‘ದೇಶದಲ್ಲಿ ಅತ್ಯಂತ ಹೆಚ್ಚಾಗಿ ಟೀಕೆಗೊಳಗಾದವರು ಪ್ರಧಾನಿ ನರೇಂದ್ರ ಮೋದಿ: ತಫ್ಸೀರ್ ಕೆ.

‘ಫ್ಯಾಶಿಸ್ಟ್ ಶಕ್ತಿಗಳಿಂದ ದೇಶವು ಅಪಾಯದಲ್ಲಿದೆ’
“ಜುಮ್ಲ ರಿಪಬ್ಲಿಕ್, ಮೋಸದ ಅನಾವರಣ” ಕ್ಯಾಂಪಸ್ ಫ್ರಂಟ್ ನಿಂದ ಡೊಕ್ಯೂಮೆಂಟರಿ ಬಿಡುಗಡೆ ಕಾರ್ಯಕ್ರಮ
ವರದಿಗಾರ (ಸೆ.19): ‘ಸಾಮಾಜಿಕ ತಾಣದಲ್ಲಿ ಹಾಗೂ ದೇಶದಲ್ಲಿ ಅತ್ಯಂತ ಹೆಚ್ಚಾಗಿ ಟೀಕೆಗೊಳಗಾದವರು ಈ ದೇಶದ ಪ್ರಧಾನಿ ನರೇಂದ್ರ ಮೋದಿಯಾಗಿರುವುದು ಅವರ ಜನವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತಿದೆ’ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ತಫ್ಸೀರ್ ಕೆ. ಹೇಳಿದ್ದಾರೆ.
ಅವರು ಬೆಂಗಳೂರಿನ ಎನ್ ಜಿಓ ಹಾಲ್ ನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ‘ಅಸಹಿಷ್ಣುತೆ ಕೊನೆಗೊಳಿಸಿ, ಪ್ಯಾಶಿಸಂ ವಿರುದ್ಧ ಒಂದಾಗಿ’ ಎಂಬ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ “ಜುಮ್ಲ ರಿಪಬ್ಲಿಕ್, ಮೋಸದ ಅನಾವರಣ” ಎಂಬ ಡೊಕ್ಯೂಮೆಂಟರಿ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
‘ಈಡೇರಿಸದ ಭರವಸೆ, ಆಡಳಿತದ ಅವಧಿಯಲ್ಲಿ ದಬ್ಬಾಳಿಕೆ, ಹಿಂಸೆ, ಸುಳ್ಳು ಬಿಟ್ಟರೆ ಬೇರೆನೂ ಮೋದಿ ನೇತೃತ್ವದ ಸರಕಾರ ಮಾಡಲಿಲ್ಲ ಎಂದು ಆರೋಪಿಸಿದ್ದಾರೆ. ಗೋಹತ್ಯೆ ಮತ್ತು ಲವ್ ಜಿಹಾದ್ ಎಂಬ ಅಪ್ಪಟ ಸುಳ್ಳನ್ನು ಹೇಳಿ ಅಧಿಕಾರವನ್ನು ಹಿಡಿದಿದ್ದಾರೆ. ತಮ್ಮ ಫ್ಯಾಶಿಸ್ಟ್ ಧೋರಣೆಯನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
ದೇಶವೇ ಬೆಚ್ಚಿ ಬಿದ್ದ 8ರ ಹರೆಯದ ಮುಗ್ಧ ಬಾಲಕಿ ಕತುವಾದ ಅಸಿಫಾಳ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಹಿಂದೆ ಹಾಗೂ ಉನ್ನಾವದಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಹಿಂದೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಕೈವಾಡವಿದೆ ಎಂದು ತಫ್ಸೀರ್ ಗಂಭೀರ ಆರೋಪ ಮಾಡಿದ್ದಾರೆ.
ಫ್ಯಾಶಿಸ್ಟ್ ಶಕ್ತಿಗಳಿಂದ ದೇಶವು ಅಪಾಯದಲ್ಲಿರುವುದರಿಂದ ನಾವೆಲ್ಲರೂ ಎಚ್ಚತ್ತೆಗೊಂಡು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಒಂದಾಗಿ ಹೋರಾಟ ಮಾಡುವಂತೆ ಅವರು ಕರೆ ನೀಡಿದ್ದಾರೆ.
ವೇದಿಕೆಯಲ್ಲಿ ಫ್ರೋ.ಕೆ.ಎಸ್.ಭಾಗವಾನ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷ ಪಿವಿ ಶುಹೈಬ್ ಮತ್ತಿತರರು ಉಪಸ್ಥಿತರಿದ್ದರು.
