ವರದಿಗಾರ ವಿಶೇಷ

ವಿದೇಶಗಳಿಗೆ 34 ರೂಪಾಯಿಗಳಿಗೆ ಪೆಟ್ರೋಲ್ ಹಾಗೂ 37 ರೂಪಾಯಿಗಳಿಗೆ ಡೀಸೆಲ್ ಮಾರಾಟ ಮಾಡುತ್ತಿದೆ ಭಾರತ!!

► ಭಾರತೀಯರಿಗೆ 125% ರಿಂದ 150% ವರೆಗೆ ತೆರಿಗೆ!!

► ಆರ್ ಟಿ ಐ ಮೂಲಕ ಬಹಿರಂಗಗೊಂಡ ಬೆಚ್ಚಿ ಬೀಳಿಸುವ ಮಾಹಿತಿ!!

ವರದಿಗಾರ(28-08-2018): ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಮೋದಿ ಸರಕಾರದ ವಿರುದ್ಧ ಹೊಸ ಆರೋಪವೊಂದು ಕೇಳಿ ಬರುತ್ತಿದೆ.

ಆರೋಪಗಳ ಪ್ರಕಾರ ಭಾರತವು 15 ದೇಶಗಳಿಗೆ ಪ್ರತಿ ಲೀಟರ್ ಗೆ 34 ರೂಪಾಯಿಗಳಂತೆ ಪೆಟ್ರೋಲ್ ಹಾಗೂ 29 ದೇಶಗಳಿಗೆ ಪ್ರತಿ ಲೀಟರ್ ಗೆ 37 ರೂಪಾಯಿ ಡೀಸೆಲ್ ಮಾರಾಟ ಮಾಡುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲದ ಬೆಲೆಯೊಂದಿಗೆ ಹೋಲಿಸಿದರೆ, ಭಾರತೀಯರು ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ವೆಚ್ಚ ಮಾಡುತ್ತಿರುವುದರಲ್ಲಿ ಹೆಚ್ಚಿನಂಶವೂ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಹೋಗುತ್ತಿದೆ ಎನ್ನುವುದು ನಮ್ಮಲ್ಲಿ ಹಲವರಿಗೆ ಈಗಾಗಲೇ ತಿಳಿದಿದೆ.

ಆದರೆ, ಕೇಂದ್ರ ಸರಕಾರವು ತನ್ನದೇ ದೇಶವಾಸಿಗಳಿಗೆ ನಿಗದಿ ಪಡಿಸಿದ ದರದ ಅರ್ಧಕ್ಕಿಂತ ಕಡಿಮೆ ದರದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ ಎನ್ನುವುದು ನಿಜಕ್ಕೂ ಭಾರತೀಯರನ್ನು ಬೆಚ್ಚಿ ಬೀಳಿಸುವಂತಿದೆ.

ಅಧಿಕಾರಕ್ಕೇರುವ ಮುನ್ನ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಯ ವಿರುದ್ಧ ಚೀರಾಡಿದವರು, ರಸ್ತೆಗಳಲ್ಲಿ ಪ್ರದರ್ಶನ, ಪ್ರತಿಭಟನೆ, ನಾಟಕಗಳನ್ನು ಮಾಡಿದವರೇ ಸರಕಾರದಲ್ಲಿರುವಾಗ ಈ ರೀತಿಯ ತಾರತಮ್ಯ ನಡೆಯುತ್ತಿರುವುದು ಅಕ್ಷಮ್ಯ ಎಂದೇ ಹೇಳಬಹುದು.

ಪಂಜಾಬಿನ ಲುಧಿಯಾನ ನಿವಾಸಿಯಾಗಿರುವ ರೋಹಿತ್ ಸಬರ್ವಾಲ್ ಎಂಬ ಆರ್ ಟಿ ಐ ಕಾರ್ಯಕರ್ತ ಪೆಟ್ರೋಲಿಯಂ ಸಚಿವಾಲಯ ಆರ್ ಟಿ ಐ ಅರ್ಜಿ ಸಲ್ಲಿಸಿ, ಭಾರತವು ಯಾವ್ಯಾವ ದೇಶಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ರಫ್ತು ಮಾಡುತ್ತಿದೆ ಹಾಗೂ ಯಾವ ಬೆಲೆಯಲ್ಲಿ ರಫ್ತು ಮಾಡುತ್ತಿದೆ ಎಂದು ಕೇಳಿದ್ದರು.

ಸರಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ನಿಂದ ಲಭಿಸಿದ ಉತ್ತರವು ಬೆಚ್ಚಿ ಬೀಳಿಸುವಂತಿತ್ತು ಎನ್ನುತ್ತಾರೆ ರೋಹಿತ್ ಸಬರ್ವಾಲ್!

ಆರ್ ಟಿ ಐ ಮಾಹಿತಿ ಪ್ರಕಾರ, ಭಾರತವು 2018ರ ಜನವರಿ 1ರಿಂದ ಏಪ್ರಿಲ್ 30ರ ನಡುವೆ 5 ದೇಶಗಳಿಗೆ ಪೆಟ್ರೋಲ್ ಹಾಗೂ 29 ದೇಶಗಳಿಗೆ ಸಂಸ್ಕರಿತ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಿದೆ.

ಈ ದೇಶಗಳಲ್ಲಿ ಇರಾಕ್, ಅಮೇರಿಕಾ, ಇಂಗ್ಲೇಂಡ್, ಮಲೇಷ್ಯಾ, ಹಾಂಕಾಂಗ್, ಸಿಂಗಾಪುರ್, ಮಾರಿಷಸ್ ಹಾಗೂ ಯುಎಇ ಒಳಗೊಂಡಿದೆ. ಈ ಅವಧಿಯಲ್ಲಿ ಪೆಟ್ರೋಲ್ 32-34 ರೂಪಾಯಿ ಪ್ರತಿ ಲೀಟರ್ ಹಾಗೂ ಡೀಸೆಲ್ 34-36 ರೂಪಾಯಿ ಪ್ರತಿ ಲೀಟರ್ ದರದಲ್ಲಿ ರಫ್ತು ಮಾಡಲಾಗಿತ್ತು.
ಅದರೆ, ಇದೇ ಅವಧಿಯಲ್ಲಿ ಭಾರತೀಯರಿಗೆ ಪೆಟ್ರೋಲ್ 69.97 -75.55 ರೂಪಾಯಿ ಪ್ರತಿ ಲೀಟರ್ ಹಾಗೂ ಡೀಸೆಲ್ 59.70 – 67.38 ರೂಪಾಯಿ ಪ್ರತಿ ಲೀಟರ್ ದರದಲ್ಲಿ ದೊರಕುತ್ತಿತ್ತು. ಇದರ ಅರ್ಥ, ಭಾರತ ಸರಕಾರವು ತನ್ನದೇ ದೇಶವಾಸಿಗಳಿಗೆ ಇದೇ ಪೆಟ್ರೋಲ್ ಹಾಗೂ ಡೀಸೆಲ್ ಎರಡು ಪಟ್ಟುಗಿಂತಲೂ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿತ್ತು.

ಭಾರತವು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹಾಗಿರುವಾಗ ಇಷ್ಟೊಂದು ದೇಶಗಳಿಗೆ ಅದು ಹೇಗೆ ರಫ್ತು ಮಾಡಬಹುದು? ಎನ್ನುವುದು ನಮ್ಮಲ್ಲಿ ಹಲವರ ಸಂಶಯ. ಆದರೆ, ಸತ್ಯವೇನಂದರೆ, ಭಾರತವು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ ಹಾಗೂ ಅದನ್ನು ಸಂಸ್ಕರಿಸಿ ಇತರ ದೇಶಗಳಿಗೆ ರಫ್ತು ಮಾಡುತ್ತಿದೆ.

ಇಲ್ಲಿ ಗಮನಿಸಬೇಕಾದ ಇತರ ವಿಷಯಗಳೇನಂದರೆ,

► ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳು ಭಾರತದ ಎರಡು ಮುಖ್ಯ ರಫ್ತಿನಲ್ಲಿ ಒಂದಾಗಿದೆ.

► ಭಾರತವು ಜಗತ್ತಿನ ಹತ್ತನೆಯ ಅತೀ ದೊಡ್ಡ ಪೆಟ್ರೋಲಿಯಂ ಉತ್ಪನ್ನಗಳ ರಫ್ತುದಾರನಾಗಿದೆ.

► ಭಾರತವು ಅಮೇರಿಕಾ, ಬ್ರಿಟನ್, ಅಸ್ಟ್ರೇಲಿಯಾ, ಇರಾಕ್ ಹಾಗೂ ಯುಎಇಯಂತ ತೈಲ ಉತ್ಪಾದಕ ದೇಶಗಳಿಗೆ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.

► 2017ರಲ್ಲಿ ಭಾರತವು ಜಾಗತಿಕ ಮಾರುಕಟ್ಟೆಯ 3.9% ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಿದೆ.

► ಸಂಸ್ಕರಿತ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯು ಜಾಗತಿಕ ಬೇಡಿಕೆಯನ್ನು ಅವಲಂಭಿಸಿರುತ್ತದೆ. ಹೆಚ್ಚುತ್ತಿರುವ ಪೈಪೋಟಿ ಕಾರಣ ಇದರಲ್ಲಿ ಹೆಚ್ಚೇನೂ ಮಾಡುವಂತಿಲ್ಲ.

► ಭಾರತೀಯರಿಗೆ ಉಪಯೋಗಿಸಲು ದೊರಕುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸೇರಿ 100% ಕಿಂತಲೂ ಹೆಚ್ಚು ತೆರಿಗೆ ವಿಧಿಸುವ ಕಾರಣ ರಫ್ತು ಮಾಡುವ ದರಕ್ಕಿಂತ ಇಲ್ಲಿ ಬೆಲೆ ಹೆಚ್ಚಾಗಿದೆ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group