ವರದಿಗಾರ-ಪಶ್ಚಿಮ ಬಂಗಾಳ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯ ಐಟಿ ಸೆಲ್ (ಮಾಹಿತಿ ತಂತ್ರಜ್ಞಾನ ವಿಭಾಗ) ಕಾರ್ಯದರ್ಶಿ ತರುಣ್ ಸೇನ್ ಗುಪ್ತರ ಜಾಮೀನು ಅರ್ಜಿಯನ್ನು ಪಶ್ಚಿಮ ಬಂಗಾಳದ ಜಿಲ್ಲಾ ನ್ಯಾಯಾಲಯವು ಬುಧವಾರದಂದು ತಳ್ಳಿ ಹಾಕಿದೆ.
ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಕೋಮು ಪ್ರಚೋದನಕಾರಿ ವೀಡಿಯೋ ಒಂದನ್ನು ಸುಳ್ಳು ಮಾಹಿತಿಯೊಂದಿಗೆ ಪೋಸ್ಟ್ ಮಾಡಿದ ಪ್ರಕರಣದಲ್ಲಿ ತರುಣ್ ಸೆನ್ ರನ್ನು ಜುಲೈ 12ರಂದು ಬಂಧಿಸಲಾಗಿತ್ತು.
ತರುಣ್ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ ನಕಲಿ ವೀಡಿಯೋ, ಪೊಲೀಸ್ ಅಧಿಕಾರಿಯೊಬ್ಬರು ಯುವಕನೊರ್ವನನ್ನು ಥಳಿಸುವುದನ್ನು ಬಿಂಬಿಸುತ್ತಿತ್ತು. ಎರಡು ಮುಸ್ಲಿಂ ಐಪಿಎಸ್ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿ, ಅವರು ಪೂರ್ವಾಗ್ರಹ ಪೀಡಿತರಾಗಿ ಹಿಂದೂ ಯುವಕರನ್ನು ಥಳಿಸುತ್ತಿದ್ದರು ಎಂದು ವೀಡಿಯೋದಲ್ಲಿ ತೋರಿಸಲಾಗಿತ್ತು. ಜೊತೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನೂ ತೋರಿಸುತ್ತಿತ್ತು.
ಸಿಐಡಿ ಅಧಿಕಾರಿಗಳು ತರುಣ್ ರನ್ನು ಬಧೂರಿಯ ಹಾಗೂ ಬಸಿರ್ಹಟ್ ಕೋಮುಗಲಭೆಯ ಬಳಿಕ ಬಂಧಿಸಿದ್ದರು. ಇದು ಎರಡನೇ ಬಾರಿ ತರುಣ್ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ. ಇದಕ್ಕಿಂತ ಮೊದಲು ಆಗಸ್ಟ್ 3ರಂದು ಭಿರ್ಬುಮ್ ಜಿಲ್ಲಾ ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು
