-
ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು
-
ದೇಶದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹೊಸ ವೇದಿಕೆ ಸೃಷ್ಟಿಗೆ ಉಪಚುನಾವಣೆಯಿಂದ ಪ್ರಯತ್ನ
ವರದಿಗಾರ (ಅ.31): ಬಿಜೆಪಿಯವರು ರಾಮನ ಹೆಸರೇಳಿಕೊಂಡು ಅಧಿಕಾರ ಹಿಡಿದಿದ್ದಾರೆ. 30 ವರ್ಷದಿಂದ ರಾಮಮಂದಿರ ಕಟ್ಟದೆ ಇರುವವರು ಈಗ ಕಟ್ಟುತ್ತಾರಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಜನತೆಯನ್ನು ಪ್ರಶ್ನಿಸಿದ್ದಾರೆ.
ಅವರು ಮಂಗಳವಾರ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಈ ಉಪಚುನಾವಣೆ ನನ್ನ ಮತ್ತು ಯಡಿಯೂರಪ್ಪ ನಡುವಿನ ವೈಯಕ್ತಿಕ ಸಮರವಲ್ಲ. ದೇಶದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹೊಸ ವೇದಿಕೆ ಸೃಷ್ಟಿಗೆ ಪ್ರಯತ್ನ. ದೇಶದಲ್ಲಿ ಪರ್ಯಾಯ ರಾಜಕೀಯ ಸೃಷ್ಟಿಗೆ ಈ ಉಪಚುನಾವಣೆ ವೇದಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ನಾವು ಬಳ್ಳಾರಿ, ಶಿವಮೊಗ್ಗ ಗೆದ್ದಿದ್ದೇವೆ ಎಂದು ಯಡಿಯೂರಪ್ಪ ಹೇಳಿಕೆ ದುರಾಹಂಕಾರದಿಂದ ಕೂಡಿದೆ ಎಂದು ಆರೋಪಿಸಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಯಾರ್ಯಾರು, ಎಲ್ಲೆಲ್ಲಿ ಸ್ಪರ್ಧಿಸಬೇಕೆಂಬುದನ್ನು ಸಮನ್ವಯದಿಂದ ತೀರ್ಮಾನಿಸಲಿದ್ದೇವೆ ಎಂದು ಹೇಳಿದ್ದಾರೆ.
ಮೈತ್ರಿ ಸರ್ಕಾರ ರಚನೆಯಾದ ದಿನದಿಂದಲೇ ಸರ್ಕಾರ ಉರುಳಿಸಲು ಕುತಂತ್ರ ನಡೆಸುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ದಿನಾಂಕ ನೀಡುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ಡೆಡ್ಲೈನ್ ನೀಡಲು ಬಿಜೆಪಿ ನಾಯಕರಲ್ಲೇ ಪೈಪೋಟಿ ಇದೆ. ಇದೀಗ ಜಗದೀಶ್ ಶೆಟ್ಟರ್ 6 ನೇ ತಾರೀಖು ಡೆಡ್ಲೈನ್ ನೀಡಿದ್ದಾರೆ ಎಂದು ಬಿಜೆಪಿಯನ್ನು ಅಣಕಿಸಿದರು.
ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಸುಳ್ಳು. ಈಗ ರಾಹು, ಕೇತು, ಶನಿ ಬಗ್ಗೆ ಮಾತನಾಡುವ ಈಶ್ವರಪ್ಪ ಅವರು ಸರ್ಕಾರ ನಡೆಸುವ ಸಂದರ್ಭದಲ್ಲಿ ಯಾವ ಯಾವ ಗ್ರಹಗಳಿತ್ತು ಎಂಬುದನ್ನು ನೆನೆಪಿಸಿಕೊಳ್ಳಿ ಎಂದು ಕುಮಾರಸ್ವಾಮಿ ಬಿಜೆಪಿಗೆ ಸಲಹೆ ನೀಡಿದ್ದಾರೆ.
ನಿಮಗೆ ಹೇಗೆ ಸರ್ಕಾರ ನಡೆಸಬೇಕು ಎಂಬುದನ್ನು ಹೇಳಿಕೊಟ್ಟವನೇ ನಾನು. ನಿಮ್ಮಿಂದ ಸರ್ಕಾರ ನಡೆಸುವುದನ್ನು ಕಲಿತುಕೊಳ್ಳಬೇಕಿಲ್ಲ. ನಿಮ್ಮ ಜೀವನದಲ್ಲಿ ಮುಖ್ಯಮಂತ್ರಿಯಾಗಿ ಎಂದಿಗೂ ನೀವು ಸಾಲ ಮನ್ನಾ ಮಾಡಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಎಲ್ಲೆಲ್ಲಿ ಏನೇನು ಮಾಡಿದ್ದೀರ ಎಂಬುದನ್ನು ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಾಲಯದಲ್ಲಿ ಕುಳಿತು ಎಲ್ಲವನ್ನು ನೆನೆಪಿಸಿಕೊಳ್ಳಿ. ನಾನು ಅಧಿಕಾರಿಗಳನ್ನು ಜಾತಿ ಹೆಸರಿನಲ್ಲಿ ಗುರುತಿಸಿಲ್ಲ. ಮೆರಿಟ್ ಆಧಾರದಲ್ಲಿ ವರ್ಗಾವಣೆ ಮಾಡಿದ್ದೇನೆ ಎಂದು ಹೇಳಿದರು.
