ರಾಷ್ಟ್ರೀಯ ಸುದ್ದಿ

ರಾಮ ಮಂದಿರ ವಿವಾದ ; ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರ ಹೇಳಿಕೆ ಹಾಸ್ಯಾಸ್ಪದ : ಪಾಪ್ಯುಲರ್ ಫ್ರಂಟ್

ದೇಶದಲ್ಲಿ ಮುಸ್ಲಿಮರು ಶಾಂತಿಯುತವಾಗಿ ಮತ್ತು ಗೌರವಾನ್ವಿತವಾಗಿ ಜೀವಿಸಲು ಅಯೋಧ್ಯೆಯಲ್ಲಿಯೇ ರಾಮ ಮಂದಿರವನ್ನು ನಿರ್ಮಿಸಬೇಕು ಎಂಬ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಗಯೋರುಲ್ ಹಸನ್ ರಿಝ್ವಿ ರವರ ಹೇಳಿಕೆಯು ಅಪಹಾಸ್ಯದಿಂದ ಕೂಡಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಇ. ಅಬೂಬಕರ್‌ ಪ್ರತಿಕ್ರಿಯಿಸಿದ್ದಾರೆ.

ಬಾಬರಿ ಮಸ್ಜಿದ್ ಧ್ವಂಸವು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹತ್ಯೆಯ ನಂತರ ಸ್ವತಂತ್ರ ಭಾರತದಲ್ಲಿ ನಡೆದ ಅತ್ಯಂತ ಘೋರ ಸಂಘಟಿತ ಅಪರಾಧವಾಗಿದೆ ಎಂಬ ವಿಚಾರವನ್ನು ಸಂಘಪರಿವಾರವನ್ನು ಹೊರತುಪಡಿಸಿ ಎಲ್ಲಾ ಬುದ್ಧಿಜೀವಿಗಳು ಒಪ್ಪಿಕೊಳ್ಳುತ್ತಾರೆ. ಬಾಬರಿ ಮಸ್ಜಿದ್ ಪುನರ್ ನಿರ್ಮಾಣವಾಗುವವರೆಗೆ ಮುಸ್ಲಿಮರಿಗೆ ಅದೇ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಸಿಗಬೇಕು ಹಾಗೂ ಧ್ವಂಸ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಇಲ್ಲದಿದ್ದಲ್ಲಿ ಈ ವಿಚಾರವು ಒಣಗದ ಗಾಯದಂತೆ ಹಾಗೆಯೇ ಉಳಿದುಬಿಡುತ್ತದೆ ಎಂದು ಅಬೂಬಕರ್ ತಿಳಿಸಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಪ್ರಾರ್ಥನಾಲಯವನ್ನು ಕೆಡವಿದ ಅತ್ಯಂತ ಹೀನಾಯ ಕೃತ್ಯದ ಭೀಕರತೆಯನ್ನು ಕಡಿಮೆಗೊಳಿಸುವುದಕ್ಕಾಗಿ ಮಂದಿರ ನಿರ್ಮಾಣದ ವಿಚಾರವನ್ನು ಹೆಚ್ಚು ಪ್ರಚಾರಗೊಳಿಸುತ್ತಿರುವುದು ಆತ್ಮಸಾಕ್ಷಿಗೆ ವಿರುದ್ಧವಾಗಿದೆ. ಇದೀಗ ಸಂವಿಧಾನದ ಪರಮೋಚ್ಛ ಅಂಗ ಮಾತ್ರವೇ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕಾಗಿದೆ.

ದುರದೃಷ್ಟವಶಾತ್, ಅತಿ ಅಗತ್ಯದ ಸಂದರ್ಭದಲ್ಲಿ ಗಮನ ಹರಿಸಬೇಕಾದ ಮತ್ತು ಸೇವೆ ಸಲ್ಲಿಸಬೇಕಾದ ಸಮಯದಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಪತ್ತೆಯೇ ಇರಲಿಲ್ಲ. ಬಾಬರಿ ಮಸ್ಜಿದ್ ನ್ಯಾಯಕ್ಕಾಗಿ ಇದುವರೆಗೆ ಅವರು ತುಟಿಬಿಚ್ಚಿದ್ದು ಕಾಣಸಿಗಲಿಲ್ಲ. ಹೀಗಾಗಿ ಆಯೋಗದ ಅಧ್ಯಕ್ಷರು ಆರೆಸ್ಸೆಸ್ ಅಥವಾ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಮುಖಂಡರ ಪಾತ್ರವನ್ನು ನಿಭಾಯಿಸುತ್ತಿರುವಂತೆ ಭಾಸವಾಗುತ್ತಿದೆ. ಅವರು ಸಂಘಪರಿವಾರದ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಹೊರತು ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಅಲ್ಲ. ಹಿಂದುತ್ವ ಬಲಪಂಥೀಯ ಶಕ್ತಿಗಳು ಭಾರತದಲ್ಲಿ ಮುಸ್ಲಿಮರ ಪರಂಪರೆಯ ಐತಿಹಾಸಿಕ ಸಂಕೇತಗಳನ್ನು ಅಳಿಸಿ ಹಾಕುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಮುಸ್ಲಿಮರು ಬಾಬರಿ ಮಸ್ಜಿದ್ ತ್ಯಜಿಸಿದರೆ ಸಮುದಾಯದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಅವರು ಹೇಳಿಕೆ ನೀಡಿರುತ್ತಾರೆ. ನೈಸರ್ಗಿಕ ನ್ಯಾಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದರಿಂದ ಅಥವಾ ಬಹುಸಂಖ್ಯಾತ ಶಕ್ತಿಗಳ ಮುಂದೆ ತಮ್ಮ ಹಕ್ಕುಗಳನ್ನು ಬಿಟ್ಟುಕೊಡುವುದರಿಂದ ಸಮುದಾಯದ ಮಧ್ಯೆ ಶಾಂತಿ ಮತ್ತು ಗೌರವದ ವಾತಾವರಣವನ್ನು ಸೃಷ್ಟಿಸಬಹುದು ಎಂದು ಭಾವಿಸುವುದು ನಿರರ್ಥಕವಾಗಿದೆ.
ಬಾಬರಿ ಮಸ್ಜಿದ್ ಗೆ ವಿರೋಧ ವ್ಯಕ್ತಪಡಿಸುತ್ತಾ ಮಂದಿರ ನಿರ್ಮಾಣಕ್ಕೆ ಆಗ್ರಹಿಸುವ ಮೂಲಕ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಅಲ್ಪಸಂಖ್ಯಾತ ಸಮುದಾಯದ ಮೇಲೆ ಬಲವಂತದ ಅನ್ಯಾಯವನ್ನು ಹೇರುತ್ತಿದ್ದಾರೆ.

ದೇಶದಲ್ಲಿ ಪ್ರಸಕ್ತ ಮುಸ್ಲಿಮರ ಪರಿಸ್ಥಿತಿ ಅವಲೋಕಿಸಿದರೆ ಇತಿಹಾಸದಲ್ಲೇ ಅತ್ಯಂತ ಶೋಚನೀಯ ಮಟ್ಟಕ್ಕೆ ತಲುಪಿದೆ. ಬಾಬರಿ ಮಸ್ಜಿದ್ ಧ್ವಂಸಗೊಳಿಸಿದ ಜಾಗದಲ್ಲಿ ಮಂದಿರ ನಿರ್ಮಿಸುವುದು ಈಗ ಹಿಂದುತ್ವ ಪಡೆಗಳಿಂದ ನಡೆಯುತ್ತಿರುವ ಗುಂಪು ಹತ್ಯೆ, ಹಿಂಸೆ, ದ್ವೇಷ ಅಪರಾಧ ಪ್ರಕರಣಗಳಿಗೆ ಪರಿಹಾರವಲ್ಲ. ಇಂತಹ ದೌರ್ಜನ್ಯದ ಸಂದರ್ಭದಲ್ಲೆಲ್ಲೂ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ನೆರಳೂ ಕಾಣಸಿಗಲಿಲ್ಲ ಎಂದು ಇ. ಅಬೂಬಕರ್ ಆರೋಪಿಸಿದ್ದಾರೆ. ನಿಜವಾಗಿಯೂ ಆಯೋಗದ ಅಧ್ಯಕ್ಷರಿಗೆ ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡುವ ಕಾಳಜಿ ಇದ್ದರೆ ಕೂಡಲೇ ಆಕ್ರಮಣಕ್ಕೀಡಾಗಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಕಾರ್ಯೋನ್ಮುಖರಾಗಲಿ ಎಂದು ಇ. ಅಬೂಬಕರ್ ಒತ್ತಾಯಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group