ನಿಮ್ಮ ಬರಹ

ಮನುಷ್ಯ ಸಂಬಂಧಗಳು ಧರ್ಮಗಳಾಚೆಗೆ ವಿಸ್ತರಿಸುವುದು ಅಪರಾಧವೇ…? -ಇಸ್ಮತ್ ಪಜೀರ್

ವರದಿಗಾರ (ಅ.19): ಇಂದು ಮಧ್ಯಾಹ್ನ ಸುಮಾರು ಹನ್ನೆರಡೂವರೆಯ ಹೊತ್ತಿಗೆ ಕೆಲಸದ ಮೇರೆಗೆ ನನ್ನ ಪಾಲಿಕ್ಲಿನಿಕ್ಕಿನಿಂದ ಹೊರಟಿದ್ದೆ. ಅಷ್ಟು ಹೊತ್ತಿಗೆ ನನ್ನ ಸಿಬ್ಬಂದಿಯೊಬ್ಬಳು ಔಷಧಿಯ ಚೀಟಿಯೊಂದನ್ನು ಕೊಟ್ಟು “ಸರ್, ಇದೊಂದು ಟ್ಯಾಬ್ಲೆಟ್ ತಂದು ಕೊಡಿ” ಎಂದು ಸಹಜವಾಗಿಯೇ ಹೇಳಿದಳು.
ನಾನು ಔಷಧಾಲಯಕ್ಕೆ ಹೋದಾಗ ಕೈಗೆ ನಾಲ್ಕಾರು ಕೇಸರಿ ನೂಲು ಸುತ್ತಿದ್ದ,ಹಣೆಗೆ ಉದ್ಧ ನಾಮ ಬಳಿದಿದ್ದ ಯುವಕನೋರ್ವ ನನ್ನನ್ನು ಅಟೆಂಡ್ ಮಾಡಿದ. ಔಷಧಿ ಖರೀದಿಸಿ ಬಿಲ್ ಕೊಡುವ ಸಲುವಾಗಿ ರೋಗಿಯ ಹೆಸರು ಕೇಳಿದ.ಸಹಜವಾಗಿಯೇ ನಾನು ಸಿಬ್ಬಂಧಿಯ ಹೆಸರು ಹೇಳಿದೆ. ಆತ ಮತ್ತೆ ಕೇಳಿದ…ನಾನು ಪುನಃ ಆಕೆಯ ಹೆಸರು ಹೇಳಿದೆ. ನಾನು ಬಿಳಿ ಶಾರ್ಟ್ ಕುರ್ತಾ ಮತ್ತು ನೀಲಿ ಜೀನ್ಸ್ ಪ್ಯಾಂಟ್ ತೊಟ್ಟಿದ್ದೆ. ಮುಖದಲ್ಲಿ ತೆಳುವಾಗಿ ಗಡ್ಡ ಬಿಟ್ಟಿದ್ದೆ. ನನ್ನನ್ನು ನೋಡುವಾಗಲೇ ನಾನು ಮುಸ್ಲಿಂ ಎಂದು ತಿಳಿಯುತ್ತದೆ. ಆತ ನನ್ನನ್ನು ಅಡಿಯಿಂದ ಮುಡಿವರೆಗೆ ಎರಡೆರಡು ಬಾರಿ ದಿಟ್ಟಿಸಿ ನೋಡಿದ. ಬಿಲ್ ಕೊಟ್ಟು ಬಂದು ಬೈಕಲ್ಲಿ ಕೂತವನೇ ನನ್ನ ಹ್ಯಾಂಡಲ್ ನ ಬಲಬದಿಯ ಮಿರರ್ ತಿರುಗಿಸಿ ಅಡ್ಜಸ್ಟ್ ಮಾಡಿ ಮಿರರ್ ಮೂಲಕ ಆತನನ್ನು ನೋಡಿದೆ.ಆತ ಇನ್ನೂ ನನ್ನನ್ನೇ ನೋಡುತ್ತಿದ್ದ.

ಇಂತಹ ಅನುಭವ ಈ ಹಿಂದೊಮ್ಮೆಯೂ ನನಗಾಗಿದೆ. ನಾನು ಅರೆ ವೈದ್ಯಕೀಯ ವೃತ್ತಿಪರನಾದುದರಿಂದ ಸಹಜವಾಗಿಯೇ ನನ್ನ ಹಳ್ಳಿಯ ಜನ ಆರೋಗ್ಯ ಸಂಬಂಧೀ ಸಮಸ್ಯೆಗಳಿಗೆ ನನ್ನನ್ನು ಸಂಪರ್ಕಿಸಿ ಸಲಹೆ ಪಡೆಯುದಿದೆ. ಮತ್ತು ನನ್ನ ಹಳ್ಳಿಯ ಅನೇಕರು ಜಾತಿ ಮತಗಳಿಗತೀತವಾಗಿ ವೈದ್ಯಕೀಯ ಸೇವೆಗಾಗಿ ನನ್ನ ಬಳಿ ಬರುತ್ತಾರೆ. ಇದರಲ್ಲಿ ಅಂತಹ ವಿಶೇಷವೇನಿಲ್ಲ.
ನನ್ನ ಮನೆಪಕ್ಕದ ಕಲ್ಯಾಣಿ ಎಂಬ ವೃದ್ದೆಯೋರ್ವರಿಗೆ ಔಷಧಿ ತರಲೆಂದು ಹೋದಾಗ ರೋಗಿಯ ಹೆಸರು ಕೇಳಿ ಅಲ್ಲಿನ ಸಿಬ್ಬಂಧಿ ನನ್ನನ್ನು ಅಡಿಯಿಂದ ಮುಡಿಯವರೆಗೆ ನೋಡಿದ್ದಿದೆ.

ನಾನಿವುಗಳನ್ನು ಸೌಹಾರ್ದತೆ ಎಂಬ ಹಣೆಪಟ್ಟಿ ಹಚ್ಚಿ ಮಾಡುತ್ತಿಲ್ಲ.ನಾವು ಹಿಂದಿನಿಂದಲೂ ಹೀಗೆಯೇ ಸಹಜವಾಗಿ ಬದುಕಿದ್ದೇವೆ. ನನ್ನಪ್ಪನ ಅತ್ಯಂತ ಆತ್ಮೀಯ ಗೆಳೆಯನಾಗಿದ್ದವರು “ಲಿಂಗಪ್ಪ ರೈ”. ನನ್ನಪ್ಪ ಜಾತ್ಯಾತೀತತೆ ಎಂಬ ಹಣೆಪಟ್ಟಿ ಹೊತ್ತುಕೊಳ್ಳದೇ ಸಹಜವಾಗಿ ಬದುಕಿದ್ದರು. ನನ್ನಜ್ಜ ಅಜ್ಜಿ ಎಲ್ಲರೂ ಹಾಗೆಯೇ ಬಾಳಿ ಬದುಕಿದ್ದರು.ತೀರಾ ಇತ್ತೀಚಿನವರೆಗೆ ನನ್ನ ಮನೆಯ ಪಕ್ಕದ ಉರ್ಬಾನ್ ಎಂಬ ಕ್ರೈಸ್ತ ಸಹೋದರ ಬೆಳೆಯುವ ಮಲ್ಲಿಗೆ ಹೂವನ್ನು ನನ್ನ ಪಾಲಿಕ್ಲಿನಿಕ್ ಇರುವ ದೇರಳಕಟ್ಟೆ ಎಂಬಲ್ಲಿನ ಹೂವಿನ ವ್ಯಾಪಾರಿ ರಾಜೇಶ್ ಶೆಟ್ಟಿ ಎಂಬವರಿಗೆ ತಲುಪಿಸುತ್ತಿದ್ದೆ.ನನಗ್ಯಾವತ್ತೂ ಅದು ನಾನು ಜಾತ್ಯಾತೀತತೆಯ ಕಾರಣಕ್ಕಾಗಿ ಮಾಡುತ್ತಿದ್ದೇನೆ ಎಂದು ಹೊಳೆದಿದ್ದೇ ಇಲ್ಲ.

ಇಂದಿಗೂ ನನ್ನ ವೃತ್ತಿಯ ಭಾಗವಾಗಿ ಪ್ರತಿನಿತ್ಯ ಹಿಂದೂ ಕ್ರೈಸ್ತ ಮುಸ್ಲಿಮರೆನ್ನದೇ ನನ್ನ ರೋಗಿಗಳ ಮನೆಗೆ ಸೇವೆಯ ಕಾರಣಕ್ಕಾಗಿ ಹೋಗುತ್ತಿರುತ್ತೇನೆ. ಅದರಲ್ಲಿ ಬಿಜೆಪಿ, ಕಾಂಗ್ರೆಸ್ ಕಮ್ಯೂನಿಸ್ಟ್‌, ಎಸ್ಡಿಪಿಐ ಯಾವುದೇ ಪಕ್ಷದ ಬೆಂಬಲಿಗರಿರಬಹುದು
‌ಅವ್ಯಾವುವೂ ನನಗೆ ಬಿದ್ದು ಹೋಗಿಲ್ಲ. ಅವೆಲ್ಲಾ ನನ್ನ ಬಿಸಿನೆಸ್ ಅಲ್ಲ.

ಇಂದಿಗೂ ನನ್ನ ಪಾಲಿಕ್ಲಿನಿಕಿಗೆ ಅದೆಷ್ಟೋ ಹಿಂದೂ ರೋಗಿಗಳನ್ನು ಮುಸ್ಲಿಮರು ಮತ್ತು ಮುಸ್ಲಿಂ ರೋಗಿಗಳನ್ನು ಹಿಂದೂಗಳು ಕರೆತರುತ್ತಾರೆ.
ಹಿಂದೂ ವೃದ್ದರನ್ನು ಮಕ್ಕಳನ್ನು ಮುಸ್ಲಿಮರೂ ,ಮುಸ್ಲಿಮರನ್ನು ಹಿಂದೂಗಳು ರಸ್ತೆ ದಾಟಿಸುವ ದೃಶ್ಯವನ್ನು ನಾನು ನೋಡುತ್ತಿರುತ್ತೇನೆ.
ಮೊನ್ನೆ ಮೊನ್ನೆ ಬಂಟ್ವಾಳದಲ್ಲಿ ಹದಿನೆಂಟರ ಹರೆಯದ ಇಬ್ಬರು ಹಿಂದೂ ಮುಸ್ಲಿಂ ಗೆಳೆಯರು ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ಒಟ್ಟೊಟ್ಟಿಗೇ ಪ್ರಾಣ ತೆತ್ತರು.

ಯಾರೋ ಏನೋ ಅಂದಂತೆ ನನ್ನ ಮಂಗಳೂರು ಹಾಗಲ್ಲವೇ ಅಲ್ಲ.ಇಲ್ಲಿ ಇಂದಿಗೂ ಮನುಷ್ಯ ಸಂಬಂಧಗಳು ಧರ್ಮಗಳಾಚೆಗೂ ವಿಸ್ತರಿಸಿಕೊಂಡಿವೆ.‌ಹೀಗೆ ವಿಸ್ತರಿಸಿದವರು ಯಾರೂ ಅದನ್ನು ವಿಶೇಷ ಸಂಬಂಧಗಳೆಂದು ಚಿತ್ರಿಸುವುದೂ ಇಲ್ಲ.ಅವರಿಗೆ ಇಂತಹ ಕೊಡುಕೊಳ್ಳುವಿಕೆ, ಸಹಬಾಳ್ವೆ ಅವರ ಬದುಕಿನ ಅತ್ಯಂತ ಸಹಜ ಭಾಗವಷ್ಟೆ. ರಾಜಕೀಯವಾಗಿ ಯಾರಿಗೆ ಯಾವುದು ಸರಿ ಅನಿಸುತ್ತದೋ ಅವರವರಿಗೆ ಬಿಟ್ಟದ್ದು. ಮನುಷ್ಯ ಸಂಬಂಧಗಳೆಂದರೆ ಅವು ರಾಜಕೀಯವನ್ನು ಮೀರಿರುವಂತಹದ್ದು. ನಿಜ ಹೇಳಬೇಕೆಂದರೆ ಮಂಗಳೂರಿನಲ್ಲಿ ಇಂತಹವರೇ ಹೆಚ್ಚು.ಅವರ್ಯಾರಿಗೂ ಅವುಗಳನ್ನು ಪ್ರಚುರಪಡಿಸಬೇಕಾಗಿಲ್ಲ. ಯಾರಿಗೆ ಜಾತಿಧರ್ಮಗಳ ಮಧ್ಯೆ ಬೆಂಕಿ ಹಚ್ಚಿ ದೊಂಬಿ ಮಾಡಬೇಕೋ ಅವರಿಗೆ ಮಾತ್ರ ಇವೆಲ್ಲಾ ವಿಶೇಷ ಅಥವಾ ಅಪರಾಧಿತ ಸಂಬಂಧಗಳಾಗಿ ಕಾಣುತ್ತವೆ.
ಕೊನೆಯ ಮಾತು : ಅವರು ನಿಜಕ್ಕೂ ಬಹುಸಂಖ್ಯಾತರಲ್ಲ. ಅವರು ಖಾಲಿ ಕೊಡಪಾನದೊಳಗೆ ಕಲ್ಲು ಹಾಕಿ ಸದ್ದು ಮಾಡುತ್ತಿದ್ದಾರಷ್ಟೇ…..
-ಇಸ್ಮತ್ ಪಜೀರ್

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group