ರಾಜ್ಯ ಸುದ್ದಿ

‘ಅನಂತ್ ಕುಮಾರ್ ಹೆಗಡೆಗೆ ಮನುಷ್ಯ ಭಾಷೆಯೇ ಗೊತ್ತಿಲ್ಲ, ಅವನು ಮನುಷ್ಯನೇ ಅಲ್ಲ, ಮಾನಸಿಕ ಅಸ್ವಸ್ಥನ ತರ ಕಾಣಿಸ್ತಾನೆ’: ಸಿದ್ದರಾಮಯ್ಯ

‘ಮನ್‌ ಕಿ ಬಾತ್ ನಿಂದ ಹೊಟ್ಟೆ ತುಂಬುವುದಿಲ್ಲ. ಕಾಮ್‌ ಕಿ ಬಾತ್ ಆಗಬೇಕು’

‘ಸಬ್‌ಕಾ ಸಾತ್, ಸಬ್‌ ಕಾ ವಿಕಾಸ್, ಏನು ನಾಟಕ, ಏನು ಡೋಂಗಿತನ. ಎಲ್ಲವೂ ಸಬ್‌ ಕಾ ಸತ್ಯ ನಾಶ್’

‘ಸಂಸ್ಕಾರವೇ ಗೊತ್ತಿಲ್ಲದವರನ್ನು ಮೋದಿ ಸಂಪುಟದಲ್ಲಿಟ್ಟಿದ್ದಾರೆ. ನಾಚಿಕೆಯಾಗಬೇಕು’.

‘ಬಿಜೆಪಿಯವರ ಜೊತೆಗೆ ನನಗೆ ವೈಯಕ್ತಿಕ ಜಗಳ ಇಲ್ಲ. ಆದರೆ ಅವರು ಕ್ಯಾನ್ಸರ್ ಇದ್ದ ಹಾಗೆ’

ವರದಿಗಾರ (ಆ.29): ’ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಮನುಷ್ಯ ಭಾಷೆಯೇ ಗೊತ್ತಿಲ್ಲ, ಅವನು ಮನುಷ್ಯನೇ ಅಲ್ಲ, ಮಾನಸಿಕ ಅಸ್ವಸ್ಥನ ತರ ಕಾಣಿಸ್ತಾನೆ’ ಎಂದು ಮಾಜಿ ಮುಖ್ಯಮಂತ್ರಿ,ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರವರು ಅನಂತ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅವರು ಬಾದಾಮಿಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದರು.

’ಗಡ್ಡ ಬಿಟ್ಟವರು, ಬುರ್ಖಾ ಹಾಕಿಕೊಂಡವರು ನಮ್ಮ ಹತ್ತಿರ ಬರಬಾರದು ಎಂದು ಅನಂತಕುಮಾರ ಹೆಗಡೆ, ಬಸನಗೌಡ ಪಾಟೀಲ ಯತ್ನಾಳ ಅಂತಹವರು ಹೇಳ್ತಾರೆ. ಮನುಷ್ಯರಾದವರು ಪ್ರಾಣಿಯನ್ನು ಸಹ ಪ್ರೀತಿಸುತ್ತಾರೆ. ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ. ಅನಂತ್ ಕುಮಾರ್ ಹೆಗ್ಡೆಗೆ ಕನಿಷ್ಠ ಸಂಸ್ಕೃತಿ, ಸಂಸ್ಕಾರವೇ ಗೊತ್ತಿಲ್ಲ. ಕೇಂದ್ರ ಸಚಿವ ಬೇರೆ. ಅಂತಹವರನ್ನು ಮೋದಿ ಸಂಪುಟದಲ್ಲಿ ಇಟ್ಟುಕೊಂಡಿದ್ದಾರಲ್ಲಾ ಅವರಿಗೆ ನಾಚಿಕೆಯಾಗಬೇಕು’ ಎಂದು ಪರೋಕ್ಷವಾಗಿ ಮೋದಿಗೆ ಟಾಂಗ್ ನೀಡಿದ್ದಾರೆ.

’ಬಿಜೆಪಿಯವರ ಜೊತೆಗೆ ನನಗೆ ವೈಯಕ್ತಿಕ ಜಗಳ ಇಲ್ಲ. ಆದರೆ ಅವರು ಕ್ಯಾನ್ಸರ್ ಇದ್ದ ಹಾಗೆ. ಮನುಷ್ಯತ್ವ ಇಲ್ಲದವರಿಗೆ ಯಾವುದೇ ಕಾರಣಕ್ಕೂ ಅಧಿಕಾರ ಕೊಡಬಾರದು’ ಎಂದರು.

’ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿರುವುದೇ ಸಂವಿಧಾನ ಬಾಹಿರ ಅದನ್ನು ರದ್ದುಗೊಳಿಸಿ’ ಎಂದು ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದ ರಾಮಾ ಜೋಯಿಸ್ ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದರು. ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಬಿಜೆಪಿಯವರು ಅದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಅದನ್ನು ನ್ಯಾಯಾಲಯ ಒಪ್ಪಿದ್ದರೆ ಮೀಸಲಾತಿಯೇ ರದ್ದಾಗುತ್ತಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಂತಹವರಿಗೆ ಮತ ಹಾಕುತ್ತೀರಾ’ ಎಂದು ಸಾರ್ವಜನಿಕರನ್ನು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

’ವಿಧಾನಸಭೆ ಚುನಾವಣೆ ನಮ್ಮ ಸೋಲಿಗೆ ಬಿಜೆಪಿ ಅಪಪ್ರಚಾರ ಕಾರಣ’ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ, ’ನನ್ನನ್ನು ಹಿಂದೂ ವಿರೋಧಿ ಅಂತಾರೆ. ನಾನು ಹಿಂದೂ ವಿರೋಧಿನಾ ಎಂದೂ ಪ್ರಶ್ನಿಸಿದರು. ಗಾಂಧೀಜಿ ಹಿಂದೂ–ಮುಸ್ಲಿಮ್ ಒಂದಾಗಿರಿ ಅಂತಿದ್ದರು. ಅವರನ್ನೇ ಬಿಜೆಪಿಯವರು ಕೊಂದುಬಿಟ್ಟರು. ಮಾತು ಮಾತ್ರ ಸಬ್‌ಕಾ ಸಾತ್ ಸಬ್‌ ಕಾ ವಿಕಾಸ್, ಏನು ನಾಟಕ, ಏನು ಡೋಂಗಿತನ. ಎಲ್ಲವೂ ಸಬ್‌ ಕಾ ಸತ್ಯನಾಶ್’ ಎಂದು ಲೇವಡಿ ಮಾಡಿದರು.

‘ಎರಡು ಕೋಟಿ ಉದ್ಯೋಗ ಕೊಡುವುದಾಗಿ ಪ್ರಧಾನಿ ಹೇಳಿದ್ದರು. ಕೊಡಲಿಲ್ಲ. ಮನ್‌ ಕಿ ಬಾತ್ ಎನ್ನುತ್ತಾರೆ. ಅದರಿಂದ ಹೊಟ್ಟೆ ತುಂಬುವುದಿಲ್ಲ. ಕಾಮ್‌ ಕಿ ಬಾತ್ ಆಗಬೇಕು’ ಎಂದು ಪ್ರಧಾನಿಗೆ ಮೋದಿಗೆ ಕಿವಿ ಮಾತು ನೀಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group