ಜಿಲ್ಲಾ ಸುದ್ದಿ

ತನ್ನ ಬರಹದ ವಿರುದ್ಧ ವಿಮರ್ಶೆ : ಪೊಲೀಸ್ ದೂರು ದಾಖಲಿಸಿದ ಪತ್ರಕರ್ತ !!

ವರದಿಗಾರ (ಸೆ 16) : ಕನ್ನಡ ಸುದ್ದಿ ಮಾಧ್ಯಮ ‘ಸುದ್ದಿ ಟಿವಿ’ಯ ಮಂಗಳೂರಿನ ವರದಿಗಾರ ಇರ್ಶಾದ್ ಉಪ್ಪಿನಂಗಡಿ ಎಂಬುವವರು ಅಂತರ್ಜಾಲ ಸುದ್ದಿ ತಾಣವೊಂದರಲ್ಲಿ ತಾನು ಬರೆದಿದ್ದ ಲೇಖನದ ಫೇಸ್ಬುಕ್ಕ್ ಪೋಸ್ಟಿಗೆ ಬಂದಿದ್ದ ವಿಮರ್ಶೆಗಳನ್ನು ಕಂಡು ಕೆಂಡಾಮಂಡಲನಾಗಿ, ವಿಮರ್ಶಿಸಿದ ಮೂವರ ವಿರುದ್ಧ ಡಿಸಿಪಿ ಉಮಾ ಪ್ರಶಾಂತ್ ರವರಲ್ಲಿ ದೂರು ದಾಖಲಿಸಿದ ಘಟನೆ ವರದಿಯಾಗಿದೆ.

ಸುದ್ದಿ ಮಾದ್ಯಮಗಳಲ್ಲಿ ಇದು ಷಡ್ಯಂತ್ರದ ಭಾಗವೆಂಬಂತೆ “ಜೀವ ಬೆದರಿಕೆ” ಯ ತಲೆ ಬರಹದಲ್ಲಿ ಪ್ರಕಟಗೊಂಡಿದ್ದು, ‘ಸುದ್ದಿ ಟಿವಿ’ ಚಾನೆಲಿನ ವರದಿಗಾರನ ಉದ್ದೇಶವನ್ನೇ ಪ್ರಶ್ನಿಸುವಂತಾಗಿದೆ. ಯಾಕೆಂದರೆ ವಾಸ್ತವದಲ್ಲಿ ಆ ವರದಿಗಾರ ತನ್ನ ಫೇಸ್ಬುಕ್ ಬರಹವನ್ನು ವಿಮರ್ಶಿಸಿದವರ ವಿರುದ್ಧ ನೀಡಿದ ದೂರಿಗೆ ಸಂಬಂಧವೇ ಇಲ್ಲದ ಇನ್ನೊಂದು ಪ್ರಕರಣವನ್ನು ಈ ಘಟನೆಯೊಂದಿಗೆ ತಳುಕು ಹಾಕುವಂತೆ ಮಾಡಿ ಜನರನ್ನು ಉದ್ದೇಶಪೂರ್ವಕವಾಗಿ ದಿಕ್ಕು ತಪ್ಪಿಸುವಂತಹ ಪ್ರಯತ್ನವೊಂದು ಇಲ್ಲಿ ಕಾಣ ಸಿಗುತ್ತದೆ. ಅದೆಂದರೆ ಇದೇ ವರದಿಗಾರನ ಇನ್ನೊಂದು ಫೇಸ್ಬುಕ್ ಪೋಸ್ಟಿಗೆ ಸಲ್ಮಾನ್ ಸಲ್ಲು ಎಂಬಾತನ ಖಾತೆಯಿಂದ ಜೀವ ಬೆದರಿಕೆ ಒಡ್ಡಿದ್ದು, ಅದು ನಡೆದು ವಾರಗಳೇ ಕಳೆದು ಹೋಗಿದೆ ಎನ್ನಲಾಗಿದೆ. ಆದರೆ ‘ಸುದ್ದಿ ಟಿವಿ’ ಯ ವರದಿಗಾರ ಈಗ ಏಕಾ ಏಕಿ ತನ್ನ ಲೇಖನವನ್ನು ವಿಮರ್ಶಿಸಿದವರ ವಿರುದ್ಧ ದೂರು ದಾಖಲಿಸುವಾಗ ಘಟನೆಗೆ ಸಂಬಂಧಪಡದ ಹಳೆಯ ಪ್ರಕರಣವನ್ನೂ ಇದರೊಂದಿಗೆ ಜೋಡಿಸಿದ್ದು ಸಂಶಯಾಸ್ಪದವಾಗಿದೆ.

ದೃಶ್ಯ ಮಾಧ್ಯಮಗಳಿರಲಿ, ಮುದ್ರಣ ಮಾಧ್ಯಮಗಳಿರಲಿ ಅಥವಾ ಅಂತರ್ಜಾಲ ಸುದ್ದಿ ತಾಣಗಳಿರಲಿ, ಅದರಲ್ಲಿ ಬರುವ ಸುದ್ದಿ ಮತ್ತು ಬರಹಗಳಿಗೆ ವಿಮರ್ಶೆ/ಟೀಕೆ ಸಹಜ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೋರಾಟದ ವಿಷಯದಲ್ಲಿ ಪತ್ರಕರ್ತರು ಎಂದಿಗೂ ಮುಂಚೂಣಿಯಲ್ಲಿರುತ್ತಾರೆ. ಆದರೆ ಇಲ್ಲಿ ಖುದ್ದು ಪತ್ರಕರ್ತನೇ ಅದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಹಣೆಪಟ್ಟಿಯಲ್ಲಿ ಇತರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಿರುವುದು ಹಾಸ್ಯಾಸ್ಪದವಾಗಿದೆ. ಮುಂದಿನ ದಿನಗಳಲ್ಲಿ ಇದೇ ವರದಿಗಾರನ ಟಿವಿ ವರದಿಗಳ ವಿರುದ್ಧ ವೀಕ್ಷಕರು ಇದೇ ರೀತಿಯ ಪೊಲೀಸ್ ದೂರಿನ  ಮಾರ್ಗವನ್ನನುಸರಿಸಿದರೆ ಪರಿಸ್ಥಿತಿಯೇನಾಗಬಹುದು ?

ಇಲ್ಲಿ ‘ಸುದ್ದಿ ಟಿವಿ’ ಯ ವರದಿಗಾರನ ಈ ಹತಾಶ ಪ್ರತಿಕ್ರಿಯೆಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ಸಾಮಾಜಿಕ ತಾಣದ ಯುವಕರು ಈ ಕುರಿತು ಕೆಲವೊಂದು ಕುತೂಹಲಕಾರಿ ಅಂಶಗಳನ್ನು ಹೇಳುತ್ತಾರೆ. ಅವರ ಪ್ರಕಾರ, ‘ಈ ವರದಿಗಾರ ಎಡಪಂಥೀಯ ಸಿದ್ಧಾಂತಗಳಿಗೆ ಮಾರು ಹೋದವರಾಗಿದ್ದು, ಇವರು ದೂರು ದಾಖಲಿಸಿರುವ ಮೂವರು ಕೂಡಾ ಕೇರಳದ ಇತ್ತೀಚೆಗಿನ ಜಲಪ್ರಳಯದ ಸಂದರ್ಭದಲ್ಲಿ ಪರಿಹಾರ ಕಾರ್ಯದ ನೆಪದಲ್ಲಿ ಅಲ್ಲಿನ ಎಡ ಪಕ್ಷದ ಕಾರ್ಯಕರ್ತರು ಪ್ರವಾಹ ನಿಧಿಯ ದುರ್ಬಳಕೆ, ಸಾಂತ್ವನ ಕೇಂದ್ರದಿಂದ ಆಹಾರ ಸಾಮಾಗ್ರಿಗಳನ್ನು ಹೊರ ಸಾಗಿಸಿದ್ದು, ಪರಿಹಾರ ಸಾಮಗ್ರಿಗಳ ಲಾರಿಗಳನ್ನು ಪಕ್ಷದ ಕಾರ್ಯದರ್ಶಿಯ ಗೋಡಾನಿಗೆ ಸಾಗಿಸಿದ್ದು, ಬಡ ವ್ಯಕ್ತಿಯೋರ್ವನ ದಿನಸಿ ಅಂಗಡಿಯನ್ನು ಲೂಟಿ ಮಾಡಿದ ಸೇರಿದಂತೆ ಹಲವು ಸುದ್ದಿಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಚುರಪಡಿಸಿ ಎಡ ಪಂಥೀಯರಿಗೆ ಮಗ್ಗುಲ ಮುಳ್ಳಾಗಿದ್ದರು. ಸಂದರ್ಭಕ್ಕಾಗಿ ಕಾದು ಕೂತು ಇದೀಗ ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ಪೊಲೀಸ್ ದೂರಿನ ಮೂಲಕ ಸಾಮಾಜಿಕ ತಾಣಗಳಲ್ಲಿ ಬರೆಯುವ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ’ ಎನ್ನುತ್ತಿದ್ದಾರೆ ಸಾಮಾಜಿಕ ತಾಣದ ಗೀಚುಗಾರರು.

ತಾನೊಂದು ಸಂಘಟನೆಯನ್ನು ವಿಮರ್ಶಿಸಿ ಲೇಖನ ಬರೆದು ಅದನ್ನು ಸಾಮಾಜಿಕ ತಾಣಗಳಲ್ಲಿ ಪ್ರಚಾರ ಪಡಿಸುವ ಸ್ವಾತಂತ್ರ್ಯ ತನಗೆ ಹೇಗುಂಟೋ ಹಾಗೆಯೇ ಒಂದು ಸಂಘಟನೆಯನ್ನು ಟೀಕಿಸಿರುವ ಲೇಖನವನ್ನು ವಿಮರ್ಶಿಸುವ ಸ್ವಾತಂತ್ರ್ಯವೂ ಫೇಸ್ಬುಕ್ ಓದುಗರಿಗೆ ಮತ್ತು ಆಯಾ ಸಂಘಟನೆಯ ಕಾರ್ಯಕರ್ತರಿಗೆ ಇದೆ. ಯಾರೂ ತಮ್ಮನ್ನು ವಿಮರ್ಶಿಸಬಾರದೆನ್ನುವ ಕಾಳಜಿ ಇದ್ದರೆ ಬರಹಗಾರರು ತಮ್ಮ ಲೇಖನಗಳನ್ನು ಸಾಮಾಜಿಕ ತಾಣಗಳಿಗೆ ಹಾಕದೆ ತಮ್ಮ ರೂಮಿನ ಗೋಡೆಗಳಿಗೆ ಅಂಟಿಸಿದರೆ ಇತರರು ವಿಮರ್ಶಿಸುತ್ತಾರೆ ಎನ್ನುವ ಭಯ ಇರಲಾರದು ಮಾತ್ರವಲ್ಲ ಸಾಮಾಜಿಕ ಸ್ವಾಸ್ಥ್ಯವನ್ನೂ ಕಾಪಾಡಿಕೊಳ್ಳಬಹುದಾಗಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಜನರಾಡಿಕೊಳ್ಳುತ್ತಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group