ರಾಜ್ಯ ಸುದ್ದಿ

‘ಬ್ಲಾಕ್ ಮೇಲ್ ವೀರ’ರ ಬೆದರಿಕೆಗೆ ಬಲಿಯಾಗುವುದೇ ಸತ್ಯದ ದನಿ ‘ಸ್ವರಾಜ್ ಎಕ್ಸ್’ಪ್ರೆಸ್ಸ್ ಚಾನೆಲ್ ?

► ಚಾನೆಲ್ ಒಳಗಿನ ಸಮಸ್ಯೆಯನ್ನು ‘ಭಾರತ – ಪಾಕ್’ ಹೋರಾಟ ಎಂದ ದುರುಳರು !

ವರದಿಗಾರ (ಸೆ 27) :  ರಾಜ್ಯದಲ್ಲಿ ಉದ್ಯಮಿಗಳಿಗೆ, ರಾಜಕೀಯ ಪಕ್ಷಗಳಿಗೆ ಅಥವಾ ಒಂದು ಸಿದ್ಧಾಂತಕ್ಕೆ ಬಿಕರಿಯಾದ ಹಲವಾರು ದೃಶ್ಯ ಮಾಧ್ಯಮಗಳು ಇವೆಯಾದರೂ, ಅವೆಲ್ಲವುಗಳಿಗೆ ವ್ಯತಿರಿಕ್ತವೆಂಬಂತೆ ಇದ್ದು,  ತಮ್ಮದೇ ಶೈಲಿಯಲ್ಲಿ ಜನರಿಗೆ ಸುದ್ದಿಗಳ ನೈಜತೆಯನ್ನು ತಿಳಿಸಿ ಕೊಡುವ ಪ್ರಯತ್ನ ಪಡುತ್ತಿದ್ದ ಚಾನೆಲ್ ಆಗಿತ್ತು ಸ್ವರಾಜ್ ಎಕ್ಸ್ಪ್ರೆಸ್. ಇಲ್ಲಿ ಆಂಕರ್ ಗಳ ಅರಚಾಟವಿರಲಿಲ್ಲ, ಒಂದು ಸಿದ್ಧಾಂತಕ್ಕೆ ವಾಲಿದ ಮಾಧ್ಯಮ ಪ್ರತಿನಿಧಿಗಳಿರಲಿಲ್ಲ, ತಮಗೆ ಸಹ್ಯವಲ್ಲದ ಅಭಿಪ್ರಾಯಗಳನ್ನು ಮಂಡಿಸಿದ ಅತಿಥಿಗಳನ್ನು ಗುರಿಪಡಿಸುವ ಪತ್ರಕರ್ತರಿರಲಿಲ್ಲ. ಬಹುಶಃ ಪ್ರಸಕ್ತ ಪರಿಸ್ಥಿತಿಯಲ್ಲಿ ಇದುವೇ ಇವರಿಗೆ ಮುಳುವಾಗಿರಬಹುದೆಂದು ಕಾಣುತ್ತೆ. ಚಾನೆಲ್ ವಿರುದ್ಧ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ವ್ಯವಸ್ಥಿತ ಷಡ್ಯಂತ್ರದ ಮೂಲಕ ಮತ್ತು ಬೃಹತ್ ಮೊತ್ತದ ಹಣಕ್ಕಾಗಿ ಆಡಳಿತ ಮಂಡಳಿಯನ್ನು ಬ್ಲಾಕ್ ಮೇಲ್ ಮಾಡುತ್ತಾ  ಅಪಪ್ರಚಾರ ನಡೆಸಲು ಪ್ರಯತ್ನಿಸುತ್ತಿದೆ. ಚಾನೆಲ್ ಸಿಬಂದಿಗಳಿಗೆ ಸಂಬಳ ನೀಡುತ್ತಿಲ್ಲ, ಸಿಬ್ಬಂದಿಗಳನ್ನು ಮುನ್ಸೂಚನೆಯಿಲ್ಲದೆ ವಜಾಗೊಳಿಸಲಾಗಿದೆ, ಚಾನೆಲ್ ಒಂದು ಧರ್ಮದ ಪರ ಕೆಲಸ ಮಾಡುತ್ತಿದೆ. ಹೀಗೆ ಹತ್ತು ಹಲವು. ಈ ಘಟನಾವಳಿಗಳ ಕುರಿತೊಮ್ಮೆ ನೋಟ ಹರಿಸಿದಾಗ ಹಲವು ಕುತೂಹಲಕಾರಿ ಅಂಶಗಳು ಹೊರ ಬರುತ್ತವೆ ಮತ್ತು ತಮಗೆ ‘ಸ್ವರಾಜ್ ಎಕ್ಸ್’ಪ್ರೆಸ್’ ನಿಂದ ಅನ್ಯಾಯವಾಗಿದೆಯೆಂದು ಹೋರಾಟದ ಮುಂಚೂಣಿಯಲ್ಲಿರುವವರ ಅಸಲಿಯತ್ತು ಬೆಳಕಿಗೆ ಬರಲಾರಂಬಿಸಿವೆ.

ಹಾಗಾದರೆ ವಾಸ್ತವಗಳೇನು?

‘ಸ್ವರಾಜ್’ ಚಾನೆಲ್ ನಲ್ಲಿ ಮೊದಲು ಒಟ್ಟು 230 ಸಿಬ್ಬಂದಿಗಳಿದ್ದರು.ಅದರಲ್ಲಿ 20 ರಿಂದ 30 ಸಿಬ್ಬಂದಿಗಳು ತಮ್ಮ ವೈಯುಕ್ತಿಕ ಕಾರಣಗಳಿಂದ ರಾಜೀನಾಮೆ ಕೊಟ್ಟು ಹೊರ ನಡೆದಿದ್ದರು. ಚಾನೆಲಿನ ಕರ್ನಾಟಕದಲ್ಲಿನ ಜಾಹೀರಾತು ವಿಭಾಗ ವಿಫಲವಾದಾಗ ಎಲ್ಲಾ ಆಡಳಿತ ಮಂಡಳಿಗಳು ಅನುಸರಿಸುವ ಮಾರ್ಗಸೂಚಿಯಂತೆ ಇಲ್ಲಿನ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ 55 ಮಂದಿ ಸಿಬ್ಬಂದಿಗಳ ರಾಜೀನಾಮೆ ಪಡೆದುಕೊಳ್ಳಲಾಗುತ್ತದೆ. ಸದ್ಯಕ್ಕೆ ಅಸ್ತಿತ್ವದಲ್ಲಿರುವ ಕಾರ್ಮಿಕ ನೀತಿಯ ಅಧಿಸೂಚನೆಯಂತೆ ಈ ಎಲ್ಲಾ 55 ಮಂದಿ ಸಿಬ್ಬಂದಿಗಳಿಗೆ ಸೂಕ್ತ ರೀತಿಯ ಪರಿಹಾರ ಮೊತ್ತವನ್ನೂ ನಿಗದಿಗೊಳಿಸಲಾಗಿತ್ತು. ಆದರೆ ಈ 55 ಮಂದಿಯ ತಂಡದ ನೇತೃತ್ವ ವಹಿಸಿದ್ದಾರೆಂದು ನಂಬಲಾಗುತ್ತಿರುವ ಕ್ರೈಂ ಮತ್ತು ಮೆಟ್ರೋ ವಿಭಾಗದ ಮುಖ್ಯಸ್ಥ ಮುತ್ತುರಾಜ್ ಜಿ ಎಸ್ ಹಾಗೂ Output ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಉಗ್ಗಲ್ಬೆಟ್ಟು ಎಂಬವರು ಹಲವು ಕಟ್ಟು ಕಥೆಗಳನ್ನು ಸೃಷ್ಟಿ ಮಾಡಿ, ತಮ್ಮ ತಂಡಕ್ಕೆ ಅಲ್ಲಿನ ಇತರೆ ಸಿಬ್ಬಂದಿಗಳನ್ನೂ ಸೇರಿಸಿಕೊಂಡು ಚಾನೆಲ್ ಕಾರ್ಯ ನಿರ್ವಹಿಸುವುದಕ್ಕೆ ಅಡ್ಡಿ ಪಡಿಸಲು ಪ್ರಾರಂಭಿಸಿದ್ದರು. ‘ನಾವಿಲ್ಲದೆ ಚಾನೆಲ್ ನಡೆಸಲು ಬಿಡುವುದಿಲ್ಲ’ ಎಂಬ ದಾರ್ಷ್ಯದ ವರ್ತನೆ ತೋರಿಸಿದ್ದಾರೆ ಎನ್ನಲಾಗಿದೆ.  ಹೀಗಾಗಿ ತೆಗೆದು ಹಾಕಿದ 55 ಸಿಬ್ಬಂದಿಗಳಲ್ಲದೆ ಅವರ ಜೊತೆ ಇತರೆ ಸುಮಾರು 40 ಸಿಬ್ಬಂದಿಗಳು ಜೊತೆಯಾಗಿದ್ದರು.

ಬೆಳೆಯುತ್ತಿರುವ ಅನುಮಾನದ ಹುತ್ತಗಳು !

ಸಾಮಾನ್ಯವಾಗಿ ಯಾವುದೇ ಕಂಪನಿಗಳಲ್ಲಿ ನೌಕರರನ್ನು ತೆಗೆದು ಹಾಕಿದಾಗ ಅವರ ಮೊದಲ ಗುರಿ ಆಡಳಿತ ಮಂಡಳಿಯ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು ಹಾಗೂ ಮಾನವ ಸಂಪನ್ಮೂಲ ವಿಭಾಗವಾಗಿರುತ್ತದೆ. ಆದರೆ ಇಲ್ಲಿ ವ್ಯತಿರಿಕ್ತವೆಂಬಂತೆ ಸಂಸ್ಥೆಯ ಮುಖ್ಯಸ್ಥೆ ನೌಹೇರಾ ಶೇಖ್ ಜೊತೆಗೆ ಮುಖ್ಯ ಸಂಪಾದಕ ಸಮೀಯುಲ್ಲಾ ಹಾಗೂ ಸಂಪಾದಕಿ ನಾಝಿಯಾ ಕೌಸರ್ ರ ವಿರುದ್ಧ ಪೊಲೀಸ್ ದೂರು ನೀಡಲಾಗಿದೆ. ಇಲ್ಲಿ ಪತ್ರಕರ್ತರೇ ತಮ್ಮ ಸಹೋದ್ಯೋಗಿ ಪತ್ರಕರ್ತರನ್ನು ಘಟನೆಯಲ್ಲಿ ಸಿಲುಕಿಸುವ ಪ್ರಯತ್ನ ನಡೆಸಲಾಗಿದೆ,  ಮಾತ್ರವಲ್ಲ ಘಟನೆಯಲ್ಲಿ ಮಾನವ ಸಂಪನ್ಮೂಲ ವಿಭಾಗದ ಯಾರ ಮೇಲೂ ದೂರು ದಾಖಲಾಗಿಲ್ಲವೆಂಬುವುದು ಅಚ್ಚರಿ ಮೂಡಿಸುತ್ತದೆ. ಯಾಕೆಂದರೆ ನೌಕರರಿಗೆ ಕೆಲಸದಿಂದ ತೆಗೆದು ಹಾಕುವ ಪತ್ರ ನೀಡುವವರು ಮಾನವ ಸಂಪನ್ಮೂಲ ವಿಭಾಗವಾಗಿರುತ್ತದೆ.

ದೂರುದಾರರು ಹರಿಯಬಿಟ್ಟ ವದಂತಿಗಳು

ಈ ನಡುವೆ ಸಂಪಾದಕ ಮಂಡಳಿಯ ವಿರುದ್ಧ ಪೊಲೀಸ್ ದೂರು ನೀಡಿದ ದೂರುದಾರರು ಮತ್ತವರ ಬೆಂಬಲಿಗರು ಸಾಮಾಜಿಕ ತಾಣಗಳಲ್ಲಿ ಮತ್ತು ಹಲವು ಮೂಲಗಳಲ್ಲಿ ವಿವಿಧ ರೀತಿಯ ಸುಳ್ಳು ವದಂತಿಗಳನ್ನು ಹರಿಯಬಿಟ್ಟು ಜನರನ್ನು ಮತ್ತು ಈಗಲೂ ಚಾನೆಲಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಗೊಂದಲದಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ. ಅದೆಂದರೆ ಚಾನೆಲ್ ನಮಗೆ ಹಲವು ತಿಂಗಳಿನಿಂದ ಸಂಬಳವೇ ನೀಡುತ್ತಿಲ್ಲ, ಚಾನೆಲ್ ಒಂದು ಧರ್ಮದ ಪರ ಕೆಲಸ ಮಾಡುತ್ತಿದೆ, ಮುನ್ಸೂಚನೆ ನೀಡದೆ ನಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಮತ್ತು ಚಾನೆಲ್ ಶೀಘ್ರವೇ ಬಾಗಿಲು ಹಾಕುತ್ತದೆ ಎಂಬೆಲ್ಲಾ ವದಂತಿಗಳನ್ನು ಹರಿಯಬಿಟ್ಟಿದ್ದಾರೆ ಎನ್ನಲಾಗಿದೆ

ಸಮಿಯುಲ್ಲಾ ಹಾಗೂ ನಾಝಿಯಾ ಕೌಸರ್ ಮಾತ್ರ ಗುರಿ !!

ಚಾನೆಲಿನಲ್ಲಿ ಈಗಲು ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಪ್ರಕಾರ ದೂರುದಾರರ ಮುಖ್ಯ ಗುರಿ ಸಮಿಯುಲ್ಲಾ ಹಾಗೂ ನಾಝಿಯಾ ಕೌಸರ್ ಆಗಿದ್ದಾರೆಂದು. ಅವರ ಧರ್ಮವೇ ಇದಕ್ಕೆ ಕಾರಣವೆಂದು ಅಲ್ಲಿನ ಸಿಬ್ಬಂದಿಗಳೇ ಹೇಳುತ್ತಿದ್ದಾರೆ.  ಅವರ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಮಾಡುತ್ತಿರುವ ವೈಯುಕ್ತಿಕ ದಾಳಿಗಳನ್ನು ಗಮನಿಸಿದರೆ ಸಿಬ್ಬಂದಿಗಳ ಮಾತು ನಿಜವೆನಿಸುತ್ತದೆ. ಮಾನವ ಸಂಪನ್ಮೂಲ ವಿಭಾಗದವರಿಂದ ನ್ಯಾಯ ಕೇಳಬೇಕಾಗಿದ್ದ ದೂರುದಾರರು ಸಂಪಾದಕ ಮಿತ್ರರನ್ನು ಗುರಿಯಾಗಿಸಿದ್ದು ನೋಡಿದರೆ ಅವರ ಹಿಂದಿನ ಉದ್ದೇಶ ಸ್ಪಷ್ಟವಾಗುತ್ತದೆ.

(ವಾಟ್ಸಪ್ಪಿನಲ್ಲಿ ಹರಿಯಬಿಟ್ಟಿರುವ ಸಂದೇಶದ ತುಣುಕು)

ಒಳಗಿನ ಸಮಸ್ಯೆಯನ್ನು ಭಾರತ – ಪಾಕಿಸ್ತಾನ ಯುದ್ಧ ಎಂಬಂತೆ ಬಿಂಬಿಸಿದ ದುರುಳರು!

ಚಾನೆಲ್ ಒಳಗಿನ ಸಮಸ್ಯೆಯನ್ನು ಭಾರತ – ಪಾಕಿಸ್ತಾನ ನಡುವಿನ ಯುದ್ಧ ಎಂಬಂತೆ ಅಲ್ಲಿನ ಕೆಲ ದುರುಳರು ಸಾಮಾಜಿಕ ತಾಣಗಳಲ್ಲಿ ಬಿಂಬಿಸುತ್ತಿದ್ದು, ಆ ಮೂಲಕ ಈ ಸಮಸ್ಯೆಗೆ ಧರ್ಮದ ಲೇಪನ ಹಚ್ಚುವ ತಮ್ಮ ಅಭಿಲಾಷೆಗೆ ತುಪ್ಪ ಸುರಿಯುವ ಪ್ರಯತ್ನ ಮಾಡುತ್ತಿದ್ದಾರೆ. ಮಾತ್ರವಲ್ಲ ಯಾವ ಗುಪ್ತ ಕಾರ್ಯಸೂಚಿಯನ್ನಿಟ್ಟುಕೊಂಡು ಸಮಿಯುಲ್ಲಾ ಹಾಗೂ ನಾಝಿಯಾ ಕೌಸರ್ ರನ್ನು ಗುರಿಪಡಿಸಲಾಗಿದೆಯೋ, ಅದೇ ಕಾರ್ಯಸೂಚಿಯನ್ನು ಜನರು ನಂಬುವಂತೆ ಮಾಡುವ ಪ್ರಯತ್ನವೂ ಇದರ ಹಿಂದಿದೆ ಅನ್ನುವುದು ಅಷ್ಟೆ ಸತ್ಯ. ಜನರ ಭಾವನಾತ್ಮಕ ನ್ಯೂನತೆಗಳನ್ನು ಬಳಸಿಕೊಂಡು ತಮ್ಮ ಗುರಿ ಸಾಧಿಸುವ ಫ್ಯಾಸಿಸ್ಟ್ ಮನೋಸ್ಥಿತಿ ಅದು.

ದೂರುದಾರರ ನಾಯಕರ ಹಿನ್ನೆಲೆ ಏನು?

ಚಾನೆಲ್ ನ ಪ್ರಧಾನ ಸಂಪಾದಕ ಸಮಿಯುಲ್ಲಾ ಹಾಗೂ ಸಂಪಾದಕಿ ನಾಝಿಯಾ ಕೌಸರ್ ರ ವಿರುದ್ಧ ದೂರು ನೀಡಿರುವ ಗುಂಪಿನ ನೇತೃತ್ವವನ್ನು ವಹಿಸಿಕೊಂಡಿದ್ದಾರೆ ಎನ್ನಲಾಗುತ್ತಿರುವ ಇಬ್ಬರಿಗೆ ಈ ಹಿಂದೆಯೂ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುವ ತಂತ್ರದ ಮೂಲಕ ‘ಜನಶ್ರೀ’ ಎನ್ನುವ ಚಾನೆಲ್ ಒಂದನ್ನು ಬಂದ್ ಮಾಡಿಸಿದ ಕುಖ್ಯಾತಿ ಇದೆಯೆನ್ನಲಾಗಿದೆ. ಅದೇ ಚಾಳಿಯನ್ನು ಇಲ್ಲೂ ಮುಂದುವರಿಸುವ ಪ್ರಯತ್ನವನ್ನು ನಡೆಸುತ್ತಿರುವುದು ಉಲ್ಲೇಖನೀಯ.

ಒಟ್ಟಿನಲ್ಲಿ ಒಂದಿಬ್ಬರು ನೌಕರರ ಸ್ವಾರ್ಥ ಉದ್ದೇಶ ಸಾಧನೆಗೆ ಚಾನೆಲಿನ ನೂರಾರು ನೌಕರರು ಅತ್ತ ಕೆಲಸವೂ ಇಲ್ಲ ಇತ್ತ ಪರಿಹಾರ ಮೊತ್ತವೂ ಇಲ್ಲ ಎಂಬಂತೆ  ಡೋಲಾಯಮಾನ ಸ್ಥಿತಿಯಲ್ಲಿ ಪೊಲೀಸು, ಕೋರ್ಟ್ ಕಛೇರಿ ಎಂದು ಅಲೆಯಬೇಕಾಗಿರುವುದು ಮಾತ್ರ ದುರಂತ. ಇದನ್ನು ಉಳಿದ ನೌಕರರು ಆದಷ್ಟು ಶೀಘ್ರ ಅರ್ಥ ಮಾಡಿಕೊಂಡು ಅವರ ವೃತ್ತಿ ಜೀವನದ ಭವಿಷ್ಯವನ್ನು ನೋಡಿಕೊಂಡರೆ ಅವರಿಗೇ ಒಳಿತು. ಇಲ್ಲದಿದ್ದರೆ ಕಾರ್ಮಿಕರ ಸಮಸ್ಯೆಗಳ ಪರಿಹಾರದ ಈ ಹಿಂದಿನ ಇತಿಹಾಸಗಳಂತೆ ಇದೂ ಅದರ ಭಾಗವಾಗುವುದರಲ್ಲಿ ಸಂಶಯವಿಲ್ಲ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group