ದಮ್ಮಾಮ್: ಸೌದಿ ಅರೇಬಿಯಾದ ಜುಬೈಲ್ ಸಮೀಪದ ನಾರಿಯಾ ಎಂಬ ಪ್ರದೇಶದಲ್ಲಿ ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಸರಿಯಾದ ಆಹಾರ ವಸತಿ ಇಲ್ಲದೆ ಮರುಭೂಮಿಯಲ್ಲಿ ಸಂಕಷ್ಟದಲ್ಲಿದ್ದ ಕಲ್ಲಡ್ಕ ನಿವಾಸಿ ಶರೀಫ್ ಎಂಬವರನ್ನು ರಕ್ಷಿಸಿ ಮರಳಿ ತವರಿಗೆ ಕಳುಹಿಸಿ ಕೊಡಲು ಇಂಡಿಯನ್ ಸೋಶಿಯಲ್ ಫೋರಂ ಪೂರ್ವ ಪ್ರಾಂತ್ಯ ಸಫಲವಾಗಿದೆ.
ಕೆಲಸಕ್ಕಾಗಿ ಬಂದು ಕೊನೆಗೆ ಉದ್ಯೋಗದಾತನಿಂದ ಅನ್ಯಾಯಕ್ಕೆ ಒಳಗಾಗಿ ಮರುಭೂಮಿಯಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿ ಇರುವ ಮಾಹಿತಿಯನ್ನರಿತ ಇಂಡಿಯನ್ ಸೋಶಿಯಲ್ ಫೋರಂ ನ ಮುಕ್ತಾರ್ ತುಂಬೆ, ಮನ್ಸೂರ್ ಫರಂಗಿ ಪೇಟೆ, ಕೈಝರ್, ರಫೀಕ್ ವಿಟ್ಲ, ಫಿರೊಝ್ ಕಲ್ಲಡ್ಕ, ರಫೀಕ್ ಕಲ್ಲಡ್ಕ , ಇಕ್ಬಾಲ್ ಇಡ್ಯ ಮತ್ತು ನೌಶಾದ್ ಕಾಟಿಪಲ್ಲರೊಳಗೊಂಡ ತಂಡ ಹೆಚ್ಚಿನ ಮಾಹಿತಿ ಪಡೆದು ಮರುಭೂಮಿಯಲ್ಲಿದ್ದ ಶರೀಫ್ ರನ್ನು ಪತ್ತೆ ಹಚ್ಚಲು ಸಫಲರಾದರು.
ಬಳಿಕ ಭಾರತೀಯ ರಾಯಭಾರಿ ಕಚೇರಿಯ ಸಂಪರ್ಕದೊಂದಿಗೆ ಶರೀಫ್ ರನ್ನು ಊರಿಗೆ ಕಳುಹಿಸುವ ಎಲ್ಲಾ ವ್ಯವಸ್ಥೆಗಳನ್ನು ಇಂಡಿಯನ್ ಸೋಶಿಯಲ್ ಫೋರಂ ನಡೆಸಿದ್ದು, ಉದ್ಯೋಗದಾತನು ಸಹಕರಿಸದಿದ್ದಾಗ ಕಾನೂನಾತ್ಮಕ ಹೋರಾಟ ನಡೆಸಿ ಮರುಭೂಮಿಯಿಂದ ರಕ್ಷಿಸಿ ನಂತರ ಎಲ್ಲಾ ದಾಖಲೆ ಪತ್ರಗಳನ್ನು ಸಿದ್ಧಪಡಿಸಿ ಭಾನುವಾರ ( 19/11/2018) ಶರೀಫ್ ರನ್ನು ತವರೂರಿಗೆ ಕಳುಹಿಸಿಕೊಡಲಾಯಿತು. ಬೀಳ್ಕೊಡುಗೆ ಸಂದರ್ಭದಲ್ಲಿ ಭಾವೋದ್ವೇಗಗೊಂಡ ಶರೀಫ್ ಎಲ್ಲಾ ಇಂಡಿಯನ್ ಸೋಶಿಯಲ್ ಫೋರಂ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.
