ರಾಜ್ಯ ಸುದ್ದಿ

ಗೌರಿ ಲಂಕೇಶ್ ಹತ್ಯೆಗೆ ಸನಾತನ ಸಂಸ್ಥಾ ಸದಸ್ಯರಿಂದ 5 ವರ್ಷಗಳಿಂದ ಸಂಚು: ಸಿಟ್ ಹೇಳಿಕೆ

ವರದಿಗಾರ (ನ.25): ಸನಾತನ ಸಂಸ್ಥಾದೊಂದಿಗೆ ನಂಟು ಹೊಂದಿದ್ದ ವ್ಯಕ್ತಿಗಳು ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಮಾಡಿದ್ದಾರೆ ಎಂದು ಕರ್ನಾಟಕ ಪೊಲೀಸ್‌ನ ವಿಶೇಷ ತನಿಖಾ ತಂಡ(ಸಿಟ್)ವು ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ತಿಳಿಸಿದೆ. ಬರೋಬ್ಬರಿ 9,325 ಪುಟಗಳ ಆರೋಪ ಪಟ್ಟಿಯಲ್ಲಿ 18 ಆರೋಪಿಗಳನ್ನು ಹೆಸರಿಸಲಾಗಿದೆ.

ಈ ಸಂಘಟಿತ ಅಪರಾಧವನ್ನು ನಡೆಸುವ ಮುನ್ನ ಐದು ವರ್ಷಗಳ ಕಾಲ ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ಕರಾರುವಾಕ್ಕಾದ ಸಂಚನ್ನು ರೂಪಿಸಲಾಗಿತ್ತು ಎಂದು ಹೇಳಿರುವ ಆರೋಪ ಪಟ್ಟಿಯು ಅಮೋಲ್ ಕಾಳೆ,ಸುಜಿತ್ ಕುಮಾರ್ ಮತ್ತು ಅಮಿತ್ ದೆಗ್ವೆಕರ್ ಅವರನ್ನು ಪರಶುರಾಮ ವಾಗ್ಮೋರೆ(26) ನಡೆಸಿದ್ದ ಹತ್ಯೆಯ ಪ್ರಧಾನ ರೂವಾರಿಗಳನ್ನಾಗಿ ಹೆಸರಿಸಿದೆ. ವಾಗ್ಮೋರೆಯ ಚಹರೆಯು ಗೌರಿ ನಿವಾಸದಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ,ಪಿಸ್ತೂಲಿನಿಂದ ಗುಂಡು ಹಾರಿಸಿದ್ದ ವ್ಯಕ್ತಿಯ ಚೆಹರೆಯೊಂದಿಗೆ ತಾಳೆಯಾಗಿದೆ ಎಂದು ಅದು ತಿಳಿಸಿದೆ. ಗೌರಿ ಲಂಕೇಶ್ ಮತ್ತು ಹಂತಕನ ನಡುವೆ ಯಾವುದೇ ವೈಯಕ್ತಿಕ ಅಥವಾ ಇತರ ಯಾವುದೇ ದ್ವೇಷವಿರಲಿಲ್ಲ. ಅವರನ್ನೇಕೆ ಹತ್ಯೆ ಮಾಡಲಾಯಿತು?, ಅವರು ನಿರ್ದಿಷ್ಟ ಸಿದ್ಧಾಂತವನ್ನು ನಂಬಿದ್ದರು, ಅದರ ಬಗ್ಗೆ ಬರೆದಿದ್ದರು ಮತ್ತು ಅದರ ಕುರಿತು ಮಾತನಾಡಿದ್ದರು. ಇದು ಹತ್ಯೆಗೆ ಕಾರಣ. ಹೀಗಾಗಿ ಇಲ್ಲಿ ಸಿದ್ಧಾಂತ ಮತ್ತು ಸಂಸ್ಥೆ ತಳುಕು ಹಾಕಿಕೊಂಡಿವೆ ಎಂದು ಶನಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿಶೇಷ ಸರಕಾರಿ ಅಭಿಯೋಜಕ ಎಸ್.ಬಾಲನ್ ಅವರು ತಿಳಿಸಿದರು.

ಶುಕ್ರವಾರ ಸಲ್ಲಿಸಲಾಗಿರುವ ಆರೋಪ ಪಟ್ಟಿ ಪ್ರಕರಣದಲ್ಲಿ ಎರಡನೆಯದ್ದಾಗಿದೆ. ಫೆ.18ರಂದು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪದಲ್ಲಿ ಬಂಧಿಸಲಾಗಿದ್ದ ಕೆ.ಟಿ.ನವೀನ್ ಕುಮಾರ್‌ ವಿರುದ್ಧ ಮೇ ತಿಂಗಳಲ್ಲಿ ಪ್ರಕರಣದಲ್ಲಿ ಪ್ರಾಥಮಿಕ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಸಂಘ ಪರಿವಾರ ಸಂಘಟನೆಯ ಸದಸ್ಯನಾಗಿದ್ದ ಕುಮಾರ್ 2014ರಲ್ಲಿ ಹಿಂದು ಯುವಸೇನೆಯನ್ನು ಸ್ಥಾಪಿಸಿದ್ದ. ತಾನು ಕೇಸರಿ ಸಂಘಟನೆಯೊಂದರ ಕಾರ್ಯಕರ್ತ ನೋರ್ವನಿಗೆ ಗುಂಡುಗಳನ್ನು ಪೂರೈಸಿದ್ದೆ ಮತ್ತು ‘ಇವು ಹಿಂದು ವಿರೋಧಿಯಾಗಿರುವ ಗೌರಿ ಲಂಕೇಶ್‌ಗಾಗಿ’ ಎಂದು ಆತ ತನಗೆ ಹೇಳಿದ್ದ ಎಂದು ಕುಮಾರ್ ಪೊಲೀಸರಿಗೆ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group