ರಾಷ್ಟ್ರೀಯ ಸುದ್ದಿ

ಕೇರಳ ಪ್ರವಾಹ : ರಾಜಕೀಯದ ಮಧ್ಯೆ ಕಾಣದೇ ಹೋದ ರಾಹುಲ್ ಗಾಂಧಿಯ ಮಾನವೀಯತೆಯ ಮುಖ !

► ಹೃದಯಾಘಾತಕ್ಕೊಳಗಾದ ರೋಗಿಗಾಗಿ ತನ್ನ ಯಾತ್ರೆಯನ್ನು ಸ್ಥಗಿತಗೊಳಿಸಿದ ರಾಹುಲ್ ಗಾಂಧಿ

ವರದಿಗಾರ (ಆ 31) : ಈ ರಾಜಕೀಯವೇ ಅಂತಹದ್ದು, ಕೆಲವೊಮ್ಮೆ ಅಧಿಕಾರ ಕೇಂದ್ರದಲ್ಲಿದ್ದವರೇನೂ ಮಾಡದಿದ್ದರೂ ಜನರೆದುರು ಎಲ್ಲವನ್ನೂ ಅವರೇ ಮಾಡಿದ ರೀತಿಯ ಪ್ರಚಾರಗಳಿಗೆ ಬರವಿಲ್ಲ. ಅದೇ ರೀತಿ ಜನರ ಮನಸ್ಸನ್ನು ಗೆಲ್ಲುವ ಮಾನವೀಯತೆಯ ಮುಖದರ್ಶನವೂ ಈ ರಾಜಕೀಯದಿಂದಾಗಿ ಮರೆಯಾಗಿಯೋ ಅಥವಾ ಕಂಡೂ ಕಾಣದಂತಾಗಿಯೋ ಹೋಗುತ್ತದೆ. ಇವೆಲ್ಲವುಗಳಿಗೆ ಮುಖ್ಯ ಕಾರಣಗಳಾಗುವುದು ಇಂದಿನ ಪಕ್ಷಪಾತೀ ಮಾಧ್ಯಮಗಳೆಂದರೆ ತಪ್ಪಿಲ್ಲ. ಆದರೆ ‘ನವ ಮಾಧ್ಯಮ’ಗಳಾದ ಸಾಮಾಜಿಕ ತಾಣಗಳು ಕೆಲವೊಮ್ಮೆ ಮುಚ್ಚಿ ಹೊಗಬಹುದಾದ ನೈಜ ಸುದ್ದಿಗಳನ್ನು ಜನರೆದುರು ತೆರೆದು ತೋರಿಸುತ್ತದೆ. ಅಂತಹಾ ಒಂದು ಘಟನೆ ಕೇರಳದ ಪ್ರವಾಹ ಪೀಡಿತ ಪ್ರದೇಶ ಚೆಂಗನ್ನೂರಿನಲ್ಲಿ ನಡೆದಿದೆ.

ಈ ಘಟನೆಯ ‘ಹೀರೋ’ ಮತ್ತಾರೂ ಅಲ್ಲ, ಕಾಂಗ್ರೆಸ್ ನ ರಾಷ್ಟ್ರಾಧ್ಯಕ್ಷ ಶ್ರೀಯುತ ರಾಹುಲ್ ಗಾಂಧಿ ! ಕೇರಳದ ಪ್ರವಾಹ ಪೀಡಿತ ಪ್ರದೇಶಗಳನ್ನು ಹಾಗೂ ಸಂತ್ರಸ್ತರನ್ನು ಕಾಣಲೆಂದು ರಾಜ್ಯಕ್ಕೆ ಬಂದಿದ್ದ ಅವರು, ಚೆಂಗನ್ನೂರು ಮತ್ತು ಆರಮುಳ ಪ್ರದೇಶಗಳಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ ಆಲಪ್ಪುಝಕ್ಕೆ ಹೋಗಲು ಹೆಲಿಕಾಪ್ಟರ್ ಏರಲು ಮದ್ಯಾಹ್ನ 12.25 ಕ್ಕೆ ಚೆಂಗನ್ನೂರಿನ ಕ್ರಿಶ್ಚಿಯನ್ ಕಾಲೇಜಿನ ಮೈದಾನಕ್ಕೆ ಬಂದಿದ್ದರು. ಹೆಲಿಕಾಪ್ಟರ್ ಏರಿದ ರಾಹುಲ್ ಗಾಂಧಿ ಕ್ಷಣಾರ್ಧದಲ್ಲಿ ಅದರಿಂದ ವಾಪಾಸ್ ಇಳಿದರು. ಕೂಡಲೇ ಆಂಬ್ಯುಲನ್ಸ್ ಒಂದು ಹೆಲಿಪ್ಯಾಡಿನ ಮತ್ತೊಂದು ಬದಿಯಲ್ಲಿದ್ದ ಹೆಲಿ ಆಂಬ್ಯುಲನ್ಸ್ ಇದ್ದಲ್ಲಿಗೆ ಹೋಯಿತು. ತಾನಿದ್ದ ಹೆಲಿಕಾಪ್ಟರಿನಿಂದ ಇಳಿದ ರಾಹುಲ್ ಗಾಂಧಿ, ಹೆಲಿ ಆಂಬ್ಯುಲನ್ಸ್ ಬಳಿಗೆ ಸಾಗಿದರು. ಅದರಲ್ಲಿ ಪಕ್ಕದ ನಿರಾಶ್ರಿತರ ಶಿಬಿರದಲ್ಲಿದ್ದ ಸಂತ್ರಸ್ತರೊಬ್ಬರಿಗೆ ಹೃದಯಾಘಾತವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಲು ಹೆಲಿ ಆಂಬ್ಯುಲನ್ಸ್ ನೆರವು ಕೇಳಿದ್ದರು. ಅದರಂತೆ ರೋಗಿಯನ್ನು ಹೆಲಿ ಆಂಬ್ಯುಲನ್ಸ್ ಗೆ ಸ್ಥಳಾಂತರಿಸಲಾಯಿತು. ರಾಹುಲ್ ಗಾಂಧಿ, ರೋಗಿಯೊಬ್ಬರ ಜೀವವುಳಿಸಲು ತಾನು ಹೊರಡಬೇಕಿದ್ದ ಹೆಲಿಕಾಪ್ಟರ್ ಯಾನವನ್ನು ಸ್ಥಗಿತಗೊಳಿಸಿ ಹೆಲಿ ಆಂಬ್ಯುಲನ್ಸ್’ಗೆ ಹಾರಲು ಅವಕಾಶ ಮಾಡಿಕೊಟ್ಟರು.ಅದರಂತೆ 12.50ಕ್ಕೆ ಹೆಲಿ ಆಂಬ್ಯುಲನ್ಸ್ ರೋಗಿಯನ್ನು ಹೊತ್ತೊಯ್ದಿತು. ಅದರ ನಂತರವಷ್ಟೆರಾಹುಲ್ ಗಾಂಧಿ ತನ್ನ ಆಲಪ್ಪುಝ ಯಾತ್ರೆಯನ್ನು ಮುಂದುವರಿಸಿದ್ದರು.

ರೋಗಿಯನ್ನು ಹೆಲಿ ಆಂಬ್ಯುಲನ್ಸ್ ಗೆ ಸ್ಥಳಾಂತರಿಸುವ ವೇಳೆಯಲ್ಲೆಲ್ಲಾ ರಾಹುಲ್ ಗಾಂಧಿ ಅಲ್ಲೇ ಇದ್ದು ರೋಗಿಗೆ ಸಾಂತ್ವನ ನೀಡಿದ್ದು ಮತ್ತು ತನ್ನ ಯಾತ್ರೆಯನ್ನು ಮೊಟಕುಗೊಳಿಸಿ, ರೋಗಿಯೊಬ್ಬರ ಜೀವವುಳಿಸಲು ಮನಸ್ಸುಮಾಡಿದ್ದು ಅವರ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿತ್ತು. ಆದರೆ ರಾಹುಲ್ ಗಾಂಧಿಯ ಭಾಷಣದಲ್ಲಿ ಬರುವ ತಪ್ಪುಗಳಿಗಾಗಿ ಬಕ ಪಕ್ಷಿಗಳಂತೆ ಕಾದು ಕೂರುವ ದೇಶದ ಪ್ರಮುಖ ಮಾಧ್ಯಮಗಳಿಗೆ ಈ ಸುದ್ದಿ ತಿಳಿಯದೇ ಹೋದುದು ಮಾತ್ರ ವಿಪರ್ಯಾಸವೆನ್ನದೆ ವಿಧಿಯಿಲ್ಲ !

ವೀಡಿಯೋ ಕೃಪೆ : ಮಾತೃಭೂಮಿ ಕೇರಳ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group