ರಾಷ್ಟ್ರೀಯ ಸುದ್ದಿ

ಮೋದಿ ಆಡಳಿತದ 4 ವರ್ಷಗಳಲ್ಲಿ 35 ವಿಮಾನ ನಿಲ್ದಾಣ! ಸುಳ್ಳು ಹೇಳಿ ಮತ್ತೆ ಕೈ ಸುಟ್ಟುಕೊಂಡರೇ ಮೋದಿ?

ಮೋದಿ ಹೇಳಿಕೆಯ ಹಿಂದಿರುವ ಸತ್ಯಾಂಶವೇನು?

ವರದಿಗಾರ (ಸೆ.26):  ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿಯು ಸಿಕ್ಕಿಂ ರಾಜ್ಯದ ಮೊಟ್ಟಮೊದಲ ವಿಮಾನ ನಿಲ್ದಾಣವನ್ನು ಪಕ್ಯಾಂಗ್ ನಗರದಲ್ಲಿ ಉದ್ಘಾಟಿಸಿ ಆ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ,”ಭಾರತದಲ್ಲಿ ಈಗ 100 ವಿಮಾನ ನಿಲ್ದಾಣಗಳಿದ್ದು, ಈ ಪೈಕಿ 35 ನಿಲ್ದಾಣಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ನಿರ್ಮಾಣ ಮಾಡಲಾಗಿದೆ” ಎಂದು ತನ್ನ ಭಾಷಣದಲ್ಲಿ ಉಲ್ಲೇಖಿಸಿದ್ದರು.

“ಸ್ವಾತಂತ್ರ್ಯ ಬಂದು 2014ರವರೆಗೆ 67 ವರ್ಷಗಳಲ್ಲಿ 65 ವಿಮಾನ ನಿಲ್ದಾಣಗಳು ನಿರ್ಮಾಣವಾಗಿವೆ. ಅಂದರೆ ವರ್ಷಕ್ಕೆ ಸರಾಸರಿ ಒಂದು ವಿಮಾನ ನಿಲ್ದಾಣ ನಿರ್ಮಾಣವಾಗಿದ್ದರೆ, ಕಳೆದ ನಾಲ್ಕು ವರ್ಷಗಳಲ್ಲಿ ಸರಾಸರಿ ವರ್ಷಕ್ಕೆ ಒಂಬತ್ತು ವಿಮಾನ ನಿಲ್ದಾಣಗಳು ನಿರ್ಮಾಣಗೊಂಡಿವೆ” ಎಂದು ಪ್ರಧಾನಿ ಮೋದಿ ಹೇಳಿದ್ದರು.

ಆದರೆ ಈ ಬಗೆಗಿನ ವಾಸ್ತವಾಂಶವೇನು?

ಅಧಿಕೃತ ಅಂಕಿ ಅಂಶಗಳ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಯ ನಿರ್ವಹಣೆ ಆರಂಭವಾಗಿರುವುದು ಕೇವಲ ಏಳು ವಿಮಾನ ನಿಲ್ದಾಣಗಳು.

ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಮಾಲಕತ್ವದಲ್ಲಿ ಒಟ್ಟು 129 ವಿಮಾನ ನಿಲ್ದಾಣಗಳು ಇದ್ದು, ಈ ಪೈಕಿ 23 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾದರೆ, 78 ದೇಶೀಯ, ಎಂಟು ಕಸ್ಟಮ್ಸ್ ಮತ್ತು 20 ರಕ್ಷಣಾ ಪಡೆಯ ವಾಯುಕ್ಷೇತ್ರಗಳಲ್ಲಿರುವ ಸಿವಿಲ್ ಎನ್‍ಕ್ಲೇವ್‍ಗಳು ಸೇರಿವೆ ಎನ್ನುವುದನ್ನು ನಾಗರಿಕ ವಿಮಾನಯಾನ ಸಚಿವಾಲಯದ 2017-2018ರ ವರದಿ ಹೇಳುತ್ತದೆ.

129 ವಿಮಾನ ನಿಲ್ದಾಣಗಳ ಪೈಕಿ ಸಿವಿಲ್ ಎನ್‍ಕ್ಲೇವ್‍ಗಳು ಸೇರಿದಂತೆ 101 ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿದ್ದು, 28 ಚಾಲ್ತಿಯಲ್ಲಿಲ್ಲ ಎಂದು 2018ರ ಜುಲೈ 19 ಮತ್ತು ಆಗಸ್ಟ್ 8ರಂದು ಲೋಕಸಭೆಯಲ್ಲಿ ಸರ್ಕಾರ ನೀಡಿದ ಉತ್ತರದಲ್ಲಿ ಹೇಳಲಾಗಿದೆ.

2014ರ ಮಾರ್ಚ್ 31ರ ವೇಳೆಗೆ 125 ವಿಮಾನ ನಿಲ್ದಾಣಗಳು ಎಎಐ ವಶದಲ್ಲಿದ್ದವು ಎಂದು ವಿಮಾನಯಾನ ಸಚಿವಾಲಯದ 2013-14ರ ವಾರ್ಷಿಕ ವರದಿಯಿಂದ ತಿಳಿದುಬರುತ್ತದೆ. ಈ ಪೈಕಿ 29 ಸಿವಿಲ್ ಎನ್‍ಕ್ಲೇವ್‍ಗಳು ಸೇರಿದಂತೆ 94 ಚಾಲ್ತಿಯಲ್ಲಿದ್ದವು ಹಾಗೂ 31 ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿರಲಿಲ್ಲ.

ಇದರಿಂದ ಸ್ಪಷ್ಟವಾಗಿ ತಿಳಿದುಬರುವ ಅಂಶವೆಂದರೆ, ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಯನಿರ್ವಹಣೆ ಆರಂಭಿಸಿದ ವಿಮಾನ ನಿಲ್ದಾಣಗಳು ಕೇವಲ ಏಳು ಎನ್ನುವುದು!

ಸಿಕ್ಕಿಂ ರಾಜ್ಯದ ಪಕ್ಯಾಂಗ್ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರ 2008ರ ಅಕ್ಟೋಬರ್‍ನಲ್ಲಿ ಅನುಮೋದನೆ ನೀಡಿತ್ತು. 2014ರ ವೇಳೆಗೆ ಈ ವಿಮಾನ ನಿಲ್ದಾಣದ ಶೇಕಡ 83ರಷ್ಟು ಕೆಲಸ ಪೂರ್ಣಗೊಂಡಿತ್ತು ಎಂದು 2014ರ ಜುಲೈ 21ರಂದು ಸರ್ಕಾರ ಲೋಕಸಭೆಗೆ ತಿಳಿಸಿತ್ತು.

“ಈ ಯೋಜನೆಯು ಸುಮಾರು 50 ತಿಂಗಳ ಕಾಲ ವಿವಿಧ ಕಾರಣಗಳಿಂದಾಗಿ ವಿಳಂಬವಾಯಿತು. ವಿಮಾನ ನಿಲ್ದಾಣದ ಜಾಗಕ್ಕೆ ಸೂಕ್ತ ಸಂಪರ್ಕದ ಕೊರತೆ, ಪ್ರತಿಕೂಲ ಹವಾಮಾನ ಪರಿಸ್ಥಿತಿ, ಪದೇ ಪದೇ ಸಂಭವಿಸಿದ ಬಂದ್, ಗೂರ್ಖಾ ಜನಮುಕ್ತಿ ಮೋರ್ಚಾ ಸೃಷ್ಟಿಸಿದ ಅರಾಜಕತೆ, 2011ರ ಭೂಕಂಪ, ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರಿಂದ ಮನೆಗಳಿಗೆ ಆದ ಹಾನಿಗೆ ಪರಿಹಾರ ಆಗ್ರಹಿಸಿ ನಡೆದ ಪ್ರತಿಭಟನೆ ಮತ್ತಿತರ ಕಾರಣಗಳಿಂದ ಯೋಜನೆ ವಿಳಂಬವಾಯಿತು” ಎಂದು ಆಗ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರಾಗಿದ್ದ ಜಿ.ಎಂ.ಸಿದ್ದೇಶ್ವರ 2014ರ ಜುಲೈ 21ರಂದು ಲೋಕಸಭೆಗೆ ನೀಡಿದ ಉತ್ತರದಲ್ಲಿ ಸ್ಪಷ್ಟಪಡಿಸಿದ್ದರು.

“ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಇರುವ ಪರಿಹಾರ ವಿತರಣೆ ಮತ್ತು ಸ್ಥಳದ ಭದ್ರತಾ ವಿಚಾರದ ಬಗೆಗಿನ ಸಮಸ್ಯೆಗಳನ್ನು ಸಿಕ್ಕಿಂ ಸರ್ಕಾರ ಇತ್ಯರ್ಥಪಡಿಸಿದ ಬಳಿಕವಷ್ಟೇ ಪಕ್ಯಾಂಗ್ ವಿಮಾನ ನಿಲ್ದಾಣ ಯೋಜನೆ ಪೂರ್ಣಗೊಳ್ಳುವ ದಿನಾಂಕವನ್ನು ಅಂದಾಜಿಸಲು/ ಮರು ನಿರ್ಧಾರ ಮಾಡಲು ಸಾಧ್ಯ” ಎಂದು ಹೇಳಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group