ರಾಜ್ಯ ಸುದ್ದಿ

ಬಿಜೆಪಿ, ಆರೆಸ್ಸೆಸ್ಸಿಗರೇ, ನಿಮ್ಮ ರಾಜಕೀಯದ ಬೇಳೆ ಬೇಯಿಸಲು ರಾಮನನ್ನು ಬೀದಿಗೆ ತರಬೇಡಿ: ಹೆಚ್.ಎಸ್.ಗಂಗಪ್ಪ

ಬಾಬರಿ ಮಸೀದಿ ಪುನರ್ ನಿರ್ಮಿಸುವ ಭರವಸೆ ಸರ್ಕಾರ ನೆರವೇರಿಸಲಿ- ಎಸ್‍ಡಿಪಿಐ

ಬಾಬರಿ ಮಸ್ಜಿದ್ ಪುನರ್ ನಿರ್ಮಿಸುವಂತೆ ಒತ್ತಾಯಿಸಿ ಎಸ್‍ಡಿಪಿಐ ಯಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ವರದಿಗಾರ (ಡಿ.9): ಬಿಜೆಪಿ, ಆರೆಸ್ಸೆಸ್, ಸಂಘಪರಿವಾರದವರೇ ನಿಮ್ಮ ರಾಜಕೀಯದ ಬೇಳೆ ಬೇಯಿಸಲು ರಾಮನನ್ನು ಬೀದಿಗೆ ತರಬೇಡಿ ಎಂದು ಎಸ್.ಡಿ.ಪಿ.ಐ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷ ಹೆಚ್.ಎಸ್.ಗಂಗಪ್ಪ ಸಲಹೆ ನೀಡಿದ್ದಾರೆ.

ಅವರು ಶನಿವಾರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಇಂಡಿಯಾ (ಎಸ್.ಡಿ.ಪಿ.ಐ) ಬೆಂಗಳೂರು ಜಿಲ್ಲಾ ಸಮಿತಿಯು ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಹಮ್ಮಿಕೊಂಡಿದ್ದ ‘ಬಾಬರಿ ಮಸ್ಜಿದ್ ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ’ ಎಂಬ ಘೋಷಣೆಯೊಂದಿಗೆ ಬಾಬರಿ ಮಸ್ಜಿದ್ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಸಂವಿಧಾನ ಮತ್ತು ಕಾನೂನನ್ನು ಗಾಳಿಗೆ ಬಾಬರಿ ಮಸ್ಜಿದ್ ನನ್ನು 1992ರ ಡಿಸೆಂಬರ್ 6ರಂದು ಧ್ವಂಸ ಮಾಡಲಾಯಿತು. ಬಾಬರಿ ಮಸ್ಜಿದ್ ಧ್ವಂಸವು ಕೇವಲ ಮಸೀದಿಯ ಧ್ವಂಸವಲ್ಲ ಬದಲಾಗಿ ಈ ದೇಶದ ಸಂವಿಧಾನದ ಧ್ವಂಸವಾಗಿದ್ದು, ದೇಶದಲ್ಲಿ ಸಂವಿಧಾನದ ಬದಲಿಗೆ ಮನುಸೃತಿಯನ್ನು ಜಾರಿಗೆ ತರಲು ಸಂಘಪರಿವಾರವು ಮಾಡಿದ ಭಯೋತ್ಪಾದನಾ ಕೃತ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಬಾಬರಿ ಮಸ್ಜಿದ್ ಅನ್ನು ಮರಳಿ ಪಡೆದಾಗಲೇ ಭಾರತವು ತನ್ನನ್ನು ಮರಳಿ ಪಡೆಯುತ್ತದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಗೋಹತ್ಯೆ ಹೆಸರಿನಲ್ಲಿ ನಕಲಿ ಗೋ ರಕ್ಷಕರು ಅಲ್ಪಸಂಖ್ಯಾತರನ್ನು ಹತ್ಯೆಗೈಯ್ಯತ್ತಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ವಿದೇಶಗಳಿಗೆ ಗೋಮಾಂಸವನ್ನು ರಫ್ತು ಮಾಡುತ್ತಿದೆ. ತಾಕತ್ತಿದ್ದರೆ ಗೋಮಾಂಸ ರಫ್ತು ಮಾಡುವುದನ್ನು ನಿಲ್ಲಿಸಲಿ ಎಂದು ಕೇಂದ್ರ ಸರಕಾರಕ್ಕೆ ಅವರು ಸವಾಲು ಎಸೆದಿದ್ದಾರೆ. ದೇಶದಲ್ಲಿ ಮುಸ್ಲಿಮರ ಹಾಗೂ ದಲಿತರ ಮೇಲೆ ನಿರಂತರವಾಗಿ ಹಲ್ಲೆ, ಹತ್ಯೆಗಳನ್ನು ಮಾಡಿ ನಮ್ಮನ್ನು ಕೆದಕುತ್ತಿದ್ದೀರಿ ಎಂದು ಹೇಳಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಮಾತನಾಡಿ, ‘ರಾಮಮಂದಿರ ವಿವಾದ ಸಂಬಂಧ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಲು ಬಾಕಿ ಇರುವಾಗಲೇ ನ್ಯಾಯಾಲಯದ ಎಲ್ಲಾ ತೀರ್ಮಾನಗಳನ್ನು ಉಲ್ಲಂಘಿಸಿ ಕಾನೂನು ಬಾಹಿರ ಮಂದಿರ ನಿರ್ಮಾಣದ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ದೇಶದ ಜನರಲ್ಲಿ ಭಯ ಹುಟ್ಟಿಸಲಾಗುತ್ತಿದೆ. 2010ರಲ್ಲಿ ಅಲಹಾಬಾದ್‍ನ ಲಕ್ನೋ ಪೀಠ, ವಿವಾದಿತ ಜಾಗದ ಮೂರನೇ ಒಂದರಷ್ಟನ್ನು ಬಾಬರಿ ಮಸೀದಿ ನಿರ್ಮಾಣಕ್ಕಾಗಿ ಹಂಚಿಕೆ ಮಾಡಿತ್ತು. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯದ ತೀರ್ಪಿಗಾಗಿ ನಾವು ಕಾಯುತ್ತೇವೆ ಮತ್ತು ನ್ಯಾಯಾಲಯದ ತೀರ್ಪನ್ನು ಸ್ವೀಕರಿಸುತ್ತೇವೆ’ ಎಂದು ಶಾಕಿಬ್ ಹೇಳಿದ್ದಾರೆ.

‘ಬಾಬರಿ ಮಸೀದಿ ಧ್ವಂಸಗೈಯ್ಯಲ್ಪಟ್ಟ ಅದೇ ದಿನ ಅಂದಿನ ಪ್ರಧಾನಮಂತ್ರಿ ನರಸಿಂಹ ರಾವ್ ಅವರು ಮುಸ್ಲಿಂ ಸಮುದಾಯಕ್ಕೆ, ಅದೇ ಜಾಗದಲ್ಲಿ ಮಸೀದಿ ಪುನರ್ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೂ ಕಳೆದ ಎರಡು ದಶಕಗಳಿಂದ ಬಲವಂತದಿಂದ ಬಾಬರಿ ಮಸೀದಿ ಪುನರ್ ನಿರ್ಮಿಸುವಂತೆ ಒತ್ತಾಯಿಸಲು ಮುಸ್ಲಿಂ ನಾಯಕರು, ಜನ ಸಮೂಹವನ್ನು ಬೀದಿಗೆ ಇಳಿಸಿಲ್ಲ. ಏಕೆಂದರೆ ಅವರು ದೇಶದ ಕಾನೂನಿನ ಮೇಲೆ ಭರವಸೆ ಇಟ್ಟಿದ್ದು, ನ್ಯಾಯಾಲಯದ ಅಂತಿಮ ತೀರ್ಪನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕು ಎಂಬ ನಿಲುವು ಹೊಂದಿದ್ದಾರೆ ಮತ್ತು ಅದನ್ನೇ ಹೇಳುತ್ತಾ ಬಂದಿದ್ದಾರೆ’ ಎಂದು ಹೇಳಿದ್ದಾರೆ.

‘ಬಡವರ ಪರವಾಗಿ ಕೆಲಸ ಮಾಡುತ್ತಿರುವ ಜಾತ್ಯತೀತ ಮತ್ತು ಸಮಾಜವಾದಿ ಗುಂಪುಗಳನ್ನು ನಿರ್ನಾಮ ಮಾಡಿ ಕಾರ್ಪೋರೇಟ್ ಗುಂಪುಗಳ ಹಿತಾಸಕ್ತಿಗಳನ್ನು ರಕ್ಷಿಸಲು ದೇಶದಲ್ಲಿ ಫ್ಯಾಸಿಷ್ಟ್ ಅಜೆಂಡಾ ಜಾರಿಗೊಳಿಸಲು ಅಧಿಕಾರ ಉಳಿಸಿಕೊಳ್ಳುವುದೇ ಅವರ ಪ್ರಮುಖ ಗುರಿಯಾಗಿದೆ. ರಾಮಮಂದಿರ ವಿಷಯವನ್ನು ದೇಶಭಕ್ತಿ ಮತ್ತು ರಾಷ್ಟ್ರೀಯವಾದಿ ಎಂದು ವ್ಯಾಖ್ಯಾನಿಸುವ ಮೂಲಕ ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕುವ ಮತ್ತು ಬಡವರು ತಮ್ಮ ಹಕ್ಕುಗಳ ಬಗ್ಗೆ ಧ್ವನಿ ಎತ್ತದಂತೆ ಮಾಡುವ ಪ್ರಯತ್ನ ಇದರಲ್ಲಿ ಅಡಗಿದೆ. ಈಗ ಬಲಪಂಥೀಯ ಗುಂಪು ಆರೆಸ್ಸೆಸ್ ನೇರವಾಗಿ ರಾಮಮಂದಿರ ಚಳವಳಿಗೆ ಕರೆ ನೀಡಿದ್ದು, ಇಂದು ಮುಂದಿನ ದಿನಗಳಲ್ಲಿ ದೇಶದಲ್ಲಿ ಅರಾಜಕತೆ ಮತ್ತು ಅವ್ಯವಸ್ಥೆಗೆ ಕಾರಣವಾಗಲಿದೆ’ ಎಂದು ಮುಹಮ್ಮದ್ ಶಾಕಿಬ್ ಹೇಳಿದ್ದಾರೆ.

ಜಿಲ್ಲಾ ಸಮಿತಿ ಸದಸ್ಯ ರಾಜೇಶ್ ಮಾತನಾಡಿ, ‘ರಾಮಮಂದಿರದ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಮುಂಬರುವ ಲೋಕಸಭಾ ಸಭಾ ಚುನಾವಣೆಗೆ ಭಾವನಾತ್ಮಕವಾಗಿ ಪ್ರಚೋದಿಸುತ್ತಿದೆ. ಆಡಳಿತಾವಧಿಯಲ್ಲಿ ಇವರ ಅಭಿವೃದ್ಧಿ ಶೂನ್ಯ. ಮತ್ತೆ ಅಧಿಕಾರವನ್ನು ಕಳೆದುಕೊಳ್ಳುತ್ತೀವಿ ಎಂಬ ಭೀತಿಯಿಂದ ರಾಮಮಂದಿರ ವಿವಾದವನ್ನು ಎತ್ತಿ ಅದರಿಂದ ಜನರನ್ನು ತನ್ನಡೆಗೆ ಸೆಳೆಯಲು ಪ್ರಯತ್ನಿಸಿ ಮತ್ತೆ ಅಧಿಕಾರವನ್ನು ಹಿಡಿಯುವ ಹಗಲು ಕನಸನ್ನು ಕಾಣುತ್ತಿದ್ದಾರೆ’ ಎಂದು ಹೇಳಿದ್ದಾರೆ. ‘ಕಳ್ಳ ಸೇವಕರು ಧ್ವಂಸಗೈದಿರುವ ಬಾಬರಿ ಮಸ್ಜಿದ್ ನ್ನು ಅದೇ ಜಾಗದಲ್ಲಿ ಪುನರ್ ಸ್ಥಾಪಿಸಿ ಭಾರತವನ್ನು ಕಟ್ಟೋಣ’ ಎಂದು ಅವರು ಈ ಸಂದರ್ಭ ಕರೆ ನೀಡಿದ್ದಾರೆ.

ಎಸ್‍ಡಿಪಿಐ ಬೆಂಗಳೂರು ಜಿಲ್ಲಾಧ್ಯಕ್ಷ ಮುಹಮ್ಮದ್ ಶರೀಫ್ ಮಾತನಾಡುತ್ತಾ, ದೇಶವು ಅಪಾಯದಲ್ಲಿದೆ. ಪ್ರಶ್ನಿಸುವವರನ್ನು, ವಿಮರ್ಶಿಸುವವರನ್ನು ಹತ್ಯೆಗೈಯ್ಯಲಾಗುತ್ತಿದೆ. ಬಾಬರಿ ಮಸ್ಜಿದ್ ಧ್ವಂಸದ ಲಿಬರ್ಹಾನ್ ಆಯೋಗ ತಿಳಿಸಿದ 68 ಆರೋಪಿಗಳಿಗೆ ಇದುವರೆಗೂ ಶಿಕ್ಷೆಯಾಗದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಶೀಘ್ರದಲ್ಲೇ ಆರೋಪಿಗಳಿಗೆ ಶಿಕ್ಷೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಮುಜಾಹಿದ್ ಪಾಶಾ, ರಾಜ್ಯ ಸಮಿತಿ ಸದಸ್ಯ ಫಯಾಝ್ ಅಹ್ಮದ್ ಹಾಗೂ ಇನ್ನಿತರ ನಾಯಕರು ಈ ಸಂದರ್ಭ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಮೆಹಬೂಬ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group