ರಾಷ್ಟ್ರೀಯ ಸುದ್ದಿ

ರಾಫೆಲ್ ಹಗರಣ: ದೇಶದ ಜನರನ್ನು ಕತ್ತಲಲ್ಲಿಡುತ್ತಿದೆಯೇ ಮೋದಿ ಸರ್ಕಾರ?

ಒಂದು ವೀಡಿಯೋ ಮಾಹಿತಿ

ವರದಿಗಾರ (ಅ. 01): ರಾಫೆಲ್ ಹಗರಣ ಸದ್ಯದ ದೇಶದ ಜನರ ಪ್ರಮುಖ ಚರ್ಚಾ ವಿಷಯ. ಸ್ವಾತಂತ್ರ್ಯಾ ನಂತರದ ಬಹುದೊಡ್ಡ ಹಗರಣವೆಂದೇ ವಿಶ್ಲೇಷಿಸಲಾಗಿರುವ ಈ ಹಗರಣದಿಂದ ಜನರ ದಿಕ್ಕನ್ನು ತಪ್ಪಿಸಲು ಆಡಳಿತಾರೂಢ ನರೇಂದ್ರ ಮೋದಿ ಸರ್ಕಾರ ಹಲವು ರೂಪಗಳಲ್ಲಿ ಪ್ರಯತ್ನ ಪಡುತ್ತಿರುವುದನ್ನೂ ಜನರು ಅರ್ಥ ಮಾಡಿಕೊಂಡಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳ ಹಗರಣ ಇದಾಗಿದ್ದು, ಸಾಮಾನ್ಯ ಜನರೂ ಕೂಡಾ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದಾರೆ. ದೇಶದ ಜನರನ್ನು ಈ ಕುರಿತು ಪ್ರಜ್ಞಾವಂತರನ್ನಾಗಿಸಬೇಕಾಗಿದೆ.

ಏನಿದು ರಾಫೆಲ್ ಹಗರಣ ?
2011 ರಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿರುವಾಗ ಭಾರತೀಯ ವಾಯುಸೇನೆ ಸುಮಾರು 200 ರಷ್ಟು ಯುದ್ಧ ವಿಮಾನಗಳ ಖರೀದಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸೇನೆಯ ಬೇಡಿಕೆಗೆ ಸ್ಪಂದಿಸಿದ ಸರಕಾರ ಜಗತ್ತಿನ ವಿವಿಧ ಕಂಪನಿಗಳಿಂದ ಬಿಡ್ ಆಹ್ವಾನಿಸಿತ್ತು. ಹಲವು ಪರಾಮರ್ಶೆಗಳ ಬಳಿಕ ಡಸಾಲ್ಟ್ ರಾಫೆಲ್ ಹಾಗೂ ಯೂರೋ ಫೈಟರ್ ಟೈಫೂನ್ ಕಂಪನಿಗಳ ಕಿರು ಪಟ್ಟಿ ತಯಾರುಗೊಳಿಸಿತು. ಕೊನೆಯಲ್ಲಿ ಅತ್ಯುತ್ತಮ ಹಾಗೂ ಉತ್ಕೃಷ್ಟ ಗುಣಮಟ್ಟದ ಡಸಾಲ್ಟ್ ರಾಫೆಲ್ ಕಂಪನಿಯೊಂದಿಗೆ ವ್ಯವಹಾರ ಕುದುರಿಸಿತು.

ಯುಪಿಎ ಸರಕಾರದ ಒಪ್ಪಂದವೇನು?
ಒಪ್ಪಂದದಂತೆ ಯುಪಿಎ ಸರಕಾರ, 126 ರಾಫೆಲ್ ಜೆಟ್ ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತು. ತಕ್ಷಣದ ಬಳಕೆಗಾಗಿ 18 ಸಿದ್ಧರೂಪದ ಜೆಟ್ ಗಳನ್ನು ಖರೀದಿಸಿದ ಸರಕಾರ, ಉಳಿದ 108 ಜೆಟ್ ಗಳನ್ನು ತಂತ್ರಜ್ಞಾನ ವರ್ಗಾವಣೆಯ ರೂಪದ ಮೂಲಕ ಭಾರತ ಸರಕಾರದ ಒಡೆತನದ ವೈಮಾನಿಕ ಹಾಗೂ ರಕ್ಷಣಾ ವಿಮಾನ ನಿರ್ಮಾಣದ ದೈತ್ಯ ಕಂಪನಿಯಾದ ಹೆಚ್ ಎ ಎಲ್ ನಲ್ಲಿಯೇ ಸಿದ್ಧಪಡಿಸಲು ನಿರ್ಧರಿಸಲಾಗಿತ್ತು. ಈ ಮೂಲಕ ಭಾರತೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ, ಮೂಲಭೂತ ಸೌಕರ್ಯ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ದೇಶ ಹೆಚ್ಚಿನ ಪ್ರಗತಿ ಕಾಣಲು ಸಾಧ್ಯವಿದೆ ಎಂಬ ದೂರದೃಷ್ಟಿಯಿತ್ತು.

ಯುಪಿಎ ಸರಕಾರ ರಾಫೆಲ್ ಜೆಟ್ ಗಳಿಗೆ ನಿಗದಿಪಡಿಸಿದ ಬೆಲೆಯೆಷ್ಟು ?
ಯುಪಿಎ ಸರಕಾರ ಪ್ರತಿ ರಾಫೆಲ್ ಜೆಟ್ ಒಂದಕ್ಕೆ 526 ಕೋಟಿ ನಿಗದಿಪಡಿಸಿತ್ತು. ಸಿದ್ಧ ಜೆಟ್ ಗಳನ್ನು ಈ ದರದಲ್ಲಿಯೇ ಭಾರತ ಸರಕಾರ ಖರೀದಿ ಮಾಡುವ ಒಪ್ಪಂದ ಮಾಡಿತ್ತು ಕೂಡಾ. 2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. 2015, ಎಪ್ರಿಲ್ 8 ರ ವರೆಗೆ ಭಾರತ ಸರಕಾರ – ಹೆಚ್ ಎ ಎಲ್ – ಡಸಾಲ್ಟ್ ರಾಫೆಲ್ ನಡುವಿನ ಒಪ್ಪಂದ ಯಥಾಸ್ಥಿತಿಯಲ್ಲಿದೆ ಎಂದು ಭಾರತೀಯ ವಿದೇಶಿ ಕಾರ್ಯದರ್ಶಿ ಹೇಳಿಕೆ ನೀಡಿದ್ದರು.

ರಾಫೆಲ್ ವ್ಯವಹಾರ ಒಂದು ಹಗರಣ ಯಾಕೆ?
ಭಾರತೀಯ ವಿದೇಶ ಕಾರ್ಯದರ್ಶಿ ಹೇಳಿಕೆ ನೀಡಿದ ಎರಡು ದಿನಗಳ ನಂತರ ಅಂದರೆ ಎಪ್ರಿಲ್ 10, 2015 ರಂದು ಅಚ್ಚರಿಯೆಂಬಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯೊಂದನ್ನು ನೀಡುತ್ತಾ, ಯುಪಿಎ ಸರಕಾರದ ಹಳೆಯ ರಾಫೆಲ್ ಒಪ್ಪಂದವನ್ನು ರದ್ದುಪಡಿಸಲಾಗಿದೆ ಮತ್ತು ಅದರ ವದಲಾಗಿ ಹೊಸ ಒಪ್ಪಂದಕ್ಕೆ ಪ್ರಯತ್ನಿಸಲಾಗುತ್ತದೆ ಎಂದಿದ್ದರು. ಅದರಂತೆ 2015 ರ ಜುಲೈ 30 ರಂದು ಸ್ವತಂತ್ರ ಭಾರತದ ಅತಿ ದೊಡ್ಡ ರಕ್ಷಣಾ ಒಡಂಬಡಿಕೆ ಅಥವಾ “ಎಲ್ಲಾ ಒಪ್ಪಂದಗಳ ತಾಯಿ” ಎಂದು ಬಿಂಬಿತವಾಗಿದ್ದ ರಾಫೆಲ್ ಒಪ್ಪಂದವನ್ನು ರದ್ದುಗೊಳಿಸಿದ ಕುರಿತು ಅಧಿಕೃತ ಹೇಳಿಕೆ ನೀಡಲಾಯಿತು.

ಪ್ರತಿ ಜೆಟ್ ಗೆ ಮೋದಿ ಸರಕಾರ ನೀಡಿದ್ದು ಮೂರು ಪಟ್ಟು ಹೆಚ್ಚಿನ ದರ !!
ಯುಪಿಎ ಸರಕಾರದ ಒಪ್ಪಂದದಂತೆ 126 ಜೆಟ್ ಗಳ ಖರೀದಿಗೆ ಒಪ್ಪಂದ ಮಾಡಲಾಗಿತ್ತು. ಆದರೆ ಹೊಸ ಒಪ್ಪಂದದಲ್ಲಿ 126 ರ ಬದಲಿಗೆ ಕೇವಲ 36 ಜೆಟ್ ಗಳ ಖರೀದಿಗೆ ಹೊಸ ಒಪ್ಪಂದ ಮಾಡಲಾಯಿತು. ಯುಪಿಎ ಸರಕಾರ ಪ್ರತಿ ಜೆಟ್ ಬೆಲೆಯನ್ನು 526 ಕೋಟಿಗೆ ನಿಗದಿಪಡಿಸಿದ್ದರೆ, ಹೊಸ ಒಪ್ಪಂದದಲ್ಲಿ ಮೋದಿ ಸರಕಾರ ಪ್ರತಿ ಜೆಟ್ ಗೆ 1670 ರೂಪಾಯಿಗಳನ್ನು ನೀಡುವ ಕುರಿತು ಒಪ್ಪಿಗೆ ನೀಡಿತ್ತು !! ಮಾತ್ರವಲ್ಲ ತಂತ್ರಜ್ಞಾನ ವರ್ಗಾವಣೆಯ ಮೂಲಕ ಹೆಚ್ ಎ ಎಲ್ ಜೊತೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಬದಲಾಗಿ ರಕ್ಷಣಾ ವ್ಯವಹಾರದಲ್ಲಿ ಕೇವಲ ಹತ್ತು ದಿನಗಳ ಅನುಭವವಿರುವ ರಿಲಾಯನ್ಸ್ ಕಂಪನಿ ಜೊತೆ ಹೊಸ ಒಪ್ಪಂದ ಮಾಡಲಾಗುತ್ತದೆ.

ಕ್ಯಾಬಿನೆಟ್ ಸಲಹೆ ಪಡೆಯದೆ ರಿಲಾಯನ್ಸ್’ಗೆ ಅಸ್ತು ಎಂದಿದ್ದರೇ ಮೋದಿ !?
ರಕ್ಷಣಾ ವಿಮಾನ ವ್ಯವಹಾರದಲ್ಲಿ ಶೂನ್ಯ ಜ್ಞಾನ ಇರುವ ಹಾಗೂ ಕೇವಲ ಹತ್ತು ದಿನಗಳ ಹಿಂದೆಯಷ್ಟೇ ನೋಂದಾವಣೆಯಾಗಿದ್ದ ಕಂಪನಿಯೊಂದಕ್ಕೆ ಹಾಗೂ 35000 ಕೋಟಿ ಸಾಲ ಬಾಕಿಯಿರುವ ರಿಲಾಯನ್ಸ್ ಮುಖ್ಯಸ್ಥರೊಂದಿಗೆ ಹೊಸ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಮೂಲಗಳ ಪ್ರಕಾರ ಮೋದಿ ಇದಕ್ಕೆ ತನ್ನ ಸಂಪುಟದ ಒಪ್ಪಿಗೆ ಅಥವಾ ಸಲಹೆ ಪಡೆದಿಲ್ಲವೆನ್ನಲಾಗುತ್ತಿದೆ.

ಮೋದಿ ಸರಕಾರ 36 ಜೆಟ್’ಗಳ ಖರೀದಿಗೆ 60,120 ಕೋಟಿ ನೀಡಿದ್ದರೆ, ಯುಪಿಎ ಒಪ್ಪಂದದಂತೆ 36 ಜೆಟ್’ಗಳ ಬೆಲೆ 18,936 ಕೋಟಿ ರೂಪಾಯಿ ಆಗುತ್ತಿತ್ತು. ಅರ್ಥಾತ್ ಈ ವ್ಯವಹಾರದಲ್ಲಿ ಮೋದಿ ಸರಕಾರ 41,184 ಕೋಟಿ ರೂಪಾಯಿಗಳ ತೆರಿಗೆ ಹಣವನ್ನು ಹೆಚ್ಚುವರಿಯಾಗಿ ನೀಡಿದೆ !!

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group