‘ಬಿಜೆಪಿ ಸೇರುವಂತೆ ಕೇಂದ್ರ ತನಿಖಾ ಅಧಿಕಾರಿಗಳು ಒತ್ತಡವನ್ನು ಹಾಕುತ್ತಿದ್ದಾರೆ’
ವರದಿಗಾರ(ನ.8): ‘ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡಿ ವ್ಯವಹಾರ ಸರಿಮಾಡಿಕೊಳ್ಳಿ ಎಂದು ಕೇಂದ್ರ ಸರ್ಕಾರದ ಅಧೀನದ ತನಿಖಾ ಏಜೆನ್ಸಿಗಳ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ’ ಎಂದು ಸಂಸದ ಡಿ.ಕೆ. ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.
ಸದಾಶಿವನಗರದ ಡಿ.ಕೆ.ಶಿವಕುಮಾರ್ ಅವರ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯಂತಹ ಸ್ವತಂತ್ರ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ನನಗೆ ಮತ್ತು ಸಹೋದರ ಡಿ.ಕೆ.ಶಿವಕುಮಾರ್ ಮೇಲೆ ಅಧಿಕಾರಿಗಳು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ನಾವು ಬಿಜೆಪಿಗೆ ಹೋಗಬೇಕು, ಇಲ್ಲದಿದ್ದರೆ ಜೈಲಿಗೆ ಹೋಗಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ಸಿನವರಾದ ನಾವು ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ಜೈಲಿಗೆ ಹೋಗಲೂ ಸಿದ್ಧರಿದ್ದೇವೆ’ ಎಂದು ಹೇಳಿದ್ದಾರೆ.
ಉಪಚುನಾವಣೆಗಳ ಆರಂಭದಲ್ಲೇ ಬಿಜೆಪಿ ಉಪಾಧ್ಯಕ್ಷ ಶ್ರೀರಾಮುಲು ಹೇಳಿಕೆ ನೀಡಿ, ಡಿಕೆಶಿ ಜೈಲಿಗೆ ಶಾಂತ ದೆಹಲಿಗೆ ಎಂದಿದ್ದರು. ಜವಾಬ್ದಾರಿಯುತ ನಾಯಕ ಸುಮ್ಮನೆ ಈ ರೀತಿ ಹೇಳಿಕೆ ನೀಡುವುದಿಲ್ಲ. ಪಕ್ಷದ ಒಳಗಿನ ಚರ್ಚೆಯನ್ನು ಅವರು ಬಹಿರಂಗಪಡಿಸಿದ್ದಾರೆ. 6ನೇ ತಾರೀಖು ಫಲಿತಾಂಶ ಪ್ರಕಟವಾಗಿದೆ 7ನೇ ತಾರೀಖಿನಿಂದ ನಮ್ಮ ವಿರುದ್ಧ ಕಾರ್ಯಾಚರಣೆ ಆರಂಭಗೊಂಡಂತಿದೆ ಎಂದು ಹೇಳಿದ್ದಾರೆ.
