ಗೌರಿ, ಕಲಬುರ್ಗಿ, ದಾಬೋಲ್ಕರ್ ಹತ್ಯೆ ಹಿಂದೆ ಒಂದೇ ಸಂಸ್ಥೆ ಕೆಲಸ ಮಾಡಿದೆ: ದಿನೇಶ್ ಗೂಂಡೂರಾವ್

ಬಲ ಪಂಥೀಯವಾದ ಉಗ್ರವಾದವಾಗಿ ಬೆಳೆಯುತ್ತಿದೆ
ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡ ಬಿಜೆಪಿ ಇವತ್ತೇಕೆ ಮಾತನಾಡುತ್ತಿಲ್ಲ?
ವರದಿಗಾರ (ಆ.27): ಪತ್ರಕರ್ತೆ ಗೌರಿ ಲಂಕೇಶ್, ವಿಚಾರವಾದಿಗಳಾದ ಎಂ.ಎಂ. ಕಲಬುರ್ಗಿ, ನರೇಂದ್ರ ದಾಭೋಲ್ಕರ್ ಅವರ ಹತ್ಯೆಯ ಹಿಂದೆ ಒಂದೇ ಸಂಸ್ಥೆ ಕೆಲಸ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು ಸೋಮವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ವಿಚಾರ ಭೇದ ವ್ಯಕ್ತಪಡಿಸಿದವರನ್ನು ಕೊಲ್ಲಲಾಗುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್, ವಿಚಾರವಾದಿಗಳಾದ ಎಂ.ಎಂ. ಕಲಬುರ್ಗಿ, ನರೇಂದ್ರ ದಾಭೋಲ್ಕರ್ ಅವರ ಹತ್ಯೆಯ ಹಿಂದೆ ಒಂದೇ ಸಂಸ್ಥೆ ಕೆಲಸ ಮಾಡಿದೆ ಎಂಬ ವಿಷಯ ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಈ ಸಂದೇಹವನ್ನು ಕಾಂಗ್ರೆಸ್ ಹಿಂದೆಯೇ ವ್ಯಕ್ತಪಡಿಸಿದಾಗ ಅದಕ್ಕೆ ಸಾಕ್ಷ್ಯ ಕೇಳಿದ್ದರು, ಈಗ ಅದು ಸಿಕ್ಕಿದೆ ಎಂದು ಹೇಳಿದ್ದಾರೆ. ಬಲ ಪಂಥೀಯವಾದ ಉಗ್ರವಾದವಾಗಿ ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದೂ ಅವರು ಹೇಳಿದ್ದಾರೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಪರೇಶ್ ಮೇಸ್ತಾ ಎಂಬ ಯುವಕ ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡಿತು. ಮುಖಂಡರು ಬೀದಿಗಿಳಿದು ಹೋರಾಟ ಮಾಡಿ ಅದು ಕೋಮು ದ್ವೇಷಕ್ಕೆ ತಿರುಗುವಂತೆ ಮಾಡಿ ಚುನಾವಣೆಯಲ್ಲಿ ಲಾಭ ಪಡೆಯಲು ಯತ್ನಿಸಿದರು. ಆ ಪ್ರಕರಣವನ್ನು ಸಿಬಿಐಗೆ ವಹಿಸಿ 10 ತಿಂಗಳಾಗಿದೆ ಈ ವರೆಗೆ ಇನ್ನೂ ತನಿಖೆ ಆರಂಭವಾಗಿಲ್ಲ. ಈಗೇಕೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಎಲ್ಲ ರಂಗಗಳಲ್ಲಿಯೂ ಸಂಪೂರ್ಣ ವಿಫಲವಾಗಿದೆ. ಜಮ್ಮು– ಕಾಶ್ಮೀರದಲ್ಲಿ ಉಗ್ರರ ಹಾವಳಿ ಹೆಚ್ಚಾಗಿದೆ. ಗುರುದಾಸ್ಪುರ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ನಡೆಸಿದಾಗ, ಪಾಕಿಸ್ತಾನದ ಐಎಸ್ಐ ಅಧಿಕಾರಿಗಳಿಗೆ ಅಲ್ಲಿ ತನಿಖೆ ನಡೆಸಲು ಅವಕಾಶ ಮಾಡಿಕೊಟ್ಟರು. ಈ ಸರ್ಕಾರದಲ್ಲಿ ಯಾವುದೇ ಸಚಿವರಿಗೆ ಅಧಿಕಾರ ಇಲ್ಲ. ಪ್ರಧಾನಿಯ ಕೆಲ ಆಪ್ತರು ಹಾಗೂ ಕಾರ್ಯಾಲಯವೇ ಆಡಳಿತ ನಡೆಸುತ್ತಿದೆ ಎಂದರು.
ಉದ್ಯಮಿಗಳ 2.50 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿರುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಎಂದರೆ ಹಣ ಇಲ್ಲ ಎಂದು ಹೇಳುತ್ತಿದೆ. ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ₹70 ಸಾವಿರ ಕೋಟಿ ಹಗರಣ ನಡೆದಿದೆ. ಜನರು ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಹಣವನ್ನು ಮೋದಿಯ ಪರಮಾಪ್ತ ಸ್ನೇಹಿತರಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಮುಂತಾದವರು ಲೂಟಿ ಹೊಡೆದು ವಿದೇಶಕ್ಕೆ ಹೋಗಿದ್ದಾರೆ ಎಂದು ದೂರಿದರು.
ಮಾಹಿತಿ ಹಕ್ಕು ಕಾಯ್ದೆಯನ್ನ ಸಹ ದುರ್ಬಲ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಲೋಕಪಾಲ ಕಾಯ್ದೆ ಜಾರಿಗೊಂಡ ಹಲವು ವರ್ಷಗಳಾದರೂ ಈ ವರೆಗೆ ಲೋಕಪಾಲರನ್ನು ನೇಮಕ ಮಾಡದ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಅಧಿಕಾರ ಇಲ್ಲದೆ ಸುಮ್ಮನೆ ಕೂರಲು ಬಿಜೆಪಿ ಮುಖಂಡರಿಗೆ ಆಗುತ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡುವ, ಐಟಿ ದಾಳಿ ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿ ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಗೂಂಡೂರಾವ್ ಆರೋಪಿಸಿದ್ದಾರೆ.
