ವರದಿಗಾರ (ಅ 10) : ಮಂಗಳೂರು: ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮಂಗಳೂರು ಸಿಟಿಯು ಆಯ್ಕೆಗೊಂಡಿದ್ದು, ಇದರ ಭಾಗವಾಗಿ ಸ್ವಚ್ಛತೆಗೆ, ನೈರ್ಮಲ್ಯಕ್ಕೆ ಆದ್ಯತೆ ಕೊಡಬೇಕಾಗಿದೆ ಆ ನಿಟ್ಟಿನಲ್ಲಿ ಕಸಾಯಿಖಾನೆ ಅಭಿವೃದ್ಧಿಗೆ 15 ಕೋಟಿ ಮಂಜೂರಾಗುವಂತಹ ಸಂದರ್ಭದಲ್ಲಿ ಬಿಜೆಪಿಯು ವಿರೋಧಿಸುವುದು ಹಾಸ್ಯಸ್ಪದವಾಗಿದೆ. ಏಕೆಂದರೆ ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿದೆ ಕಸಾಯಿಖಾನೆ ಅಭಿವೃದ್ಧಿ ಕಾರ್ಯ. ಇದನ್ನೇ ವಿರೋಧಿಸಿದರೆ ಕೇಂದ್ರ ಸರಕಾರದ ಯೋಜನೆಯಲ್ಲಿ ಬಿಜೆಪಿಗೆ ಸಹಮತವಿಲ್ಲ ಮತ್ತು ಬಿಜೆಪಿಯ ದಂದ್ವ ನಿಲುವು ಇಲ್ಲಿ ಸ್ಪಷ್ಟವಾಗುತ್ತದೆ. ಕಸಾಯಿಖಾನೆ ಅಂದರೆ ಕೇವಲ ಮುಸಲ್ಮಾನರು ಮಾತ್ರ ಸೇವಸಲಿಕ್ಕಿರುವ ಮಾಂಸ ತಯಾರಾಗುವ ಕೇಂದ್ರವಲ್ಲ , ಬದಲಾಗಿ ಮಂಗಳೂರಿನ ಬಹುಸಂಖ್ಯಾತ ಜನರಿಗೆ ಮಾಂಸಾಹಾರ ಸಿಗುವಂತಹ ಕಸಾಯಿಖಾನೆ. ಆದ್ದರಿಂದ ಅದು ಅಭಿವೃದ್ಧಿ ಹೊಂದಬೇಕಾದದ್ದು ಅನಿವಾರ್ಯ ಕೂಡಾ. ಇದು ಮಂಗಳೂರಿನ ಜನತೆಯ ಆರೋಗ್ಯಕ್ಕೆ ಪೂರಕವಾಗುತ್ತದೆಯೇ ಹೊರತು ಯಾವುದೇ ದುಷ್ಪರಿಣಾಮ ಇಲ್ಲ. ಆದರೆ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಘಟನೆಯನ್ನು ಭಾವನಾತ್ಮಕವಾಗಿ ಚಿತ್ರೀಕರಿಸಿ, ಮುಂಬರುವ ಲೋಕಸಭಾ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಅಜೆಂಡಾವಾಗಿಸಿ ಮತ ಧ್ರುವೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಎಸ್ಡಿಪಿಐ ತೀವ್ರವಾಗಿ ಖಂಡಿಸುತ್ತದೆ.
ನರೇಂದ್ರ ಮೋದಿಯವರ ಕೇಂಧ್ರ ಸರಕಾರ ಕಸಾಯಿಖಾನೆ ಅಭಿವೃದ್ಧಿಗೆ 68 ಕೋಟಿ ಸಬ್ಸಿಡಿ ಮಂಜೂರು ಮಾಡುವಾಗ ವಿರೋಧಿಸದ ಬಿಜೆಪಿ, ಮಂಗಳೂರಿನ ಸಮಗ್ರ ಅಭಿವೃದ್ಧಿಯ ವಿಚಾರದಲ್ಲಿ ವಿರೋಧಿಸುವುದು ಬಿಜೆಪಿಯ ನೈಜ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಇಂತಹ ಅಭಿವೃದ್ಧಿ ವಿಚಾರದಲ್ಲಿ ಆರೋಪಗಳನ್ನು ಮಾಡುವಾಗ ಇದನ್ನು ಸಮರ್ಥವಾಗಿ ಎದುರಿಸಬೇಕಾದದ್ದು ಉಸ್ತುವಾರಿ ಸಚಿವರ ಜವಾಬ್ದಾರಿಯಾಗಿದೆ. ಅದು ಬಿಟ್ಟು ನಾನು ಕೇವಲ ಸಲಹೆಯನ್ನು ಮಾತ್ರ ಕೊಟ್ಟಿದ್ದೇನೆ, ನಿಮಗೆ ಬೇಡದಿದ್ದರೆ ಕೇಂದ್ರಕ್ಕೆ ಪತ್ರ ಬರೆದು ಕಸಾಯಿಖಾನೆ ಅಭಿವೃದ್ಧಿಯನ್ನು ತಡೆಯಿರಿ ಎಂದು ಪಲಾಯನವಾದದ ಮಾತನ್ನು ಹೇಳುತ್ತಿದ್ದಾರೆ. ಇದು ಖಂಡಿತಾ ಸಮಂಜಸವಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಅಭಿವೃದ್ಧಿಯೇ ಮುಖ್ಯ ಅಜೆಂಡಾವಾಗಿರಬೇಕು. ಸಮಾಜಕ್ಕೆ ಸಹಕಾರಿಯಾಗುವ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಆರೋಪಕ್ಕೆ ಹೆದರಿ ಹಿಂಜರಿಯುವುದು ಬಹಳ ಅಪಾಯಕಾರಿ ಬೆಳವಣಿಗೆಯಾಗಿದೆ. ಮಾನ್ಯ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ರವರು ಒತ್ತಡದ ಆರೋಪಗಳಿಗೆ ಧೃತಿಗೆಟ್ಟು ಅಬಿವೃದ್ಧಿ ಕಾರ್ಯಗಳಿಂದ ಹಿಂಜರಿಯುವ ಅಗತ್ಯವಿಲ್ಲ. ಇದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಅಭಿವೃದ್ಧಿ ವಿಚಾರವಲ್ಲ. ಎಲ್ಲಾ ಸಮುದಾಯಕ್ಕೆ ಸಹಕಾರಿಯಾಗುವ ಮತ್ತು ಆರೋಗ್ಯಕರ ಪರಿಸರ ನಿರ್ಮಾಣಗೊಳಿಸುವ ಯೋಜನೆಯಾಗಿದೆ. ಆದುದರಿಂದ ಉಸ್ತುವಾರಿ ಸಚಿವರ ಹಿಂಜರಿಕೆಯ ಮಾತನ್ನು ಹಿಂಪಡೆಯಬೇಕು ಮತ್ತು ಯಾವುದೇ ಕಾರಣಕ್ಕೂ ಕಸಾಯಿಖಾನೆಯ ಅಭಿವೃದ್ಧಿಯ ವಿಚಾರವನ್ನು ಕೈ ಬಿಡದೆ ದೃಢವಾಗಿ ನಿಲ್ಲಬೇಕೆಂದು ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
