ನಿಮ್ಮ ಬರಹ

ಶಬರಿಮಲೆ ವಿವಾದ ಮತ್ತು ಮುಸ್ಲಿಮರ ಪ್ರಮಾದಗಳು

-ಇಸ್ಮತ್ ಪಜೀರ್

ವರದಿಗಾರ (ಅ.24): ರೆಹನಾ ಫಾತಿಮಾ ಸೂರ್ಯಗಾಯತ್ರಿಯಾಗಿ ದಶಕವೇ ಕಳೆದಿದೆ. ಇದೀಗ ಆಕೆ ಶಬರಿಮಲೆ ವಿವಾದದ ಕೇಂದ್ರ ಬಿಂದು. ಅದಾಗ್ಯೂ ‌ಇಂದು ಆಕೆಯನ್ನು ಆಕೆಯ‌ ಪೂರ್ವಾಶ್ರಮದ ಹೆಸರಿನಲ್ಲೇ ಬರೆಯುತ್ತಾ ಕರೆಯುತ್ತಾ ವಿವಾದವನ್ನು ಬೆಳೆಸುತ್ತಿರುವುದರ ಹಿಂದೆ ಫ್ಯಾಸಿಸ್ಟ್ ಷಡ್ಯಂತ್ರ ಖಂಡಿತಾ ಇದೆ. ಮೊನ್ನೆ ಮೊನ್ನೆಯವರೆಗೆ ಅಂದರೆ ಶಬರಿಮಲೆ ವಿವಾದ ಪ್ರಾರಂಭವಾಗುವವರೆಗೆ ಸೂರ್ಯಗಾಯತ್ರಿಯೇ ಆಗಿದ್ದವಳು ಈಗ ಪುನಃ ಹೇಗೆ ರೆಹನಾ ಫಾತಿಮಾ ಆದಳು?

ಇದೀಗ ಫ್ಯಾಸಿಸ್ಟ್ ಷಡ್ಯಂತ್ರಕ್ಕೆ ತುಪ್ಪ ಸುರಿಯುವಂತಹಾ‌ ಒಂದು ಕೆಟ್ಟ ಹೆಜ್ಜೆಯನ್ನು ಎರ್ನಾಕುಲಂ ಮುಸ್ಲಿಂ ಮಹಲ್ಲ್ ಜಮಾಅತ್ ಕಮಿಟಿ ಇಟ್ಟಿದೆ. ಅದೇನೆಂದರೆ ರೆಹನಾ‌ ಫಾತಿಮಾ ಮತ್ತು ಆಕೆಯ ಕುಟುಂಬಕ್ಕೆ ಜಮಾಅತ್ ನಿಂದ ಬಹಿಷ್ಕಾರ ಹಾಕಿದೆ. ಅರ್ಥಾತ್ ಆಕೆ ಮುಸ್ಲಿಂ ಅಲ್ಲ ಎಂದು ಘೋಷಿಸಿದೆ. ಇದು ಯಾವ ಅರ್ಥವನ್ನು ಧ್ವನಿಸುತ್ತದೆ?

ಆಕೆ ಇವರು ಬಹಿಷ್ಕಾರ ಹಾಕುವವರೆಗೆ ಮುಸ್ಲಿಂ ಆಗಿದ್ದಳು. ಇವರು ಬಹಿಷ್ಕಾರ ಹಾಕಿದ ಬಳಿಕ ಇಸ್ಲಾಮಿನಿಂದ ಹೊರ ಹೋದಳು ಎಂದಲ್ಲವೇ…?
ಆಕೆ ವಿಶ್ವ ಹಿಂದೂ ಪರಿಷತ್ತಿನ ಪೌರೋಹಿತ್ಯದಲ್ಲೇ ಇಸ್ಲಾಮ್ ತ್ಯಜಿಸಿ ಹಿಂದೂ ಧರ್ಮ ಸ್ವೀಕರಿಸಿದವಳು ಎಂಬುವುದು ಜಗತ್ತಿಗೇ ತಿಳಿದ ವಿಚಾರ.ಅದು ಆಕೆಯ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು. ಅದನ್ನು ಈ ನೆಲದ ಸಂವಿಧಾನವನ್ನು ಒಪ್ಪುವ ಯಾರೂ ಪ್ರಶ್ನಿಸಬಾರದು. ಆಗಲೇ ಆಕೆ ತನ್ನ ಹೆಸರನ್ನು ರೆಹನಾ‌ ಫಾತಿಮಾದಿಂದ ಸೂರ್ಯಗಾಯತ್ರಿ ಎಂದು ಬದಲಿಸಿದ್ದಳು. ಹಾಗಿರುವಾಗ ಆ ಮುಸ್ಲಿಂ ಜಮಾಅತ್ ಆಕೆಗೆ ಬಹಿಷ್ಕಾರ ಹಾಕುವ ಅರ್ಥಾತ್ ಧರ್ಮದಿಂದ ಹೊರಹಾಕುವ ಜರೂರೇನಿತ್ತು?

ಯಾರನ್ನೂ ಯಾರೂ ಧರ್ಮದಿಂದ‌‌‌‌ ಹೊರಗಟ್ಟಬೇಕಿಲ್ಲ ಮತ್ತು ಹೊರಗಟ್ಟಬಾರದು. ಧಾರ್ಮಿಕ ವಿಶ್ವಾಸ ಹೆಸರಿನಿಂದ ಅಸ್ತಿತ್ವದಲ್ಲಿರುವುದಲ್ಲ.ಅದು ಅಪ್ಪಟ ನಂಬಿಕೆಯ ಪ್ರಶ್ನೆ. ಒಬ್ಬಾಕೆ ಯಾ ಒಬ್ಬಾತ ಸ್ವಯಂ ಇಚ್ಚೆಯಿಂದ ಧರ್ಮ ತ್ಯಜಿಸಿದರೆ ಇಂತಹ ತಾತ್ವಿಕ ಪ್ರಶ್ನೆಯೂ ಉದ್ಭವಿಸುವುದಿಲ್ಲ.
ಫ್ಯಾಸಿಸ್ಟರು ಬಯಸಿದ್ದೂ ಇದನ್ನೇ..‌ಅದಕ್ಕಾಗಿಯೇ ಸ್ವಯಂ ಅವರದೇ ಪೌರೋಹಿತ್ಯದಲ್ಲಿ‌ ಹಿಂದೂ‌‌ ಧರ್ಮ ಸ್ವೀಕರಿಸಿರುವ ಆಕೆಯನ್ನೇ ಅವರು ಈ ವಿವಾದದ ಜ್ವಾಲಾಮುಖಿ ಹಬ್ಬಿಸಲು ಬಳಸುತ್ತಿದ್ದಾರೆ. ಅದಕ್ಕಾಗಿಯೇ ಹೆಸರುಗಳನ್ನೇ ಹಿಂದೂಕರಣ ಮಾಡುತ್ತಿರುವ ಅವರು ಈಕೆಯನ್ನು ಮತ್ತೆ ಮುಸ್ಲಿಮೀಕರಿಸಲು ಹೊರಟಿದ್ದು.
ಅವರ ಹೆಬ್ಬಯಕೆಗೆ ಅನುಕೂಲ ಮಾಡಿಕೊಡುವ ಎರ್ನಾಕುಲಂ ಜಮಾಅತ್ ಕಮಿಟಿಯ ತೀರ್ಮಾನ ಬುದ್ಧಿಗೇಡಿತನದ ಪರಮಾವಧಿ. ಇಂತಹ ಸಂದಿಗ್ಧ‌ ಪರಿಸ್ಥಿತಿಯಲ್ಲಿ ಮುಸ್ಲಿಮರು ಸಂಪೂರ್ಣ ತಟಸ್ಥ ನಿಲುವು ತಳೆಯಬೇಕಾದುದು ಕಾಲದ ಅಗತ್ಯ. ಮಹಿಳೆ ದೇವಸ್ಥಾನ ಪ್ರವೇಶಿಸಬೇಕೇ ಬೇಡವೇ ಎನ್ನುವುದು ಮುಸ್ಲಿಮರಿಗೆ ಸಂಬಂಧಿಸಿದ ವಿಚಾರ ಅಲ್ಲವೇ ಅಲ್ಲ. ಈ ನಿಟ್ಟಿನಲ್ಲಿ ಮುಸ್ಲಿಂ ಲೀಗ್ ಕೂಡಾ ಅನಗತ್ಯ ಮೂಗು ತೂರಿಸುವ ಕೆಲಸ ಮಾಡಬಾರದು. ಮುಸ್ಲಿಂ ಲೀಗ್ ಎಂದರೆ ಖಂಡಿತಾ ಇಸ್ಲಾಮ್ ಧರ್ಮವಲ್ಲ. ಅದೊಂದು ಅಪ್ಪಟ ರಾಜಕೀಯ ಪಕ್ಷ.
ಆದರೆ ಫ್ಯಾಸಿಸ್ಟರಿಗೆ ಅದರ ಹೆಸರೇ ಸಾಕು ಆ ಪಕ್ಷವನ್ನು ಮುಸ್ಲಿಮೀಕರಿಸಲು…
ನ್ಯಾಯಾಲಯದ ತೀರ್ಮಾನ ಸರಿಯೋ ತಪ್ಪೋ ಎನ್ನುವುದಕ್ಕಿಂತ ಇದರ ಹಿಂದಿನ ರಾಜಕೀಯ ಹಿತಾಸಕ್ತಿಯನ್ನು ನಾವು ಅರ್ಥೈಸಬೇಕಾಗಿದೆ.
ಅಪ್ಪಟ‌ ಪುರೋಹಿತಶಾಹಿಗಳ ಪಕ್ಷ ವಾದ ಬಿಜೆಪಿ ಯಾವ ಕಾರಣಕ್ಕೂ ಮಹಿಳೆ‌ ದೇವಸ್ಥಾನ‌ ಪ್ರವೇಶಿಸುವುದನ್ನು ಒಪ್ಪುವುದಿಲ್ಲ. ಇಂತಹ ತೀರ್ಪನ್ನು ನೀಡಿದ್ದು ಕೇರಳದ ಕಮ್ಯೂನಿಸ್ಟ್‌ ಸರಕಾರವೋ ಅಥವಾ ಕಾಂಗ್ರೆಸ್ ಪಕ್ಷವೋ ಅಲ್ಲ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಪ್ರತಿಭಟಿಸುವಾಗ ಕೇರಳದಲ್ಲಿ ಅಧಿಕಾರದಲ್ಲಿರುವ ಕಮ್ಯೂನಿಸ್ಟನ್ನು ಎಳೆದು ತರುವ ಅಗತ್ಯವೇನಿದೆ? ಕೇರಳದಲ್ಲಿ ಏನೇ ತಿಪ್ಪರಲಾಗ ಹೊಡೆದರೂ ಅಧಿಕಾರಕ್ಕೇರುವುದು ಬಿಡಿ ಅದರ ವಾಸನೆಯನ್ನು ಆಘ್ರಾಣಿಸಲೂ ಬಿಜೆಪಿಗೆ ಸದ್ಯಕ್ಕೆ ಸಾಧ್ಯವಿಲ್ಲ. ‌ಅಂತಹ ವಾಸ್ತವ ಬಿಜೆಪಿಗೆ ತಿಳಿಯದ್ದೇನಲ್ಲ‌.‌ಅದಕ್ಕಾಗಿ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಹಿಂದೂ ಆಸ್ತಿಕರ ಅತೀ ದೊಡ್ಡ ಶೃದ್ದಾಕೇಂದ್ರಗಳಲ್ಲೊಂದಾದ ಶಬರಿಮಲೆಯನ್ನೇ ಬಿಜೆಪಿ ತನ್ನ ಅಧಿಕಾರದ ಮೆಟ್ಟಿಲಾಗಿಸ ಹೊರಟಿದೆ. ಬಿಜೆಪಿಗೆ ಹೇಳಿಕೊಳ್ಳುವಂತಹ ಯಾವ ಸಾಧನೆಯ ಬಲವೂ ಇಲ್ಲ.
ಅದು ಈ ಹಿಂದಿನಿಂದಲೂ ಜನರ ನಂಬಿಕೆಯನ್ನೇ ತನ್ನ ಅಧಿಕಾರದ ಮೆಟ್ಟಿಲಾಗಿಸುತ್ತಾ ಬಂದಿದೆ. ಆದುದರಿಂದ ಅದಕ್ಕೆ ಪೂರಕವಾಗಬಲ್ಲ ಯಾವುದೇ ತಪ್ಪು ಹೆಜ್ಜೆಗಳನ್ನು ಮುಸ್ಲಿಂ ಸಮುದಾಯ ಇಡಬಾರದು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group