ಗೌರಿ ಹತ್ಯೆ ಪ್ರಕರಣದ ತನಿಖೆ ವೇಳೆ ಬಹಿರಂಗವಾದ ಸ್ಪೋಟಕ ಸುದ್ದಿ: ಕರ್ನಾಟಕದಲ್ಲಿ 22 ಮಂದಿಗೆ ಶಸ್ತ್ರಾಸ್ತ್ರ ತರಬೇತಿ

ಕೋಮು ದ್ವೇಷವನ್ನ ಹರಡುವುದು, ಸ್ಫೋಟಕಗಳನ್ನು ಸಿಡಿಸುವುದೇ ಇವರ ಮೂಲ ಉದ್ದೇಶ
ಕೇಸರಿ ಭಯೋತ್ಪಾದಕರ ಕರಾಳ ಮುಖ ಅನಾವರಣ
ವರದಿಗಾರ (ಆ.13): ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಕುರಿತು ವಿಚಾರಣೆ ನಡೆಸುತ್ತಿರುವ ಎಟಿಎಸ್ ವಿಶೇಷ ತನಿಖಾ ತಂಡವು ರಹಸ್ಯ ಕೇಸರಿ ಭಯೋತ್ಪಾದಕರು ಕಳೆದ ಕೆಲ ವರ್ಷಗಳಲ್ಲಿ ಬುದ್ಧಿಜೀವಿಗಳ ಹತ್ಯೆ ಮಾಡಲು ಅನುವಾಗುವಂತೆ ಕರ್ನಾಟಕದಲ್ಲೇ ಬರೊಬ್ಬರಿ 22 ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿವೆ ಎಂಬ ಆಘಾತಕಾರಿ ಅಂಶವನ್ನು ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5ರಂದು ಹತ್ಯೆ ಮಾಡಿದ್ದ ಯುವಕರು ಕೂಡಾ 22 ಮಂದಿಯಲ್ಲಿ ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ ಎಂದು ವರದಿ ತಿಳಿಸಿದೆ.
ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ನೇಮಕಗೊಂಡ 60 ಮಂದಿಯ ತಂಡದಲ್ಲಿ 22 ಮಂದಿಯನ್ನು ವಿಶೇಷ ತರಬೇತಿಗೆ ಆಯ್ಕೆ ಮಾಡಲಾಗಿತ್ತು. ಕೋಮು ದ್ವೇಷವನ್ನ ಹರಡುವುದು ಮತ್ತು ಸ್ಫೋಟಕಗಳನ್ನು ಸಿಡಿಸುವುದು ಇವರ ಉದ್ದೇಶವಾಗಿತ್ತು. ಈ ತರಬೇತಿಗೆ ನೇಮಕ ಮಾಡಿಕೊಂಡು, ತರಬೇತಿ ನೀಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ನಾಲ್ಕು ಮಂದಿ ಬಂಧಿತರ ಪೈಕಿ ಪುಣೆಯ ಸನಾತನ ಸಂಸ್ಥೆ ಸಂಯೋಜಿತ ಹಿಂದೂ ಜನಜಾಗೃತಿ ಸಮಿತಿಯ ಸಂಚಾಲಕ ಮತ್ತು ರಾಜ್ಯದ ಕಾರ್ಯಾಚರಣೆ ಮುಖ್ಯಸ್ಥ ಎನ್ನಲಾದ ಅಮೋಲ್ ಕಾಳೆ (37), ಎಚ್ಜೆಎಸ್ ಕಾರ್ಯಕರ್ತ ಸುನೀತ್ ಕುಮಾರ್ (38), ಸರ್ಕಾರಿ ನೌಕರ ರಾಜೇಶ್ ಬಂಗೇರ (50) ಸೇರಿದ್ದಾರೆ. ಲೈಸನ್ಸ್ ಪಡೆದ ಬಂದೂಕಿನಲ್ಲಿ ರಾಜೇಶ್ ತರಬೇತಿ ನೀಡುತ್ತಿದ್ದ ಎನ್ನಲಾಗಿದೆ. ಮಹಾರಾಷ್ಟ್ರ ಕೇಸರಿ ಗುಂಪಿನ ಭರತ್ ಕುರ್ಣೆ ಎಂಬಾತ ಖಾನಾಪುರ ಬಳಿ ಹೊಂದಿದ್ದ 3 ಎಕರೆ ಜಾಗದಲ್ಲಿ ಈ ತರಬೇತಿ ನೀಡಲಾಗುತ್ತಿತ್ತು ಎನ್ನಲಾಗಿದೆ. ಈ ಗುಂಪು ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂದು indianexpress.com ವರದಿ ಮಾಡಿದೆ.
ಗೌರಿ ಲಂಕೇಶ್ ರವರನ್ನು ಹತ್ಯೆ ಮಾಡಿದ ಶೈಲಿಯಲ್ಲೇ ಜೆಎನ್ ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ರ ಮೇಲೆ ಇಂದು ನಡೆದ ಗುಂಡಿನ ದಾಳಿ ನಡೆದಿರುವುದರ ಹಿಂದೆ ಇದೇ ತಂಡದ ಕೈವಾಡವಿದೆ ಎಂದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
