ನಿಮ್ಮ ಬರಹ

ಟಿಪ್ಪು ವಿರೋಧಿಗಳಿಗೆ ಕೃತಜ್ಞತೆಗಳು….!

-ಇಸ್ಮತ್ ಪಜೀರ್

ವರದಿಗಾರ (ನ.15): ಟಿಪ್ಪು ಜಯಂತಿ ಏನೋ ಮುಗಿಯಿತು. ಇನ್ನೊಂದು ವರ್ಷ ಕಳೆದ ಮೇಲೆ ಟಿಪ್ಪು ಪರವಿರುವವರಿಗೆ ಅರ್ಥಾತ್ ಸತ್ಯದ ಪರವಿರುವವರಿಗೆ ಟಿಪ್ಪು ಮತ್ತೆ ನೆನಪಾಗುತ್ತಾರೆ.
ಮೊದಲನೆಯದಾಗಿ ನಾನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಯಾಕೆಂದರೆ ಒಂದು ಜಯಂತಿ ಆಚರಿಸುವ ಮೂಲಕ ನಾವು ವರ್ಷಕ್ಕೊಮ್ಮೆಯಾದರೂ ಟಿಪ್ಪುವನ್ನು ನೆನಪಿಸುವಂತೆ ಮಾಡಿದ್ದಕ್ಕೆ.

ಎರಡನೆಯದಾಗಿ ಸಂಘಪರಿವಾರ, ಬಿಜೆಪಿ ಮತ್ತು ಬಲಪಂಥೀಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಯಾಕೆಂದರೆ ಒಂದು ವೇಳೆ ಅವರೇನಾದರೂ ಗಲಾಟೆ ಮಾಡದೇ, ವಿರೋಧ ವ್ಯಕ್ತ ಪಡಿಸದೇ ಇದ್ದಿದ್ದರೆ ಇದೂ ಕೂಡಾ ನೂರಾರು ಸರಕಾರೀ ಜಯಂತಿಗಳಂತೆ ಯಾರಿಗೂ ಅರಿಯದಂತೆ ಸುದ್ದಿಲ್ಲದೇ, ಸದ್ದಾಗದೇ ಮುಗಿದು ಹೋಗುತ್ತಿತ್ತು. ಹತ್ತರೊಂದಿಗೆ ಹನ್ನೊಂದಾಗಿ ಬಿಡುತ್ತಿತ್ತು.

ಹಿಂಸೆ ಖಂಡಿತಾ ಆಗಕೂಡದು. ಅದು ಬಿಟ್ಟು ಪ್ರಜಾಸತ್ತಾತ್ಮಕವಾದ ವಿಧಾನದಲ್ಲಿ ವಿರೋಧ ಪ್ರತೀ ಸಲವೂ ವ್ಯಕ್ತವಾಗುತ್ತಲೇ ಇರಬೇಕೆಂದು ನಾನು ಬಯಸುತ್ತೇನೆ. ಎಷ್ಟು ಹೆಚ್ಚು ವಿರೋಧ ವ್ಯಕ್ತವಾಗುತ್ತದೋ ಅಷ್ಟು ಸತ್ಯಾನ್ವೇಷಿಗಳಿಗೆ ಅರ್ಥಾತ್ ಟಿಪ್ಪು ಜಯಂತಿ ಬೇಕೆನ್ನುವವರಿಗೆ ಲಾಭ. ಅದೊಂತರಾ ಸ್ಪ್ರಿಂಗ್ ಆಕ್ಷನ್ ಇದ್ದಂತೆ. ನೀವು ಎಷ್ಟು ಬಲವಾಗಿ ಅದುಮುತ್ತೀರೋ ಅಷ್ಟೇ ಬಲವಾಗಿ ಅದು ಪುಟಿದೇಳುತ್ತದೆ. ಎಷ್ಟು ವಿರೋಧ ವ್ಯಕ್ತವಾಗುತ್ತದೋ ಅಷ್ಟೇ ಡಿಫೆನ್ಸಿವ್ ನೆಸ್ ಕೂಡಾ ಉಂಟಾಗುತ್ತದೆ. ಅವರು ವಿರೋಧವೇ ವ್ಯಕ್ತಪಡಿಸದಿರುತ್ತಿದ್ದರೆ ನಾವು ಜಯಂತಿಯ ಪರ ಮಾತೆತ್ತಲೂ ಹೋಗುತ್ತಿರಲಿಲ್ಲ.ಟಿಪ್ಪು ಕುರಿತಂತೆ ಬರೆಯುತ್ತಿರಲಿಲ್ಲ. ಚರ್ಚಿಸುತ್ತಲೂ ಇರಲಿಲ್ಲ. ಮಾತೆತ್ತಬೇಕೆಂದರೆ, ಚರ್ಚಿಸಬೇಕೆಂದರೆ ನಮಗೆ ಇತಿಹಾಸದ ಜ್ಞಾನವಿರಬೇಕು. ಜ್ಞಾನ ಸಿಗಬೇಕಾದರೆ ನಾವು ಟಿಪ್ಪು ಬಗ್ಗೆ ಅಧ್ಯಯನ ಮಾಡಬೇಕು. ಇಂದು ಕನ್ನಡ ನಾಡಿನಾದ್ಯಂತ ನನ್ನಂತಹ ನೂರಾರು ಲೇಖಕರು ವಿವಿಧ ಪತ್ರಿಕೆಗಳಲ್ಲಿ, ವೆಬ್ ಪೋರ್ಟಲ್ ಗಳಲ್ಲಿ ಟಿಪ್ಪುವಿನ ಪರವಾದಂತಹ ಬರಹಗಳನ್ನು ಬರೆಯಲು ಕಾರಣ ಅವರ ವಿರೋಧ. ಬರೆಯಬೇಕಾದರೆ ನಾವು ಸ್ವಲ್ಪವಾದರೂ ಅಧ್ಯಯನ ಮಾಡಲೇಬೇಕಾಗುತ್ತದೆ. ಸದ್ಯ ಇದೊಂದು ಬೇಯುತ್ತಿರುವ ವಿಷಯವಾದ್ದರಿಂದ ನಾವು ಅಧ್ಯಯನ ಮಾಡಿ ಬರೆದದ್ದನ್ನು ಸಾಹಿತ್ಯ ಮತ್ತು ಇತಿಹಾಸದ ಆಸಕ್ತಿಯಿಲ್ಲದವರೂ ಓದುತ್ತಾರೆ. ತನ್ಮೂಲಕ ಕೋಟ್ಯಂತರ ಕನ್ನಡಿಗರು,ವಿಷಯಾಸಕ್ತಿ ಇರುವ ಕನ್ನಡೇತರರೂ ಟಿಪ್ಪುವಿನ ಕುರಿತು ಅರಿಯುತ್ತಾರೆ. ಆ ಮೂಲಕ ಸನ್ಮನಸ್ಸಿರುವವರು, ಪೂರ್ವಾಗ್ರಹ ವಿಲ್ಲದವರು ಟಿಪ್ಪುವಿನ ನೈಜ ಇತಿಹಾಸ ತಿಳಿದು ತಮ್ಮ ವಾದಗಳನ್ನು ಬದಲಿಸಬಹುದು. ಅದಕ್ಕೆ ಒಂದು ಅತೀ ದೊಡ್ಡ ಉದಾಹರಣೆಯಾಗಿ ನಮ್ಮ ಮುಂದೆ ದಿ ಸ್ಚೋರ್ಡ್ ಆಫ್ ಟಿಪ್ಪು ಸುಲ್ತಾನ್ ಬರೆದ ಭಗವಾನ್ ಶ್ಯಾಮದಾಸ್ ಗಿದ್ವಾನಿ ನಿಲ್ಲುತ್ತಾರೆ. ಅವರು ತನ್ನ ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ ಕೃತಿಯ ಲೇಖಕರ ಮಾತಿನಲ್ಲಿ ಹೀಗೆನ್ನುತ್ತಾರೆ. ” ನನಗೆ ನೆನಪುದ್ದಂತೆ ನನ್ನ ಶಾಲಾ ಮತ್ತು ಕಾಲೇಜು ದಿನಗಳಲ್ಲಿ ನನ್ನ ಮೇಲೆ ಹೇರಲಾಗಿದ್ದ ಇತಿಹಾಸದ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಅಂತಹ ಒಳ್ಳೆಯ ಮಾತುಗಳೇನೂ ಇರಲಿಲ್ಲ”

ಹಿಂದೂ ಮಹಾಸಭಾದ ಹಿನ್ನೆಲೆಯವರಾದ ಅವರು ಮೊದಲು ಟಿಪ್ಪುವಿನ ವಿಚಾರಗಳನ್ನು ಅರಿಯದೇ ತಾನು ಶಾಲೆ ಕಾಲೇಜುಗಳ ಇತಿಹಾಸದ ಪುಸ್ತಕಗಳಲ್ಲಿ ಕಲಿಸಿದ್ದುದರ ಪರಿಣಾಮವಾಗಿ ಪೂರ್ವಾಗ್ರಹ ಇಟ್ಟುಕೊಂಡಿರುವ ಸಾಧ್ಯತೆಯೂ ಇತ್ತು. ರಣರಂಗದಲ್ಲಿ ಹೋರಾಡುತ್ತಾ ವೀರಮರಣವನ್ನಪ್ಪಿದ ರಾಜರುಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದ ಫ್ರೆಂಚ್ ಸಂಶೋಧಕರೊಬ್ಬರ ಪರಿಚಯ ಆಕಸ್ಮಿಕವಾಗಿ ಆಗಿ ಅವರು ಗಿದ್ವಾನಿ ಭಾರತೀಯರು ಎಂದು ಗೊತ್ತಾದ ಕೂಡಲೇ ಟಿಪ್ಪುವಿನ ಕುರಿತು ವಿಚಾರಿಸಿದಾಗ ಬಲಪಂಥೀಯ ಹಿನ್ನೆಲೆಯವರಾದ ಗಿದ್ವಾನಿಯವರಿಗೆ ಟಿಪ್ಪುವಿನ ಕುರಿತು ಆಸಕ್ತಿ ಹುಟ್ಟಿ ಅವರು ಅನೇಕ ವರ್ಷಗಳ ಕಾಲ ಅಧ್ಯಯನ ಮಾಡಿ ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ ಎಂಬ ಅತ್ಯಂತ ಮಹತ್ವದ ಐತಿಹಾಸಿಕ ಕಾದಂಬರಿ ಬರೆದರು.

ಒಂದು ವೇಳೆ ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ ಕಾದಂಬರಿ ಅವರು ಬರೆಯದಿರುತ್ತಿದ್ದರೆ ಜಗತ್ತಿನಾದ್ಯಂತದ ಕೋಟ್ಯಂತರ ಜನ ಮೈ ನವಿರೇಳಿಸುವ ಟಿಪ್ಪುವಿನ ವ್ಯಕ್ತಿತ್ವ ಅರಿಯದಾಗುತ್ತಿದ್ದರು. ಇತಿಹಾಸದ ಗ್ರಂಥಗಳು ಸಾವಿರಾರು ಸಿಗುತ್ತವೆ. ಆದರೆ ಇತಿಹಾಸದ ಆಸಕ್ತಿ ತೀರ ಇಲ್ಲದವನಿಗೆ ಇತಿಹಾಸ ಗ್ರಂಥಗಳನ್ನು ಓದಲು ಸಾಧ್ಯವಾಗುವುದಿಲ್ಲ. ಅದೊಂದು ಡ್ರೈ ಸಬ್ಜೆಕ್ಟ್. ಅದನ್ನು ರಂಜನೀಯವಾಗಿ ಬರೆದಾಗ ಅದು ಇತಿಹಾಸಾಸಕ್ತಿ ಇಲ್ಲದ ಸಾಮಾನ್ಯ ಸಾಹಿತ್ಯಾಸಕ್ತನೂ ಓದುತ್ತಾನೆ. ಟಿಪ್ಪು ಇಂದು ಜನಸಾಮಾನ್ಯರ ಮಧ್ಯೆ ಇಷ್ಟು ಜನಪ್ರಿಯತೆ ಗಳಿಸಲು ಅತ್ಯಂತ ಮುಖ್ಯ ಕಾರಣವಾದ ಕೃತಿಗಳಲ್ಲೊಂದು ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್.
ಅದನ್ನು ಟಿಪ್ಪು ಸುಲ್ತಾನನ ಖಡ್ಗ ಎಂಬ ಹೆಸರಲ್ಲಿ ಕನ್ನಡಕ್ಕೆ ತಂದವರು ಬಿ.ಎಸ್.ರಂಗನಾಥ್. ಅದನ್ನು ಪ್ರಕಟಿಸಿದ್ದು “ತರಳಬಾಳು” ಮಠ. ಆ ಕೃತಿಯ ಮೊದಲ ಮೂಲ ಇಂಗ್ಲಿಷ್ ಆವೃತ್ತಿ ಬಂದು ನಲ್ವತ್ತೆರಡು ವರ್ಷಗಳೇ ಸಂದಿವೆ. ಅದಾಗ್ಯೂ ಇಂದು ಕೂಡಾ ಅದೊಂದು ಅತ್ಯಂತ ಜನಪ್ರಿಯ ಕಾದಂಬರಿಯಾಗಿಯೇ ಉಳಿದಿದೆ. ಮೊದಲ ಕನ್ನಡ ಆವೃತ್ತಿ ಪ್ರಕಟವಾಗಿ ಇಪ್ಪತ್ತೆಂಟು ವರ್ಷಗಳು ಸಂದರೂ ಇಂದಿಗೂ ಅದು ಟಿಪ್ಪುವಿನ ಕುರಿತಾಗಿ ಅಥೆಂಟಿಕ್ ಆದ ಜನಪ್ರಿಯ ಪುಸ್ತಕ.ಅದರ ಜನಪ್ರಿಯತೆಯೇ ಅದು ಅನೇಕ ಆವೃತ್ತಿಗಳು ಪ್ರಕಟವಾಗಲು ಕಾರಣ.
ಒಳ್ಳೆಯ ಸಾಹಿತ್ಯಕ್ಕೆ ಋಣಾತ್ಮಕತೆಯನ್ನು ಧನಾತ್ಮಕವಾಗಿ ಬದಲಿಸಲು ಸಾಧ್ಯ ಎನ್ನುವುದಕ್ಕೆ ಇದೊಂದು ಒಳ್ಳೆಯ ನಿದರ್ಶನ. ಅದೇ ರೀತಿ ಇಂದು ಟಿಪ್ಪು ಜಯಂತಿಗೆ ವ್ಯಕ್ತವಾಗುತ್ತಿರುವ ವಿರೋಧವು ಟಿಪ್ಪು ಕುರಿತಂತೆ ನಾವೆಲ್ಲಾ ಹೆಚ್ಚೆಚ್ಚು ಅರಿಯಲು ಪ್ರೇರಣೆ ಒದಗಿಸಿದೆ. ಅದಕ್ಕಾಗಿ ಟಿಪ್ಪು ವಿರೋಧಿಗಳಿಗೆ ತುಂಬು ಹೃದಯದ ಕೃತಜ್ಞತೆಗಳು.‌ ಅವರು ವಿರೋಧಿಸಲು ಕಾರಣ ಸಿದ್ಧರಾಮಯ್ಯ ಅವರು ಟಿಪ್ಪು ಜಯಂತಿ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದು. ಅದಕ್ಕಾಗಿ ಮಾನ್ಯ ಸಿದ್ಧರಾಮಯ್ಯನವರಿಗೂ ಮನದಾಳದ ಕೃತಜ್ಞತೆಗಳು.
ಅವರ ವಿರೋಧ ಹೆಚ್ಚುತ್ತಿರಲಿ. ಆ ಕಾರಣಕ್ಕಾಗಿಯಾದರೂ ನಾವು ಟಿಪ್ಪು ಎಂಬ ಮಹಾನ್ ಚೇತನವನ್ನು ಇನ್ನಷ್ಟು ಅರಿಯಲು ಪ್ರಯತ್ನಿಸುತ್ತೇವೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group