ಜಿಲ್ಲಾ ಸುದ್ದಿ

ಒಂದೂವರೆ ಕೋಟಿಯ ಸೇತುವೆಗೆ ಸಮರ್ಪಕ ರಸ್ತೆಯೇ ಇಲ್ಲ : ಜೋಕಟ್ಟೆ ಎಸ್ಡಿಪಿಐ ವತಿಯಿಂದ ಪ್ರತಿಭಟನೆ

ವರದಿಗಾರ (ನ 16) : ಲೋಕೋಪಯೋಗಿ ಇಲಾಖೆಯ ವತಿಯಿಂದ ಒಂದು ಕೋಟಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ಸೇತುವೆಯೊಂದಕ್ಕೆ ಸಮರ್ಪಕ ರಸ್ತೆಯೇ ಇಲ್ಲವೆಂದರೆ ಯಾರಿಗಾದರೂ ನಂಬಲು ಕಷ್ಟಸಾಧ್ಯವಾಗಬಹುದು.  ಆದರೆ ಇದೊಂದು ವಿಲಕ್ಷಣ ಸತ್ಯ ಕೂಡಾ ಹೌದು. ಅದೂ ಕೂಡಾ ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯಾಚರಿಸಲ್ಪಡುವ ಎಂ ಆರ್ ಪಿ ಎಲ್ , ಮಂಗಳೂರು ಸೆಝ್ ಹಾಗೂ ಬೈಕಂಪಾಡಿ ಕೈಗಾರಿಕಾ ಪ್ರದೇಶಗಳಿಗೆ ಕೂಡಾ ಸಂಪರ್ಕ ಕಲ್ಪಿಸುವ ರಸ್ತೆ ಎಂದರೆ ಅದರ ಗಂಭೀರತೆ ಇನ್ನಷ್ಟು ಹೆಚ್ಚಾಗುತ್ತದೆ. ಇಂತಹಾ ಒಂದು ಲೋಪಯುಕ್ತ ಕಾಮಗಾರಿ ನಡೆದಿರುವುದು ಜೋಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಾಡಿಲ ರಸ್ತೆಯಲ್ಲಾಗಿದೆ. ಲೋಕೋಪಯೋಗಿ ಇಲಾಖೆಯ ಈ ವಿಳಂಬದ ನೀತಿಯ ವಿರುದ್ಧ ಎಸ್ ಡಿ ಪಿ ಐ ಜೋಕಟ್ಟೆ ಗ್ರಾಮ ಸಮಿತಿಯು ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ಬೃಹತ್ ಮೊತ್ತದ ಸೇತುವೆ ಕಾಮಗಾರಿಯೇ ಆಮೆಗತಿಯಲ್ಲಿ ನಡೆದಿತ್ತು ಎನ್ನುವುದು ನಾಗರಿಕರ ವಾದವಾಗಿದೆ. ಅದರ ನಂತರ ಸೇತುವೆ ಪೂರ್ಣಗೊಂಡಿತ್ತಾದರೂ ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ನಡೆಸದೆ ಹಾಗೆಯೇ ಬಿಟ್ಟಿತ್ತು. ತದನಂತರ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಥಳೀಯ ವ್ಯಕ್ತಿಯೋರ್ವನಿಗೆ ಸೇತುವೆಯ ಎರಡೂ ಕೂಡು ರಸ್ತೆಗಳಿಗೆ ಮಣ್ಣು ತುಂಬಿಸುವ ಕಾಮಗಾರಿಯ ಉಸ್ತುವಾರಿ ನೀಡಲಾಗಿತ್ತು. ಆದರೆ ಈ ಕಾಮಗಾರಿ ಕಳೆದ ಮಳೆಗಾಲದಲ್ಲಿ ಇನ್ನಷ್ಟು ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗಿತ್ತು. ಹಲವಾರು ಸಣ್ಣ ವಾಹನಗಳು ಮಗುಚಿ ಬೀಳುವುದು ಸಾಮಾನ್ಯವಾಗಿತ್ತು. ಬಸ್ ಗಳು ಕೆಸರಲ್ಲಿ ಹೂತು ಹೋಗಿ ಕೈಗಾರಿಕಾ ಪ್ರದೇಶಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕ ಪ್ರಯಾಣಿಕರಿಗೆ ಇದು ನರಕದರ್ಶನವನ್ನು ನೀಡುತ್ತಿತ್ತು ಎನ್ನಲಾಗಿದೆ.

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಕೋರಿ ಎಸ್ ಡಿ ಪಿ ಐ ಗ್ರಾಮ ಸಮಿತಿಯು ಅಕ್ಟೋಬರ್ 15 ರಂದು ಪಂಚಾಯತ್ ಮೂಲಕ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿ, ಆದಷ್ಟು ಶೀಘ್ರ ಸಮರ್ಪಕ ರಸ್ತೆಯ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ ತಿಂಗಳು ಕಳೆದರೂ ಇಲಾಖೆ ಈ ಕುರಿತು ಗಮನಹರಿಸದೇ ಇದ್ದಾಗ ಎಸ್ ಡಿ ಪಿ ಐ ಇದರ ವಿರುದ್ಧ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಂದಿತ್ತು ಎನ್ನಲಾಗಿದೆ. ಅದರಂತೆ ಇಂದು ಎಸ್ಡಿಪಿಐ ಪಕ್ಷ, ಲೋಕೋಪಯೋಗಿ ಇಲಾಖೆಯ ವಿರುದ್ಧ ಜೋಕಟ್ಟೆ – ಮಾಡಿಲ ಸೇತುವೆ ಬಳಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಪ್ರತಿಭಟನೆಯಲ್ಲಿ ಊರಿನ ಹಲವಾರು ನಾಗರಿಕರು ಭಾಗವಹಿಸಿದ್ದು, ಇಲಾಖೆಯ ವಿಳಂಬ ನೀತಿಯ ವಿರುದ್ಧ ಕಿಡಿ ಕಾರಿದರು.

ಸೇತುವೆಯ ನೋಟ

ಮಳೆಗಾಲದಲ್ಲಿ ವಾಹನಗಳು ಪಡುತ್ತಿದ್ದ ಪಾಡು

ಪ್ರತಿಭಟನಾ ಸ್ಥಳಕ್ಕೆ ಲೋಕೋಪಯೋಗಿ ಅಧಿಕಾರಿ ಭೇಟಿ :

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಇಂಜಿನಿಯರ್ ರವರಿಗೆ ಗ್ರಾಮಸ್ಥರ ಪರವಾಗಿ ಎಸ್ಡಿಪಿಐ ಗ್ರಾಮ ಸಮಿತಿಯ ವತಿಯಿಂದ ಮನವಿ ಸಲ್ಲಿಸಲಾಯಿತು.  ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ 45 ದಿನಗಳ ಒಳಗೆ ಈ ಸಂಪರ್ಕ ರಸ್ತೆಗೆ ಡಾಮರೀಕರಣ ನಡೆಸಿ ಸಾರ್ವಜನಿಕರಿಗೆ ಸಂಚಾರ ಮುಕ್ತಗೊಳಿಸುವ ಖಚಿತ ಭರವಸೆಯನ್ನು ನೀಡಿದರು.

ಪ್ರತಿಭಟನೆಯಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ, ಜೋಕಟ್ಟೆ ಗ್ರಾಮ ಸಮಿತಿಯ ಅಧ್ಯಕ್ಷರಾಗಿರುವ ಶಿಹಾಬ್ ಜೋಕಟ್ಟೆ, ಸ್ಥಳೀಯ ಜೆಡಿಎಸ್ ನಾಯಕರಾದ ಬಿ ಮುಹಮ್ಮದ್ ಗುತ್ತು, ಹಿರಿಯರಾದಂತಹಾ ಹಾಜಿ ಅಬ್ದುಲ್ ಖಾದರ್, ಅಬ್ದುಲ್ ರಶೀದ್ ನಾರ್ವೆ, ಚಾಯಬ್ಬ, ಶೇಕಬ್ಬ,  ಅಂಜುಮಾನ್ ಖುವ್ವತುಲ್ ಇಸ್ಲಾಂ ಸಂಸ್ಥೆಯ  ಪ್ರಧಾನ ಕಾರ್ಯದರ್ಶಿ ಮುಹಮದ್ ರಫೀಕ್, ಸ್ಥಳೀಯ ಮುಸ್ಲಿಮ್ ಲೀಗ್ ಮುಖಂಡರಾದ ಹಾಜಿ ಎಂ ಎಸ್ ಶರೀಫ್, ಮುಸ್ತಫಾ ನಲ್ಕೆಮಾರ್, ಖಾದರ್ ಬೊಟ್ಟು, ಬಿ ಎಂ ಸಯ್ಯದ್, ಹಮೀದ್ ಈದ್ಗಾ, ಖಾದರ್ ಆಲಿಯಾಜಿ, ಮುಹಮ್ಮದ್ ಹೆಚ್ ಪಿ ಸಿ ಎಲ್, ಗ್ರಾಮ ಪಂಚಾಯತ್ ಸದಸ್ಯರಾದ ಪರ್ವೀಝ್  ಅಲಿ ಹಾಗೂ ಎ ಕೆ ಅಶ್ರಫ್ ಜೋಕಟ್ಟೆ, ಅಬ್ದುಲ್ ಖಾದರ್ ಗುಡ್ಡೆ, ಅಶ್ರಫ್ ಸಲ್ವಾ, ಸಲೀಮ್ ಬಿ ಎಂ  ಹಾಜರಿದ್ದರು. ಇದೇ ವೇಳೆ ಈ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದ ಜೋಕಟ್ಟೆಯ ಟೆಂಪೋ ಮಾಲಕ-ಚಾಲಕರು, ಜೋಕಟ್ಟೆ ಹಾಗೂ ಪೊರ್ಕೋಡಿಯ ರಿಕ್ಷಾ ಚಾಲಕರು, ಜೋಕಟ್ಟೆ ವ್ಯಾಪ್ತಿಯಲ್ಲಿ ಸಂಚರಿಸುವ ಬಸ್ ಚಾಲಕ – ಮಾಲಕರು ಕೂಡಾ ಹಾಜರಿದ್ದು ಸಹಕರಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group