ರಾಜ್ಯ ಸುದ್ದಿ

‌‌’ಆರೆಸ್ಸೆಸ್ ಸೇರಿ ಇನ್ನೇನು ಅದರಲ್ಲಿ ಮುಳುಗಿಹೋದೆ ಎನ್ನುವಷ್ಟರಲ್ಲಿ ಕೊಂಡಲಿಂಗ ರಾಮಯ್ಯ ನನ್ನನ್ನು ಅಲ್ಲಿಂದ ಎಳೆದುಕೊಂಡರು‌’: ಡಾ.ಸಿ.ಎಸ್.ದ್ವಾರಕಾನಾಥ್

‘ಎಲ್ಲವನ್ನು ಒಳಗೊಂಡಿರುವ ದೇಶದ ಸಂವಿಧಾನವನ್ನು ಕಾಪಾಡಿಕೊಳ್ಳುವ ಅವಶ್ಯಕತೆಯಿದೆ’

‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ ಡಾ.ಸಿ.ಎಸ್.ದ್ವಾರಕಾನಾಥ್

ವರದಿಗಾರ(ಡಿ.16): ‘ಸಂವಿಧಾನಕ್ಕೆ ಧಕ್ಕೆ ತರುತ್ತಿರುವುದು ಅತ್ಯಂತ ನೋವಿನ ಸಂಗತಿ. ‌ಮನೆಯಲ್ಲಿ ಯಾವ ಧರ್ಮವನ್ನಾದರೂ ಪಾಲಿಸಿ. ಆದರೆ‌, ಭಾರತೀಯನಾಗಿದ್ದರೆ ಸಂವಿಧಾನ ಧರ್ಮ ಪಾಲಿಸಿ. ದೇಶದ ಆತ್ಮ ನಮ್ಮ ಸಂವಿಧಾನ. ಎಲ್ಲವನ್ನೂ ಒಳಗೊಂಡಿರುವ ಅದನ್ನು ಕಾಪಾಡಬೇಕು’ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಪ್ರಗತಿಪರ ಚಿಂತಕ, ಹಿರಿಯ ನ್ಯಾಯವಾದಿ ಡಾ.ಸಿ.ಎಸ್.ದ್ವಾರಕಾನಾಥ್ ಹೇಳಿದ್ದಾರೆ.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ‘ನಾನು ಹುಟ್ಟಿದ 5 ತಿಂಗಳಲ್ಲಿಯೇ ತಂದೆ ತೀರಿಕೊಂಡರು. ತಾಯಿಗೆ ಆರೋಗ್ಯದಲ್ಲಿ ಏರು ಪೇರು ಕಂಡಿದ್ದರಿಂದ ಅವರ ಸಹೋದರ ಅವರನ್ನು ತವರಿಗೆ (ಕೆಜಿಎಫ್‌) ಕರೆದುಕೊಂಡು ಹೋದರು. ನಮ್ಮನ್ನು ಸಾಕಿ ಸಲಹಿದ್ದು ಮಾತ್ರ ದೊಡ್ಡಕ್ಕ, ದೊಡ್ಡಣ್ಣ ಮತ್ತು ಅತ್ತಿಗೆ. ಅವರೇ ನನಗೆ ಬದುಕುವ ಛಲ ಕಲಿಸಿದ್ದು.

‘ಕೋಲಾರದ ಕರಾಠಿಪಾಳ್ಯ ನನ್ನೂರು. ಎಲ್ಲರಂತೆ ಬುಗುರಿ, ಚಿನ್ನಿದಾಂಡು ಆಡಿಕೊಂಡೇ ಬೆಳೆದವ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಎಂದೂ ಫಸ್ಟ್ ಕ್ಲಾಸ್ ಬಂದಿಲ್ಲ. ಎನ್.ನರಸಿಂಹಯ್ಯ ಅವರ ಪತ್ತೇದಾರಿ ಕಾದಂಬರಿ, ಕುವೆಂಪು ಅವರ ಸಾಹಿತ್ಯ, ಅಂಬೇಡ್ಕರ್‌ ಚಿಂತನೆಗಳಿಂದ ಪ್ರಭಾವಿತನಾದೆ.’ ‘ಸ್ವಾಮಿ ವಿವೇಕಾನಂದರ ತತ್ವಗಳನ್ನು ತಿಳಿದುಕೊಂಡಿದ್ದರಿಂದ ಅಪಾರ ದೇಶಪ್ರೇಮ ಹುಟ್ಟಿತು‌. ನಂತರ ‌‌ ಆರೆಸ್ಸೆಸ್ ಸೇರಿಕೊಂಡೆ. ಇನ್ನೇನು ಅದರಲ್ಲಿ ಮುಳುಗಿಹೋದೆ ಎನ್ನುವಷ್ಟರಲ್ಲಿ ಕೊಂಡಲಿಂಗ ರಾಮಯ್ಯ ಅವರು ನನ್ನನ್ನು ಅಲ್ಲಿಂದ ಎಳೆದುಕೊಂಡರು‌.’ ಎಂದು ಹೇಳಿದ್ದಾರೆ.

‘ಅಣ್ಣನ ಮನೆಯಲ್ಲಿದ್ದು ಕೆಲಸಕ್ಕೆ ಹೋಗುತ್ತಲೇ ಸಂಜೆ ಕಾಲೇಜಿಗೆ ಸೇರಿ ಕಾನೂನು ಪದವಿ ಮುಗಿಸಿದೆ. ಆಸ್ಪತ್ರೆಯೊಂದರಲ್ಲಿ ಹಣ ಪೀಕುತ್ತಿದ್ದರ ವೈದ್ಯರ ಕುರಿತು ಲಂಕೇಶ್ ಪತ್ರಿಕೆಗೆ ಲೇಖನ ಬರೆದು ಪಿ.ಲಂಕೇಶ್ ಅವರಿಗೆ ಹತ್ತಿರವಾದೆ. ಸಾಹಿತ್ಯ, ಸಂಸ್ಕೃತಿ, ರಾಜಕಾರಣ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಲೇಖನಗಳನ್ನು ಬರೆದೆ.’ ‘ಗೋಕಾಕ ಚಳವಳಿ, ಸಾಮಾಜಿಕ ತಾರತಮ್ಯ, ಬಂಡಾಯ ಹೋರಾಟ, ಕನ್ನಡ ಪರ, ಹಿಂದುಳಿದ ವರ್ಗಗಳ ಪರವಾದ ಚಳವಳಿ, ಮಾನವ ಹಕ್ಕುಗಳ ಹೋರಾಟ ಹೀಗೆ ನಾನಾ ಚಳವಳಿಗಳಲ್ಲಿಯೂ ಕೂಡ ಭಾಗವಹಿಸಿದ್ದೆ. ಅಹಿಂದ ಪರಿಕಲ್ಪನೆ ನನ್ನದೇ.‘ ‘ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದಾಗ ನೂರಾರು ಅಸ್ಪೃಶ್ಯ ಸಮುದಾಯಗಳ ಏಳಿಗೆಗೆ ಶ್ರಮಿಸಿದೆ. ತೃತೀಯ ಲಿಂಗಿಗಳ, ವೇಶ್ಯೆಯರ, ಎಚ್.ಐ.ವಿ‌ ಪೀಡಿತರ, ದೇವದಾಸಿಯರ ಮಕ್ಕಳಿಗೆ ಮೀಸಲಾತಿ ದೊರೆಯುವಂತೆ ಮಾಡಿದ್ದೇನೆ. ಅಲೆಮಾರಿಗಳ ಆಸ್ಮಿತೆ ಕಾಪಾಡುವಲ್ಲಿಯೂ ಶ್ರಮಿಸಿದ್ದೇನೆ‌’ ಎನ್ನುತ್ತಾ ಅವರು ಭಾವುಕರಾದರು.

‘ಗೌರಿ, ಕಲಬುರ್ಗಿಯವರ ಹತ್ಯೆಯ ಸಂದರ್ಭದಲ್ಲಿ ಒಂದು ಹಿಟ್ ಲಿಸ್ಟ್ ಬಿಡುಗಡೆಯಾಯಿತು. ಅದರಲ್ಲಿ ನನ್ನ ಹೆಸರಿರುವುದು ತಿಳಿಯಿತು. ಆದರೂ ನನಗೆ ಭಯವಿಲ್ಲ. ಎಂದಿಗೂ ಸತ್ಯವನ್ನೇ ಮಾತನಾಡುತ್ತೇನೆ. ರೈಲ್ವೆ ಹಳಿಗಳ ಸ್ವಚ್ಛ ಮಾಡುವ ಹುದ್ದೆಗಳಿಗೆ ಮೇಲ್ವರ್ಗದವರು ಅರ್ಜಿ ಹಾಕುವವರೆಗೂ ಮೀಸಲಾತಿ ನಿಲ್ಲುವುದಿಲ್ಲ’ ಎಂದು ಡಾ.ಸಿ.ಎಸ್.ದ್ವಾರಕಾನಾಥ್ ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group