-
ಕೇರಳ ಸರಕಾರವನ್ನು ಉರುಳಿಸುತ್ತೇವೆ ಹೇಳಿಕೆಗೆ ಮುಖ್ಯಮಂತ್ರಿ ಪಿಣರಾಯಿ ಪ್ರತಿಕ್ರಿಯೆ
ವರದಿಗಾರ (ಅ.29): ಅಮಿತ್ ಶಾ ಉರುಳಿಸುವುದನ್ನೆಲ್ಲಾ ಗುಜರಾತ್ ರಾಜ್ಯದಲ್ಲಿ ಮಾಡಲಿ, ಕೇರಳದಲ್ಲಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ಕೇರಳ ಭೇಟಿ ನೀಡಿದ್ದ ಸಂದರ್ಭ ಕೇರಳ ಸರಕಾರದ ವಿರುದ್ಧ ನೀಡಿದ್ದ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಾವಕಾಶ ಕುರಿತಂತೆ ಎದ್ದಿರುವ ರಾಜಕೀಯ ವಿವಾದದ ನಡುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರು ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಕೇರಳದಲ್ಲಿದ್ದ ಅಮಿತ್ ಶಾ, ಕೇರಳ ರಾಜ್ಯ ಸರಕಾರವು ಜನರ ನಂಬಿಕೆಯ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸಿದರೆ ಬಿಜೆಪಿ ಸರಕಾರವನ್ನು ಕೆಳಗಿಳಿಸುವುದಾಗಿ ಎಚ್ಚರಿಸಿದ್ದರು.
ರವಿವಾರ ರಾತ್ರಿ ಪಾಲಕ್ಕಾಡ್ ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಣರಾಯಿ ವಿಜಯನ್, ‘ಬಿಜೆಪಿಯ ಗಾಡ್ ಫಾದರ್ ಕೇರಳ ಸರಕಾರವನ್ನು ಕೆಳಗಿಳಿಸುವುದಾಗಿ ಹೇಳಿದ್ದರೆಂದು ಕೇಳಿದೆ. ಕೇವಲ ನೀರಿನಿಂದ ತುಂಬಿರುವ ಅವರ ಮೈಕಟ್ಟು ಅದಕ್ಕೆ ಸಾಕಾಗದು, ಇದನ್ನೆಲ್ಲಾ ಅವರು ಗುಜರಾತ್ ರಾಜ್ಯದಲ್ಲಿ ಮಾಡುವುದು ಒಳ್ಳೆಯದು’ ಎಂದು ಸಲಹೆ ನೀಡಿದ್ದಾರೆ.
