಚೆಗಳನ್ನ ಮಾಡುವ ಮುನ್ನ ಒಂದು ವಿಷಯವನ್ನ ಅವಲೋಕಿಸುವುದು ಒಳಿತು, ವಿವಿಧ ವೈವಿಧ್ಯಮಯ ಆಚರಣೆಗಳಿಂದ ಕೂಡಿ ಏಕತೆ ಆಗಿರುವ ದೇಶ ನಮ್ಮದು, ಎಲ್ಲ ಧರ್ಮ ಮತ್ತು ಜಾತಿಗಳೂ ನಮ್ಮ ದೇಶಕ್ಕೆ ವಿವಿಧ ರೀತಿಯಲ್ಲಿ ಸಾಂಪ್ರದಾಯಿಕ ಕೊಡುಗೆಯನ್ನು ಕೊಟ್ಟಿರುವುದು ಮಾತ್ರ ನಿಜ.

ಅಷ್ಟಕ್ಕೂ ಪಾಕಿಸ್ತಾನ್ ಎಂದ ತಕ್ಷಣ ನಮ್ಮ ಜನರು ಕೆಂಡಾಮಂಡಲವಾಗುವುದಾದರೂ ಏಕೆ ಎಂದು ಕೇಳೋದೇ ಬೇಡ!. ಅದು ಶತ್ರು ರಾಷ್ಟ್ರ ಎಂದು ಆಗಲೇ ಡಿಸೈಡ್ ಮಾಡಿ ಆಗಿದೆ. ಪಾಕಿಸ್ತಾನ ಎಂದರೆ ಟೆರರಿಸ್ಟ್ ಗಳ ರಾಷ್ಟ್ರ, ಕೊಲೆಗಡುಕರ ರಾಷ್ಟ್ರ, ಅಲ್ಲಿರುವವರೆಲ್ಲರೂ ರಾಕ್ಷಸರು ಎಂದು ಹಿಂದಿನಿಂದಲೂ ಅದನ್ನ ಕೇಳಿಕೊಂಡೇ ಬಂದಿದ್ದೇವೆ. ಆದರೆ ಒಮ್ಮೆ ಸ್ವಲ್ಪ ಮಾನವತಾವಾದಿಯಾಗಿ, ಜೀವಪರರಾಗಿ ಯೋಚನೆ ಮಾಡಿದಾಗ ‘ಅಲ್ಲಿ ಒಳ್ಳೆಯ ಮನುಷ್ಯರೇ ಇಲ್ಲವೇ?. ಅಲ್ಲಿರುವವರೆಲ್ಲರೂ ಟೆರರಿಸ್ಟ್ ಗಳೇ?, ಎನ್ನುವ ಸಹಜ ಕುತೂಹಲ ಕಾಡೋಕೆ ಶುರುವಾಗುತ್ತದೆ. ಹೌದು ಕುತೂಹಲ ನನಗೊಬ್ಬನಿಗೆ ಅಲ್ಲ, ಹಲವಾರು ಜನರ ತಲೆಗೆ ಈ ಯೋಚನೆ ಬಂದಿರುತ್ತದೆ. ಆದರೆ ನಮ್ಮ ಸಮಾಜದಲ್ಲಿ ಯಾವ ರೀತಿಯ ವಾತಾವರಣ ಸೃಷ್ಟಿ ಆಗಿದೆಯೆಂದರೆ, ಪಾಕಿಸ್ತಾನದಲ್ಲಿಯೂ ಸಹ ಒಳ್ಳೆಯವರೂ ಇರಬಹುದು ಎಂದು ಹೇಳಿಕೆ ಕೊಡೋಕೂ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಒಂದು ವೇಳೆ ಆತ ಪಾಕಿಸ್ತಾನದ ಪರವಾಗಿ ಸೌಮ್ಯಭಾವ ತೋರಿಸಿದ್ದೇ ಆದಲ್ಲಿ ದೇಶದ್ರೋಹಿಯ ಹಣೆಪಟ್ಟಿ ಕಟ್ಟಿಕೊಳ್ಳಲು ಸಿದ್ಧನಿರಬೇಕಾಗುತ್ತದೆ.

ಇದಕ್ಕೆ ಒಂದು ತಾಜಾ ಉದಾಹರಣೆ ಎಂದರೆ ಹಿಂದೆ ಒಮ್ಮೆ ಸಿನೆಮಾ ತಾರೆ ಮತ್ತು ಕಾಂಗ್ರೆಸ್ ನ ನಾಯಕಿ ರಮ್ಯಾ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿದ್ದರು, ರಮ್ಯಾ ಒಬ್ಬರೇ ಅಲ್ಲ ಹಲವಾರು ರಾಜಕಾರಣಿಗಳು ಭೇಟಿ ಕೊಟ್ಟಿದ್ದರು. ಪಾಕಿಸ್ತಾನದಿಂದ ವಾಪಸ್ ಬಂದ ರಮ್ಯಾ ಅವರಿಗೆ  ಪಾಕಿಸ್ತಾನದ ಅನುಭವ ಹೇಗಿತ್ತು ಎಂದು ಮಾಧ್ಯಮಗಳು ಪ್ರಶ್ನೆ ಕೇಳಿದಾಗ, “ಅಲ್ಲಿಯೂ ನಮ್ಮಂತೆ ಒಳ್ಳೆಯ ಜನರಿದ್ದಾರೆ, ಅಲ್ಲಿರುವ ಎಲ್ಲರೂ ಉಗ್ರಗಾಮಿಗಳು ಎಂದು ಹೇಳುವುದು ತಪ್ಪು” ಈ ಹೇಳಿಕೆಗೆ ರಮ್ಯಾರವರಿಗೆ ಮೂರು ಜನ್ಮಕ್ಕಾಗುವಷ್ಟು ಬೈಗುಳ, ಟೀಕೆಗಳು, ಅಸಭ್ಯವಾಗಿ ಮಾತನಾಡಿದರು ನಮ್ಮ ಪ್ರಜ್ಞಾವಂತ ನಾಗರಿಕರು. ಆ ಕಾರಣಕ್ಕೆ ಪಾಕಿಸ್ತಾನ ಎಂದರೆ ಸಾಕು ಯಾರೂ ಸಹ ತುಟಿಬಿಚ್ಚುವುದಿಲ್ಲ. ಆದರೆ ಗಾಯಕ ಸೋನು ನಿಗಂ ಮಾತ್ರ ಈ ಹೇಳಿಕೆ ಕೊಟ್ಟು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಲೆಂದೇ ಕಾಯುತ್ತಿರುವ ಅನೇಕ ಶಿಕಾಮಣಿಗಳ ಬಾಯಿಗೆ ತುಪ್ಪವಾಗಿ ಸಿಕ್ಕಿರುವುದು ವಿಪರ್ಯಾಸ.

ಪಾಕಿಸ್ತಾನದಲ್ಲೂ ಅಮಾಯಕರಿದ್ದಾರೆ. ಇಲ್ಲಿ ಹೇಗೆ ಅಲ್ಪಸಂಖ್ಯಾತರಾಗಿ ಮುಸಲ್ಮಾನರಿದ್ದಾರೋ ಹಾಗೆಯೇ ಅಲ್ಲಿ ಅಲ್ಪಸಂಖ್ಯಾತರಾಗಿ ನಮ್ಮ ಹಿಂದೂ ಬಾಂದವರಿದ್ದಾರೆ ಎನ್ನುವ ಯೋಚನೆ ಬಾರದೇ ನಮ್ಮವರಿಗೆ.? ಇಲ್ಲಿ ಹೇಗೆ ಅಲ್ಪಸಂಖ್ಯಾತರ ಪರವಾಗಿ ದ್ವನಿ ಎತ್ತುವವರಿಗೆ ದೇಶದ್ರೋಹಿ ಎನ್ನಲಾಗುತ್ತಿದೆಯೋ, ಹಾಗೆಯೇ ಪಾಕಿಸ್ತಾನದಲ್ಲೂ ನಮ್ಮ ಹಿಂದೂ ಅಲ್ಪಸಂಖ್ಯಾತರ ಪರ ದ್ವನಿ ಎತ್ತುವ ಕೆಲ ಮುಸಲ್ಮಾನರು ಆ ದೇಶದ ದೇಶದ್ರೋಹಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಲ್ಲಿ ಉಗ್ರಗಾಮಿಗಳು ಇರಬಹುದು ಹಾಗೆಂದು ಇಡೀ ಪಾಕಿಸ್ತಾನದ ಜನರೆಲ್ಲ ಉಗ್ರಗಾಮಿಗಳು ಎಂದು ಹೇಳಲು ಆಗೋದಿಲ್ಲ. ಹಾಗೊಂದು ವೇಳೆ ಇಡೀ ಪಾಕಿಸ್ತಾನವೇ ಉಗ್ರಗಾಮಿಗಳಾಗಿದ್ದಿದ್ದರೆ ಇಡೀ ಪ್ರಪಂಚದಲ್ಲಿ ಅದೆಷ್ಟು ಅನಾಹುತಗಳಾಗುತ್ತಿದ್ದವು ಊಹೆ ಮಾಡಲು ಸಾಧ್ಯವೇ. ನೋಡುವ ದೃಷ್ಟಿಕೋನ ಸರಿಯಾಗಿದ್ದಾರೆ ಇಡೀ ಮನುಕುಲವೆ ನಮ್ಮ ಅಣ್ಣ ತಮ್ಮ ಬಂದು ಬಾಂದವರಂತೆ ಕಾಣುತ್ತದೆ.

ಕೃಷ್ಣ, ಬುದ್ಧ, ಬಸವ, ಜೀಸಸ್, ಪೈಗಂಬರ್ ಇವರೆಲ್ಲರೂ ಎಲ್ಲರಲ್ಲಿಯೂ ತಮ್ಮನ್ನು ನೋಡುತ್ತಿದ್ದರು, ಅವರ ದೃಷ್ಟಿಕೋನ ಮಾನವತಾವಾದದಿಂದ ಕೂಡಿತ್ತು.

ಒಂದು ಸಾಮಾನ್ಯ ಕುರಿಮರಿಗಾಗಿ ತನ್ನ ಪ್ರಾಣವನ್ನು ಕೊಡಲು ಸಿದ್ಧನಿದ್ದವನು ಬುದ್ಧ, ತನ್ನನ್ನು ಶಿಲುಬೇಗೆರೆಸಿ ಕೈಗೆ ಕಾಲಿಗೆ ಮಳೆ ಹೊಡೆದು, ರಕ್ತ ಸೋರುತ್ತಿದ್ದರು ಸಹ, ತನ್ನ ಮುಂದೆ ನಿಂತು ಅವರ ನೋವನ್ನು ವಿಜೃಂಭಣೆಯಿಂದ ಗಹಗಹಿಸಿ ನಗುತ್ತಿದ್ದ ಕರ್ಮಠರನ್ನು ನೋಡಿ ಅವರಿಗೆ ಸಿಟ್ಟು ಬರಲಿಲ್ಲ, ಬದಲಾಗಿ ಓ ದೇವರೇ ಇವರನ್ನು ಕ್ಷಮಿಸು, ಅವರಿಗೆ ತಾವೇನು ಮಾಡುತ್ತಿದ್ದೇವೆಂಬ ಅರಿವಿಲ್ಲ ಆ ಮಕ್ಕಳನ್ನು ಕ್ಷಮಿಸು ಎಂದು ಬೇಡಿಕೊಳ್ಳುತ್ತಿದ್ದ.

ಇನ್ನೇನು ಕೆಲವೇ ಗಂಟೆಗಳಲ್ಲಿ ಕುರುಕ್ಷೇತ್ರ ಶುರುವಾಗಬೇಕು, ರಣಕಹಳೆ ಕೂಗುತ್ತಿದೆ, ಸಾವಿರಾರು ಕುದುರೆಗಳು, ಆನೆಗಳು, ಲಕ್ಷಾಂತರ ಜನ ಸೈನಿಕರು ಬಂದು ಯುದ್ಧ ಭೂಮಿಯಲ್ಲಿ ನಿಂತಿದ್ದಾರೆ, ಕೆಲವೇ ಕ್ಷಣಗಳಲ್ಲಿ ಅಲ್ಲಿ ರಕ್ತದ ಕೊಡಿಯೇ ಒಡೆಯಲಿದೆ, ಆದರೆ ಆ ಸಮಯದಲ್ಲಿ ಒಂದು ಸಣ್ಣ ಗಿಳಿಮರಿಯು ಕೂಗುತ್ತಿರುವುದನ್ನು ಕೇಳಿಸಿಕೊಂಡ ಕೃಷ್ಣ, ಆ ಕಡೆ ಕಿವಿಕೊಡುತ್ತಾನೆ, ನನ್ನ ಮೊಟ್ಟೆಯನ್ನು ಕಾಪಾಡು ಕೃಷ್ಣ ಎಂದು ಆ ಗಿಳಿಮರಿ ಅಳುಕು ತೋರಿಸುತ್ತಿರುತ್ತದೆ. ತಕ್ಷಣ ಕೃಷ್ಣ ಭೀಮನನ್ನು ಕರೆದು ಅಲ್ಲೊಂದು ಗಿಳಿಮರಿ ಇದೆ, ಅದೇ ಮರದ ಕೆಳಗೆ ಅದರ ಸಣ್ಣದೊಂದು ಮೊಟ್ಟೆ ಇದೆ ಅದಕ್ಕೆ ರಕ್ಷಣೆ ಕೊಡು ಎಂದು ಕೇಳಿಕೊಂಡಾಗ ಭೀಮ ನಗುತ್ತಾ ಹೇಳುತ್ತಾನೆ, “ಅಲ್ಲ ಕೃಷ್ಣ ನಿನಗೇನು ತಲೆಕೆಟ್ಟಿದೆಯೇ, ಇನ್ನೇನು ಸ್ವಲ್ಪ ಸಮಯದಲ್ಲಿ ಇಲ್ಲಿ ರಕ್ತದ ಹೊಳೆಯೇ ಹರಿಯಲಿದೆ, ಲಕ್ಷಾಂತರ ಜನ ಸಾಯುವ ಮುನ್ಸೂಚನೆ ಆಗಲೇ ನಿನಗೆ ಸಿಕ್ಕಿರಬೇಕು, ಆದರೆ ಯಾವುದೋ ಸಣ್ಣ ಗಿಳಿಮರಿಗಾಗಿ ನೀನು ಮರುಗುತ್ತಿದಿಯಲ್ಲ ಎಂದಾಗ ಕೃಷ್ಣ ಹೇಳುತ್ತಾನೆ.

 ” ಭೀಮ ನೀವು ಮನುಷ್ಯರು, ನಿಮಗೆ ಬುದ್ದಿ ಕಡಿಮೆ, ದ್ವೇಷ ಅಸೂಹೆಯನ್ನ ತಲೆಗೆ ತುಂಬಿಕೊಂಡವರು, ಹಾಗಾಗಿಯೇ ಸಂಬಂದಿಕರಾಗಿ ನಿಮ್ಮನಿಮ್ಮಲ್ಲೇ ವೈಷಮ್ಯ ಬೆಳೆಸಿಕೊಂಡು ರಾಜ್ಯಕ್ಕಾಗಿ, ಒಬ್ಬರನ್ನೊಬ್ಬರು ಕೊಲ್ಲಲು ಸಜ್ಜಾಗಿದ್ದೀರಾ, ಆದರೆ ಆ ಪಕ್ಷಿ ತಾನೆ ಏನು ಪಾಪ ಮಾಡಿದೆ, ಅದು ನನ್ನ ಸಹಾಯ ಬೇಡುತ್ತಿದೆ ಅದನ್ನ ರಕ್ಷಣೆ ಮಾಡುವುದಷ್ಟೇ ನನ್ನ ಕೆಲಸ ಎಂದಾಗ ಭೀಮ ಹೋಗಿ ದೊಡ್ಡ ದೊಡ್ಡ ಬಂಡೆಗಳನ್ನು ಆ ಮೊಟ್ಟೆಗೆ ಅಡ್ಡಲಾಗಿ ಇಟ್ಟುಬರುತ್ತಾನೆ.

ಈ ರೀತಿ ಪ್ರಾಣಿ, ಪಕ್ಷಿ, ಮನುಷ್ಯರು ಎನ್ನುವ ಭೇದ ಅವರಲ್ಲಿರಲಿಲ್ಲ. ತನ್ನ ಕಾಲ ಕೆಳಗೆ ಇರುವ ಸಣ್ಣ ಎರೆ ಹುಳದಿಂದ ಹಿಡಿದು ಮೇಲೆ ಹಾರಾಡುತ್ತಿರುವ ಗರುಡ ಪಕ್ಷಿಯ ವರೆಗೆ ಎಲ್ಲವನ್ನೂ ಒಂದೇ ಎಂದು ಕಂಡವರು ಆ ದೇವತಾಮನುಷ್ಯರು. ಹಾಗಾಗಿಯೇ ಇವತ್ತಿಗೂ ಆ ಮಹಾನುಭಾವರು ನಮ್ಮ ಮನಸ್ಸಿನಲ್ಲಿ ಕೂತಿದ್ದಾರೆ. ಅಂಥಹ ಮಾಹಾನ್ ವ್ಯಕ್ತಿಗಳನ್ನು ಓದಿಕೊಂಡು, ಅವರು ನಡೆದಾಡಿದ ಭೂಮಿಯಲ್ಲಿ ನಡೆದಾಡಿಕೊಂಡು, ಅವರ ಅದರ್ಶಗಳನ್ನ ಕಡೆಗಣಿಸಿ ಬರೀ ದ್ವೇಷದಲ್ಲೇ ಕಾಲ ಕಳೆಯುತ್ತಿದ್ದೇವೆ. ಸರ್ವರನ್ನು ಮತ್ತು ಸರ್ವವನ್ನು ಪ್ರೇಮದಿಂದ ಕಂಡಾಗ ಯಾವ ದೇಶವೂ ಶತ್ರುರಾಷ್ಟ್ರವಾಗಿ ಕಾಣುವುದಿಲ್ಲ… ವಸುದೈವ ಕುಟುಂಬಕಂ ಅಂದ್ರೆ ಕೇವಲ ಭಾರತವೊಂದೇ ಅಲ್ಲ, ಇಡೀ ಜಗತ್ತೇ ಒಂದು ಕುಟುಂಬ ಎಂದರ್ಥ…

ಇದು ಕೇವಲ ನಮ್ಮ ದೇಶಕ್ಕಷ್ಟೇ ಅಲ್ಲ, ಪರದೇಶಕ್ಕೂ ಅನುಗುಣವಾಗುತ್ತದೆ.

ವಂದೇ ಮಾತರಂ-ವಸುದೈವ ಕುಟುಂಬಕಂ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group