ರಾಷ್ಟ್ರೀಯ ಸುದ್ದಿ

ಅಲ್ಲಿ ಮಂದಿರವಿದ್ದ ಬಗ್ಗೆ ಯಾವುದೇ ಪುರಾವೆ ಇರಲಿಲ್ಲ, ಪುರಾತತ್ವ ಇಲಾಖೆ ಭಾರತೀಯರಿಗೆ ಸುಳ್ಳು ಹೇಳಿದೆ : ಪುರಾತತ್ವ ತಜ್ಞರು

ವರದಿಗಾರ (ಡಿ 06) :  ಆಗಸ್ಟ್ 2003 ರಲ್ಲಿ ಸತತ ಆರು ತಿಂಗಳುಗಳ ಕಾಲ ಉತ್ಖನನ ನಡೆಸಿದ ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆಯು (ಎ ಎಸ್ ಐ)  ಅಲಹಾಬಾದ್ ಹೈಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ 1992 ಡಿಸಂಬರ್ 6 ರಂದು ಕರಸೇವಕರಿಂದ ಹೊಡೆದುರುಳಿಸಲ್ಪಟ್ಟ ಬಾಬರಿ ಮಸೀದಿಯ ಕೆಳಗೆ ಮಂದಿರವಿತ್ತೆಂದು ತಿಳಿಸಿತ್ತು. ಆದರೆ ಜವಾಹರ್ ಲಾಲ್ ನೆಹರೂ ವಿವಿಯ ಪುರಾತತ್ವ ಶಾಸ್ತ್ರದ ಪ್ರೊಫೆಸರ್ ಆಗಿರುವಂತಹಾ ಸುಪ್ರಿಯಾ ವರ್ಮಾ ಹಾಗೂ ಶಿವ ನಾಡಾರ್ ವಿವಿಯ ಇತಿಹಾಸ ವಿಭಾಗದ ಮುಖ್ಯಸ್ಥರಾಗಿರುವಂತಹಾ ಜಯಾ ಮೆನನ್ ಎಂಬ ಇಬ್ಬರು ಪುರಾತತ್ವ ಶಾಸ್ತ್ರದ ತಜ್ಞರು, ‘ಪುರಾತತ್ವ ಇಲಾಖೆಯ ಉತ್ಖನನವು ಯಾವೊಂದು ಪುರಾವೆಯನ್ನೂ ಅಲ್ಲಿ ಗಳಿಸಲು ವಿಫಲವಾಗಿದೆ ಎಂದು ಕೋರ್ಟಿಗೆ ತಿಳಿಸಿದ್ದಾರೆ. ಮಾತ್ರವಲ್ಲ ಪುರಾತತ್ವ ಸಮೀಕ್ಷಾ ಇಲಾಖೆಯು ನೀಡಿರುವ ವರದಿಗಳು ಪೂರ್ವಭಾವಿ ಕಲ್ಪನೆಗಳಿಂದ ಕೂಡಿತ್ತು ಎಂದು ಆರೋಪಿಸಿದ್ದಾರೆ.  2010 ರಲ್ಲಿ ಈ ಇಬ್ಬರು ತಜ್ಞರು “ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ” ಪತ್ರಿಕೆಯಲ್ಲಿ, ಪುರಾತತ್ವ ಇಲಾಖೆಯು ಉತ್ಖನ ನಡೆಸಲು ಹಾಗೂ ಪುರಾವೆಗಳನ್ನು ಸಂಗ್ರಹಿಸಲು ಉಪಯೋಗಿಸಿದ ಮಾನದಂಡಗಳನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದ್ದರು.

ಈ ಇಬ್ಬರು ತಜ್ಞರು ಉತ್ಖನನ ಸಮಯದಲ್ಲಿ ಬಾಬರಿ ಮಸೀದಿ ವಿವಾದದ ಕಕ್ಷಿದಾರರಾಗಿರುವ ಸುನ್ನೀ ವಕ್ಫ್ ಬೋರ್ಡಿನ ಪರವಾಗಿನ ವೀಕ್ಷಕರಾಗಿದ್ದರು. ಇವರ ಪ್ರಕಾರ ಪುರಾತತ್ವ ಇಲಾಖೆ ಹಾಗೂ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ, ಬಲಪಂಥೀಯ ಸಂಘಪರಿವಾರದವರ ಹೇಳಿಕೆಯಾಗಿರುವ ‘ಬಾಬರನ ಜನರಲ್ ಆಗಿದ್ದ ಮೀರ್ ಬಾಖಿಯು ಅಲ್ಲಿದ್ದ ಮಂದಿರವನ್ನು ಒಡೆದು ಮಸೀದಿಯನ್ನು ನಿರ್ಮಿಸಿದ್ದ ಎಂಬ ವಾದವನ್ನು ಬಲಪಡಿಸಬೇಕಾದಂತಹಾ ಒತ್ತಡದಲ್ಲಿದ್ದರು ಎನ್ನಲಾಗಿದೆ.

ಯಾಕಾಗಿ ಬಿ ಆರ್ ಮಣಿ ನೇತೃತ್ವದ ಪುರಾತತ್ವ ಇಲಾಖೆಯು ತನ್ನ ಬಳಿ ಇದ್ದ ಸತ್ಯಗಳನ್ನು ಮರೆಮಾಚಿ, ಕಟ್ಟುಕಥೆಗಳನ್ನು ಸೃಷ್ಟಿಸುವ ಬಲವಂತಕ್ಕೆ  ಒಳಗಾಯಿತು ಮತ್ತು ಉತ್ಖನನದ ವೇಳೆ ಪುರಾತತ್ವ ಇಲಾಖೆಯ ಕಾರ್ಯವಿಧಾನಗಳ ಲೋಪದೋಷಗಳಿಗೆ ತನ್ನ ಬಳಿ ಇರುವ ಮೂರಂಶಗಳ ಪುರಾವೆಗಳನ್ನು ಸುಪ್ರಿಯಾ ವರ್ಮಾರವರು ಬಾಬರಿ ಮಸೀದಿ ಧ್ವಂಸದ 26ನೇ ವರ್ಷಾಚರಣೆಯ ಸಂದರ್ಭದಲ್ಲಿ ”ಹಫ್ಫಿಂಗ್ ಪೋಸ್ಟ್’ ಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೊನೆಯಲ್ಲಿ ಬಿ ಆರ್ ಮಣಿಯವರನ್ನು ಅಲಹಾಬಾದ್ ಹೈಕೋರ್ಟ್ ಅಲ್ಲಿಂದ ಬದಲಿಸಿತ್ತು. ಆದರೆ 2016 ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಿ ಆರ್ ಮಣಿಯವರನ್ನು ರಾಷ್ಟ್ರೀಯ ವಸ್ತು ಸಂಗ್ರಹಾಲಯದ ಮಹಾ ನಿರ್ದೇಶಕರನ್ನಾಗಿ ನೇಮಿಸಿತ್ತು.

 ಮಂದಿರ ಉರುಳಿಸಿ ಮಸೀದಿ ನಿರ್ಮಿಸಿರುವುದಕ್ಕೆ ಏನಾದರೂ ಪುರಾತತ್ವ ಸಾಕ್ಷಿ ಲಭಿಸಿದೆಯೇ?

ಖಂಡಿತಾ ಇಲ್ಲ, ಇಂದಿಗೂ ಪುರಾತತ್ವ ಇಲಾಖೆಯ ಬಳಿ ಅಂತಹಾ ಪುರಾವೆ ಇಲ್ಲ.

ಯಾಕಾಗಿ ಪುರಾತತ್ವ ಇಲಾಖೆ ಅಲ್ಲಿ ಮಂದಿರವಿತ್ತೆಂದು ಹೇಳುತ್ತಿದೆ?

ಪುರಾತತ್ವ ಇಲಾಖೆ ನೀಡಿರುವ ಮೂರು ಕಾರಣಗಳನ್ನು ಅಲ್ಲಿ ಮಂದಿರವಿತ್ತೆನ್ನುವುದಕ್ಕೆ ಪುರಾವೆಯಾಗಲು ಸಾಧ್ಯವಿಲ್ಲ. ಮೊದಲನೆಯದಾಗಿ ಪಶ್ಚಿಮ ಗೋಡೆ, ಎರಡನೆಯದ್ದು 50 ಸ್ತಂಭಗಳ ಅಡಿಪಾಯ ಹಾಗೂ ಮೂರನೆಯದಾಗಿ ಅಲ್ಲಿದ್ದ ವಾಸ್ತುಶಿಲ್ಪದ ತುಣುಕುಗಳು. ಪಶ್ಚಿಮದ ಗೋಡೆಯು ಅದೊಂದು ಮಸೀದಿಯ ವೈಶಿಷ್ಟ್ಯವನ್ನು ಹೊಂದಿದೆ ಮತ್ತು ಅದು ನಮಾಝ್ ಮಾಡುವ ಸ್ಥಳದ ಮುಂದಿನ ಗೋಡೆಯಾಗಿದೆ. ಅದೊಂದು ಮಂದಿರದ ಗುಣಲಕ್ಷಣಗಳನ್ನು ಹೊಂದಿಲ್ಲ. ವಾಸ್ತವದಲ್ಲಿ ಉತ್ಖನನದ ವೇಳೆ ಬಾಬರಿ ಮಸೀದಿಯ ಅಡಿಯಲ್ಲಿ ಹಳೆಯ ಕಾಲದ ಮಸೀದಿಯ ಅವಶೇಷಗಳು ಪತ್ತೆಯಾಗಿದ್ದವು.

ಇನ್ನು 50 ಸ್ತಂಭಗಳ ಅಡಿಪಾಯದ ಕುರಿತು ಹೇಳುವುದಾದರೆ ಅದೊಂದು ಕಟ್ಟು ಕಥೆಯಾಗಿದೆ. ನಾವು ಈ ಕುರಿತು ಕೋರ್ಟಿಗೆ ಹಲವಾರು ದೂರುಗಳನ್ನು ದಾಖಲಿಸಿದ್ದೇವೆ. ನಮ್ಮ ವಾದವು, ಅವುಗಳು ಮುರಿದ ಇಟ್ಟಿಗೆಗಳ ತುಂಡುಗಳಾಗಿತ್ತು ಮತ್ತು ಅದರೊಳಗೆ ಮಣ್ಣು ತುಂಬಿ ಹೋಗಿತ್ತು. ಬೃಹತ್ ಗಾತ್ರದ ಸ್ತಂಭಗಳು  ಈ ಮುರಿದ , ಹೂಳು ತುಂಬಿದ ಇಟ್ಟಿಗೆಗಳ ಮೇಲೆ ನಿಲ್ಲುವುದು ಅಸಾಧ್ಯವಾಗಿದೆ ಎಂದಾಗಿತ್ತು. ಆದರೆ ಇದೊಂದು ರಾಜಕೀಯ ವಿಷಯವಾಗಿತ್ತು. ಹಾಗಾಗಿ ಇದು ಅವರಿಗೆ ಅದು ಸ್ತಂಭಗಳ ಅಡಿಪಾಯ ಎಂಬ ವರದಿ ಸಲ್ಲಿಸಬೇಕಾಗಿತ್ತು, ಹಾಗೆಯೇ ಮಾಡಿದರು ಎಂದು ವರ್ಮಾ ಹೇಳುತ್ತಾರೆ

ಇನ್ನು ವಾಸ್ತುಶಿಲ್ಪಗಳ ತುಣುಕುಗಳು, ಅವರ ಪ್ರಕಾರ ಅವರಿಗೆ ಇಂತಹಾ 400-500 ತುಣುಕುಗಳು ಲಭ್ಯವಾಗಿದೆ ಎಂದು. ಅವುಗಳಲ್ಲಿ 12 ತುಣುಕುಗಳು ಬಹುಮುಖ್ಯವಾದದ್ದು ಎಂದು. ಆದರೆ ಸತ್ಯವೇನೆಂದರೆ ಈ 12 ತುಣುಕುಗಳು ಉತ್ಖನನದ ವೇಳೆ ದೊರೆತಿದ್ದಲ್ಲ. ಬದಲಾಗಿ ಅದನ್ನು ಧ್ವಂಸಗೊಂಡಿರುವ ಮಸೀದಿ ಅವಶೇಶಗಳಿರುವ ಮೇಲಿನ ಅಂತಸ್ತಿನಿಂದ ತೆಗೆದದ್ದಾಗಿದೆ. ಅದರಲ್ಲೊಂದು ಕೆತ್ತನೆಯಲ್ಲಿ ಚಿತ್ರವೊಂದಿದ್ದು, ಅದನ್ನವರು ‘ದೈವಿಕ ಜೋಡಿ’ ಎಂದು ಕರೆದಿದ್ದರು. ಆದರೆ ಅದೊಂದು ಹೆಣ್ಣು ಮತ್ತು ಗಂಡಿನ ಅರ್ಧ ಭಗ್ನಗೊಂಡ ಚಿತ್ರವಾಗಿದೆ. ಆದರೆ ಇವು ಯಾವುದೂ  ಶಿಲೆಗಳಿಂದ  ನಿರ್ಮಿತವಾಗಿದ್ದೆಂದು ನಂಬುವ ದೇವಸ್ಥಾನವೊಂದರಿಂದ ಸಿಗಬೇಕಾಗಿರುವ ಅವಶೇಶಷಗಳು ಅಲ್ಲ.

ಈ ಕೆತ್ತನೆಗಳು ಭೂಮಿಯಡಿಯಲ್ಲಿನ ಮಣ್ಣಿನ ಪದರುಗಳಿಂದ ಸಿಕ್ಕಿರುವಂತಹಗಳು ಅಲ್ಲ. ಹಾಗಾಗಿ ಅವುಗಳ ಪ್ರಾಚೀನತೆಯ ಕಾಲಾವಧಿ ತಿಳಿಸಲಾಗುವುದಿಲ್ಲ. ಆದರೆ ಪುರಾತತ್ವ ಇಲಾಖೆ ಅದಕ್ಕೂ ಕಾಲಾವಧಿ ಕೊಟ್ಟಿದೆ ಅನ್ನುವುದೇ ಆಶ್ಚರ್ಯ. ಅದು ಬಾಹ್ಯವಾಗಿ ಎಲ್ಲಿಂದಲೂ ಬಂದಿರಬಹುದು. ಹಾಗಾಗಿ ಇದಕ್ಕೆ ಅದರ ಕಾಲವಧಿ ನೀಡುವುದು ಸಾಧ್ಯವಿಲ್ಲ. ಮತ್ತೆ ಭೂಮಿಯಡಿಯಲ್ಲಿ ಸಿಕ್ಕಿರುವ ಸ್ತಂಭಗಳ ಅಡಿಪಾಯಗಳು 12ರಿಂದ 15 ನೆಯ ಶತಮಾನಗಳ ನಡುವಿನ ಕಾಲವಧಿಯದ್ದೆಂದು ಮಾತ್ರ ಹೇಳಬಲ್ಲೆ ಎಂದು ವರ್ಮಾ ಹೇಳುತ್ತಾರೆ.

ಪುರಾತತ್ವ ಇಲಾಖೆ ತನ್ನ ವರದಿಯಲ್ಲಿ ಎಲ್ಲೂ ಅಲ್ಲೊಂದು ಮಂದಿರವಿತ್ತೆಂಬ ಹೇಳಿಕೆಯನ್ನು ಪುರಾವೆಯೊಂದಿಗೆ ನೀಡಿಲ್ಲ. ತನ್ನ ವರದಿ ಕೊನೆಗೊಳಿಸುವಾಗ ಮಾತ್ರ ಮಸೀದಿಯಡಿಯಲ್ಲಿ ಮಂದಿರವಿತ್ತು ಎಂದು ಮೂರು ಲೈನನುಗಳಲ್ಲಿ ಬರೆದು ಹಾಕಿದೆ ಅಷ್ಟೆ. ಅದು ಮಾತ್ರವಲ್ಲ ಲಭ್ಯವಿರುವ ಅವಶೇಷಗಳ ಮೂಲ ಕಾಲಾವಧಿಗಳನ್ನು ತಿಳಿಸಿಲ್ಲ, ಇದು ಅವರ ಕಾರ್ಯನಿರ್ವಹಣೆಯ ಲೋಪಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

ಈ ಬರಹ ‘ಹಫಿಂಗ್ ಪೋಸ್ಟ್’ ನಲ್ಲಿ ಮೊದಲು ಪ್ರಕಟಗೊಂಡಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group