ನಿಮ್ಮ ಬರಹ

#MeToo ಮತ್ತು ಮುಟ್ಟು : ಪರದೆಯಾಚೆಗಿನ ಒಂದು ನೋಟ

ವರದಿಗಾರ (ಅ 17) : #MeToo ಮತ್ತು ಮುಟ್ಟು! ಕಳೆದ ಕೆಲವು ದಿನಗಳಿಂದ ವ್ಯಾಪಕವಾಗಿ ಚರ್ಚಿಸಲ್ಪಡುತ್ತಿರುವ ಎರಡು ವಿಷಯಗಳಿವು. ಮಾತು, ಕೃತಿ ಅಥವಾ ನೋಟದಿಂದ ತಮ್ಮನ್ನು ಬೆತ್ತಲುಗೊಳಿಸಿದ, ಮುಜುಗರಕ್ಕೀಡು ಮಾಡಿದ ಪುರುಷ ಜಂತುಗಳ ವಿರುದ್ಧ ನೊಂದ ಹೆಣ್ಣುಮಕ್ಕಳು ಆರಂಭಿಸಿದ ತಾನೂ ಕಿರುಕುಳಕ್ಕೀಡಾಗಿದ್ದೇನೆ ಎಂಬ #MeToo ಚಳವಳಿಯು ಹಲವು ಕಾಮುಕ ವ್ಯಾಘ್ರರನ್ನು ಬೆತ್ತಲುಗೊಳಿಸಿದೆ. ಜೀವನೋಪಾಯಕ್ಕಾಗಿ ಉದ್ಯೋಗಕ್ಕೆ ಸೇರಿದರೆ ಅಲ್ಲಿ ಬಾಸ್’ನಿಗೆ ‘ಉಚಿತ ಸೇವೆ’ ನೀಡಬೇಕಾದ ದುರವಸ್ಥೆ ಅಥವಾ ಆತನ ಹೊಲಸು ಕಾಮವಾಸನೆಯ ಮಾತುಗಳನ್ನು, ಸವರುವಿಕೆಗಳನ್ನು ಸಹಿಸಬೇಕಾಗಿ ಬಂದ ನತದೃಷ್ಟರು ತಮ್ಮ ಜೀವನದಲ್ಲಿ ಸಂಭವಿಸಿದ ನೋವಿನ ಕತೆಗಳನ್ನು ಬಹಿರಂಗಪಡಿಸುವ ಚಳವಳಿಯ ಪರ-ವಿರುದ್ಧ ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿವೆ.

“ಹೆಣ್ಣಿನ ಭಾವನೆಗಳನ್ನು ಗೌರವಿಸದ, ಅವಳ ಸ್ವಾತಂತ್ರ್ಯವನ್ನು ನಿರಾಕರಿಸಿದ, ಭೋಗದ ವಸ್ತುಗಳಾಗಿ ಪರಿಗಣಿಸಿದ, ತನಗೆ ಅವಳ ದೇಹದ ಮೇಲೆ,ಖಾಸಗಿತನದ ಮೇಲೆ  ಅಧಿಕಾರವಿದೆ ಎಂದು ಭಾವಿಸಿದ ಸಂಭಾವಿತರ ಹೊರಕವಚ ಹೊದ್ದ ನೀಚರ ವಿರುದ್ಧ ಹೆಣ್ಣು ಮಕ್ಕಳು ಸಾರಿದ ಚಳವಳಿ  ಇನ್ನಷ್ಟು ಕಿರುಕುಳಗಳು ಸಂಭವಿಸದಂತೆ ಎಚ್ಚರಿಕೆ ಗಂಟೆಯಾಗಲಿದೆ” ಎಂಬುದು ಚಳವಳಿ ಪರರ ವಾದವಾದರೆ, ” ಪುರುಷನ ವಿಕೃತಿಗಳ ಪಾಲುದಾರಳೂ,ಫಲಾನುಭವಿಯೂ ಆದ ಹೆಣ್ಣಿನ ಬ್ಲ್ಯಾಕ್ ಮೇಲ್ ತಂತ್ರ ಹಾಗೂ ಒಣಜಂಭ ಪ್ರದರ್ಶನವಲ್ಲದೆ ಈ ಚಳವಳಿಯಲ್ಲಿ ಹೇಳತಕ್ಕ ಯಾವ ಹೊಸತನಗಳೂ ಇಲ್ಲ, ಕಾಮದ ಮಾರುಕಟ್ಟೆ ಎಂದರಿತೇ ಅದರಲ್ಲಿ ಕಾಲಿಟ್ಟವರು, ವಿಕೃತಿಗಳಿಗೆ  ಸಹಕರಿಸಿ ಉನ್ನತಿಗೇರಿದವರು, ವೈಯಕ್ತಿಕ ಉನ್ನತಿಗಾಗಿ ಇತರ ಹೆಣ್ಣುಗಳನ್ನೂ ಈ ಕಾಮಪಿಪಾಸುಗಳಿಗೆ ಒದಗಿಸಿ ಕೊಟ್ಟವರು, ಅಥವಾ ಅರ್ಹರನ್ನು ತುಳಿದು ಉನ್ನತಿಗೇರಲು ಸ್ವಯಂ ಸಮರ್ಪಿಸಿಕೊಂಡವರು, ತಮ್ಮ ಕಾರ್ಯಸಾಧಿಸಿದ ಬಳಿಕ ಸಾಚಾತನ ಪ್ರದರ್ಶಿಸುತ್ತಿದ್ದಾರೆ” ಎಂದು ಇದನ್ನು generalise  ಮಾಡುವ ಖಾಯಂ ಶೋಷಕರು ಈ ಚಳವಳಿಯನ್ನು ತುಚ್ಛವಾಗಿ  ಕಾಣಲು ಯತ್ನಿಸುತ್ತಿದ್ದಾರೆ. ಹೆಣ್ಣು ಮಕ್ಕಳು ಹೇಗೆ ಬೇಕಾದರೂ ವರ್ತಿಸಿರಲಿ, ಆದರೆ ಪುರುಷಲೋಕ ಹೆಣ್ಣನ್ನು ಭೋಗದ ವಸ್ತುವಾಗಿ ಮಾತ್ರ ಕಂಡುಕೊಂಡದ್ದಂತೂ ಪೂರ್ಣ ಸತ್ಯ. ಇನ್ನೊಬ್ಬರ ಸುಪ್ತ ಅಥವಾ ಬಹಿರಂಗ ಅಜೆಂಡಾಗಳು ಏನೇ ಇರಲಿ, ನಮ್ಮ ಅಪರಾಧ ಸಮರ್ಥನೀಯವಲ್ಲ. ಇದು ಉನ್ನತ ಸಾಮಾಜಿಕ ಸ್ಥಾನಮಾನ, ವಿದ್ಯೆ, ಉದ್ಯೋಗ, ಆರ್ಥಿಕ ಸಬಲತೆ ಇರುವ ಸೆಲೆಬ್ರಿಟಿಗಳ ಬಹಿರಂಗ ಪಡಿಸುವಿಕೆಗಳಾದರೆ,ಅನಕ್ಷರಸ್ಥ, ಧ್ವನಿ ಕಳೆದುಕೊಂಡ, ಬಡ/ಮಧ್ಯಮವರ್ಗದ ಹೆಣ್ಣು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು ಶತ ಶತಮಾನಗಳಿಂದ ಸದ್ದಿಲ್ಲದೆ ಮುಚ್ಚಲ್ಪಟ್ಟು ಹೋಗುತ್ತವೆ ಮತ್ತು ಅವರ ನೋವಿಗೆ ಸ್ಪಂದಿಸುವವರು ಯಾರೂ ಇಲ್ಲ ಅನ್ನುವುದೇ ಇಲ್ಲಿನ ಒಂದು ಕಠೋರ ಸತ್ಯ.ಹೆಣ್ಣಿನ ಅಸಹಾಯಕತೆಯ ದುರುಪಯೋಗ ಖಂಡಿತಾ ಅಕ್ಷಮ್ಯ. ನಾವು ಹಿಂದು-ಮುಂದು ನೋಡದೆ ಕುರುಡಾಗಿ ಗೌರವಿಸುವ, ಸಕಲ ಒಳಿತುಗಳ ಸಾಕಾರಮೂರ್ತಿಗಳಾಗಿ ಪರಿಗಣಿಸುವ ಸೆಲೆಬ್ರಿಟಿಗಳ ಹಿಂದೆ ಈ ರೀತಿಯ ಕರಾಳ  ಮುಖಗಳಿವೆ ಎಂಬುದು ಜೀರ್ಣಿಸಲು ಕಷ್ಟವಾದರೂ, ವಾಸ್ತವಗಳು ಯಾವಾಗಲೂ ಹಾಗೆಯೇ ಇರುತ್ತವೆ. ಕಿರುಕುಳ ನಡೆದು ಹಲವಾರು ವರ್ಷಗಳ ಬಳಿಕ ಬಹಿರಂಗಪಡಿಸುವ ಔಚಿತ್ಯವನ್ನು ಪ್ರಶ್ನಿಸುವುದು ಅಷ್ಟು ಸಮಂಜಸವಲ್ಲ.ಬಹುಶಃ  ಆಕೆಯ ಪರಿಸ್ಥಿತಿ ಈ ವಿಳಂಬಕ್ಕೆ ಕಾರಣವಾಗಿರಬಹುದು. ಇದರ ಜೊತೆಗೆ MeToo ಚಳವಳಿ ಸಮರ್ಥಕರಲ್ಲಿ ಹಲವರು ಇತರರನ್ನು ‘ಹೇಳಿ, ಹೇಳಿ ‘ಎಂದು  ಪ್ರಚೋದಿಸುವ ಜೊತೆಗೇ, ನಿಶ್ಚಿತವಾಗಿಯೂ ತಮಗೂ ಸಂಭವಿಸಿರಬಹುದಾದ ನೋವಿನ ಕತೆಗಳನ್ನು ಬಹಿರಂಗಪಡಿಸುವುದೂ ಅಗತ್ಯವೆನಿಸುತ್ತದೆ.

ಮೇಲ್ಮಧ್ಯಮ ವರ್ಗದ ಹೇಳಿಕೆಗಳೇನೇ ಇದ್ದರೂ, ಈ ಶೋಷಣೆಗೆ ಒಂದಲ್ಲ ಒಂದು ವಿಧದಲ್ಲಿ ತನ್ನ ಪಾಲು ನೀಡದ ಪುರುಷರು ಯಾರಿದ್ದಾರೆ? Physical rape ಮಾಡದಿದ್ದರೂ, verbal or visual rape ಮಾಡದ ಪುರುಷರು ಯಾರಿದ್ದಾರೆ? ಸುಂದರ ಸ್ತ್ರೀಯರನ್ನು ಕಂಡಾಗ ಬಯಕೆ ಮೊಳಕೆಯೊಡೆದು ಆಕರ್ಷಿಸಲು ಕನಿಷ್ಠ ಮಾತು ಅಥವಾ ದೃಷ್ಟಿಯಿಂದ ಶ್ರಮಿಸದವರು ಯಾರಿದ್ದಾರೆ? ಮನದಾಳದಿಂದ ಹೇಳೋಣ, #MeToo, ನಾನೂ ಮನಸ್ಸು ನಿಯಂತ್ರಿಸಲಾಗದೆ ಅದರ ಭಾಗವಾಗಿದ್ದೆ”ಎಂದು.

ಮುಟ್ಟು ಅನ್ನುವುದು ಈ ಜಗತ್ತಿನ ಉಳಿವಿಗೆ ಕಾರಣವಾದ ಏಕೈಕ ಪ್ರತ್ಯಕ್ಷ ಕಾರಣವಾದರೂ, ಅದು ಅತ್ಯಂತ ನಿಕೃಷ್ಟ ವಿಷಯವೆಂದು ಪರಿಗಣಿಸಲ್ಪಟ್ಟದ್ದು ಹೇಗೆ ಅನ್ನುವುದಕ್ಕೆ ಸಕಾರಣಗಳು ಇಂದಿಗೂ ಲಭಿಸಿಲ್ಲ. ಪ್ರತಿಯೋರ್ವರ ಹುಟ್ಟಿಗೆ ಕಾರಣವಾಗಿ,ತನ್ಮೂಲಕ ಪ್ರಪಂಚದ ಸಕಲ ಸ್ಪಂದನಗಳಿಗೂ ಕಾರಣವಾದ ಮುಟ್ಟು ಶುಭ ಸಂದರ್ಭಗಳಲ್ಲಿ, ಜಗತ್ತಿನ ಸುಂದರ ಸ್ಥಳಗಳಲ್ಲಿ ಅಶುದ್ಧ!!  ‘ನಂಬಿಕೆ’ ಮಾತ್ರ ಮುಟ್ಟು ಅಶುದ್ಧಿ ಎಂದು ವಾದಿಸುವವರ ಸಮರ್ಥನೆಗಿರುವ ಏಕೈಕ  ಆಯುಧ.”ಮುಟ್ಟಾದ ಸ್ತ್ರೀ ಅಶುದ್ಧಳು,ಅವಳನ್ನು ಸ್ಷರ್ಶಿಸಲಾಗದು, ಅವಳು ತಯಾರಿಸಿದ ಅಡುಗೆ ಉಣ್ಣಬಾರದು,ಮನೆಯೊಳಗೆ ಪ್ರವೇಶಿಸಬಾರದು”ಎಂದೆಲ್ಲಾ ಹೇಳುವವರು ತಮ್ಮ ಹುಟ್ಟಿಗೆ ಕಾರಣವಾಗಿರುವುದು ಹೆಣ್ಣು ಮುಟ್ಟಾಗಿರುವುದರಿಂದ ಎಂಬ ಪರಮ ಸತ್ಯವನ್ನು ಯಾಕೆ ಮರೆಯುತ್ತಾರೆ? ಮುಟ್ಟಾಗುವ ಮುಜುಗರ,ಅಪಮಾನ,ದೈಹಿಕ/ಮಾನಸಿಕ ಕಿರಿಕಿರಿಗಳು ಮಾತ್ರವಲ್ಲದೆ ಗರ್ಭಿಣಿಯಾಗಿ,ತಾಯಿಯಾಗಿ  ಅಪಾರ ತಾಳ್ಮೆ,  ನೋವು ಸಹಿಸುವ ಹೆಣ್ಣು ಯಾಕೆ ಕೆಲವು ದಿವಸಗಳಲ್ಲಿ ಅಸ್ಪೃಶ್ಯಳಾಗಬೇಕು?  ಶಬರಿಮಲೆಯೂ ಸೇರಿದಂತೆ ಯಾವುದಾದ್ರೂ ಕ್ಷೇತ್ರ ಪ್ರವೇಶ ಮಹಿಳೆಯರಿಗೂ ನಿರಾತಂಕವಾಗಿರಬೇಕೆಂಬ ವಾದದ ಸಮರ್ಥನೆಗಾಗಿ ನಾನು ಈ ಮಾತುಗಳನ್ನು ಹೇಳುತ್ತಿಲ್ಲ. ನನ್ನಲ್ಲಿ ದ್ವಂದ್ವಗಳೇನೂ ಇಲ್ಲ;

ಅದನ್ನು ತೀರ್ಮಾನಿಸಬೇಕಾದುದು ಕಾನೂನುಗಳಲ್ಲ,ಸಂಬಂಧಪಟ್ಟ ವ್ಯವಸ್ಥೆಗಳು ಎಂದೇ ನಾನು ಭಾವಿಸುತ್ತೇನೆ. ಮಹಿಳೆಯರಿಗೆ ಕ್ಷೇತ್ರ ಪ್ರವೇಶ ನೀಡಬೇಕೆಂಬ ವಾದ ಮುಂದಿಡುವವರಿಗೆ ನನ್ನ ಮಾತುಗಳಲ್ಲಿ  ವಿರೋಧಗಳಿದ್ದರೂ, ನನ್ನದಲ್ಲದ ವಿಷಯದಲ್ಲಿ ವೃಥಾ ವಾದಕ್ಕೆ ನಾನಿಲ್ಲ. ಒಂದನೆಯದಾಗಿ ಆ ವಿಷಯ ಧಾರ್ಮಿಕ ವಲಯದೊಳಗೆ ತೀರ್ಮಾನಿಸಲ್ಪಡಬೇಕು,ಅಥವಾ ಹೀಗೂ ಆಗಬಹುದು; ಕೆಲವರು ಹೇಳಿಕೊಳ್ಳುವಂತೆ “ಧರ್ಮ/ದೇವರುಗಳು ಎನ್ನುವ ವಿಶ್ವಾಸಗಳೇ ಮಿಥ್ಯೆ,ಜನತೆ ತಮ್ಮ ಹಕ್ಕುಗಳನ್ನು ಕೇಳುವುದನ್ನು ತಡೆಯಲಿಕ್ಚಾಗಿ ಪುರೋಹಿತಶಾಹಿ ಮತ್ತು ಶೋಷಕ ವರ್ಗ ಸೃಷ್ಟಿಸಿದ ಭಾವನಾತ್ಮಕ ವಿಷಯ ಮಾತ್ರ”ವಾಗಿದ್ದರೆ, ಲಕ್ಷಾಂತರ ಜನರನ್ನು ಆ ಪಾಪಕೂಪದೊಳಗೆ ತಳ್ಳಿ ಹಾಕಿ,ಶೋಷಕರಿಗೆ ಇನ್ನಷ್ಟು ಶೋಷಿತರನ್ನು ಒದಗಿಸಿ ಕೊಟ್ಟ ದೋಷ ಅವರಿಗೂ ಬಂದೀತು.

ಉಮ್ಮರ್ ಬೋರ್ಕಳ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group