ಹಾಪುಡ್ ಗುಂಪು ಹತ್ಯೆ ಪ್ರಕರಣ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ನಕಲಿ ಗೋ ರಕ್ಷಕನಿಂದ ನ್ಯಾಯಾಲಯಕ್ಕೆ ಸುಳ್ಳು ಹೇಳಿಕೆ; ಎನ್ ಡಿಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಾಯ್ಬಿಟ್ಟ ಆರೋಪಿ
ವರದಿಗಾರ (ಆ.08): ಉತ್ತರ ಪ್ರದೇಶದ ಹಾಪುಡ್ ಜಿಲ್ಲೆಯಲ್ಲಿ ದನ ವ್ಯಾಪಾರಿ ಖಾಸಿಂ ಖುರೇಷಿ ಎಂಬವರನ್ನು ಅಕ್ರಮ ಗೋಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೂನ್ 18ರಂದು ಜನರ ಗುಂಪಿನಿಂದ ಹಲ್ಲೆ ನಡೆಸಿ ಹತ್ಯೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪೈಕಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ರಾಕೇಶ್ ಸಿಸೋಡಿಯಾ ಬಳಿ ತೆರಳಿದ್ದ ರಾಷ್ಟ್ರೀಯ ಸುದ್ದಿ ಮಾಧ್ಯಮ ಎನ್ಡಿಟಿವಿ ತಂಡ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿರುವುದಾಗಿ ಆರೋಪಿ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದ. ಹತ್ಯೆ ಪ್ರಕರಣದ ತುರ್ತು ವಿಚಾರಣೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಆರೋಪಿ ಎನ್ಡಿಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ತಪ್ಪೊಪ್ಪಿಕೊಂಡ ಬೆನ್ನಲ್ಲೇ ಸರ್ವೋಚ್ಚ ನ್ಯಾಯಾಲಯ ಈ ನಿರ್ಧಾರ ಪ್ರಕಟಿಸಿದೆ.
ಎನ್ಡಿಟಿವಿ ವರದಿ ಪ್ರಸಾರವಾದ ತಕ್ಷಣ ಸಂತ್ರಸ್ತರ ಪರ ವಕೀಲರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದರು. ಪ್ರಕರಣದ ವಿಚಾರಣೆಯನ್ನು ಸೋಮವಾರ ನಡೆಸಲು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸಮ್ಮತಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶದಿಂದ ಬೇರೆಡೆ ವರ್ಗಾಯಿಸಬೇಕು. ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ತನಿಖೆ ನಡೆಸಬೇಕು. ಆರೋಪಿಗಳ ಜಾಮೀನನ್ನೂ ರದ್ದುಪಡಿಸಬೇಕು ಎಂದು ಸಂತ್ರಸ್ತರ ಪರ ವಕೀಲರು ಆಗ್ರಹಿಸಿದ್ದಾರೆ.
ಹತ್ಯೆಯಲ್ಲಿ ತನ್ನ ಪಾತ್ರವಿಲ್ಲವೆಂದೂ ಘಟನೆ ನಡೆದ ಸ್ಥಳದಲ್ಲಿ ತಾನಿರಲೇ ಇಲ್ಲವೆಂದೂ ರಾಕೇಶ್ ಸಿಸೋಡಿಯಾ ನ್ಯಾಯಾಲಯಕ್ಕೆ ನೀಡಿದ ಲಿಖಿತ ಹೇಳಿಕೆಯಲ್ಲಿ ಉಲ್ಲೇಖಿಸಿದ್ದ. ಆದರೆ, ‘ಅವರು ದನವನ್ನು ಕೊಂದರು, ಅದಕ್ಕಾಗಿ ಅವರನ್ನು ಕೊಂದೆ. ನನ್ನ ಸೇನೆ ಸಿದ್ಧವಾಗಿದೆ. ಯಾರಾದರೂ ಗೋವನ್ನು ಕೊಂದರೆ ಅವರನ್ನು ನಾವು ಹತ್ಯೆ ಮಾಡುತ್ತೇವೆ. ಸಾವಿರ ಬಾರಿ ಬೇಕಾದರೂ ಜೈಲಿಗೆ ಹೋಗುತ್ತೇವೆ. ಸರ್ಕಾರದ ಮತ್ತು ಪೊಲೀಸರೂ ನಮ್ಮ ಜೊತೆಗಿದ್ದಾರೆ’ ಎಂದು ಎನ್ಡಿಟಿವಿ ರಹಸ್ಯ ಕಾರ್ಯಾಚರಣೆ ನಕಲಿ ಗೋ ರಕ್ಷಕ ಹೇಳಿಕೆ ನೀಡಿದ್ದ.
ಇದನ್ನೂ ಓದಿ:
ರಹಸ್ಯ ಕಾರ್ಯಾಚರಣೆಯಲ್ಲಿ ಆರೆಸ್ಸೆಸ್, ಸಂಘಪರಿವಾರದ ಅಸಲಿಯತ್ತು ಬಯಲಿಗೆ
