ನಿಮ್ಮ ಬರಹ

ಕೇರಳಿಗರೇ…ಕ್ಷಮೆ ಕೇಳುವಿರಾ ಈ ಬಡಪಾಯಿ ಮಹಿಳೆಯೊಂದಿಗೆ?

ನಿಮ್ಮ ಬರಹದಲ್ಲಿ ಅಬೂ ಸೋಹಾ

ವರದಿಗಾರ (ಅ.19): ಡಾ. ಹಾದಿಯ ಪ್ರಕರಣದಲ್ಲಿ ಬಲವಂತದ ಮತಾಂತರ, ಸಿರಿಯಾ, ಐಸಿಸ್ ಇದ್ಯಾವುದೂ ಇಲ್ಲವೆಂದು ಆ ಕಡೆ ಕೇಂದ್ರ ಸರಕಾರದ ಅಧೀನದಲ್ಲೇ ಅಥವಾ ಯಕಶ್ಚಿತ ಸರ್ಕಾರದ ಆದೇಶ ಪ್ರಕಾರವೇ ಕಾರ್ಯನಿರ್ವಹಿಸುವ ಎನ್ ಐ ಎ ಮೊಣಕಾಲೂರಿ ಸೋಲೊಪ್ಪಿಕೊಂಡಿರುವ ಸಂದರ್ಭದಲ್ಲಿ ನಾವೆಲ್ಲಾ ಮರೆತಿರುವಂತಹಾ ಮತ್ತು ಈಗ ನೆನಪಿಸಲೇಬೇಕಾದಂತಹಾ ಬಡಪಾಯಿ ಮಹಿಳೆಯೊಬ್ಬರಿದ್ದಾರೆ. ಅವರೇ ಎ ಎಸ್ ಝೈನಬಾ. ಹೌದು ನಮ್ಮೆಲ್ಲರ ಸ್ವಾಭಿಮಾನ ಮತ್ತು ಹೆಮ್ಮೆಯಾಗಿರುವಂತಹಾ ಝೈನಬಾ ಟೀಚರ್.

ಆ ಬಡಪಾಯಿ ಸ್ತ್ರೀ ಯಾವುದೇ ತಪ್ಪು ಮಾಡದಿದ್ದರೂ ಫ್ಯಾಸಿಸ್ಟ್ ಮಾಧ್ಯಮ “ದಲ್ಲಾಳಿ” ಗಳ ನಿರಂತರ ಅಪಪ್ರಚಾರಗಳಿಗೆ, ಮಾನಸಿಕ ಕಿರುಕುಳಗಳಿಗೆ ಮತ್ತು ಕುಟುಕು ಕಾರ್ಯಾಚರಣೆಗಳಿಗೆ ಈಡಾಗಿ ಮಾನಸಿಕವಾಗಿ ಜರ್ಜರಿತಗೊಂಡಿದ್ದರು. ಪ್ರತಿನಿತ್ಯ ಸಿಗುತ್ತಿದ್ದ ಕುಹಕ ಬಿರುದುಗಳೆಷ್ಟು. ‘ಮತಾಂತರ ರಾಣಿ’, ‘ಐಸಿಸ್ ರಿಕ್ರೂಟರ್’, ‘ಅಂತಾರಾಷ್ಟ್ರೀಯ ಭಯೋತ್ಪಾದಕರ ಕೇರಳದ ಕೊಂಡಿ’, ಸೈಕಾಲಾಜಿಕಲ್ ಅಪಹರಣದ ರೂವಾರಿ’, ‘ಪುರುಷರನ್ನೇ ಮಾಸ್ಮರೈಸ್ ಮಾಡುವ ಮಹಿಳೆ’ !!! ಅಬ್ಬಬ್ಬಾ ಹೀಗೆ ಒಂದೋ ಎರಡೋ. ಫ್ಯಾಸಿಸ್ಟ್ ಮಾಧ್ಯಮ ಮುಖವಾಣಿಗಳು ಪ್ರತಿನಿತ್ಯ ಈ ರೀತಿಯ ಅಟ್ಟಹಾಸಗೈದು ಅಬ್ಬರಿಸುತ್ತಿರಲು ಧೃತಿಗೆಡದೆ ಸಹಿಸಿಕೊಂಡಿರಲು ಕೇರಳದ ಓರ್ವ ಸಾಮಾನ್ಯ ಗೃಹಿಣಿಗೆ ಸಾಧ್ಯವೇ ? ಆದರೆ ಅದನ್ನು ಸಾಕಾರಗೊಳಿಸಿದವರೇ ಈ ಝೈನಬಾ ಟೀಚರ್ !!

ಒಂದೆಡೆ ಮಾಧ್ಯಮಗಳು ಝೈನಬಾ ವಿದೇಶಕ್ಕೆ ಪರಾರಿಯಾಗಿದ್ದಾರೆ, ಭೂಗತ ಬಂಕರ್ ನೊಳಗೆ ಅವಿತುಕೊಂಡಿದ್ದಾರೆ, ಪೊಲೀಸರು ಅವರನ್ನು ಸುತ್ತುವರಿದಿದ್ದಾರೆ, ಇನ್ನೇನು ಬಂಧಿಸಲಿದ್ದಾರೆ ಎಂಬ ಪುಂಖಾನುಪುಂಖ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹರಿಯಬಿಟ್ಟು, ತಮ್ಮೊಳಗೆ ಹುದುಗಿಕೊಂಡಿರುವ ಅದಷ್ಟೂ ಮತಾಂಧತೆಯ ಕ್ರೂರ ವಿಷವನ್ನು ಕಾರುತ್ತಿರಲು, ಆ ಸಾಮಾನ್ಯ ಧೀರ ಮಹಿಳೆ ಒಂದಿನಿತೂ ವಿಚಲಿತಳಾಗಲಿಲ್ಲ. ತನ್ನ ಎಂದಿನ ಸೌಮ್ಯ ಮುಖಭಾವದೊಂದಿಗೆ ಮತ್ತು ಮುಗುಳ್ನಗೆಯೊಂದಿಗೆ ಹೊರಬಂದು ದಿಟ್ಟತನದಿಂದ ಮಾಧ್ಯಮಗಳ ಕಡೆಯಿಂದ ಬಾಣಗಳಂತೆ ತೂರಿಬಂದ ಎಲ್ಲಾ ಪ್ರಶ್ನೆಗಳಿಗೂ ಪ್ರಬುದ್ಧತೆಯಿಂದ, ಸ್ಥಿತಪ್ರಜ್ಞಳಾಗಿ, ಆತ್ಮವಿಶ್ವಾಸದಿಂದ ಉತ್ತರಿಸಿ ತನ್ನ ಸುತ್ತ ಕೆಲ ಮಾಧ್ಯಮಗಳು ಸೃಷ್ಟಿಸಿದ್ದ ಎಲ್ಲಾ ಕೋಲಾಹಲಗಳನ್ನು ಮೌನವಾಗಿಸಿದ್ದರು ಝೈನಬಾ ಟೀಚರ್ !! ಇದೇ ಮುಖಭಾವದಿಂದಾಗಿತ್ತು ಎಲ್ಲಾ ತನಿಖಾ ಏಜನ್ಸಿ ಅಧಿಕಾರಿಗಳ ಚಿತ್ರ ವಿಚಿತ್ರ, ಗಂಟೆಗಟ್ಟಳೆ ನಡೆಸಿದ್ದ ತನಿಖಾ ವಿಧಾನಗಳನ್ನೆದುರಿಸಿ ಜಯಿಸಿದ್ದು ಆ ಹೆಣ್ಣುಹುಲಿ ! ಸತ್ಯ ತನ್ನ ಕಡೆಯಲ್ಲಿದೆ ಎಂದು ನೂರು ಶೇಕಡಾ ವಿಶ್ವಾಸವಿರುವ ಯಾರೊಬ್ಬರೂ ತಳೆಯಬಹುದಾದ ನಿಲುವದು, ಆ ದಿಟ್ಟ ನಿಲುವು.

ಹಾದಿಯಾ ಎಂದಲ್ಲ, ತನಗೆ ಜೀವಭಯವಿದೆ ಎಂದು ಆರ್ತನಾದಗೈಯ್ಯುವ ಯಾವೊಬ್ಬ ಹೆಣ್ಣಿಗೆ ಬೇಕಾದರೂ ನನ್ನ ಕೊನೆಯ ಉಸಿರಿರುವ ವರೆಗೆ ಅವರ ಜೊತೆ ನಿಂತು ಹೋರಾಡುವೆನು, ಅದಕ್ಕೆ ಬೇಕಾಗಿ ಅದೇನೇ ಕಷ್ಟ ನಷ್ಟಗಳನ್ನು ಸಹಿಸಬೇಕಾಗಿ ಬಂದರೂ ನಾನದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಹೇಳಿದ ಝೈನಬಾ ಟೀಚರ್ ಯಾವ ಮಹಿಳಾಪರ ಹೋರಾಟಗಾರರ ಗಮನ ಸೆಳೆಯದ್ದು ಮತ್ತು ಅನುಕಂಪ ಗಿಟ್ಟಿಸದ್ದು ಪರಿಸ್ಥಿತಿಯ ವಿಪರ್ಯಾಸವೆನ್ನಬಹುದೇನೋ. ಆದರೆ ಅದ್ಯಾವುದೂ ಝೈನಬಾ ಟೇಚರ್ ತಾನಿಟ್ಟ ಹೆಜ್ಜೆಯಿಂದ ಹಿಂದಡಿಯಿಡಲು ಕಾರಣವಾಗಿಲ್ಲ, ಆಗುವುದೂ ಇಲ್ಲ. ಸತ್ಯದ ಪರ ಹೋರಾಟಕ್ಕೆ ಇಳಿದವರು ಹೊಗಳಿಕೆಗೆ ಹಿಗ್ಗುವವರಲ್ಲ, ತೆಗಳಿಕೆಗೆ ಕುಗ್ಗುವವರೂ ಅಲ್ಲ. ಟೀಕೆ – ವಿಮರ್ಶೆಗಳು ಅವರನ್ನು ಇನ್ನಷ್ಟು ಮೊಣಚುಗೊಳಿಸಿ ಪ್ರಖರವಾಗಿಸುತ್ತದೆಯಷ್ಟೆ.

ಅತ್ತ ಕಡೆ ಮಾಧ್ಯಮಗಳು ಝೈನಬಾರನ್ನು ಗುರಿಪಡಿಸಿ ದಾಳಿ ಮಾಡುತ್ತಿರಲು ಇತ್ತ ಕಡೆ ಸಾಮಾಜಿಕ ತಾಣಗಳಲ್ಲಿ ಎಡ ಉದಾರವಾದಿಗಳು, ಪ್ರಗತಿಪರತೆಯ ಮುಖವಾಡಧಾರಿಗಳು ತಮ್ಮದೂ ಪಾಲಿರಲೆಂದು ಸಿಕ್ಕ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಝೈನಬಾರನ್ನು ಭಯಾನಕ ರೂಪದಲ್ಲಿ ಚಿತ್ರೀಕರಿಸಿದ್ದರು. ಅವರಿಗೆಲ್ಲಾ ಸಾಮಾಜಿಕ ಬದ್ಧತೆ ಮತ್ತು ಪ್ರಾಮಾಣಿಕತೆ ಅನ್ನುವುದಿದ್ದರೆ ಝೈನಬಾರೊಂದಿಗೆ ಕ್ಷಮೆ ಕೇಳುವ ಸಮಯ ಬಂದೊದಗಿದೆ. ಕ್ಷಮೆ ಕೇಳುವಿರಾ….?

-ಅಬೂ ಸೋಹಾ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group