ತೈಲ ಬೆಲೆ ಏರಿಕೆಗೆ ಕಾರಣರಾದವರನ್ನು ನೇಣಿಗೆ ಹಾಕಿ ಎಂದಿದ್ದ ಮೋದಿ ಈಗ ಮೌನವಾಗಿರುವುದೇಕೆ?: ಗೂಂಡೂರಾವ್ ಪ್ರಶ್ನೆ

‘ದೇಶದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ವ್ಯಕ್ತಿ ಮೋದಿ’
‘ಜನಸಾಮಾನ್ಯರ ಕಷ್ಟಗಳನ್ನು ಕೇಳಿಸಿಕೊಳ್ಳುವ ಕಿವಿ ಕೂಡ ಪ್ರಧಾನಿಯವರಿಗಿಲ್ಲ’
‘ಮೋದಿ ಹಿಟ್ಲರ್ ಮಾದರಿ ಆಡಳಿತ ನಡೆಸುತ್ತಿದ್ದಾರೆ’
ವರದಿಗಾರ (ಸೆ.10): ತೈಲ ಬೆಲೆ ಏರಿಕೆಗೆ ಕಾರಣರಾದವರನ್ನು ನೇಣಿಗೆ ಹಾಕಿ ಎಂದು ಪ್ರಧಾನಿ ಆಗುವ ಮುನ್ನ ಮೋದಿ ಗುಡುಗಿದ್ದರು. ಆದರೆ, ಈಗ ಮೌನವಾಗಿರುವುದೇಕೆ? ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದ್ದಾರೆ.
ಅವರು ಕಚ್ಚಾ ತೈಲ ಬೆಲೆ ಏರಿಕೆ ವಿರೋಧಿಸಿ ‘ಭಾರತ್ ಬಂದ್’ ಪ್ರಯುಕ್ತ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಹಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿ ಮಾತನಾಡುತ್ತಾ ಪ್ರಧಾನಿ ಮೋದಿ ಹಾಗೂ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಿಟ್ಲರ್ ರೀತಿ ಆಡಳಿತ ನಡೆಸುತ್ತಿದ್ದಾರೆ. ನಾನು ಮಾಡಿದ್ದೇ ಸರಿ ಎಂದು ವಾದಿಸುತ್ತಿದ್ದಾರೆ. ಇದರಿಂದ ದೇಶದಲ್ಲಿ ನಾನಾ ಸಮಸ್ಯೆಗಳು ತಲೆದೋರುತ್ತಿವೆ. ನೋಟ್ ಅಮಾನೀಕರಣ ಮಾಡಿ ಸಂಕಷ್ಟ ತಂದಿಟ್ಟರು. ಈಗ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯನ್ನು ಪ್ರತಿ ದಿನ ಏರಿಕೆ ಮಾಡಿ ಜನಸಾಮಾನ್ಯರಿಗೆ ಬರೆ ಎಳೆಯುತ್ತಿದ್ದಾರೆ. ಜನಸಾಮಾನ್ಯರ ಕಷ್ಟಗಳನ್ನು ಕೇಳಿಸಿಕೊಳ್ಳುವ ಕಿವಿ ಕೂಡ ಪ್ರಧಾನಿಯವರಿಗಿಲ್ಲ. ಇಂತಹ ಪ್ರಧಾನಿಯನ್ನು ಇಟ್ಟುಕೊಂಡು ನಾವು ಏನು ಮಾಡಬೇಕು ಎಂದು ಗೂಂಡೂರಾವ್ ಪ್ರಶ್ನಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ದೇಶದಲ್ಲಿ ಬೇರೆ ರೀತಿಯ ದರಗಳು ಏರಿಕೆಯಾಗುತ್ತವೆ. ದವಸ ಧಾನ್ಯ, ತರಕಾರಿ, ಪ್ರಯಾಣ ದರ ಕೂಡ ಏರಿಕೆಯಾಗುತ್ತವೆ. ಇವೆಲ್ಲವೂ ತೈಲ ಬೆಲೆ ಏರಿಕೆಯಿಂದ ಸಂಭವಿಸುತ್ತಿದ್ದರೂ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ಮತ್ತೊಮ್ಮೆ ಅಧಿಕಾರ ನೀಡಿ, ತೈಲ ಬೆಲೆ ಕಡಿಮೆ ಮಾಡುತ್ತೇನೆ ಎಂದು ಪ್ರಧಾನಿ ನಿನ್ನೆ ಹೇಳಿದ್ದಾರೆ. ನಾಲ್ಕೂವರೆ ವರ್ಷ ನೀವು ಮಾಡಿರುವುದು ಏನು ? ಮನುಷ್ಯತ್ವವೇ ಇಲ್ಲದಂತೆ ಪ್ರಧಾನಿ ವರ್ತಿಸುತ್ತಿದ್ದಾರೆ. ಸುಳ್ಳು ಹೇಳಿಕೊಂಡು ಆಡಳಿತ ಮಾಡುತ್ತಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ವ್ಯಕ್ತಿ ಎಂದರೆ ಅದು ಮೋದಿ ಅವರು ಆರೋಪಿಸಿದ್ದಾರೆ.
ಸಚಿವ ಜಮೀರ್ ಅಹಮ್ಮದ್ಖಾನ್, ಶಾಸಕರಾದ ಎಚ್.ಎಂ.ರೇವಣ್ಣ, ಮುನಿರತ್ನ, ಲಕ್ಷ್ಮೀಹೆಬ್ಬಾಳ್ಕರ್, ಎನ್.ಎ.ಹ್ಯಾರಿಸ್, ಸಿಪಿಐನ ಮಾಜಿ ಶಾಸಕ ಜಿ.ವಿ.ಶಿವರಾಮರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
