ಕಚ್ಚಾ ಬಾಂಬ್ ಗಳ ಸಹಿತ ಸನಾತನ ಸಂಸ್ಥೆಯ ಸದಸ್ಯ, ಶಂಕಿತ ಭಯೋತ್ಪಾದಕನ ಬಂಧನ

ಎಟಿಎಸ್ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಎಂಟು ಕಚ್ಚಾ ಬಾಂಬ್, ಡಿಟೋನೇಟರ್ ಹಾಗೂ ಅಪಾರ ಪ್ರಮಾಣದ ಸ್ಪೋಟಕ ಸಾಮಗ್ರಿಗಳು ವಶಕ್ಕೆ!!
ಹಿಂದೂ ಗೋವಂಶ ರಕ್ಷಾ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶಂಕಿತ ಭಯೋತ್ಪಾದಕ!
ವರದಿಗಾರ(ಆ.11): ಮಹಾರಾಷ್ಟ್ರದ ರಾಜಧಾನಿ ಮುಂಬೈ ಸಮೀಪದ ನಾಲಾಸೋಪಾರದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಪಡೆಯು ಶಂಕಿತ ಹಿಂದುತ್ವ ಭಯೋತ್ಪಾದಕನನ್ನು ಬಂಧಿಸಿದೆ.
ಶುಕ್ರವಾರದಂದು ಎಟಿಎಸ್ ತಂಡವು ಬಲಪಂಥೀಯ ಉಗ್ರವಾದಿ ಸಂಘಟನೆಯಾದ ಸನಾತನ ಸಂಸ್ಥೆಯ ಸದಸ್ಯ ವೈಭವ್ ರಾವುತ್(40) ನನ್ನು ಬಂಧಿಸಿದೆ.
ತನ್ನ ಮನೆ ಹಾಗೂ ಎಸ್ಟೇಟ್ ಏಜೆನ್ಸಿಯ ಕಚೇರಿಯನ್ನು ಬಾಂಬ್ ತಯಾರಿಸಲು ಹಾಗೂ ಸಂಗ್ರಹಿಸಿಡಲು ಬಳಸುತ್ತಿದ್ದನು ಎಂದು ತಿಳಿದು ಬಂದಿದೆ. ಈತ ಹಿಂದೂ ಗೋವಂಶ ರಕ್ಷಾ ಸಮಿತಿಯ ಸದಸ್ಯನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ವಾನ ಪಡೆಯೊಂದಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಎಟಿಎಸ್ ತಂಡವು ಆತನ ಮನೆ ಹಾಗೂ ಕಚೇರಿಯಿಂದ ಎಂಟು ಕಚ್ಚಾ ಬಾಂಬ್, ಡಿಟೋನೇಟರ್, ಸ್ಪೋಟಕ ಮದ್ದು ಹಾಗೂ ಬಾಂಬ್ ತಯಾರಿಕೆಯ ಅಪಾರ ಪ್ರಮಾಣದ ಸ್ಪೋಟಕ ಸಾಮಗ್ರಿಗಳು ಮತ್ತು ಕೆಲವೊಂದು ಕರಪತ್ರಗಳು ದೊರೆತಿದೆ ಎಂದು ಮೂಲಗಳು ತಿಳಿಸಿದೆ. ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಎಟಿಎಸ್ ಮುಂಬೈಗೆ ಕರೆತಂದಿದೆ.
2017 ರ ಏಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರ ಸರಕಾರವು ಸನಾತನ ಸಂಸ್ಥಾ ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾಪವನ್ನು ಕಳುಹಿಸಿತ್ತು. ಗೋವಾದಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಸನಾತನ ಸಂಸ್ಥೆಯು ನರೇಂದ್ರ ದಾಬೋಲ್ಕರ್ ಸೇರಿದಂತೆ ಎರಡು ಹೈ ಪ್ರೊಫೈಲ್ ಹತ್ಯೆ ಪ್ರಕರಣಗಳಲ್ಲಿ ನಂಟು ಹೊಂದಿದೆ. ಇದಲ್ಲದೆ ಗೋವಾ-ಮಹಾರಾಷ್ಟ್ರದಲ್ಲಿ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ.
‘ವೈಭವ್ ರಾವತ್ ಒಬ್ಬ ಧೈರ್ಯವಂತ ಗೋರಕ್ಷಕ. ಹಿಂದೂ ಗೋವಂಶ ರಕ್ಷಾ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಗೋವುಗಳ ರಕ್ಷಣೆಗಾಗಿ ದುಡಿಯುತ್ತಿದ್ದ’, ‘ನಮ್ಮ ಸಂಘಟನೆಯು ಈ ಹಿಂದೆ ಆಯೋಜಿಸಿದ್ದ ಕಾರ್ಯಕ್ರಮಗಳು ಮತ್ತು ಹೋರಾಟಗಳಲ್ಲಿ ಭಾಗವಹಿಸಿ ಹಿಂದೂಗಳನ್ನು ಸಂಘಟಿಸುವಲ್ಲಿ ಶ್ರಮಿಸಿದ್ದ’ ಎಂದು ಹಿಂದೂ ಜನಜಾಗೃತಿ ಸಮಿತಿಯು(ಎಚ್ಜೆಎಸ್) ರಾಜ್ಯ ಸಂಘಟಕ ಸುನೀಲ್ ಘನಾವತ್ ಹೇಳಿಕೊಂಡಿದ್ದಾರೆ. 2012ರಿಂದ ಸನಾತನ ಸಂಸ್ಥೆಯಲ್ಲಿ ಸಕ್ರೀಯನಾಗಿದ್ದ ಎಂದು ಮೂಲಗಳು ವರದಿ ಮಾಡಿವೆ.
