ನಿಮ್ಮ ಬರಹ

ಅರಳಿಸುವುದು ಧರ್ಮ, ಕೆರಳಿಸುವುದು ಧರ್ಮ ರಾಜಕೀಯ

 ಲೇಖನ: ರುದ್ರು ಪುನೀತ್ ಆರ್.ಸಿ.

ವರದಿಗಾರ(ಡಿ.18): ತನ್ನ ತಂದೆ ಮಲತಾಯಿ ಕೈಗೆಕೊಟ್ಟಿರುವ ಮಾತನ್ನು ಉಳಿಸುವುದಕ್ಕಾಗಿ ಸಿಂಹಾಸನವನ್ನೇತ್ಯಜಿಸಿ ಕಾಡಿಗೆ ಹೋದವನು ರಾಮ.ಆದರೆ ಅದೇ ರಾಮನ ಮಂದಿರವನ್ನುಕಟ್ಟುತ್ತೇವೆ ಎಂದು ಸುಳ್ಳುಗಳನ್ನ ಹೇಳಿಸಿಂಹಾಸನವನ್ನೇರಿದ ಜನರನ್ನ ನಾವು ಇವತ್ತುನೋಡುತ್ತಿದ್ದೇವೆ. ರಾಮ ಎಂದರೆ ತ್ಯಾಗದಪ್ರತೀಕ. ಶಾಂತಿ ಪ್ರಿಯ. ರಾಮನಆಳ್ವಿಕೆಯಲ್ಲಿ ಒಬ್ಬ ಸಾಮಾನ್ಯ ನಾಗರಿಕಸೀತೆಯಮೇಲೆ ಅನುಮಾನ ವ್ಯಕ್ತಪಡಿಸಿದ ಎಂದಮಾತ್ರಕ್ಕೆ, ಒಬ್ಬ ಸಾಮಾನ್ಯ ಪ್ರಜೆಯಅನುಮಾನವನ್ನು ಪರಿಹರಿಸಲು ತನ್ನ ಪ್ರೀತಿಯ ಮಡದಿಸೀತೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸದವನು ರಾಮ. ಹಾಗೆಂದ ಮಾತ್ರಕ್ಕೆರಾಮನಿಗೆ  ಸೀತೆಯಮೇಲೆ ಅಪನಂಬಿಕೆ ಇತ್ತೆಂದು ಅರ್ಥವಲ್ಲ. ಆದರೆ ತನ್ನ ರಾಜ್ಯದಲ್ಲಿರುವಒಬ್ಬ ಸಾಮಾನ್ಯ ಪ್ರಜೆಯ ಮಾತಿಗೂಅಷ್ಟೊಂದು ಬೆಲೆ ಕೊಡುತ್ತಿದ್ದರು ಎಂದರ್ಥ.

ರಾಮನನ್ನು ಕೇವಲ ಚುನಾವಣಾ ತಂತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ರಾಮನ ಅದರ್ಶಗಳಿಗೆ ಬೆಲೆ ಕೊಡುವುದೇ ಇವರ ಉದ್ದೇಶ ಆಗಿದ್ದಿದ್ದರೆ ರಾಮ ಮಂದಿರದ ಹೆಸರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇರಲಿಲ್ಲ. ನಮ್ಮ ಸರ್ಕಾರ ಬಂದರೆ ರಾಮಮಂದಿರ ನಿರ್ಮಾಣವೇ ನಮ್ಮ ಮೊದಲ ಆದ್ಯತೆ ಎಂದು ಬೊಬ್ಬೆ ಹೊಡೆದ ಬಿಜೆಪಿ ನಾಯಕರು ನಾಲ್ಕೂವರೆ ವರ್ಷ ತಣ್ಣಗಿದ್ದು ಇನ್ನೇನು ಚುನಾವಣೆಗೆ ಐದು ತಿಂಗಳು ಇರಬೇಕಾದರೆ ‘ರಾಮಮಂದಿರವಲ್ಲೇ ಕಟ್ಟುವೆವು’ ಎಂದು ದೊಡ್ಡ ದೊಡ್ಡ ರ‍್ಯಾಲಿಗಳನ್ನು ಮಾಡುವುದರಲ್ಲಿ ನಿರತರಾಗಿದ್ದಾರೆ.

ರಾಮನ ಹೆಸರನ್ನಿಟ್ಟುಕೊಂಡು ರಾಜಕೀಯ ಮಾಡುವವರ ಹುನ್ನಾರಕ್ಕೆ ಇವತ್ತು ಅದೆಷ್ಟೋ ಅಮಾಯಕ ಹುಡುಗರು ಬಲಿಯಾಗುತ್ತಿರುವುದು ದುರದೃಷ್ಟಕರ. ರಾಮಮಂದಿರದ ಹೋರಾಟದಲ್ಲಿ ಇಂದಿನವರೆಗೂ ಸುಮಾರು 10 ಸಾವಿರ ಯುವಕರು ಬಲಿಯಾಗಿದ್ದಾರೆ ಎಂದು ಅಂಕಿಅಂಶಗಳಿವೆ. ಬಲಿಯಾದ ಯಾರೂ ರಾಜಕಾರಣಿಗಳ ಮಕ್ಕಳಲ್ಲ, ಅಥವಾ ಧರ್ಮ ಧರ್ಮ ಅಂತ ಬೊಬ್ಬೆ ಹೊಡೆಯುವ ಸಂಘಟನೆಯ ಮುಖ್ಯಸ್ಥರ ಮಕ್ಕಳೂ ಅಲ್ಲ. ರಾಮ ಮಂದಿರಕ್ಕಾಗಿ ಪ್ರಾಣವನ್ನು ಬಲಿಕೊಟ್ಟವರು ಅಮಾಯಕ ಬಡವರ ಮಕ್ಕಳು. ಯುವಕರ ಮನಸ್ಸಿನಲ್ಲಿ ಧರ್ಮದ ಅಮಲನ್ನು ತುಂಬಿ ಅವರ ದಾರಿತಪ್ಪಿಸಲಾಗುತ್ತಿದೆ. ತಮ್ಮ ಕಣ್ಣಮುಂದೆ ನಡೆಯುತ್ತಿರುವ ನಾಟಕೀಯ ಬೆಳವಣಿಗೆಯನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ಯುವಕರು ಇಂದು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ನಮ್ಮ ದೇಶ ಇನ್ನೊಂದು ಅಫ್ಘಾನಿಸ್ತಾನ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆದರೆ ಇವಾಗ ಏನಾಗುತ್ತಿದೆ, ಅನುಮಾನ ಇರಲಿ ಎದುರು ಮಾತನಾಡಿದರೆ ಸಾಕು ಆತ ದೇಶದ್ರೋಹಿ ಆಗುತ್ತಾನೆ. ಧರ್ಮ ವಿರೋಧಿ ಆಗುತ್ತಾನೆ.

ರಾಮ ನಾಮವನ್ನ ಜಪಿಸುತ್ತಲೇ ಸಮಾಜವನ್ನ ಕಟ್ಟಿದರು ಗಾಂಧೀಜಿ. ಗಾಂಧೀಜಿ ಜಪಿಸಿದ ರಾಮ ಶಾಂತಿಯ ಪ್ರತೀಕವಾಗಿದ್ದ. ಸಮಾಜದ ಹಿತಕ್ಕಾಗಿ ಅವರು ರಾಮನ ಹೆಸರನ್ನು ಹೇಳಿದರು. ಆದರೆ ಇಂದು ತಮ್ಮ ರಾಜಕೀಯ ಲಾಭಕ್ಕಾಗಿ ರಾಮನ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಅಧ್ಯಾತ್ಮಿಕತೆಯನ್ನ ಪ್ರಪಂಚಕ್ಕೆ ತಿಳಿಸಿದ ದೇಶ ನಮ್ಮದು. ಸ್ವಾಮಿ ವಿವೇಕಾನಂದರು ಅಧ್ಯಾತ್ಮವನ್ನ ಮತ್ತು ಹಿಂದೂ ಧರ್ಮವನ್ನ ಪ್ರಪಂಚಕ್ಕೆ ತೋರಿಸಿಕೊಟ್ಟವರು. ಆದರೆ ವಿವೇಕಾನಂದರನ್ನ ಇವತ್ತು ಕಟ್ಟರ್ ಹಿಂದುತ್ವವಾದಿ ಎಂದು ಹೈಜಾಕ್ ಮಾಡಲಾಗಿದೆ. ಅವರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಯಾವ ವಿವೇಕಾನಂದರು ಈ ಜಾತಿ ಪದ್ಧತಿಯ ವಿರೋಧಿಯಾಗಿದ್ದರೋ, ಪುರೋಹಿತಶಾಹಿಯನ್ನು ಕೂಲಂಕುಷವಾಗಿ ಖಂಡಿಸುತ್ತಿದ್ದರೋ, ಅಂಥಹ ವಿವೇಕಾನಂದರ ಹೆಸರನ್ನು ಹಾಳು ಮಾಡುತ್ತಿರುವುದು ಕಂಡು ಬರುತ್ತಿದೆ. ಓಮ್ಮೆ ವಿವೇಕಾನಂದರು ಕೇರಳಕ್ಕೆ ಭೇಟಿ ನೀಡಿದಾಗ ಅಲ್ಲಿನ ನಿರಂಕುಶ ಜಾತಿ ಕೀಳರಿಮೆಯನ್ನು ಗಮನಿಸಿ ಅದರಿಂದ ಬೇಸರಪಟ್ಟು ಅದೊಂದು ಹುಚ್ಚರ ಸಂತೆ ಎಂದು ಹೇಳಿದ್ದರು. ವಿವೇಕಾನಂದರದ್ದು religion tolerance ಆಗಿರಲಿಲ್ಲ, religion acceptance ಆಗಿತ್ತು.

ಅಧ್ಯಾತ್ಮಿಕತೆಯ ಹೆಸರಿನಲ್ಲಿ ಇವತ್ತು ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಅಧ್ಯಾತ್ಮ ಎಂದರೆ ಅರಳಿಸುವುದೇ ಹೊರತು ಕೆರಳಿಸುವುದಲ್ಲ. ಗಾಂಧೀಜಿ ಒಬ್ಬ ಮಹಾನ್ ಆಧ್ಯಾತ್ಮಿಕ ವ್ಯಕ್ತಿ, ರಾಮನ ಹೆಸರನ್ನು ಬಳಸಿಕೊಂಡು ಅವರು ಜನರನ್ನು ಅರಳಿಸುವ ಕೆಲಸ ಮಾಡಿದರೇ ಹೊರತು ಕೆರಳಿಸಲಿಲ್ಲ. ಆದರೆ ಇವತ್ತು ಶಾಂತಿಯ ಸಂಕೇತವಾಗಿರುವ ರಾಮನ ಹೆಸರನ್ನು ಬಳಸಿಕೊಂಡು ಜನರನ್ನು ಕೆರಳಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಯಾವ ರಾಮ ತಂದೆಯ ಮಾತನ್ನು ಉಳಿಸುವುದಕ್ಕಾಗಿ ತನ್ನ ರಾಜ್ಯ, ಆಸ್ತಿ, ಅಂತಸ್ತನ್ನು ತ್ಯಾಗ ಮಾಡಿ ಶಾಂತಿಯಿಂದ ವನವಾಸಕ್ಕೆ ಹೋದನೋ, ಆ ರಾಮನ ವಿಚಾರಗಳು ಇವರಿಗೆ ಬೇಕಿಲ್ಲ. ಬದಲಾಗಿ ರಾಮನ ಹೆಸರಿನಲ್ಲಿರುವ ಭಾವನೆಯನ್ನು ಹೇಳಿ ಜನರನ್ನ ಮೊಸಗೊಳಿಸುತ್ತಿದ್ದಾರೆ.  ರಾಘವೇಂದ್ರ ಸ್ವಾಮಿಗಳು, ಭಕ್ತ ಕನಕದಾಸರು, ತುಳಸೀದಾಸರು, ಪುರಂದರದಾಸರು, ಸಂತ ಕಬೀರ್ ದಾಸರು, ಈ ರೀತಿಯ ಹಲವು ಮಹಾನ್ ವ್ಯಕ್ತಿಗಳು ಶ್ರೀರಾಮನ ಭಕ್ತರಾಗಿದ್ದರು. ರಾಮನ ಅದರ್ಶಗಳನ್ನ, ವಿಚಾರಗಳನ್ನು ಹೇಳುತ್ತಾ, ಹಾಡುತ್ತಾ ಜನರ ಮನಸ್ಸನ್ನ ಅರಳಿಸುವ ಕೆಲಸವನ್ನ ಮಾಡಿದರು. ಆದರೆ ಈಗಿನ ಕೊಳಕು ಮನಸ್ಸಿನ ಅವಕಾಶವಾದಿಗಳು ಆಹ್ಲಾದ ರೂಪಿ, ಔದಾರ್ಯ ನಿಧಿ ಶ್ರೀರಾಮನ ಹೆಸರಿನಲ್ಲಿ ನವಯುವಕರ ಮನಸ್ಸನ್ನು ಕೆರಳಿಸುವ ಕೆಲಸವನ್ನ ಮಾಡುತ್ತಿದ್ದಾರೆ.

ಸ್ವಾಮಿ ವಿವೇಕಾನಂದರೇ ಹೇಳಿದ್ದಾರೆ, “ನಿಮಗೆ ಬಡವರ ಬವಣೆಯಲ್ಲಿ ರಾಮ ಕಾಣದಿದ್ದರೆ, ದೀನನ ಹಸಿವಿನಲ್ಲಿ ರಾಮ ಕಾಣದಿದ್ದರೆ, ವಿಧವೆಯ ಕಣ್ಣೀರಿನಲ್ಲಿ ರಾಮ ಕಾಣದಿದ್ದರೆ, ಶೋಷಿತರ ನೋವಿನಲ್ಲಿ ರಾಮ ಕಾಣದಿದ್ದರೆ ಖಂಡಿತ ನೀವು ಮಂದಿರದಲ್ಲೂ ರಾಮನನ್ನ ಕಾಣಲು ಆಗೋದಿಲ್ಲ”

ಆಯೋದ್ಯೆಯಲ್ಲಿ ಸುಮಾರು ಎಂಟು ಸಾವಿರ ರಾಮನ ಮಂದಿರಗಳಿವೆ, ವಿಪರ್ಯಾಸವೆಂದರೆ ರಾಮ ಮಂದಿರದ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಯಾವೊಬ್ಬ ನಾಯಕನೂ ಆ ಕಡೆ ತಿರುಗಿಯೂ ನೋಡಿಲ್ಲ. ತಮ್ಮದೇ ರಾಷ್ಟ್ರಪತಿ, ತಮ್ಮದೇ ಪ್ರಧಾನಿ, ಅಯೋದ್ಯೆ ಇರುವ ಉತ್ತರಪ್ರದೇಶದ ಮುಖ್ಯಮಂತ್ರಿಯೂ ತಮ್ಮವರೇ ಆಗಿದ್ದರೂ ಸಹ ರಾಮಮಂದಿರ ಕಟ್ಟುವ ಕೆಲಸ ಮಾಡಲಿಲ್ಲ. ಅಲ್ಲಿದ್ದ ಮಸೀದಿಯನ್ನು ಕೆಡುವುವಾಗ ಇವರಿಗೆ ಅಧಿಕಾರವೇ ಇರಲಿಲ್ಲ, ಸರ್ಕಾರವೂ ಇರಲಿಲ್ಲ ಆದರೂ ಮಸೀದಿಯನ್ನ ನೆಲಸಮ ಮಾಡಿದರು. ಆದರೆ ಕಟ್ಟುವಾಗ ಮಾತ್ರ ನ್ಯಾಯಾಲಯ, ಕಾನೂನು ಅಂತ ಸುಳ್ಳುಗಳನ್ನ ಹೇಳಿ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜನರನ್ನು ರಾಮನ ಹೆಸರಿನಲ್ಲಿ ಮೂಢರನ್ನಾಗಿಸುತ್ತಿದ್ದಾರೆ. ಚುನಾವಣಾ ಹತ್ತಿರ ಬರುತ್ತಿದ್ದಂತೆ ರಾಮಮಂದಿರದ ಹೆಸರಿನಲ್ಲಿ ರ‍್ಯಾಲಿಗಳು ಶುರುವಾದವು. ನಾವೆಲ್ಲ ಹಿಂದೂ ನಾವೆಲ್ಲ ಒಂದು ಅಂಥ ಹೇಳುವ ಇವರಿಗೆ ಹನುಮಂತ ದಲಿತ ಎಂದು ಹೇಳುವ ಅವಶ್ಯಕತೆ ಇತ್ತೇ?.  ನಾವೆಲ್ಲ ಒಂದು ಎಂದಾದ ಮೇಲೆ ಹನುಮಂತನ ಜಾತಿ ಯಾಕೆ ಬೇಕಿತ್ತು?. ದಲಿತರನ್ನ ಓಟಿಗಾಗಿ ಸೆಳೆಯುವ ಹುನ್ನಾರಗಳು ಅಷ್ಟೇ!.

ಚೈನಾ ಗೋಡೆಯ ರೀತಿಯಲ್ಲಿ ನಮ್ಮಗಳ ನಡುವೆ ಮತ್ತು ಧರ್ಮಗಳ ನಡುವೆ ಅಧರ್ಮದ ಗೋಡೆಯನ್ನ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಿಜವಾದ ದೇಶಭಕ್ತಿ ಎಂದರೆ ಜನರ ನಡುವೆ ಸಾಮರಸ್ಯವನ್ನ ಬೆಳೆಸುವುದು, ಎಲ್ಲರೂ ಅಣ್ಣ ತಮ್ಮಂದಿರಂತೆ, ಬಂದು ಬಾಂಧವರಂತೆ ಸಹಬಾಳ್ವೆಯಿಂದ ಬದುಕುವಂತಹ ವಾತಾವರಣವನ್ನ ನಿರ್ಮಾಣ ಮಾಡುವುದು. ಜಾತಿ ಭೇದ ಇಲ್ಲದೆ ನಾವೆಲ್ಲರೂ ಒಂದು ಎನ್ನುವ ಒಗ್ಗಟ್ಟಿನ ಮಂತ್ರವನ್ನ ಪಠಿಸುವ ಹಾಗೆ ಮಾಡುವುದು. ವಿಶ್ವಮಾನವರಾಗಿ ಬದುಕವುದು.. ಆದರೆ ಇವರ ಸ್ವಾರ್ಥಕ್ಕಾಗಿ ದೇಶದ ವಾತಾವರಣವನ್ನೇ ಹಾಳುವ ಮಾಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ನಮ್ಮ ಮನಸ್ಸುಗಳ ನಡುವೆ, ಧರ್ಮಗಳ ನಡುವೆ ಇವರು ಕಟ್ಟಲು ಹೊರಟಿರುವ ಗೋಡೆಯನ್ನು ಯಾರು ಕೆಡವಲು ಪ್ರಯತ್ನ ಪಡುತ್ತಾರೋ ನಿಜವಾಗಿಯೂ ಅವರು ನಿಜವಾದ ದೇಶಭಕ್ತರು. ಯಾರು ಈ ಗೋಡೆಯನ್ನ ಭದ್ರಗೊಳಿಸಲು ಪ್ರಯತ್ನ ಪಡುತ್ತಿದ್ದಾರೋ ಅವರು ನಿಜವಾದ ದೇಶದ್ರೋಹಿಗಳು. ಆ ಗೋಡೆಯನ್ನ ನಾವು ಕೆಡವಲೇ ಬೇಕು ಇಲ್ಲದಿದ್ದರೆ ಮುಂದೊಂದು ದಿನ ನಮ್ಮ ಮಕ್ಕಳು ಸ್ವತಂತ್ರವಾಗಿ ನಿರ್ಭೀತಿಯಿಂದ ಓಡಾಡಲು ಹೆದರಬೇಕಾಗುತ್ತದೆ. ಜಾತಿ ಧರ್ಮಗಳ ವಿಷ ಇಡೀ ಮನುಕುಲವನ್ನೇ ನಾಶವಾಗುವ ದಿನವನ್ನ ನಾವು ಎದುರು ನೋಡಬೇಕಾಗುತ್ತದೆ.

ಯಾವಾಗ ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಶುರು ಮಾಡಿದರೊ, ಆಗಿನಿಂದ ನಿಜವಾಗಿಯೂ ಆತಂಕದ ವಾತಾವರಣವೇ ಸೃಷ್ಟಿಯಾಗಿದೆ. ಎಲ್ಲಿ ಮುಂದೊಂದು ದಿನ ನನ್ನ ದೇಶ ಕೋಮುವಾದಿಗಳ ಕೈಯಲ್ಲಿ ಸಿಕ್ಕಿ ನಾಶವಾಗುವುದೋ ಎನ್ನುವ ಭಯ ಹುಟ್ಟುತ್ತಿದೆ. ಯಾರೋ ಒಬ್ಬ ಮಂಜುನಾಥ ಸ್ವಾಮಿ ಎನ್ನುವ ಮಹಾನ್ ಸ್ವಧರ್ಮ ಪ್ರೇಮಿ ಉಡುಪಿಯ ಧರ್ಮ ಸಭೆಯನ್ನುದ್ದೇಶಿಸಿ ಮಾತನಾಡುತ್ತಾನೆ, ‘ಇಸ್ಲಾಮ್ ಧರ್ಮವೇ ಸುಳ್ಳು ಎನ್ನುತ್ತಾನೆ, ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಬೇಕು ಎನ್ನುವ ನಿಟ್ಟಿನಲ್ಲಿ ಆತ ಮಾತನಾಡುತ್ತಾನೆ, ಪೈಗಂಬರ್ ರ ಬಗ್ಗೆ ತುಚ್ಛವಾಗಿ ಮಾತನಾಡುತ್ತಾನೆ. ಆದರೆ ವಿವೇಕಾನಂದರು ಪೈಗಂಬರರ ಮೇಲೂ ಗೌರವವನ್ನ ಹೊಂದಿದ್ದರು. ಯಾವುದೇ ಧರ್ಮ ಸುಳ್ಳಾಗಿದ್ದೇ ಆದಲ್ಲಿ ಅದು ಸಾವಿರಾರು ವರ್ಷಗಳ ಕಾಲ ಬದುಕಿದ್ದಾದರು ಹೇಗೆ ಎಂದು ವಿವೇಕಾನಂದರೇ ಹೇಳಿದ್ದಾರೆ. ನಮ್ಮ ಧರ್ಮ ಸಭೆಯಲ್ಲಿ ನಮ್ಮ ಗೀತೆ ಬಗ್ಗೆ ಮಾತನಾಡಬೇಕು, ವೇದಗಳ ಬಗ್ಗೆ ಉಪನಿಷದ್ ಗಳ ಬಗ್ಗೆ ಮಾತನಾಡಬೇಕೆ ಹೊರತು ಇಸ್ಲಾಂ ಧರ್ಮದ ಬಗ್ಗೆ ಅಲ್ಲ. ವೇದಿಕೆಯ ಮುಂದೆ ಕುಳಿತಿರುವ ಯುವಕರನ್ನು ಕೆರಳಿಸುವ ಹುನ್ನಾರ ಅದು.

ಧರ್ಮದ ಬಗ್ಗೆ ಅತಿರೇಕವಾಗಿ ಆಕ್ರೋಶದಿಂದ ಮಾತನಾಡುವುದರಿಂದ ನಮ್ಮಲ್ಲಿ ಪ್ರೀತಿಯ ಭಾವನೆ ಮೂಡಲು ಸಾಧ್ಯವೇ?. ನಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ಈ ದೇಶದ ಮೇಲೆ ಪ್ರೀತಿ ಬರಿಸುವ ಹಾಗೆ ಮಾಡಬೇಕೆ ಹೊರತು, ದ್ವೇಷ ಬರಿಸುವ ಹಾಗಲ್ಲ. 10 ಜನ ಇರುವ ಕುಟುಂಬದಲ್ಲಿ ಯಾರೋ ಒಬ್ಬನ ಮೇಲೆ ಕ್ರಿಮಿನಲ್ ಕೇಸ್ ಆಗಿ ಜೈಲಿಗೆ ಹೋಗಿ ಬಂದ ಮಾತ್ರಕ್ಕೆ ಉಳಿದ ಎಲ್ಲ 9 ಜನರನ್ನು ಕ್ರಿಮಿನಲ್ ಗಳಾಗಿ ನೋಡೋದು ತಪ್ಪಲ್ಲವೇ. ಆ ರೀತಿ ಎಲ್ಲರನ್ನು ಕ್ರಿಮಿನಲ್ ಗಳಾಗಿ ಕಂಡರೆ ಅವರ ಮನಸ್ಥಿತಿ ಏನಾಗಬೇಕು. ಯಾರೋ ಇತರೆ ರಾಷ್ಟ್ರದ ಕಸಬ್ ಬಂದು ಬಾಂಬ್ ಹಾಕಿದ ಮಾತ್ರಕ್ಕೆ ನಮ್ಮ ದೇಶದಲ್ಲಿರುವ ಎಲ್ಲಾ ಮುಸಲ್ಮಾನರನ್ನು ಉಗ್ರಗಾಮಿಗಳ ರೀತಿಯಲ್ಲಿ ನೋಡೋದು ತಪ್ಪಲ್ಲವೇ?. ನಮ್ಮ ಮುತ್ತಾತರ ಕಾಲದಲ್ಲಿ ಯಾರೋ ಘಜ್ಞಿ ಮಹಮದ್ ಬಂದು ದೇವಸ್ಥಾನ ಕೊಳ್ಳೆ ಹೊಡೆದು ನಾಶ ಮಾಡಿದ ಅಂದ ಮಾತ್ರಕ್ಕೆ ಈಗ ನಮ್ಮೊಂದಿಗೆ ಬದುಕುತ್ತಿರುವ ಮುಸಲ್ಮಾನನನ್ನು ಟೀಕೆ ಮಾಡೋದ್ರಲ್ಲಿ ಅರ್ಥ ಇದೆಯೇ?. ಯಾಕೆ ಅವರಲ್ಲಿ ಒಳ್ಳೆಯವರೇ ಇಲ್ವಾ, ಅಬ್ದುಲ್ ಕಲಾಂ, ಕಬೀರ್ ದಾಸ, ಶರೀಫರಂತ ಮಹಾನ್ ವ್ಯಕ್ತಿಗಲಿರಲಿಲ್ಲವಾ?.  ಇದೆ ರೀತಿ ನಾವು ಅವರನ್ನು ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಲೆ ಇದ್ದರೆ ಖಂಡಿತ ಅವರ ಮನಸ್ಥಿತಿ ಸಹ ಪಾಕಿಸ್ತಾನದ ಕಡೆಯೇ ವಾಲುತ್ತದೆ. ಕೋಮುವಾದವನ್ನ ಹುಟ್ಟಿ ಹಾಕುವ ಪ್ರಯತ್ನ ಪಡುವ ಯಾವುದೇ ಧರ್ಮದ ವ್ಯಕ್ತಿ ಇರಲಿ ಆತ ಓವೈಸಿ ಯೇ ಆಗಿರಲಿ ಅಥವಾ ಯೋಗಿ ಅದಿತ್ಯನಾಥರೇ ಆಗಿರಲಿ ಅಂಥವರನ್ನ ಖಂಡಿಸಬೇಕು. ಜನರ ಮನಸ್ಸಿನಲ್ಲಿ ಧರ್ಮವನ್ನೂ ಮೀರಿ ಸಾಮರಸ್ಯವನ್ನ ಹುಟ್ಟು ಹಾಕುವವನೇ ನಿಜವಾದ ದೇಶಭಕ್ತ. ಯಾರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಧರ್ಮಗಳ ನಡುವೆ ಬಿರುಕನ್ನು ಮೂಡಿಸುವ ಪ್ರಯತ್ನ ಪಡುತ್ತಾರೋ ಅಂಥವರು ನಿಜವಾದ ದೇಶದ್ರೋಹಿಗಳು. ದೇಶವನ್ನ ಒಡೆಯೋದಕ್ಕಿಂತ ದೊಡ್ಡ ದೇಶದ್ರೋಹವಿಲ್ಲ. ಯಾರು ದೇಶವನ್ನ ಧರ್ಮದ ಹೆಸರಿನಲ್ಲಿ ಒಡೆಯಲು ಪ್ರಯತ್ನ ಪಡುತ್ತಿದ್ದಾರೋ ಅವರು ನಿಜವಾದ ದೇಶದ್ರೋಹಿಗಳು. ಅಂಥವರು ಹಿಂದೂ ಧರ್ಮದವರೇ ಆಗಿರಲಿ, ಅಥವಾ ಮುಸಲ್ಮಾನ ಕ್ರೈಸ್ತ ಧರ್ಮದವರೇ ಆಗಿರಲಿ.

ಇತ್ತೀಚೆಗೆಮೈಸೂರಿಗೆ ಭೇಟಿ ನೀಡಿದಾಗ ಅಲ್ಲಿನ ಪೂಜ್ಯನೀಯ ಗುರುಗಳಾದ ಹಿಂದೂ ಸಂತರೊಬ್ಬರ ಜೊತೆಸಂವಾದ ನಡೆಸುತ್ತಿರುವಾಗ ಅವರು ಹೇಳಿದ ಒಂದುಮಾತು ನಿಜಕ್ಕೂ ಮನಕುಲುಕಿತು. “When u speak religion it creates problems, but when u practice religion, you will understand that all religions are preaching the same truth”.

ಧರ್ಮವನ್ನ ಕೇವಲ ಮಾತನಾಡುವುದಷ್ಟೇ ಅಲ್ಲ ಅದನ್ನ ಅಭ್ಯಾಸ ಮಾಡಿದರೆ ಮಾತ್ರ ಸತ್ಯ ಒಂದೇ ಎನ್ನುವ ಉತ್ತರ ಸಿಗುತ್ತದೆ.

ಒಂದು ಮಡಿಕೆಯಲ್ಲಿ ಹಲವಾರು ತೂತುಗಳನ್ನು ಮಾಡಿ ಅದರ ಮದ್ಯ ಒಂದು ದೀಪವನ್ನು ಇಟ್ಟಾಗ ಎಲ್ಲಾ ಕಿಂಡಿಗಳಿಂದಲೂ ಬೆಳಕು ಪ್ರತ್ಯೇಕ ಕಿರಣಗಳ ಮೂಲಕ ಗೋಡೆಯ ಮೇಲೆ ಬೀಳುತ್ತದೆ.. ಆದರೆ ಆ ಎಲ್ಲ ಪ್ರತ್ಯೇಕ ಕಿಂಡಿಗಳಿಂದ ಸೂಸುತ್ತಿರುವ ಬೆಳಕಿನ ಮೂಲ ಮಾತ್ರ ಆ ಮಡಿಕೆಯ ಮದ್ಯದಲ್ಲಿಟ್ಟಿರುವ ದೀಪ ಆ ದೀಪವೇ ಅಂತಿಮ ಸತ್ಯ . ಪ್ರತಿಯೊಂದು ಕಿಂಡಿಗಳಿಂದಲೂ ಬರುತ್ತಿರುವ ಕಿರಣಗಳು ಬೇರೆ ಬೇರೆ ಧರ್ಮದ ರೂಪ ಪಡೆದುಕೊಂಡಿರಬಹುದು. ಆದರೆ ಅದರ ಮೂಲ ಒಂದೇ ಆಗಿರುತ್ತದೆ. ಹಾಗಾಗಿ ತನ್ನ ಧರ್ಮವನ್ನು ಪ್ರೀತಿಸಿ ಅನ್ಯ ಧರ್ಮವನ್ನು ಗೌರವಿಸಿವುದು ಮನುಷ್ಯನ ಕರ್ತವ್ಯ.

ಉತ್ತಮ ಸಮಾಜ ನಿರ್ಮಾಣದತ್ತ ನಮ್ಮ ಪಯಣ.

ಧರ್ಮ ನಿರಪೇಕ್ಷ ಸಮಾಜದ ನಿರ್ಮಾಣವೇ ನಮ್ಮ ಗುರಿಯಾಗಬೇಕು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group